ಉಡುಪಿ : ಕಡೆಗೋಲು ಕೃಷ್ಣನ ನಾಡು ಉಡುಪಿಯಲ್ಲೀಗ ಪರ್ಯಾಯ ಸಂಭ್ರಮ. ಶ್ರೀಕೃಷ್ಣ ಮಠದ ಎರಡು ವರ್ಷದ ಪೂಜಾ ನಿರ್ವಹಣೆಯ ಹೊಣೆಯನ್ನು ಅಷ್ಟಮಠಗಳಲ್ಲೇ ಹಿರಿಯ ಯತಿಗಳಾದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ವಹಿಸಿಕೊಳ್ಳಲಿದ್ದಾರೆ. ಪೇಜಾವರ ಶ್ರೀಗಳಿಗೆ ಇದು ಪಂಚಮ ಪರ್ಯಾಯವಾಗಿದ್ದು, ಈ ಮೂಲಕ ಹೊಸ ದಾಖಲೆಯನ್ನೂ ಬರೆಯಲಿದ್ದಾರೆ. ಉಡುಪಿಗೆ ಉಡುಪಿಯೇ ಕಳೆಕಟ್ಟುವ ಸಂದರ್ಭದಲ್ಲಿ ಪರ್ಯಾಯ ಎಂಬ ಅಪೂರ್ವ ಸಂಪ್ರದಾಯ, ಸಾಂಸ್ಕೃತಿಕ ಸಮ್ಮಿಳಿತದ ಈ ಉತ್ಸವದ ಕುರಿತ ಮಾಹಿತಿ, ವಿಶಿಷ್ಟತೆಗಳೇನು? ಪೇಜಾವರ ಶ್ರೀಗಳ ಪಂಚಮ ಪರ್ಯಾಯದ ದಾಖಲೆ ಹೇಗೆ? ಇತ್ಯಾದಿ ವಿಶೇಷ ಸಂಗತಿಗಳ ಕುರಿತ ವಿವರಗಳು ಇಲ್ಲಿವೆ.
ಕೃಷ್ಣನ ಆಡುಂಬೊಲ ಉಡುಪಿ : ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳಗಳಲ್ಲೊಂದಾದ, ಜಗದ್ವಿಖ್ಯಾತ ಉಡುಪಿ ಶ್ರೀಕೃಷ್ಣ ಮಠಕ್ಕೆ ವಿಶೇಷ ಮನ್ನಣೆ. ದ್ವೆತ ಸಿದ್ಧಾಂತ ಪ್ರತಿಪಾದಿಸಿದ ಶ್ರೀಮನ್ಮಧ್ವಾಚಾರ್ಯರಿಂದ 750 ವರ್ಷಗಳ ಹಿಂದೆ ಪ್ರತಿಷ್ಠಾಪಿಸಲ್ಪಟ್ಟ ಶ್ರೀಕೃಷ್ಣ ಮೂರ್ತಿ ಇಲ್ಲಿದೆ. ಶ್ರೀಕೃಷ್ಣನ ಪೂಜಾಕೈಂಕರ್ಯಕ್ಕೆ ಅನುಕೂಲವಾಗಲೆಂದು, ಮಧ್ವಾಚಾರ್ಯರು ಎಂಟು ಬಾಲ ಯತಿಗಳನ್ನು ನಿಯೋಜಿಸಿದರು. ಇವುಗಳೇ ಅಷ್ಟ ಮಠಗಳಾಗಿದ್ದು, ವರ್ಷದಲ್ಲಿ ಎರಡು ತಿಂಗಳಿಗೊಮ್ಮೆ ಈ ಮಠಗಳಿಗೆ ಪರ್ಯಾಯ ಪೂಜಾವಿಧಿಯನ್ನು ನಿಗದಿಗೊಳಿಸಲಾಗಿತ್ತು. ಕಾಲಾನಂತರದಲ್ಲಿ ಅಷ್ಟ ಮಠಗಳಲ್ಲೊಂದಾದ ಶ್ರೀಸೋದೆ ಮಠದ ಪರಂಪರೆಯಲ್ಲಿ ಬಂದ ಶ್ರೀವಾದಿರಾಜ ಗುರುಸಾರ್ವಭೌಮರು (1481-1601) ಶ್ರೀರಾಮಚಂದ್ರನ ಜನ್ಮಸ್ಥಳ ಅಯೋಧ್ಯೆಯಿಂದ ತರಲಾಗಿದೆ ಎಂಬ ಐತಿಹ್ಯದ ಆಂಜನೇಯನನ್ನು ಪ್ರತಿಷ್ಠಾಪಿಸಿ ದ್ವೆವಾರ್ಷಿಕ ಪೂಜಾ ವ್ಯವಸ್ಥೆಯನ್ನು ಜಾರಿಗೊಳಿಸಿದರು. ಅದರಂತೆ ಈಗ ನಡೆಯುತ್ತಿರುವುದು 248ನೇ ಪರ್ಯಾಯ.
