ಬೆಳ್ತಂಗಡಿ: ಎಂಡೋ ಸಲ್ಫಾನ್ ಬಾಧಿತ ಬೆಳ್ತಂಗಡಿ, ಮಂಗಳೂರು ತಾಲೂಕಿನ ೩೪೪ ಸಂತ್ರಸ್ತರಿಗೆ ಗುರುತಿನ ಚೀಟಿ, ಇತರ ಸಲಕರಣೆಗಳನ್ನು ಹಾಗೂ ಅರ್ಹರಿಗೆ ಸುಮಾರು 3 ಲಕ್ಷ ರೂ. ಮೌಲ್ಯದ ಗಾಲಿ ಕುರ್ಚಿ ಮತ್ತು 2 ವಾಹನಗಳನ್ನು ವಿತರಿಸುವ ಕಾರ್ಯ ನಾರಾವಿ ಲಯನ್ಸ್ ಕ್ಲಬ್ ವತಿಯಿಂದ ನಾರಾವಿ ಹಿ.ಪ್ರಾ.ಶಾಲೆಯಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ, 28 ಮಂದಿಗೆ ಗಾಲಿಕುರ್ಚಿಗಳನ್ನು ವಿತರಿಸಿ ಮಾತನಾಡಿದ ಶಾಸಕ ಕೆ.ವಸಂತ ಬಂಗೇರ ಅವರು, ಸಂತ್ರಸ್ತರು ಎಲ್ಲರಂತೆ ಬದುಕು ಸಾಗಿಸಲು ಸರಕಾರ ಬೇಕಾದ ವ್ಯವಸ್ಥೆಯನ್ನು ಮಾಡಿದೆ. ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ 121 ಮಂದಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗಿದೆ. ಶೇ.60 ಕ್ಕಿಂತ ಹೆಚ್ಚು ವಿಕಲಾಂಗತೆಯನ್ನು ಹೊಂದಿರುವವರಿಗೆ ರೂ.3000, ಶೇ.25 ರಿಂದ ಶೇ.59 ರೊಳಗೆ ವಿಕಲಾಂಗತೆಯನ್ನು ಹೊಂದಿರುವವರಿಗೆ ರೂ.1500 ಮಾಸಾಶನವನ್ನು ಹಾಗೂ ಸಂತ್ರಸ್ತ ಕುಟುಂಬದ ಇಬ್ಬರಿಗೆ ಬಸ್ ಪಾಸ್ನ್ನು ಸರಕಾರ ವ್ಯವಸ್ಥೆ ಮಾಡಿದೆ ಎಂದರು.
ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಅವರು ಸಂತ್ರಸ್ತರಿಗೆ ಗುರುತಿನ ಚೀಟಿ ವಿತರಣೆ ಮಾಡಿ, ಸರಕಾರ ಮಾಡಬೇಕಾದ ಕೆಲಸವನ್ನು ಲಯನ್ಸ್ ಕ್ಲಬ್ ಮತ್ತು ಇತರ ಸಂಸ್ಥೆಗಳು ಮಾಡುತ್ತಿದೆ. ಮಾನವೀಯ ಗುಣಗಳು ನಮ್ಮಲ್ಲಿ ಇನ್ನೂ ಉಳಿದಿವೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಈಗಾಗಲೇ ಕೊಕ್ಕಡ ಮತ್ತು ಕೊಲ ಗಳಲ್ಲಿ ಪಾಲನಾ ಕೇಂದ್ರಗಳು ಇರುವಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಇರಬೇಕು ಈ ಬಗ್ಗೆ ಶಾಸಕರು ಗಮನ ಹರಿಸಿ ಸರಕಾರದ ಮೇಲೆ ಒತ್ತಡ ತರುವುದು ಅವರಿಗೆ ನಾವು ಕೊಡುವ ನ್ಯಾಯವಾಗಿದೆ. ಅಂದು ಶೋಭಾ ಕರಂದ್ಲಾಜೆಯವರು ಕೊಕ್ಕಡಕ್ಕೆ ಬಂದು ಸಹಾಯಧನ ನೀಡಿದ ಮೇಲೆ ಎಂಡೋ ಸಂತ್ರಸ್ತರ ಬಗ್ಗೆ ಕಾಳಜಿ ಹೆಚ್ಚಾಗಿದೆ ಎಂದ ಅವರು ಗ್ರಾ.ಪಂ.ಕ್ಕೆ ಬರುವ ಅನುದಾನದಲ್ಲಿ ಶೇ. ೩ ರಷ್ಟನ್ನು ಇಂತಹ ಕಾರ್ಯಗಳಿಗೆ ನೀಡಬೇಕು ಎಂಬುದನ್ನು ಜಿ.ಪಂ. ಆದೇಶ ಮಾಡಿದ್ದು ಅದನ್ನು ಪಂ.ಗಳು ಅನುಸರಿಸುತ್ತಿರುವುದು ಸಂತಸ ತಂದಿದೆ ಎಂದ ಅವರು ಜಿ.ಪಂ.ಗೆ ಪ್ರಶಸ್ತಿ ಬಂದಾಗ ಸಿಕ್ಕಿದ ರೂ. ಒಂದು ಲಕ್ಷ ಹಣವನ್ನು ಪಾಲಾನಾ ಕೇಂದ್ರಕ್ಕೆ ನೀಡಿರುವುದನ್ನು ಸ್ಮರಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಕವಿತಾ ಶಾಸ್ತ್ರೀ ಅವರು 344 ಮಂದಿಗೆ ಕಿಟ್ಗಳನ್ನು ವಿತರಿಸಿ, ಎಂಡೋ ಪೀಡಿತರನ್ನು ಹೊಂದಿರುವ ಪೋಷಕರು ಯಾವುದೇ ಕಾರಣಕ್ಕೂ ಎಂದಿಗೂ ಧೈರ್ಯಕಳೆದುಕೊಳ್ಳಬಾರದು. ಕ್ಲಬ್ ನಿಮ್ಮ ಪರವಾಗಿ ಸದಾ ಇದೆ. ಎಂದೂ ಕೈ ಬಿಡುವುದಿಲ್ಲ ಎಂದು ಭರವಸೆ ನೀಡಿದರು.
28 ಮಂದಿ ಸಂತ್ರಸ್ತರಿಗೆ ತಾ.ಪಂ. ಅಧ್ಯಕ್ಷೆ ಜಯಂತಿ ಪಾಲೇದು ವಾಟರ್ ಬೆಡ್ಗಳನ್ನು ಹಸ್ತಾಂತರಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣರಾವ್ ಸಂತ್ರಸ್ತರಿಗೆ ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಹಾಗೂ ಎಂಡೋಸಲ್ಫಾನ್ ನೋಡೆಲ್ ಅಧಿಕಾರಿ ಡಾ| ಅರುಣ್ಕುಮಾರ್ ಸಂತ್ರಸ್ಥರ ಬಗ್ಗೆ ