ಉಡುಪಿ : ಪರ್ಯಾಯವನ್ನು ನಾಡ ಹಬ್ಬದೋಪಾದಿಯಲ್ಲಿ ಆಚರಿಸಿಕೊಂಡು ಬರಲಾಗಿದೆ. ಈ ಬಾರಿಯ ಪೇಜಾವರ ಪರ್ಯಾಯ ಐತಿಹಾಸಿಕವಾಗಿರುವುದರಿಂದ ಹೆಚ್ಚಿನ ವೈಭವ ಕಾಣುತ್ತಿದೆ. ಪರ್ಯಾಯ ಸಂದರ್ಭ ಶ್ರೀಕೃಷ್ಣಾನುಗ್ರಹ ಮನೆಮನೆಗೆ ತಲುಪುವಂತಾಗಲಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಜ. 13ರಂದು ಪರ್ಯಾಯ “ಮಾಧ್ಯಮ ಕೇಂದ್ರ’ದ ಉದ್ಘಾಟನ ಸಮಾರಂಭದಲ್ಲಿ ಮಾಧ್ಯಮದವರಿಗಾಗಿ ಉಚಿತ ವೈಫೈ ಸೇವೆಗೆ ಚಾಲನೆ ನೀಡಿ ಮಾತನಾಡಿದರು.
ಪೇಜಾವರ ಶ್ರೀಗಳ ಪರ್ಯಾಯ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿನಿಂದ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಂಭ್ರಮ ಆರಂಭವಾಗಿದೆ. ಹೊರೆಕಾಣಿಕೆಯೂ ಅಪಾರವಾಗಿ ಹರಿದು ಬರುತ್ತಿದೆ. ಶ್ರೀಗಳು ಪರ್ಯಾಯ ಪೀಠವೇರುವ ಅನಂತರ ಅವರು ಶ್ರೀಕೃಷ್ಣನ ಪೂಜೆಯಲ್ಲಿ ಪೂರ್ಣ ತೊಡಗಿಕೊಳ್ಳುತ್ತಾರೆ. ಆಗ ಶ್ರೀಗಳ ಸೇವೆಗೆ ಅವಕಾಶ ಸಿಗುವುದಿಲ್ಲ. ಹಾಗಾಗಿ ಪರ್ಯಾಯ ಪೂರ್ವಭಾವಿಯಾಗಿ ನಡೆಯುವ ಸಿದ್ಧತೆ, ಇತರ ಕೆಲಸಗಳಲ್ಲಿ ತೊಡಗಿಕೊಳ್ಳುವ ಅವಕಾಶ ಸಿಗುವುದೇ ಒಂದು ಪುಣ್ಯ. ಈ ದಿನಗಳಲ್ಲಿ ಭಕ್ತಿ, ಶ್ರದ್ಧೆ, ಆಧ್ಯಾತ್ಮದ ವಾತಾವರಣದ ಅನುಭವ ನಮ್ಮದಾಗಬೇಕು ಎಂದರು.
ಆತಿಥ್ಯಕ್ಕೂ ಅದ್ಯತೆ ಇರಲಿ : ಉಡುಪಿಯವರು ಈಗ ಅತಿಥೇಯರು. ಹಾಗಾಗಿ ಹೊರಗಿನಿಂದ ಬಂದ ಅತಿಥಿಗಳನ್ನು ಉಪಚರಿಸುವ ಅವಶ್ಯಕತೆ ಇದೆ. ಅವರು ಭಕ್ತಿ, ಶೃದ್ಧೆಯಿಂದ ಶ್ರೀಕೃಷ್ಣನ ದರ್ಶನ ಮಾಡುವಂತಾಗಲು ಶ್ರೀಗಳ ಆಶೀರ್ವಚನ ಪಡೆಯುವಂತಾಗಲು ಎಲ್ಲರ ಸಹಕಾರ ಬೇಕು. ಊಟೋಪಚಾರವೂ ತೃಪ್ತಿಕರವಾಗಿರಬೇಕು. ಪರ್ಯಾಯದ ಸಿದ್ಧತೆ, ಕೆಲಸ ಕಾರ್ಯಗಳಲ್ಲಿ ಯಾವುದೇ ಮೇಲು-ಕೀಳಿನ ಭೇದಭಾವ ಇಲ್ಲದೆ ಎಲ್ಲರೂ ಸಮಾನ ಮನಸ್ಕರಾಗಿ ದುಡಿಯುತ್ತಿದ್ದಾರೆ ಎಂದು ಸ್ವಾಗತ ಸಮಿತಿಯ ಮಹಾಧ್ಯಕ್ಷರೂ ಆಗಿರುವ ಡಾ| ಹೆಗ್ಗಡೆ ಹೇಳಿದರು.
