ಕಾಸರಗೋಡು: ಕಳೆದ ಮೂರು ದಿನಗಳಿಂದ ಐಎಡಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಿಚಾರ ಸಂಕಿರಣದ ಸಂದರ್ಭದಲ್ಲಿ, ಮತ್ತು ಇಲ್ಲಿನ ತಜ್ಞ ವೈದ್ಯರು ರೋಗಿಗಳೊಂದಿಗೆ ವ್ಯವಹರಿಸುವ ಸಂದರ್ಭದಲ್ಲಿ ಅಸಾಧ್ಯ, ಆಗುವುದಿಲ್ಲ ಎಂಬ ಮಾತನ್ನು ಹೇಳುವುದನ್ನು ನಾನು ಈ ತನಕ ಕೇಳಿಲ್ಲ. ಇಲ್ಲಿನ ವೈದ್ಯರು ಅಪ್ರತಿಮ ಜೀವನ್ಮುಖಿಗಳಾಗಿರುವುದು ರೋಗಿಗಳಿಗೆ ಜೀವಚೈತನ್ಯವನ್ನು ತುಂಬುತ್ತದೆ. ಈ ಮೂರು ದಿನಗಳಲ್ಲಿ ನಾನು ಕಂಡ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ನೂರಕ್ಕೂ ಹೆಚ್ಚು ರೋಗಿಗಳು ಅಲೋಪತಿಯನ್ನು ಕಂಡು ಬಂದವರು. ಅಲೋಪತಿಯಲ್ಲಿ ಗುಣಮುಖವಾಗದ ಖಾಯಿಲೆಗೆ ಅವರು ಇಲ್ಲಿ ಸಂಯೋಜಿತ ಚಿಕಿತ್ಸೆಯ ಮೂಲಕ ಪರಿಹಾರದ ಹಾದಿಯನ್ನು ಕಂಡುಕೊಂಡಿದ್ದಾರೆ.
ಭಾರತೀಯ ಚಿಕಿತ್ಸಾ ಪದ್ಧತಿಗೆ, ಅದರಲ್ಲೂ ಮುಖ್ಯವಾಗಿ ಆಯುರ್ವೇದ ಪದ್ಧತಿಗೆ ಆಧುನಿಕ ಮಾಧ್ಯಮಗಳಲ್ಲಿ ದೊರೆಯುವ ಪ್ರಧಾನ ತೊಡಕು ಈ ಚಿಕಿತ್ಸಾ ವಿಧಾನದಿಂದ ಗುಣಮುಖರಾದ ಕುರಿತಾದ ದಾಖಲೆಗಳ ಕೊರತೆ. ಆದರೆ ಉಳಿಯತ್ತಡ್ಕದಂತಹ ಗ್ರಾಮೀಣ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳ ಮತ್ತು ಜನರ ಗಮನವನ್ನು ಸೆಳೆದಿರುವ ಮತ್ತು ದಾಖಲೆಗಳ ಸಹಿತ ಚರ್ಮರೋಗದ ಚಿಕಿತ್ಸೆಯಲ್ಲಿ ಸಂಯೋಜಿತ ಚಿಕಿತ್ಸೆಯೇ ಏಕೈಕ ಪರಿಹಾರ ಎಂಬುದನ್ನು ಕಂಡುಕೊಂಡಿರುವ ಐಎಡಿಯನ್ನು ಸಂದರ್ಶಿಸಲು ಸಾಧ್ಯವಾಗಿದ್ದು ನನಗೆ ಹೆಮ್ಮೆ ತಂದಿದೆ. ಈ ನಿಟ್ಟಿನಲ್ಲಿ ಈ ವಿಚಾರ ಸಂಕಿರಣವು ಯಶಸ್ವಿಯಾಗಿದೆ ಎಂದು ಇಂಗ್ಲೆಂಡ್ನ ನೋರ್ಫೋಕ್ನ ನ್ಯೂಜೆನ್ ಲಿಮಿಟೆಡ್ ಸಂಸ್ಥೆಯ ಆಡಳಿತಾಧಿಕಾರಿ ಡಾ.ಹಾರ್ಲಿ ಫಾರ್ಮರ್ ಅಭಿಪ್ರಾಯಪಟ್ಟರು.
