ಮೂಡಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಪುರಸ್ಕೃತ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಭಿನಂದನಾ ಕಾರ್ಯಕ್ರಮ ಮೂಡಬಿದಿರೆಯ ಆಳ್ವಾಸ್ ಪ್ಯಾಲೇಸ್ ಗ್ರೌಂಡ್ನಲ್ಲಿ ರವಿವಾರ ಸಂಜೆ ನಡೆಯಿತು.
ಪದ್ಮವಿಭೂಷಣ ಪುರಸ್ಕೃತ ಹೆಗ್ಗಡೆಯವರು ತಮ್ಮ ಹಳೆಯ ಮಾಡೆಲ್ನ ಡಾರ್ಜ್ 1947 ಕಾರಿನಲ್ಲಿ ವೇದಿಕೆಗೆ ಆಗಮಿಸಿದರು. ಈ ವೇಳೆ ನಡೆದ ಅದ್ದೂರಿ ಮೆರವಣಿಗೆಯಲ್ಲಿ ತುಳುನಾಡು, ಮತ್ತು ನಾಡಿನ ಅನೇಕ ಕಲಾತಂಡಗಳು ಭಾಗವಹಿಸಿದ್ದವು.
ಕೇರಳದ ಚೆಂಡೆವಾದನ, ಥೈಯ್ಯಂ ನೃತ್ಯ, ಕಥಕ್ಕಳಿ, ತುಳುನಾಡಿನ ಕಲ್ಲಡ್ಕ ಗೊಂಬೆ, ಆಟಿ ಕಳೆಂಜ ವೇಷಧಾರಿಗಳು ಮೆರವಣಿಗೆಯ ರಂಗು ಹೆಚ್ಚಿಸಿದವು. ಈ ವೇಳೆ ಕಾರಿನಿಂದ ಇಳಿದ ಹೆಗ್ಗಡೆಯವರು ನೆರೆದಿದ್ದವರತ್ತ ಕೈ ಬೀಸಿದರು. ದೇಶದ ಅತ್ಯುನ್ನತ ಗೌರವವನ್ನೂ ಮೀರಿಸುವಂತೆ ಹುಟ್ಟೂರ ಜನರು ಹೆಗ್ಗಡೆಯವರನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ವೇದಿಕೆಯಲ್ಲಿ ತನಗೆ ಸಿಕ್ಕಿದ ಗೌರವಕ್ಕೆ ತಕ್ಕ ಸನ್ಮಾನ ಪಡೆದ ಹೆಗ್ಗಡೆಯವರು, ಒಂದು ಕ್ಷಣ ಭಾವುಕರಾದರು. ದೇಶದ ಯಾವ ಮೂಲೆಯಲ್ಲಿ ಎಂಥಾ ಗೌರವ ಪಡೆದರೂ ಹುಟ್ಟೂರು ಗೌರವ ಅದಕ್ಕಿಂತಲೂ ಮೇಲು ಅನ್ನೋದನ್ನು ಅಲ್ಲಿ ನರೆದಿದ್ದ ಜನರ ಪ್ರೀತಿ ಸಾರಿ ಹೇಳುವಂತಿತ್ತು. ಇದೇ ವೇಳೆ ಮಾತನಾಡಿದ ಅವರು ತನ್ನ ಮೇಲೆ ಪ್ರೀತಿಯಿಟ್ಟ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಅಲ್ಲದೇ ಪ್ರಶಸ್ತಿ ಬಂದ ನಂತರ ಜವಾಬ್ದಾರಿ ಹೆಚ್ಚಿದೆ ಎಂದ ಅವರು ಪ್ರಶಸ್ತಿ ಮಂಜುನಾಥ ಮತ್ತು ಜನರಿಗೆ ಸಲ್ಲಬೇಕು ಎಂದರು.
