ಪುತ್ತೂರು: ಸಾಧನೆ ಮಾತಾಗಬೇಕು, ಮಾತೇ ಸಾಧನೆಯಾಗಬಾರದು. ಈ ಮಾತಿಗೆ ಅನ್ವರ್ಥವಾಗಿ ಪುತ್ತೂರಿನ ವಿವೇಕಾನಂದ ಸಂಸ್ಥೆ ಮೂಡಿಬಂದಿದೆ. ಇಲ್ಲಿನ ಸುಮಾರು 54 ಸಂಸ್ಥೆಗಳಲ್ಲಿ ಸಂಸ್ಕಾರಯುತ ಶಿಕ್ಷಣ ದೊರಕುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಇಂದು ನಮ್ಮ ಮೇಲೆ ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ದಾಳಿಗಳಾಗುತ್ತಿವೆ. ಇದಕ್ಕೆಲ್ಲ ಉತ್ತರ ಕೊಡುವ ಶಕ್ತಿ ನಮ್ಮ ಯುವಕರಲ್ಲಿ ಖಂಡಿತವಾಗಿಯೂ ಇದೆ. ಯಾಕೆಂದರೆ ನಮ್ಮ ಆಚಾರ ವಿಚಾರ ಸಂಸ್ಕೃತಿಗಳಿಗೆ ಜಗತ್ತೇ ತಲೆ ಬಾಗುತ್ತಿದೆ. ಹೀಗಿರುವಾಗ ವಿವೇಕಾನಂದರ ಜೀವನವನ್ನು ಅಧ್ಯಯನ ಮಾಡಿದರೆ ನಮ್ಮ ಶಕ್ತಿ ಮತ್ತಷ್ಟು ವೃದ್ಧಿಯಾಗುವುದರಲ್ಲಿ ಅನುಮಾನವಿಲ್ಲ. ಯಾಕೆಂದರೆ ಗಾಂಧೀಜಿ ಹೇಳಿದಂತೆ ಕೃಷ್ಣನನ್ನು ಅರಿಯಬೇಕಿದ್ದರೆ ಮಹಾಭಾರತವನ್ನು ಓದಬೇಕು, ಭಾರತವನ್ನು ತಿಳಿಯಬೇಕಿದ್ದರೆ ವಿವೇಕಾನಂದರನ್ನು ಓದಬೇಕು ಎಂದರು.ನಮ್ಮ ಮುಂದಿನ ಭವಿಷ್ಯವನ್ನು ರೂಪಿಸುವಂತಹ ಶಕ್ತಿ ಇಲ್ಲಿನ ವಿದ್ಯಾಸಂಸ್ಥೆಗಳ ಆವರಣದಲ್ಲಿದೆ. ಇಲ್ಲಿ ನೋಡಿ ಕಲಿಯುವಂತಹ ಸಂಗತಿಗಳು ಅನೇಕ ಇವೆ. ಇಂತಹ ಸಂಸ್ಥೆಗಳು ಸಮಾಜದಲ್ಲಿ ಹೆಚ್ಚಬೇಕು ಎಂದರು.
ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ ವಿವೇಕಾನಂದ ಜಯಂತಿಯ ಸಂದೇಶ ನೀಡಿ ವ್ಯಕ್ತಿಯಲ್ಲಿ ಮೂಡುವ ಜಿಜ್ಞಾಸೆಯೇ ವಿಕಾಸಕ್ಕೆ ಹಾದಿ. ಸ್ವಾಮಿ ವಿವೇಕಾನಂದರಿಗೆ ಎಳವೆಯಲ್ಲಿಯೇ ದೇವರ ಬಗೆಗೆ ಜಿಜ್ಞಾಸೆ ಮೂಡಿತ್ತು. ಹಾಗಾಗಿಯೇ ಅವರು ರಾಮಕೃಷ್ಣ ಪರಮಹಂಸರಂತಹ ಸಮರ್ಥ ಗುರುವನ್ನು ಸೇರಲು ಕಾರಣವಾಯಿತು. ಯುವಜನತೆ ದೇಶದ ಪ್ರಮುಖ ಆಧಾರ ಎಂದವರು ವಿವೇಕಾನಂದರು. ಹಾಗಾಗಿಯೇ ಅವರುವ ಯುವಜನತೆಯ ಐಕಾನ್ ಆಗಿ ಮೂಡಿಬಂದರು ಎಂದರು.
