ಸುಳ್ಯ: ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಬಯಲು ಸೂರ್ಯ ಆಲಯದಲ್ಲಿ ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿಯವರು ಒಂದು ದಿನದ ಯೋಗ ಕಾರ್ಯಾಗಾರವನ್ನು ಭಾನುವಾರ ರಥಸಪ್ತಮಿಯ ದಿನ ನಡೆಸಿದರು.
ಸೂರ್ಯನ ಜನ್ಮದಿನವಾದುದರಿಂದ ಸೂರ್ಯನಮಸ್ಕಾರದೊಂದಿಗೆ ಆರಂಭವಾದ ಕಾರ್ಯಾಗಾರದಲ್ಲಿ ಯೋಗಮುದ್ರೆಗಳು, ಬಣ್ಣಚಿಕಿತ್ಸೆ ಹಾಗೂ ಚಕ್ರಧ್ಯಾನಗಳನ್ನು ಪ್ರಾಯೋಗಿಕವಾಗಿ ಕಲಿಸಿದರು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಮತ್ತು ಆಸಕ್ತ ಸಾರ್ವಜನಿಕ ಅಭ್ಯಾಸಿಗಳು ಭಾಗವಹಿಸಿದ್ದರು. ಮಂಗಳೂರಿನ ಶ್ರೀ ಶ್ಯಾಮ ಪ್ರಸಾದ ಮುದ್ರಜೆ ಹಾಗೂ ಶ್ರೀ ದಯಾನಂದ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು.
ಆರಂಭದಲ್ಲಿ ನಿವೃತ್ತ ಶಿಕ್ಷಕ ಶ್ರೀ ಪೆದಮಲೆ ರಾಮ ಭಟ್ಟರು ದೀಪ ಬೆಳಗಿಸಿ ಕಾರ್ಯಾಗಾರವನ್ನು ಉದ್ಘಾಟಿಸಿದರು. ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೊಳಂಬೆ ಚಿದಾನಂದ ಗೌಡರು ಅತಿಥಿಗಳಾಗಿ ವ್ಯಕ್ತಿತ್ವ ವಿಕಸನದಲ್ಲಿ ಸಮಾಜಮುಖಿ ಚಿಂತನೆಗೆ ಯೋಗ ಸಹಾಯಕ ಎಂದರು. ಕಾರ್ಯಾಗಾರವನ್ನು ಸಂಘಟಿಸಿದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಇನ್ನು ಪ್ರತಿ ತಿಂಗಳ ಎರಡನೇ ಆದಿತ್ಯವಾರದಂದು ಇಂತಹ ಯೋಗ ಕಾರ್ಯಾಗಾರಗಳನ್ನು ನಡೆಸಲಾಗುವುದೆಂದು ಹೇಳಿದರು.
ಕೊನೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆಯವರು ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.