ಹೆಗ್ಗಡೆಯವರನ್ನು ಅದ್ದೂರಿಯಾಗಿ ಸನ್ಮಾನಿಸಬೇಕೆಂಬ ಉದ್ದೇಶದಿಂದ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು. ನಾಡಿನ ಮೂಲೆ ಮೂಲೆಗಳಿಂದ ಅಂದರೆ ಧಾರವಾಡ, ಹುಬ್ಬಳ್ಳಿ, ಕೊಡಗು, ಉಡುಪಿ, ಬೆಳಗಾವಿ ಮುಂತಾದ ಕಡೆಗಳಿಂದ ಹೆಗ್ಗಡೆಯವರ ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಅದಷ್ಟೇ ಅಲ್ಲದೇ ಇದಕ್ಕಾಗಿಯೇ ವಿಶೇಷ ವೇದಿಕೆಯನ್ನು ಕೂಡ ನಿರ್ಮಾಣ ಮಾಡಲಾಗಿತ್ತು. ಒಂದೇ ವೇದಿಕೆಯಲ್ಲಿ ಹೆಚ್ಚಿನ ಗಣ್ಯರು ಸೇರಿದ್ದು ವಿಶೇಶವಾಗಿತ್ತು. ಮುಖ್ಯವಾಗಿ 70ಕ್ಕೂ ಹೆಚ್ಚು ಜನಪ್ರತಿನಿಧಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಕರ್ನಾಟಕದ ಹಲವು ಜಿಲ್ಲೆಗಳ ಶಾಸಕರು ಸೇರಿದಂತೆ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ವೀರಪ್ಪ ಮೊಯಿಲಿ, ಮಂಗಳೂರಿನ ಶಾಸಕರು, ಸಂಸದರು ಹಾಗೂ ಸಚಿವರಾದ ಯು.ಟಿ.ಖಾದರ್, ರಮಾನಾಥ್ ರೈ ಮುಂತಾದವರು ಹೆಗ್ಗಡೆಯವರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದರ ಜೊತೆಗೆ ಯತಿವರ್ಯರಾದ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು, ಮೂಡಬಿದ್ರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಚಿತ್ರನಟಿ ಜಯಮಾಲ, ವಿಜಯ ರಾಘವೇಂದ್ರ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದರೆ, ಹೆಗ್ಗಡೆಯವರ ಧರ್ಮಪತ್ನಿ ಹೇಮಾವತಿ ಹೆಗ್ಗಡೆ ಮತ್ತು ಸಹೋದರರು ಕೂಡ ಈ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದರು.
ಸಂಜೆ ಅದ್ದೂರಿ ಮೆರವಣಿಗೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮಕ್ಕೆ ಖಾವಂದರನ್ನು ಭಕ್ತಿಪೂರ್ವಕವಾಗಿ ಕರೆತರಲಾಯಿತು. ನಾಡಿನ ಗಣ್ಯ ವ್ಯಕ್ತಿಗಳೆಲ್ಲgನ್ನು ಒಗ್ಗೂಡಿಸಿ ಖಾವಂದರನ್ನು ಪ್ರೀತಿಯಿಂದ ಸನ್ಮಾನಿಸಿದರು.
ಇದೇ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಹೆಗ್ಗಡೆಯವರಿಗೆ ಸಿಕ್ಕಿದ ಈ ಪ್ರಶಸ್ತಿ ರಾಜ್ಯದ ಆರು ಕೋಟಿ ಜನರಿಗೆ ಸಿಕ್ಕಿದ ಗೌರವ. ಇದಕ್ಕೂ ಮುನ್ನವೇ ಖಾವಂದರು ಜನರ ಪ್ರೀತಿ ಅನ್ನೋ ಬಹುದೊಡ್ಡ ಪ್ರಶಸ್ತಿ ಪಡೆದಿದ್ದಾರೆ ಎಂದರು
ಒಟ್ಟಿನಲ್ಲಿ ದೇಶದ ದೊಡ್ಡ ಗೌರವ ಪಡೆದ ಖಾವಂದರಿಗೆ ನಾಡಿನ ಜನ ಕೂಡ ಅಷ್ಟೇ ದೊಡ್ಡ ಗೌರವ ಸಂದಾಯ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.