ಎ. 17ರಂದು ಅವರು ಆಯುರ್ವೇದ, ಅಲೋಪತಿ, ಹೋಮಿಯೋಪತಿ, ಯೋಗಾಸನಗಳ ಗುಣಾಂಶಗಳನ್ನು ಅಳವಡಿಸಿ ರೂಪಿಸಲಾದ ‘ಸಂಯೋಜಿತ ಚಿಕಿತ್ಸೆ’ಯನ್ನು ಸಿದ್ಧಪಡಿಸಿರುವ ಇನ್ಸ್ಟಿಟ್ಯೂಟ್ ಓಫ್ ಅಪ್ಲೈಡ್ ಡರ್ಮಟೋಲಜಿ (ಐಎಡಿ)ಯು ಕಾಸರಗೋಡಿಗೆ ಸನಿಹದ ಉಳಿಯತ್ತಡ್ಕದ ಕೇಂದ್ರದಲ್ಲಿ ಆಯೋಜಿಸಿರುವ ಏಳನೇ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಇಂಗ್ಲೆಂಡ್ನ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಡರ್ಮಟೋಲಜಿ ವಿಭಾಗದ ಗೌರವ ಪ್ರಾಚಾರ್ಯ ಡಾ. ಟೆರೆನ್ಸ್ ಜೆ. ರಯಾನ್ ಅಧ್ಯಕ್ಷತೆ ವಹಿಸಿ ಐಎಡಿಯ ಚಿಕಿತ್ಸಾ ಪದ್ಧತಿಯಲ್ಲಿ ರೋಗಿಗಳ ಪಾಲ್ಗೊಳ್ಳುವಿಕೆಯು ಆತ್ಮೀಯವಾಗಿದ್ದು, ಚಿಕಿತ್ಸಾ ವಿಧಾನದ ಅಂಗವಾಗಿ ಅವರು ಗೃಹೋಪಚಾರಕ್ಕೂ ಪ್ರಾಧಾನ್ಯತೆ ನೀಡುವುದರಿಂದ ಹೆಚ್ಚಿನ ಯಶಸ್ಸು ಸಾಧ್ಯವಾಗುತ್ತದೆ. ಮಾರಕವಾದ ಖಾಯಿಲೆಗಳು ಬಾಧಿಸಿದರೂ ವ್ಯಕ್ತಿ ಸ್ವಯಂ ವ್ಯಕ್ತಪಡಿಸದೆ ಹೊರ ಜಗತ್ತಿಗೆ ಅದನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಆನೆಕಾಲು ರೋಗಿಯು ಸಮಾಜದಿಂದ ತಿರಸ್ಕರಿಸಲ್ಪಡುವ ಸ್ಥಿತಿಗೆ ತಲಪುತ್ತಾನೆ. ಇಂತಹ ಸಂದರ್ಭದಲ್ಲಿ ಐಎಡಿಯು ರೋಗಿಗಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುತ್ತಿರುವುದರಿಂದ ಹೆಚ್ಚಿನ ಯಶಸ್ಸು ಸಾಧ್ಯವಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದಕ್ಷಿಣ ಆಫ್ರಿಕಾದ ಕೇಪ್ಟೌನ್ ವಿಶ್ವವಿದ್ಯಾನಿಲಯದ ಡರ್ಮಟೋಲಜಿ ವಿಭಾಗದ ಪ್ರಾಚಾರ್ಯ ಗೈಲ್ ಟೋಡ್, ಅಮೇರಿಕಾದ ‘ಪ್ರೆಸಿಡೆನ್ಶಿಯಲ್ ಕಮಿಶನ್ ಫೋರ್ ದ ಸ್ಟಡಿ ಓಫ್ ಬಯೋ ಎಥಿಕಲ್ ಇಶ್ಯೂಸ್ ಸಂಸ್ಥೆಯ ಸದಸ್ಯೆ ಡಾ|ನಂದಿನಿ ಕೆ.ಕುಮಾರ್, ಹರಿದ್ವಾರದ ಪತಂಜಲಿ ರಿಸರ್ಚ್ ಫೌಂಡೇಶನಿನ ನಿರ್ದೇಶಕಿ ಡಾ.ಶಿರ್ಲೆ ಟೆಲೆಸ್, ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ|ಪಿ.ಎಸ್.ಬಾಲು ಸಹಿತ ಗಣ್ಯರು ಉಪಸ್ಥಿತರಿದ್ದರು. ಎಪ್ರಿಲ್ 13ರಂದು ಆರಂಭವಾದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸಂಯೋಜಿತ ಚಿಕಿತ್ಸೆಯ ಸರಳೀಕರಣ ಮತ್ತು ವಜ್ರಾಸನ, ಪಾದಾಂಗುಲಿ, ಪ್ರಾಣಾಯಾಮ ಇತ್ಯಾದಿ ಯೋಗಾಸನಗಳ ಯಶಸ್ವಿ ಅಳವಡಿಕೆಯ ಕುರಿತು ಪ್ರಧಾನವಾಗಿ ಚಿಂತನೆ ನಡೆಸಲಾಯಿತು. ಮಣಿಪಾಲ ವಿಶ್ವವಿದ್ಯಾನಿಲಯದ ಡಾ.ಅವಿನಾಶ್ ಕಾಮತ್ ವಿಚಾರ ಸಂಕಿರಣದ ಪ್ರಧಾನ ಆಶಯಗಳನ್ನು ಮಂಡಿಸಿದರು.