ಅಷ್ಟ ಮಠಗಳು : ಪಲಿಮಾರು, ಅದಮಾರು, ಕೃಷ್ಣಾಪುರ, ಪುತ್ತಿಗೆ, ಶಿರೂರು, ಸೋದೆ, ಕಾಣಿಯೂರು, ಪೇಜಾವರ ಹೆಸರಿನ ಅಷ್ಟ ಮಠಗಳು ಇಲ್ಲಿದೆ. ಕೃಷ್ಣನ ಅರ್ಚಿಸುವ ಪರ್ಯಾಯ ಪೂಜಾಕ್ರಮವು ಪಲಿಮಾರು ಮಠದಿಂದ ಆರಂಭಗೊಂಡು ಅದಮಾರು, ಕೃಷ್ಣಾಪುರ,ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು ಅನಂತರ ಪೇಜಾವರ ಮಠದಲ್ಲಿ ಕೊನೆಗೊಳ್ಳುತ್ತದೆ. ಪರಂಪರೆಯ ಆದ್ಯ ಯತಿಗಳ ಆಶ್ರಮ ಜ್ಯೇಷ್ಠತ್ವವನ್ನು ಆಧರಿಸಿ ಜಾರಿಗೆ ಬಂದಿದೆ. ಹಿಂದೆ ಆಯಾ ಮಠಗಳ ಆದ್ಯ ಯತಿಗಳ ಹೆಸರಿನಿಂದ ಆ ಮಠವನ್ನು ಕರೆಯಲಾಗುತ್ತಿತ್ತು. ಉದಾಹರಣೆಗೆ ಅಧೋಕ್ಷಜ ಸಂಸ್ಥಾನ, ರಾಮತೀರ್ಥ ಸಂಸ್ಥಾನ ಇತ್ಯಾದಿ. ಅನಂತರ ಒಂದೊಂದು ಊರುಗಳಲ್ಲಿ ಮಠಗಳನ್ನು ಸ್ಥಾಪಿಸಲಾಯಿತು. ಮುಂದೆ ಇದೇ ಊರಿನ ಹೆಸರಿನಲ್ಲಿ ಮಠಗಳ ಹೆಸರು ಚಾಲ್ತಿಗೆ ಬಂತು.
ಪರ್ಯಾಯ ಎಂದರೇನು?
ಒಂದೊಂದು ಮಠದವರು ಎರಡೆರಡು ವರ್ಷ ಸರದಿಯಂತೆ ಕೃಷ್ಣ ಮಠದ ಪೂಜಾಧಿಕಾರವನ್ನು ನಡೆಸಿಕೊಂಡು ಬರುವುದಕ್ಕೆ ಪರ್ಯಾಯ ಎನ್ನುತ್ತಾರೆ. ಇದು ಆರಂಭವಾಗುವುದು ಮಕರಸಂಕ್ರಾಂತಿಯ ಮೂರು ದಿನ ಬಿಟ್ಟು. ಸಾಮಾನ್ಯವಾಗಿ ಜ.14ರಂದು ಸಂಕ್ರಾಂತಿ, ಜ.15ರಂದು ಚೂರ್ಣೋತ್ಸವ, ಒಂದು ದಿನದ ಬಳಿಕ ಪರ್ಯಾಯ ಬಿಟ್ಟುಕೊಡುವ ಮಠದ ಕೊನೆಯ ಮಹಾಪೂಜೆ, ಅನ್ನಸಂತರ್ಪಣೆ ನಡೆದು ಜ.18ರ ಬೆಳಗ್ಗೆ ಆಗಮನ ಪೀಠಾಧೀಶರು ಪೂಜಾಧಿಕಾರ ವಹಿಸಿಕೊಳ್ಳುತ್ತಾರೆ. ಒಂದು ಮಠದ ಸರದಿ ಬಳಿಕ ಇನ್ನೊಂದು ಮಠಕ್ಕೆ ಅಧಿಕಾರವನ್ನು ಬಿಟ್ಟುಕೊಡುವುದೇ ಪರ್ಯಾಯ ಮಹೋತ್ಸವ. ಒಂದು ಮಠದ ಶ್ರೀಗಳು ಪೂಜಾಧಿಕಾರ ವಹಿಸಿಕೊಂಡು ಸುಮಾರು ಒಂದು ವರ್ಷದಲ್ಲಿ ಇನ್ನೊಂದು ಮಠದ ಪರ್ಯಾಯಕ್ಕೆ ಸಿದ್ಧತೆ ಶುರುವಾಗುತ್ತದೆ.