ರಾಷ್ಟ್ರದ ಗತ ವೈಭವ : ಈ ಬಾರಿಯ ಪರ್ಯಾಯ ಮೆರವಣಿಗೆ ಟ್ಯಾಬ್ಲೋ, ಕಲಾ ತಂಡಗಳನ್ನು ಒಳಗೊಂಡು ವೈಭವದಿಂದ ನಡೆಯಲಿದೆ. ಬೇರೆಬೇರೆ ರಾಜ್ಯಗಳ ಕಲಾ ತಂಡಗಳ ಸಂಗಮದಿಂದ ರಾಷ್ಟ್ರದ ಗತವೈಭವ ಕಾಣಲಿದೆ. ಇದು ರಾಷ್ಟ್ರೀಯ ಏಕತೆಯ ಸಂದೇಶವನ್ನು ಕೂಡ ಸಾರಲಿದೆ ಎಂದು ಹೆಗ್ಗಡೆ ಹೇಳಿದರು.ಪರ್ಯಾಯೋತ್ಸವ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ಭುವನೇಂದ್ರ ಕಿದಿಯೂರು ಮತ್ತು ಬಾಲಾಜಿ ರಾಘವೇಂದ್ರ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರತ್ನ ಕುಮಾರ್, ಕೋಶಾಧಿಕಾರಿ ಪದ್ಮನಾಭ ಭಟ್, ದಿವಾನ ರಘುರಾಮ ಆಚಾರ್ಯ ಉಪಸ್ಥಿತರಿದ್ದರು. ವಾಸುದೇವ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಎಲ್ಲರ ಸಹಕಾರ ಕೋರಿದ ಪೇಜಾವರ ಶ್ರೀ : ಮಾಧ್ಯಮ ಕೇಂದ್ರ ಉದ್ಘಾಟನೆಗೈದ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿ “ನಮ್ಮ ಶ್ರೀಕೃಷ್ಣ ಪೂಜಾ ಪರ್ಯಾಯೋತ್ಸವ ಸಂಭ್ರಮದಲ್ಲಿ ಇಡೀ ನಾಡಿನ ಜನತೆ ವಿಶೇಷ ಉತ್ಸಾಹ ತೋರಿಸುತ್ತಿರುವದನ್ನು ಕಂಡು ಅತೀವ ಸಂತೋಷವಾಗುತ್ತಿದೆ. ಎಲ್ಲರೂ ಸಹಕರಿಸಿ ಉತ್ಸವದ ಯಶಸ್ಸಿಗೆ ಕಾರಣರಾಗಬೇಕು. ಡಾ| ವೀರೇಂದ್ರ ಹೆಗ್ಗಡೆ, ಡಾ| ಮೋಹನ್ ಆಳ್ವ ಕೂಡ ವಿಶೇಷ ಸಹಕಾರ ನೀಡುತ್ತಿದ್ದಾರೆ. ಜ. 17ರ ಇಡೀ ರಾತ್ರಿ ಉತ್ಸಾಹದಿಂದ ಜಾಗರಣೆ ಮಾಡುವ ಭಕ್ತರಿಗೆ ಶ್ರೀಕೃಷ್ಣ ಭೋಜನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಜ. 18ರಂದು ಮಧ್ಯಾಹ್ನ ಪರ್ಯಾಯೋತ್ಸವ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಇದರಲ್ಲಿಯೂ ಭಕ್ತರು ಪಾಲ್ಗೊಂಡು ಶ್ರೀಕೃಷ್ಣ-ಮುಖ್ಯಪ್ರಾಣರ ಅನುಗ್ರಹಕ್ಕೆ ಪಾತ್ರರಾಗಬೇಕು. ಜನರ ಭಾವನೆಗಳನ್ನು ಮನ್ನಿಸಿ ಎರಡು ವರ್ಷಗಳ ಪರ್ಯಾಯ ಕಾಲದಲ್ಲಿ ಕಾರ್ಯನಿರ್ವಹಿಸುವ ಪ್ರಯತ್ನ ನಡೆಸುತ್ತೇವೆ ಎಂದರು.
ಗಣ್ಯರ ಇಚ್ಛೆಗೆ ಬೇಡ ಎನ್ನಲಾಗದು : ದೇಶದಾದ್ಯಂತ ಅನೇಕ ಗಣ್ಯ ಮಹನೀಯರು ಅವರಾಗಿಯೇ ಸ್ವಇಚ್ಛೆಯಿಂದ ಪರ್ಯಾಯೋತ್ಸವಕ್ಕೆ ಆಗಮಿಸುವ ಇಚ್ಛೆ ವ್ಯಕ್ತಪಡಿಸುವಾಗ ಬೇಡ ಎನ್ನಲಾಗುವುದಿಲ್ಲ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ವಿಶೇಷ ಮುತುವರ್ಜಿ ವಹಿಸಿ ಎಷ್ಟೇ ಗಣ್ಯರು ಬಂದರೂ ಸಾಮಾನ್ಯ ಭಕ್ತರು ಉತ್ಸಾಹದಿಂದ ಭಾಗವಹಿಸಲು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ವಿಶ್ವಾಸವಿದೆ. ಈ ವಿಷಯದಲ್ಲಿಯೂ ನಾಗರಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಶ್ರೀಗಳು ಮನವಿ ಮಾಡಿದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.