ಆನೆಕಾಲು ರೋಗಿಗಳನ್ನು ಸಮಾಜ ತಿರಸ್ಕರಿಸಬಾರದು:
ಸಮಾಜ ಮತ್ತು ಕುಟುಂಬದಿಂದ ಒಳಗಾಗುತ್ತಿರುವ ತಿರಸ್ಕಾರ ಮನೋಭಾವದಿಂದಾಗಿ ನಾವು ಅನಾಥ ಭಾವನೆಗೆ ಒಳಗಾಗುತ್ತಿದ್ದೇವೆ. ಮಾರಕವಾದ ಸಾಂಕ್ರಾಮಿಕ ರೋಗಿಗಳೂ ಅನುಭವಿಸಿದ ಕಷ್ಟವನ್ನು ನಾವು ಎದುರಿಸುತ್ತಿದ್ದೇವೆ. ಈ ಖಾಯಿಲೆಯು ನಮ್ಮನ್ನು ಸಮಾಜದೊಂದಿಗೆ ಬೆರೆಯದಂತೆ ಬೇರ್ಪಡಿಸುತ್ತಿದೆ ಎಂದು ಆನೆಕಾಲು ರೋಗಿಗಳು ಐಎಡಿಯಲ್ಲಿ ನಡೆದ ಏಳನೇ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅಭಿಪ್ರಾಯಪಟ್ಟರು. ವೈದ್ಯರು ಮತ್ತು ರೋಗಿಗಳ ನಡುವಿನ ಮುಖಾಮುಖಿಯ ಸಂದರ್ಭದಲ್ಲಿ ಬಸ್ಸು, ರೈಲು ಮುಂತಾದ ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಮತ್ತು ಹೋಟೆಲುಗಳಿಗೆ ತೆರಳುವಾಗ ಉಂಟಾಗುವ ಮನೋವೇದನೆಯನ್ನು ಅವರು ಈ ಸಂದರ್ಭದಲ್ಲಿ ಹಂಚಿಕೊಂಡರು.
ಏಡ್ಸ್ ರೋಗ ಬಾಧಿತರನ್ನೂ ಕೂಡಾ ಗುರುತಿಸಲು ಸಾಧ್ಯವಾಗದ ಸಮಾಜ ನಮ್ಮನ್ನು ತಿರಸ್ಕರಿಸುತ್ತಿದೆ. ಇಂತಹ ಮ್ಲಾನತೆಯಿಂದಿದ್ದ ನಮ್ಮನ್ನು ಹುರಿದುಂಬಿಸಿದ ಐಎಡಿಯ ಶ್ರಮ ತುಂಬಾ ಶ್ಲಾಘನೀಯ. ಗೋಣಿಯಲ್ಲಿ ಕಟ್ಟಿ ಹೇಗೋ ಐಎಡಿಯ ಕೇಂದ್ರವನ್ನು ತಲಪಿದ ನಮಗೆ ಸುಸ್ಥಿತಿಯ ಕಾಲುಗಳ ಜೊತೆಗೆ ಆತ್ಮವಿಶ್ವಾಸವೂ ದೊರೆತಿದೆ ಎಂದು ಅವರು ಐಎಡಿಯನ್ನು ಶ್ಲಾಘಿಸಿದರು. ಕಂಪ್ರೆಷನ್ ಬ್ಯಾಂಡೇಜ್, ಮಸಾಜ್, ಫಾಂಟಾ ಸೋಕಿಂಗ್, ಯೋಗಾಸನ, ಸಾಬೂನಿನಿಂದ ತೊಳೆಯುವ ಪ್ರಕ್ರಿಯೆಗಳನ್ನು ಇನ್ನಷ್ಟು ಸರಳಗೊಳಿಸುವ ಕುರಿತು ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಮಣಿಪಾಲ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರ ವಿಭಾಗದ ತಜ್ಞ ಡಾ. ಅವಿನಾಶ್ ಕಾಮತ್ ಆನೆಕಾಲು ರೋಗಿಗಳ ಜೊತೆಗಿನ ಸಂವಾದವನ್ನು ಕ್ರೋಡೀಕರಿಸಿದರು. ಎಥಿಕ್ಸ್ ಸಮಿತಿಯ ತಜ್ಞೆ ಡಾ. ನಂದಿನಿ. ಕೆ.ಕುಮಾರ್, ಡಾ|ನೀತ, ಡಾನ್ ಐಸಾಕ್, ಗಣೇಶ್ ಭಟ್, ಉಪನ್ಯಾಸಕಿ ಪಲ್ಲವಿ, ಲಿಜಿ ಎಂಬಿವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಡಾ.ಪಿ.ಎಸ್.ಬಾಲು, ಡಾ|ಗೈಲ್ ಟೋಡ್, ಡಾ.ಶಿರ್ಲೆ ಟೆಲೆಸ್, ಪ್ರೊ.ರಯಾನ್, ಡಾ|ಎಸ್.ಆರ್.ನರಹರಿ, ಆಯುರ್ವೇದ ತಜ್ಞ ಡಾ|ಗುರುಪ್ರಸಾದ ಅಗ್ಗಿತ್ತಾಯ, ಅಮರನಾಥ್ ಉಪಸ್ಥಿತರಿದ್ದರು.
ಐಎಡಿಯ ನಿರ್ದೇಶಕ ಡಾ.ಎಸ್. ಆರ್ ನರಹರಿ ಸ್ವಾಗತಿಸಿ ಆಡಳಿತಾಧಿಕಾರಿ ಸಜಿತ್.ಕೆ.ಟಿ ವಂದಿಸಿದರು. ಕೌಸ್ತುಭ ಕಾರ್ಯಕ್ರಮವನ್ನು ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.