ಪರ್ಯಾಯ ಉಪಾಸನೆ : ಜಗದೊಡೆಯ ಶ್ರೀಕೃಷ್ಣನನ್ನು ದೀಕ್ಷಾ ಬದ್ಧವಾಗಿ ಪೂಜಿಸುವುದು ಪರ್ಯಾಯ ಪೂಜೆಯ ಮುಖ್ಯ ಉದ್ದೇಶ. ಇದರೊಂದಿಗೆ ಶ್ರೀಮನ್ಮಧ್ವಾಚಾರ್ಯರ ತಣ್ತೀ, ಭಕ್ತಿ ಸಿದ್ಧಾಂತವನ್ನು ಜನತೆಗೆ ತಲುಪಿಸುವುದೂ ಮುಖ್ಯ ಉದ್ದೇಶ. ನಿತ್ಯ ಶ್ರೀಕೃಷ್ಣನನ್ನು ಷೋಡಶೋಪಚಾರಗಳಿಂದ ಪೂಜಿಸಲಾಗುತ್ತದೆ. ಜೊತೆಗೆ ಅನ್ನದಾನಾದಿಗಳ ಮೂಲಕ ಸಕಲ ಜೀವ ರಾಶಿಗಳಲ್ಲಿಯೂ ಭಗವಂತನನ್ನು ಕಾಣುವುದೂ ಪೂಜೆ. ಇದಕ್ಕಾಗಿಯೇ ಉಡುಪಿ ಕ್ಷೇತ್ರಕ್ಕೆ ಅನ್ನಬ್ರಹ್ಮನ ಕ್ಷೇತ್ರ ಎಂಬ ಹೆಸರಿದ್ದು ನಿರಂತರ ಅನ್ನದಾನಕ್ಕೆ ಹೆಸರಾಗಿದೆ. ಪರ್ಯಾಯ ಸಂದರ್ಭಅನ್ನದಾನಕ್ಕೂ ಇಲ್ಲಿ ಬಹಳಷ್ಟು ಮಹತ್ವವಿದೆ.
ಸರ್ವಜ್ಞ ಪೀಠಾರೋಹಣ : ಮಧ್ವರು ಕುಳಿತುಕೊಂಡ ಸ್ಥಳ ಸರ್ವಜ್ಞಪೀಠ. ಪರ್ಯಾಯ ಮೆರವಣಿಗೆ ಬಳಿಕ ನಿರ್ಗಮನ ಶ್ರೀಗಳು, ಪರ್ಯಾಯ ನಡೆಸಲಿರುವ ಶ್ರೀಗಳನ್ನು ಬರಮಾಡಿಕೊಂಡು ಶ್ರೀಕೃಷ್ಣದರ್ಶನ ಮಾಡಿ ಸರ್ವಜ್ಞ ಪೀಠಕ್ಕೆ ಕರೆದೊಯ್ದು ಕುಳ್ಳಿರಿಸಿ ಯಶಸ್ಸಿಗೆ ಹಾರೈಸುತ್ತಾರೆ. ಇದಕ್ಕೂ ಮುನ್ನ ಮಧ್ವರ ಕಾಲದಿಂದ ಬಂದ ಅಕ್ಷಯ ಪಾತ್ರೆ, ಸಟ್ಟುಗವನ್ನು ನಿರ್ಗಮನ ಪೀಠಾಧೀಶರು ಆಗಮನ ಪೀಠಾಧೀಶರಿಗೆ ಹಸ್ತಾಂತರಿಸುತ್ತಾರೆ. ಅಕ್ಷಯಪಾತ್ರೆ, ಸಟ್ಟುಗಕ್ಕೂ ನಿತ್ಯ ಪೂಜೆ ಸಲ್ಲುತ್ತದೆ. ಅನ್ನದಾನಕ್ಕೆ ಕೊರತೆಯಾಗಬಾರದು ಎಂಬ ಸದಾಶಯದಿಂದ ಮಧ್ವರು ಕೊಟ್ಟ ಪಾತ್ರೆ ಇದು.
