ಬೆಂಗಳೂರು : ಸರ್ಕಾರದ ತೆರಿಗೆ ನೀತಿಯಿಂದ ಜನಸಾಮಾನ್ಯರು ಉಪಯೋಗಿಸುವ ವಸ್ತುಗಳ ಬೆಲೆ ಏರಿಕೆಯಾಗಲಿದೆ.ಶ್ರೀಮಂತರ ವಿಲಾಸಿ ವಸ್ತುಗಳಿಗೆ ತೆರಿಗೆ ವಿನಾಯಿತಿ ಬರಲಿದ್ದು ಜನಸಾಮಾನ್ಯರು ಓಡಾಡುವ ಖಾಸಗಿ ವಾಹನಗಳ ತೆರಿಗೆ ಹೆಚ್ಚಿಸಿದ್ದು, ಈಗ ಜನಸಾಮಾನ್ಯರ ಮೇಲೆ ತೀವ್ರ ತೆರನಾದ ಪರಿಣಾಪ ಬೀರಲಿದೆ. ಬಜೆಟ್ನ್ನು ಸಾಂಕೇತಿಸುವಂತೆ ಬಜೆಟ್ ಪುಸ್ತಕದೊಂದಿಗೆ ನೀಡಿದ ಸೆಣಬಿನ ಚೀಲವೇ ಜನ ಸಾಮಾನ್ಯರಿಗೆ ಈ ಬಜೆಟ್ ನೀಡಿದ ಕೊಡುಗೆ.
ಶಿಕ್ಷಣ ಕ್ಷೇತ್ರಕ್ಕೆ ಕಳೆದ ವರ್ಷ 14% ಅನುದಾನ ನೀಡಿದ್ದು ಈ ಬಾರಿ ಕೇವಲ 12% ನೀಡಲಾಗಿದೆ. ಇದರಿಂದ ಶಿಕ್ಷಣ ಕ್ಷೇತ್ರಕ್ಕೆ ಸಮಸ್ಯೆ ಎದುರಾಗಲಿದೆ. ವೇತನ ತಾರತಮ್ಯ, ಕಾಲ್ಪನಿಕ, ಅನುದಾನಿತ ಹುದ್ದೆಗಳನ್ನು ತುಂಬಲು ಅನುಮತಿ, 95 ರ ನಂತರ ಪ್ರಾರಂಭವಾದ ಖಾಸಗಿ ಶಾಲಾ ಕಾಲೇಜುಗಳನ್ನು ಅನುದಾನದ ವ್ಯಾಪ್ತಿಗೆ ಒಳಪಡಿಸುವುದು, ಶಿಕ್ಷಕ, ಉಪನ್ಯಾಸಕ ವೃಂದದವರಿಗೆ ಆರೋಗ್ಯ ವಿಮೆ ಮುಂತಾದವುಗಳ ಬಗ್ಗೆ ಬಹು ನಿರೀಕ್ಷೆ ಇದ್ದರೂ ಎಲ್ಲವನ್ನೂ ಹುಸಿಗೊಳಿಸಿದ ಈ ಬಜೆಟ್ ಶಿಕ್ಷಣ ಕ್ಷೇತ್ರಕ್ಕೆ ಮಾರಕ ಹೊಡೆತ ನೀಡಿದೆ.
ಬಾಲವಾಡಿ, ಅಂಗನವಾಡಿ, ಸರಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯ ಅಭಯ ಯೋಜನೆ ಸ್ವಾಗತಾರ್ಹ ಆದರೆ ಈ ತಪಾಸಣೆಯ ಸೌಲಭ್ಯ ವನ್ನು ಅದೇ ಶಾಲೆಯ ಶಿಕ್ಷಕರಿಗೆ ವಿಸ್ತರಿಸದಿರುವುದು ದುರಂತ.
ರಾಷ್ಟೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಪ್ರಯಾಣಿಕರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವ ಕುಟೀರ ಯೋಜನೆ ಸ್ವಾಗತಾರ್ಹ.ರಾಜ್ಯದಲ್ಲೇ ವಿಶಿಷ್ಟವಾಗಿರುವ ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಪ್ರಾರಂಭಿಸಲಾಗುವ ಓಶನೇರಿಯಂ ಸ್ಥಾಪಿಸುವ ನಿರ್ಣಯ ಅಭಿನಂದನಾರ್ಹ.
ಹೊಸ 43 ತಾಲೂಕುಗಳ ಘೋಷಣೆ ನಿರಿಕ್ಷಿಸಿದ್ದ ಜನತೆಗೆ ಪೂರ್ಣ ನಿರಾಸೆಯುಂಟಾಗಿದೆ.ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗೂ ಅತ್ಯಂತ ಅಗತ್ಯವಿರುವ ಮಂಗಳೂರು ವಿಮಾನ ನಿಲ್ದಾಣದ ರನ್ವೇ ವಿಸ್ತರಣಾ ಕಾರ್ಯವನ್ನು ಕಡೆಗಣಿಸಿರುವುದು ದುರಾದೃಷ್ಟಕರ ಎಂದು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.