ವಿವೇಕಾನಂದರ ಬದುಕನ್ನು ಅಧ್ಯಯನ ಮಾಡಿದವರಿಗೆ ಅದೊಂದು ಸ್ಪೂರ್ತಿಗ್ರಂಥವಾಗಿ ಕಾಣಿಸುತ್ತದೆ. ಯಾವುದೇ ರಂಗದಲ್ಲಿರುವವನಿಗೂ ಅವರ ಬದುಕು ಮಾದರಿ. ವಿದ್ಯಾರ್ಥಿಗಳಿಗೆ, ಸಮಾಜ ಸೇವಕರಿಗೆ, ಉದ್ಯಮಿಗಳಿಗೆ, ರಾಜಕಾರಣಿಗಳಿಗೆ, ಸನ್ಯಾಸಿಗಳಿಗೆ ಹೀಗೆ ಎಲ್ಲರಿಗೂ ವಿವೇಕಾನಂದರ ಬದುಕು ಪ್ರೇರಣೆ ನೀಡುತ್ತದೆ ಎಂದರಲ್ಲದೆ ನಮ್ಮ ದೇಶ ಎಲ್ಲರನ್ನೂ ಸ್ವೀಕರಿಸಿದೆ, ಅರಗಿಸಿಕೊಂಡಿದೆ. ಹಾಗಾಗಿ ವಿವೇಕಾನಂದರು ಜನಸಿದ ಈ ನಾಡಿನಲ್ಲಿ ಅಸಹಿಷ್ಟುತೆ ಎಂಬುದಕ್ಕೆ ಅವಕಾಶವೇ ಇಲ್ಲ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ.ಮೋಹನ ಆಳ್ವ ಮಾತನಾಡಿ ಕನ್ನಡ ಮಾಧ್ಯಮ ಶಾಲೆಗಳು ಸೋಲುವುದಕ್ಕೆ ಅವಕಾಶ ಮಾಡಿಕೊಡಬಾರದು. ಕನ್ನಡ ಶಾಲೆ ಸೋತರೆ ನಾವೇ ಸೋತಂತೆ. ವಿವೇಕಾನಂದ ವಿದ್ಯಾವರ್ಧಕ ಸಂಘ ಅನೇಕ ಕನ್ನಡ ಶಾಲೆಗಳನ್ನು ನಡೆಸುತ್ತಿದೆ. ಆಳ್ವಾಸ್ ಕೂಡ ಅನೇಕ ಕನ್ನಡ ಶಾಲೆಗಳನ್ನು ಮುನ್ನಡೆಸುತ್ತಿದೆ. ಸರ್ಕಾರ ನಮ್ಮ ಕನ್ನಡ ಸಂಸ್ಥೆಗಳ ಬಗೆಗೆ ಅಧ್ಯಯನ ನಡೆಸಬೇಕು. ಹೇಗೆ ನಾವು ನಡೆಸುತ್ತಿದ್ದೇವೆಂದು ಸಲಹೆ ಕೇಳಬೇಕು. ತನ್ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ತೊಡಗಬೇಕು ಎಂದರು.ಇಂದಿನ ವಿದ್ಯಾರ್ಥಿಗಳಿಗೆ ಅಪಾರ ಬುದ್ಧಿಮತ್ತೆಯಿದೆ. ಆದರೆ ಕೆಲವು ವಿದ್ಯಾರ್ಥಿಗಳ ವೈಫಲ್ಯವನ್ನೇ ಕೆಲವು ಇತ್ತೀಚೆಗಿನ ವಿದ್ಯಾಸಂಸ್ಥೆಗಳು ದುರುಪಯೋಗಪಡಿಸಿಕೊಂಡು ವಿದ್ಯೆಯನ್ನು ಹಣ ಗಳಿಸುವ ದಂಧೆಯನ್ನಾಗಿಸಿರುವುದು ಆತಂಕದ ವಿಚಾರ ಎಂದರಲ್ಲದೆ ಸೌಂದರ್ಯ ಪ್ರಜ್ಞೆ ಇಲ್ಲದ ಯಾರೂ ಕಲೆ, ಸಂಸ್ಕೃತಿ, ದೇಶ, ಜೀವನ ಪದ್ಧತಿಯನ್ನು ಪ್ರೀತಿಸಲಾರರು ಎಂದು ನುಡಿದರು.ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಹಿರಿಯ ಸದಸ್ಯ ಕೆ ರಾಮ ಭಟ್ ಮಾತನಾಡಿ ರಾಷ್ಟ್ರೀಯ ವಿಚಾರ ಧಾರೆಗಳ ಮೇಲೆ ನಮ್ಮ ಶಿಕ್ಷಣ ನಿಂತಿರುವುದೇ ಹೆಮ್ಮೆ ಪಡಬೇಕಾದ ವಿಚಾರ. ಇಲ್ಲಿನ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಬೆಳಗುವುದರಲ್ಲಿ ಅನುಮಾನವಿಲ್ಲ ಎಂದರು.