ಪುರಪ್ರವೇಶ, ಪರ್ಯಾಯ ಮೆರವಣಿಗೆ : ಪರ್ಯಾಯ ನಡೆಸಲಿರುವ ಶ್ರೀಗಳು ಉಡುಪಿ ಕೃಷ್ಣಮಠವಿರುವ ಪುರಕ್ಕೆ ಆಗಮಿಸುವುದು ಪುರ ಪ್ರವೇಶ. ಪರ್ಯಾಯ ಯತಿಗಳು ಕನಕನ ಕಿಂಡಿಯಲ್ಲಿ ದೇವರ ದರ್ಶನಗೈದು ಕ್ರಮವಾಗಿ ಮುಖ್ಯ ಮಠದ ಪಕ್ಕದಲ್ಲೇ ಇರುವ ಚಂದ್ರೇಶ್ವರ, ಅನಂತೇಶ್ವರ ದೇವರನ್ನು ಪ್ರಾರ್ಥಿಸಿ ಬಳಿಕ ಶ್ರೀಕೃಷ್ಣಮಠವನ್ನು ಪ್ರವೇಶಿಸುತ್ತಾರೆ. ಆಗ ಉತ್ತಮ ಮುಹೂರ್ತದಲ್ಲಿ ಅವರ ಮಠದ ಮುಂಭಾಗ ನವಗ್ರಹದಾನ, ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಬಳಿಕ ನಾಗರಿಕರು ಸಮ್ಮಾನಿಸುತ್ತಾರೆ. ಪರ್ಯಾಯ ದೀಕ್ಷೆಗೂ ಮುನ್ನ ಉಡುಪಿಯಲ್ಲಿ ಪರ್ಯಾಯ ಮೆರವಣಿಗೆ ಕಳೆಕಟ್ಟುತ್ತದೆ. ಇದಕ್ಕೂ ಮುನ್ನ ಕಾಪು ಸಮೀಪದ ದಂಡತೀರ್ಥದಲ್ಲಿ ಸ್ನಾನ ಮಾಡಿ ಪರ್ಯಾಯ ಪೀಠಾಧೀಶರು ಆಗಮಿಸುತ್ತಾರೆ. ಮೆರವಣಿಗೆಯಲ್ಲಿ ಆಕರ್ಷಕ ಟ್ಯಾಬ್ಲೋಗಳು, ಕಲಾಪ್ರಕಾರಗಳು,ವಾದನ ತಂಡಗಳಿದ್ದು, ಇಡೀ ಉಡುಪಿ ಸಂಭ್ರಮಿಸುತ್ತದೆ.
ಪರ್ಯಾಯ ದರ್ಬಾರ್ : ಪರ್ಯಾಯ ಮೆರವಣಿಗೆ ಬಂದು ಪರ್ಯಾಯ ಯತಿಗಳು ಸರ್ವಜ್ಞಪೀಠಾರೋಹಣ ಮಾಡಿದ ಬಳಿಕ ನಡೆಯುವ ಸಭೆ ದರ್ಬಾರ್ ಸಭೆ. ಇಲ್ಲಿ ಅಷ್ಟಮಠಾಧೀಶರು ಪಾಲ್ಗೊಂಡು ಆಶೀರ್ವಚನ ನೀಡಿ ಪರ್ಯಾಯ ಮಠಾಧೀಶರಿಗೆ ಸಹಕಾರ ನೀಡುವ ಬಗ್ಗೆ ಹೇಳುತ್ತಾರೆ. ಇದರೊಂದಿಗೆ ನಾಡಿನ ಜನಪ್ರತಿನಿಧಿಗಳು, ಗಣ್ಯರು, ಧರ್ಮಾಧಿಕಾರಿಗಳು, ವಿದ್ವಾಂಸರು, ನ್ಯಾಯವೇತ್ತರೂ ಪಾಲ್ಗೊಳ್ಳುವುದು ವಿಶೇಷ. ಸಾಧಕರಿಗೆ ಸಮ್ಮಾನವೂ ಇದೇ ವೇಳೆ ಮಠದವತಿಯಿಂದ ನಡೆಸಲಾಗುತ್ತದೆ.
