ಬೆಳ್ತಂಗಡಿ : ಸುಮಾರು 500 ವರ್ಷಗಳ ಹಿಂದೆ ಇದ್ದು ಈಗ್ಗೆ ೬೦ ವರ್ಷಗಳಿಂದ ಸಂಪೂರ್ಣವಾಗಿ ನಶಿಸಿಹೋಗಿದ್ದ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಮಲ್ಲಿಪಾಡಿ ಶ್ರೀ ಸದಾಶಿವ ದೇವಸ್ಥಾನವು ಸುಮಾರು 1 ಕೋಟಿ 5ಲಕ್ಷ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ಪನುರ್ ನಿರ್ಮಾಣವಾಗಿದ್ದು ಫೆ.8 ರಿಂದ 12 ರವರೆಗೆ ಬ್ರಹ್ಮಕಲಶಕ್ಕೆ ಸಿದ್ದವಾಗಿ ನಿಂತಿದೆ.
ಗ್ರಾಮೀಣ ಸ್ತ್ರೀಯೊಬ್ಬಳು ಸನಿಹದ ಗುಡ್ಡದಲ್ಲಿ ತರೆಗೆಲೆ, ಹುಲ್ಲು ಸಂಗ್ರಹಿಸುತ್ತಿದ್ದಾಗ ಅವಳ ಕೈಯಲ್ಲಿದ್ದ ಕತ್ತಿಯು ಶಿಲೆಯೊಂದಕ್ಕೆ ತಗುಲಿತು. ಈ ವೇಳೆ ಅದರಿಂದ ರಕ್ತ ಧಾರಾಕಾರವಾಗಿ ಸುರಿಯಲಾರಂಭಿಸಿತು. ಕೂಡಲೇ ಆಕೆ ಬೊಬ್ಬೆ ಹೊಡೆದು ತನ್ನ ಮಗ ಮಲ್ಲಿಯೋಡಿಯನ್ನು ಕರೆದಳು. ಮಗನು ಬಂದು ನೋಡಿದಾಗ ಆ ಸ್ತ್ರೀ ಮಾಯವಾಗಿದ್ದಳು ಎಂದು ಜನಪದೀಯ ಕಥೆಯೊಂದು ಹೇಳುತ್ತಿದೆ. ಅಲ್ಲಿದ್ದ ಶಿಲೆಯು ಸ್ವಯಂಭೂ ಶಿವಲಿಂಗವಾಗಿತ್ತು. ಅದನ್ನು ಕಾಲಾನಂತರ ಹಚ್ಚಾಡಿ ಮನೆತನದವರು ಅದಕ್ಕೆ ಗುಡಿಯೊಂದನ್ನು ಕಟ್ಟಿಸಿ ಪೂಜಾದಿಗಳನ್ನು ನೆರವೇರಿಸಲು ತೊಡಗಿದರು.ಪಡಂಗಡಿ, ಗರ್ಡಾಡಿ, ಸೋಣಂದೂರು, ಕುವೆಟ್ಟು ಮತ್ತು ತೆಂಕಕಾರಂದೂರು ಗ್ರಾಮಗಳ ಜನರು ಪೂಜಿಸಿಕೊಂಡು ಬರುತ್ತಿದ್ದ ದೇವರು ಶ್ರೀಸದಾಶಿವನಾಗಿ, ಆತನು ನೆಲೆ ನಿಂತ ಊರಿಗೆ ಮಲ್ಲ್ಲಿಪಾಡಿ ಎಂದು ಹೆಸರಾಯಿತು.
ಸುಮಾರು 60 ವರ್ಷಗಳ ಹಿಂದೆ ಪೂಜಾದಿ ಸೇವೆಗಳು ನಿಂತು ಹೋಗಿ, ದೇಗುಲವು ಜೀರ್ಣಾವಸ್ಥೆಗೆ ಬಂದು ತಲುಪಿತ್ತು. ಇದೀಗ ಕೆಲ ವರ್ಷಗಳಿಂದ ಸುತ್ತಲಿನ ಗ್ರಾಮಸ್ಥರು ಅವಿರತವಾಗಿ ಶ್ರಮಿಸಿ ದೇವಾಲಯ ಪುನರುತ್ಥಾನಕ್ಕೆ ಸಂಕಲ್ಪಿಸಿ, ಅದಕ್ಕೆ ಬೇಕು ಬೇಕಾದ ವ್ಯವಸ್ಥೆಗಳನ್ನು ಮಾಡತೊಡಗಿದರು. ಅವರ ಶ್ರಮದ ಫಲವಾಗಿ ಇದೀಗ ದೇವಾಲಯ ನವೀಕರಣಗೊಂಡು ಭಕ್ತರನ್ನು ಆಕರ್ಷಿಸುತ್ತಿದೆ. ಶಿಲಾಮಯ ನೂತನ ಗರ್ಭಗುಡಿ, ಗೋಪುರ, ತೀರ್ಥಮಂಟಪ, ತೀರ್ಥಬಾವಿ, ಸುತ್ತುಪೌಳಿ, ಸಭಾಭವನ ನಿರ್ಮಾಣವಾಗಿದೆ. ಇದಲ್ಲದೆ ದೇವಸ್ಥಾನಕ್ಕೆ ಸಂಬಂಧಿಸಿದ ಮಲ್ಲಿಪಾಡಿ ಮನೆಯಲ್ಲಿ ರಕ್ತೇಶ್ವರಿ, ವ್ಯಾಘ್ರಚಾಮುಂಡಿ, ಭೈರವ, ಪಂಜುರ್ಲಿ ಮೊದಲಾದ ದೈವಗಳಿವೆ. ಪಶ್ಚಿಮ ಭಾಗದಲ್ಲಿ ಗುಳಿಗನ ಸಾನಿಧ್ಯವೂ, ಈಶಾನ್ಯದಲ್ಲಿ ನಾಗಬ್ರಹ್ಮ ಸಾನಿಧ್ಯ, ಕರ್ಲುಟ್ಟಿ ದೈವದ ತಾಣವಿದೆ. ಶಾಶ್ವತ ರಂಗ ಮಂದಿರ ನಿರ್ಮಾಣವಾಗಲಿದೆ.
ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರ ಸಾರಥ್ಯದಲ್ಲಿ, ಮುಂಡೂರು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ 5 ದಿನಗಳ ಕಾಲ ದೇವರ ಪ್ರತಿಷ್ಠೆ, ಅಷ್ಟಬಂಧ, ಬ್ರಹ್ಮಕಲಶೋತ್ಸವವು ನಡೆಯಲಿದೆ. ಕಾರ್ಯಕ್ರಮದ ಯಶಸ್ಸಿಗೆ 24 ಸಮಿತಿಗಳನ್ನು ರಚಿಸಲಾಗಿದೆ. ಶ್ರಮದಾನದಲ್ಲಿ ಹಿಂದುಗಳ ಜೊತೆಗೆ ಸುತ್ತಲಿನ ಮುಸ್ಲಿಂ, ಕ್ರಿಶ್ಚಿಯನ್ ಮತಾವಲಂಬಿಗಳೂ ಕೈಜೋಡಿಸಿದ್ದಾರೆ.
ಬ್ರಹ್ಮಕಲಶೋತ್ಸವ ಸಂದರ್ಭ ನಡೆಯುವ ಧಾರ್ಮಿಕ ಸಭೆಗಳಲ್ಲಿ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತೀ ಶ್ರೀಗಳು, ಒಡಿಯೂರು ಶ್ರೀ ಗುರುದೇವಾನಂದ ಶ್ರೀ, ಮೂಡುಬಿದರೆ ಶ್ರೀ ಭಟ್ಟಾರಕ ಚಾರುಕೀರ್ತಿ ಶ್ರೀಗಳು, ಡಾ| ವೀರೇಂದ್ರ ಹೆಗ್ಗಡೆಯರು, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಶ್ರೀಗಳು, ಹೊಸ್ಮರು ಬಲ್ಯೊಟ್ಟು ಶ್ರೀ ವಿಖ್ಯಾನಂದ ಶ್ರೀಗಳು ಭಾಗವಹಿಸಿ ಆಶೀರ್ವದಿಸಲಿದ್ದಾರೆ.
ಸೋಮವಾರ ದೇಗುಲ ವಠಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಎಸ್.ಯೋಗೀಶ್ ಕುಮಾರ್ ನಡಕ್ಕರ, ಗೌರವ ಸಲಹೆಗಾರ ರತನ್ ಕುಮಾರ್ ಜೈನ್, ಉಪಾಧ್ಯಕ್ಷ ಸುಕೇಶ್ ಕುಮಾರ್ ಕಡಂಬು, ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡ, ಜತೆ ಕಾರ್ಯದರ್ಶಿ ಚಂದ್ರಕಾಂತ ಜೈನ್, ಆಡಳಿತ ಮೊಕ್ತೇಸರ ಅಮರನಾಥ ಹೆಗ್ಡೆ, ಟ್ರಸ್ಟಿಗಳಾದ ಮೀನಾಕ್ಷಿ, ಉದಯವರ್ಮ, ಆರ್ಥಿಕ ಮತ್ತು ಕಲಶ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ಆಮಂತ್ರಣ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ವಿತೇಶ್ ಕುಮಾರ್, ಅವಿನಾಶ್ ಎ. ಹೆಗ್ಡೆ, ಪ್ರಚಾರ ಸಮಿತಿ ಅಧ್ಯಕ್ಷ ಲಕ್ಷ್ಮೀ ಮಚ್ಚಿನ, ಸಹ ಸಂಚಾಲಕ ಮನೋಹರ ಬಳಂಜ, ಸದಸ್ಯ ಬಿ.ಎಸ್.ಕುಲಾಲ್ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.