ಸಾಮೂಹಿಕ ವಂದೇ ಮಾತರಂ : ಕಾರ್ಯಕ್ರಮದ ಆರಂಭದಲ್ಲಿ ನೆರೆದಿದ್ದ ವಿದ್ಯಾರ್ಥಿಗಳು, ಹೆತ್ತವರು, ಹಿರಿಯ ವಿದ್ಯಾರ್ಥಿಗಳು, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರನ್ನೊಳಗೊಂಡ ಸುಮಾರು ಇಪ್ಪತ್ತೈದು ಸಾವಿರ ಮಂದಿ ಒಕ್ಕೊರಲಿನಿಂದ ವಂದೇಮಾತರಂ ಗೀತೆಯ ಪೂರ್ಣಪಾಠವನ್ನು ಹಾಡಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು. ತದನಂತರ ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗ ಪ್ರದರ್ಶನ, ಘೋಷ್ ಕಾರ್ಯಕ್ರಮ ನಡೆಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಪ್ರಸ್ತಾವನೆಗೈದು, ಸ್ವಾಗತಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಆಶಯದ ನುಡಿಗಳನ್ನಾಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಇ ವಂದಿಸಿದರು. ಉಪನ್ಯಾಸಕರಾದ ಹರಿಪ್ರಸಾದ್ ಹಾಗೂ ವಿದ್ಯಾ ಎಸ್ ಕಾರ್ಯಕ್ರಮ ನಿರ್ವಹಿಸಿದರು.
ಧ್ಯಾನಮಂದಿರ ಉದ್ಘಾಟನೆ: ಸಭಾಕಾರ್ಯಕ್ರಮಕ್ಕೂ ಮುನ್ನ ನೆಹರುನಗರದಲ್ಲಿನ ವಿವೇಕಾನಂದ ಕ್ಯಾಂಪಸ್ನಲ್ಲಿ ಆಕರ್ಷಕವಾಗಿ ರೂಪುಗೊಂಡಿರುವ ವಿವೇಕಾನಂದ ಧ್ಯಾನಮಂದಿರವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು. ಅಲ್ಲೇ ಪಕ್ಕದಲ್ಲಿ ತಲೆ ಎತ್ತಿ ನಿಂತಿರುವ ಗಣಪತಿ ಗುಡಿಯನ್ನು ಸುರೇಶ್ಚಂದ್ರಜಿ ಲೋಕಾರ್ಪಣೆಗೊಳಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘ ಹೊರತಂದಿರುವ ಚರೈವೇತಿ ಗ್ರಂಥ ಹಾಗೂ ಕ್ಯಾಲೆಂಡರ್ ಅನ್ನು ಡಾ.ಮೋಹನ ಆಳ್ವ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರಕ್ ಪ್ರಮುಖ್ ಸುರೇಶ್ಚಂದ್ರಜಿ, ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಪುತ್ತೂರಿನ ಪುರ ಸಭೆ ಅಧ್ಯಕ್ಷ ಜೀವಂಧರ್ ಜೈನ್ ಮಾತ್ರವಲ್ಲದೆ ಅನೇಕ ಮಂದಿ ರಾಜಕಾರಣಿಗಳು, ಸಮಾಜಸೇವಕರು, ಹಿರಿಯರು, ಹಿರಿಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಮಾತ್ರವಲ್ಲದೆ ಹೆತ್ತವರು ಹಾಗೂ ಊರವರು ಹಾಜರಿದ್ದರು.
ಧರ್ಮಭೂಮಿ ನೃತ್ಯರೂಪಕ: ಸಭಾಕಾರ್ಯಕ್ರಮದ ನಂತರ ಬೆಂಗಳೂರಿನ ಪ್ರಭಾತ್ ಕಲಾವಿದರಿಂದ ದೇಶ ಭಕ್ತಿಯನ್ನಾಧರಿಸಿದ ಸುಮಾರು 30 ಕಲಾವಿರನ್ನೊಳಗೊಂಡ ಧರ್ಮಭೂಮಿ ಅನ್ನುವ ನೃತ್ಯ ರೂಪಕ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.