ಶ್ರೀಗಳು ಕ್ಷೇತ್ರ ಬಿಟ್ಟು ತೆರಳುವಂತಿಲ್ಲ : ಪರ್ಯಾಯ ಪೂಜಾಧಿಕಾರ ವಹಿಸಿಕೊಂಡ ಶ್ರೀಗಳು ಬಳಿಕ ಮಠದ ರಥಬೀದಿ ಪ್ರದೇಶವನ್ನು ಬಿಟ್ಟು ಹೊರಹೋಗುವಂತಿಲ್ಲ. ಇದು ದೀಕ್ಷೆ. ದಿನದ ಪೂಜೆಗಳಲ್ಲಿ ಅವಸರಸನಕಾದಿ ಪೂಜೆ, ಮಹಾಪೂಜೆ, ಸಂಜೆಯ ಚಾಮರ ಸೇವೆಗಳನ್ನು ಪರ್ಯಾಯ ಶ್ರೀಪಾದರೇ ಮಾಡಬೇಕು.
ಪೂರ್ವ ಸಿದ್ಧತೆ : ಈ ನಾಲ್ಕು ಮುಹೂರ್ತ ಮೂಲಕ ಸಿದ್ಧತೆ ಶುರುವಾಗುತ್ತದೆ. ಇದಕ್ಕೆ ಗಳಿಗೆ ನಿಗದಿತ ದಿನ ಎಂದು ಇಲ್ಲ. ಒಳ್ಳೆಯ ಮುಹೂರ್ತದಂದು ಮಾಡುತ್ತಾರೆ.
ಬಾಳೆ ಮುಹೂರ್ತ : ಪರ್ಯಾಯ ಕಾಲದಲ್ಲಿ ತುಳಸಿ, ಬಾಳೆಯ ಎಲೆ, ಬಾಳೆಹಣ್ಣು ಅಗತ್ಯವಿರುವುದರಿಂದ ಇದಕ್ಕೆ ಪೂರ್ವಭಾವಿ ತಯಾರಿ ಬಾಳೆ ಮುಹೂರ್ತ. ಆಯಾ ಮಠದ ಜಾಗದಲ್ಲಿ ಇವುಗಳನ್ನು ನೆಟ್ಟು ಸಿದ್ಧ ಮಾಡಿಟ್ಟುಕೊಳ್ಳುವುದು ಉದ್ದೇಶ. ಆದರೆ ಕಾಲ ಬದಲಾದಂತೆ, ಜನಸಂಖ್ಯೆ ಹೆಚ್ಚಿದಂತೆ ಬಾಳೆಎಲೆ, ಹಣ್ಣುಗಳನ್ನು ಖರೀದಿಸಬೇಕಾದ ಅನಿವಾರ್ಯತೆ ಇರುವುದರಿಂದ ಇದು ಸಾಂಕೇತಿಕವಾಗಿದೆ.
ಅಕ್ಕಿ ಮುಹೂರ್ತ : ಎರಡನೆಯ ಮುಹೂರ್ತ ಅಕ್ಕಿ ಮುಹೂರ್ತ. ಅನ್ನಸಂತರ್ಪಣೆಗೆ ಅಗಾಧ ಪ್ರಮಾಣದ ಅಕ್ಕಿ ಬೇಕಾಗಿರುವುದರಿಂದ ಅಕ್ಕಿ ಸಂಗ್ರಹಣೆಯ ಮುಹೂರ್ತವಿದು. ಸಾಂಕೇತಿಕವಾಗಿ ಅಕ್ಕಿ ಮುಡಿ ಮೆರವಣಿಗೆ ನಡೆದು ಪ್ರಾರ್ಥನೆ ಮಾಡುತ್ತಾರೆ. ಪರ್ಯಾಯ ಪೀಠವೇರುವ ಯತಿಗಳ ಉಪಸ್ಥಿತಿಯಲ್ಲೇ ಈ ಕಾರ್ಯಕ್ರಮ ನೆರವೇರುತ್ತದೆ.
ಕಟ್ಟಿಗೆ ಮುಹೂರ್ತ : ಮೂರನೆಯದು ಕಟ್ಟಿಗೆ ಮುಹೂರ್ತ. ಆರೇಳು ತಿಂಗಳುಗಳಿವೆ ಎನ್ನುವಾಗ ಕಟ್ಟಿಗೆ ಮುಹೂರ್ತ ನಡೆಯುತ್ತದೆ. ಅಡುಗೆ ಮಾಡಲು ಬೇಕಾದ ಕಟ್ಟಿಗೆ ಸಂಗ್ರಹಣೆ ಸಿದ್ಧತೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಆಯಾ ಮಠಗಳಿಗೆ ಸೇರಿದ ಕಾಡಿನಿಂದ ಇವುಗಳನ್ನು ಸಂಗ್ರಹಿಸಲಾಗುತ್ತದೆ. ಕೃಷ್ಣ ಮಠದ ಪಕ್ಕದ ಮಧ್ವ ಸರೋವರದ ಒಂದು ಬದಿಯಲ್ಲಿ ಇದರ ಮುಹೂರ್ತ ನೆರವೇರುತ್ತದೆ. ಸುಮಾರು ಒಂದೂವರೆ ತಿಂಗಳಲ್ಲಿ ಸುಂದರವಾದ ಕಟ್ಟಿಗೆಯ ರಥ ನಿರ್ಮಾಣಗೊಳ್ಳುತ್ತದೆ.
