ಸುಳ್ಯ : ಷೇರು ಮಾರುಕಟ್ಟೆಯ ಸೂಚ್ಯಂಕವನ್ನು ನೋಡಿ ಅಮೇರಿಕ, ಜಪಾನ್ ಸೇರಿದಂತೆ ಎಲ್ಲಾ ರಾಷ್ಟ್ರಗಳ ಅರ್ಥವ್ಯವಸ್ಥೆಯನ್ನು ಅರ್ಥ ಮಾಡಿ ಕೊಳ್ಳಬಹುದು ಆದರೆ ಕುಟುಂಬ ವ್ಯವಸ್ಥೆಯೇ ಆರ್ಥಿಕತೆಯ ಆಧಾರವಾಗಿರುವ ಭಾರತದ ಅರ್ಥವ್ಯವಸ್ಥೆಯನ್ನು ಷೇರು ಸೂಚ್ಯಂಕದ ಆಧಾರದಲ್ಲಿ ಅಳೆಯುವುದು ಅಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಸಹವಿಭಾಗ ಪ್ರಚಾರಕ್ ಪ್ರದೀಪ ಮಂಗಳೂರು ಹೇಳಿದ್ದಾರೆ.
ಅವರು ಸುಳ್ಯದ `ಮಂಟಮೆ’ಯ ಆಶ್ರಯದಲ್ಲಿ ಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆದ `ಭಾರತದ ಆರ್ಥಿಕತೆಯ ಮುನ್ನೋಟ ಮತ್ತು ಹಿನ್ನಲೆ’ ಎಂಬ ವಿಷಯದಲ್ಲಿ ವಿಚಾರ ಮಂಡಿಸಿದರು. ದೇಶದ ಒಟ್ಟು ಆರ್ಥಿಕ ಸ್ಥಿತಿ ಎಂದರೆ ಅದು ದೇಶದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಯ ಮೇಲೆ ಅವಲಂಬಿತವಾಗಿದೆ. ಭಾರತದ ಕುಟುಂಬ ವ್ಯವಸ್ಥೆ ಭದ್ರವಾಗಿರುವುದರಿಂದ ಇತರ ದೇಶಗಳು ಆರ್ಥಿಕ ಕುಸಿತವನ್ನು ಅನುಭವಿಸಿದರೂ ನಮ್ಮ ದೇಶದ ಆರ್ಥಿಕ ವ್ಯವಸ್ಥೆಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ.
ಅಮೇರಿಕಾದ ನೇತೃತ್ವದಲ್ಲಿರುವ ಬಂಡವಾಳ ಶಾಹಿ ಆರ್ಥಿಕ ವ್ಯವಸ್ಥೆಯು ಜಗತ್ತಿನ ಎಲ್ಲಾ ರಾಷ್ಟ್ರಗಳ ಆರ್ಥಿಕ ಸ್ಥಿತಿಯ ಮೇಲೆ ಹಿಡಿತ ಸಾಧಿಸಿದೆ. ಅಮೇರಿಕದ ಡಾಲರ್ನ ವಿರುದ್ಧ ಸವಾಲೊಡ್ಡಲು ಇತರ ದೇಶಗಳಿಗೆ ಸಾಧ್ಯವಾಗದ ಸ್ಥಿತಿ ಇದೆ ಎಂದು ಅವರು ಹೇಳಿದರು. ಆದರೆ ಹಲವು ರಾಷ್ಟ್ರಗಳು ಬಂಡವಾಳಶಾಹಿ ಆರ್ಥಿಕ ನೀತಿಯನ್ನು ವಿರೋಧಿಸಿ ಅದರಿಂದ ಹೊರ ಬರಲು ಪ್ರಯತ್ನ ನಡೆಸಿವೆ ಎಂದು ಅವರು ಬೊಟ್ಟು ಮಾಡಿದರು.
ಬಳಿಕ ಸಂವಾದ ನಡೆಯಿತು. ಡಾ.ಚಂದ್ರಶೇಖರ ದಾಮ್ಲೆ, ಪ್ರಕಾಶ್ ಮೂಡಿತ್ತಾಯ, ಬಿ.ಎಲ್.ಶಿವರಾಮ ಮತ್ತಿತರರು ಸಂವಾದದಲ್ಲಿ ಭಾಗವಹಿಸಿದರು. ಸಿ.ಎ.ಬ್ಯಾಂಕ್ ಅಧ್ಯಕ್ಷ ಸುಬೋದ್ ಶೆಟ್ಟಿ ಮೇನಾಲ ಅಧ್ಯಕ್ಷತೆ ವಹಿಸಿದ್ದರು.ದೇವರಾಜ್ ಕುದ್ಪಾಜೆ ಸ್ವಾಗತಿಸಿ, ತೀರ್ಥರಾಮ ಕೇರ್ಪಳ ವಂದಿಸಿದರು. ಎ.ಟಿ.ಕುಸುಮಾಧರ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.