ಭತ್ತ ಮುಹೂರ್ತ : ನಾಲ್ಕನೆಯ ಮುಹೂರ್ತ ಭತ್ತ ಮುಹೂರ್ತ. ಪರ್ಯಾಯಕ್ಕೆ ಮೊದಲು ಕೊಯ್ಲು ಆಗಿ ಬಂದ ಹೊಸ ಭತ್ತದ ಸಂಗ್ರಹವನ್ನು ಮಾಡಲಾಗುತ್ತದೆ. ಅಕ್ಕಿ ಸಂಗ್ರಹಕ್ಕೆ ಇದು ಪೂರ್ವಭಾವಿ ತಯಾರಿ. ಶ್ರೀಕೃಷ್ಣಮಠದ ಕಾರ್ಯಾಲಯವನ್ನು ಬಡಗುಮಾಳಿಗೆ ಎಂದು ಕರೆಯುತ್ತಾರೆ. ಮುಂದೆ ಪರ್ಯಾಯ ಪೀಠವೇರುವ ಮಠದವರು ಬಡಗುಮಾಳಿಗೆಯನ್ನು ಪ್ರವೇಶಿಸುವುದು ಈ ಕೊನೆಯ ಮುಹೂರ್ತದಲ್ಲಿ. ಭತ್ತದ ಮುಡಿಗಳನ್ನು ಬಡಗುಮಾಳಿಗೆಯಲ್ಲಿಟ್ಟು ಪುರೋಹಿತರು ಪೂಜೆ ಸಲ್ಲಿಸುತ್ತಾರೆ. ಇದೇ ದಿನ ಕಟ್ಟಿಗೆ ರಥ ನಿರ್ಮಾಣ ಮುಗಿದು ಅದಕ್ಕೆ ಕಲಶವನ್ನು ಇಡುತ್ತಾರೆ. ಇದನ್ನು ಶಿಖರ ಮುಹೂರ್ತವೆಂದೂ ಕರೆಯುತ್ತಾರೆ. ಈ ಎಲ್ಲಾ ಮುಹೂರ್ತಗಳೂ ಇದೀಗ ಕೇವಲ ಸಾಂಕೇತಿಕ ಆಚರಣೆಯಾಗಿ ಉಳಿದುಕೊಂಡಿದೆ. ಇತ್ತೀಚೆಗೆ ಅಡುಗೆ ಚಪ್ಪರ, ಸಭಾಂಗಣ ಚಪ್ಪರ, ಹೊರೆಕಾಣಿಕೆ ಚಪ್ಪರ ಹೀಗೆ ಮುಹೂರ್ತ ಗಳೂ ಹುಟ್ಟಿ ಕೊಂಡಿವೆ.
7 ವರ್ಷಕ್ಕೇ ಯತಿಯಾದ ವೆಂಕಟರಮಣ : ಸರಳ, ಸಜ್ಜನಿಕೆಯ ವ್ಯಕ್ತಿತ್ವ, ಅಪೂರ್ವ ಸಾಮಾಜಿಕ ಕಳಕಳಿಯ ಯತಿ, 85ರ ಇಳಿವಯಸ್ಸಲ್ಲೂ ಬತ್ತದ ಉತ್ಸಾಹ, ತಮ್ಮ ವಿರುದ್ಧದ ಕಟು ವಿಮರ್ಶೆಗಳನ್ನೂ ಮುಕ್ತವಾಗಿ ಸ್ವೀಕರಿಸಿದವರು ಶ್ರೀ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು. ಪೇಜಾವರ ಅಧೋಕ್ಷಜ ಮಠದ ಮುಖ್ಯ ಯತಿಗಳಾದ ಶ್ರೀ ವಿಶ್ವೇಶತೀರ್ಥರಿಗೆ ಇದು ಐದನೆಯ ಪರ್ಯಾಯ. ದಾಖಲೆಯ ಪರ್ಯಾಯವೂ ಹೌದು. ಪೇಜಾವರ ಶ್ರೀಗಳೆಂದೇ ಖ್ಯಾತರಾದ ಶ್ರೀವಿಶ್ವೇಶತೀರ್ಥರು ಹುಟ್ಟಿದ್ದು 1931 ಏ.27ರಂದು ದಕ್ಷಿಣಕನ್ನಡದ ಉಪ್ಪಿನಂಗಡಿ ಸನಿಹದ ರಾಮಕುಂಜ ಎಂಬಲ್ಲಿ. ವೆಂಕಟರಮಣ ಅವರ ಪೂರ್ವಾಶ್ರಮದ ಹೆಸರು.
ತಂದೆ ಎಂ.ನಾರಾಯಣಾಚಾರ್ಯ, ತಾಯಿ ಕಮಲಮ್ಮ. ಮನೆಯ ಸನಿಹದಲ್ಲೇ ವಿಷ್ಣುಮೂರ್ತಿ ದೇಗುಲವಿದ್ದು, ಶ್ರೀಗಳ ಪೂರ್ವಜರು ಅದರಲ್ಲಿ ಅರ್ಚಕ ವೃತ್ತಿ ನಡೆಸಿಕೊಂಡಿದ್ದರು. ನೇರಂಕಿ ಗ್ರಾಮದಲ್ಲಿ ವಿಶ್ವೇಶತಿರ್ಥರು ಪ್ರಾಥಮಿಕ ಅಧ್ಯಯನ ಪಡೆದುಬಳಿಕ ರಾಮಕುಂಜದ ಈರಕಿ ಮಠ (ಮಧ್ವಾಚಾರ್ಯ ಸಂಸ್ಥಾಪಿತ ಮಠ)ದಲ್ಲಿ ವೇದಾಭ್ಯಾಸವನ್ನು ನಡೆಸಿದರು. ಶ್ರೀಗಳ ಗುರುಗಳಾದ ಶ್ರೀ ವಿಶ್ವಜ್ಞತೀರ್ಥ ಶ್ರೀಪಾದರು ಪೂರ್ವಾಶ್ರಮದಲ್ಲಿ ರಾಮಕುಂಜ ಪರಿಸರದ ನಗ್ರಿಯವರು. ವೆಂಕಟರಮಣನ ಚುರುಕುತನ, ಸನ್ಯಾಸಿಯ ತೇಜಸ್ಸು ಅವರನ್ನು ಯತಿ ಪೀಠ ಅಲಂಕರಿಸುವಂತೆ ಮಾಡಿತ್ತು. ಹಂಪೆಯ ಚಕ್ರ ತೀರ್ಥದ ಬಳಿ 1938 ಡಿ.3ರಂದು 7ನೇ ವಯಸ್ಸಿಗೆ ವೆಂಕಟರಮಣ “ಶ್ರೀ ವಿಶ್ವೇಶತೀರ್ಥ’ರಾದರು. ಅತಿ ಕಿರಿಯ ವಯಸ್ಸಿನಲ್ಲಿ ಪೀಠಾಧಿಪತಿಯಾದ ದಾಖಲೆಯೂ ಇವರದ್ದೇ. 77 ವರ್ಷಗಳ ಸುದೀರ್ಘ ಸನ್ಯಾಸಾಶ್ರಮ ಕೈಗೊಂಡಿರುವ ವಿಶ್ವೇಶತೀರ್ಥರು ಇಂದಿಗೂ ಬತ್ತದ ಚಿಲುಮೆ. ಅನೇಕ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ದಾಖಲೆಯ ಐದನೇ ಪರ್ಯಾಯ : ಶ್ರೀಮಧ್ವಾಚಾರ್ಯರು ಶ್ರೀಕೃಷ್ಣನನ್ನು ಪೂಜಿಸಲು ನಿಗದಿಗೊಳಿಸಿದ ಪರ್ಯಾಯ ಪೂಜಾ ಪದ್ಧತಿ ಅವಧಿ ಎರಡು ತಿಂಗಳು. ಅದರಂತೆ ಹದಿನಾರು ತಿಂಗಳಿಗೊಮ್ಮೆ ಮಠವೊಂದಕ್ಕೆ ಪೂಜಾವಕಾಶ. ನಂತರದಲ್ಲಿ 16ನೇ ಶತಮಾನದಲ್ಲಿ ಬಂದ ಶ್ರೀವಾದಿರಾಜ ಸ್ವಾಮಿಗಳು ಅದನ್ನು ಎರಡು ವರ್ಷಗಳಿಗೊಮ್ಮೆ ಎಂಬಂತೆ ಬದಲಾಯಿಸಿದರು. ಈ ಕ್ರಮಕ್ಕೂ ಮುನ್ನ ವಾದಿರಾಜರು ಆಗಲೇ ಎರಡು ತಿಂಗಳುಗಳ ಐದು ಪರ್ಯಾಯ ಪೂಜೆಗಳನ್ನು ಪೂರೈಸಿದ್ದರು. ಆ ಬಳಿಕ ಎರಡು ವರ್ಷ ಅವಧಿಯ ಪರ್ಯಾಯಗಳನ್ನು ಐದು ಬಾರಿ ನಡೆಸಿದ ದಾಖಲೆ ಅವರದ್ದು. ನೂರಿಪ್ಪತ್ತು ವರ್ಷಗಳ ಆರೋಗ್ಯ ಪೂರ್ಣ ಜೀವನ ಅವರಿಗೆ ಇದನ್ನು ಸಾಧ್ಯವಾಗಿಸಿತ್ತು. ಇದೀಗ ಪೇಜಾವರ ಶ್ರೀಗಳಿಗೂ ಈ ದಾಖಲೆಯನ್ನು ಸರಿಗಟ್ಟುವ ಸುಯೋಗ. 85 ವರ್ಷದ ಪೇಜಾವರ ಶ್ರೀಗಳು ತಮ್ಮ ಪಟ್ಟದ ಶಿಷ್ಯ, ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥರೊಂದಿಗೆ ಮತ್ತೆ ಪರ್ಯಾಯ ಪೂಜಾ ಕೈಂಕರ್ಯ ಹಿಡಿಯಲು ಸಿದ್ಧವಾಗಿದ್ದಾರೆ.
ದಾಖಲೆಯ ಮಹಾಪೂಜೆ : ಪರ್ಯಾಯ ಪೀಠದ ಯತಿಗಳು ಎರಡು ವರ್ಷ ನಿರಂತರವಾಗಿ ನಿತ್ಯ ಷೋಡಶ (16 ಬಗೆಯ)ಪೂಜೆಗಳಿಂದ ಶ್ರೀಕೃಷ್ಣನನ್ನು ಅರ್ಚಿಸಬೇಕು. ಅದರಲ್ಲೂ ಮಧ್ಯಾಹ್ನದ ಪೂಜೆಯನ್ನು ಪರ್ಯಾಯ ಪೀಠಾಧಿಪತಿಗಳೇ ಮಾಡಬೇಕು. ಉಳಿದ ಪೂಜೆಗಳನ್ನು ಅವರ ಉತ್ತರಾಧಿಕಾರಿಗಳು ಅಥವಾ ಅಷ್ಟಮಠದ ಇತರ ಯತಿಗಳು ಮಾಡಿದರೂ ಅಭ್ಯಂತರವಿಲ್ಲ. ಪಂಚಮ ಪರ್ಯಾಯದ ದಾಖಲೆಯಲ್ಲಿರುವ ಪೇಜಾವರ ಶ್ರೀಗಳು ಈ ಬಾರಿ ಮಹಾಪೂಜೆಯ ದಾಖಲೆಯನ್ನೂ ಮಾಡಲಿದ್ದಾರೆ. ಕಳೆದ ನಾಲ್ಕು ಪರ್ಯಾಯಗಳಲ್ಲಿ ಅವರು ಕೃಷ್ಣನಿಗೆ 2924 ಪೂಜೆಗಳನ್ನು ಮಾಡಿದ್ದಾರೆ. ಆದರೆ ಆ ನಾಲ್ಕೂ ವರ್ಷ ಅಧಿಕ ವರ್ಷಗಳಾಗಿದ್ದು, ಹೆಚ್ಚುವರಿ ನಾಲ್ಕು ಪೂಜೆಗಳನ್ನು ಮಾಡಿದ್ದಾರೆ. ಸಂಖ್ಯಾಧಾರದಲ್ಲಿ ಇಷ್ಟು ಪೂಜೆಗಳನ್ನು ಅವರು ಕೃಷ್ಣನಿಗೆ ಅರ್ಪಿಸಿದ್ದಾರೆ. ಸೋಮವಾರ, ಜ.18ರಂದು ಪೇಜಾವರರು 2925ನೆಯ ಪೂಜೆಯನ್ನು ಕೃಷ್ಣನಿಗೆ ಸಲ್ಲಿಸಲಿದ್ದಾರೆ. ಪರ್ಯಾಯ ಮುಕ್ತಾಯದ ವೇಳೆಗೆ ಅವರು 3655 ಪೂಜೆಗಳನ್ನು ಮಾಡಿದ ಕೀರ್ತಿಗೆ ಭಾಜನರಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.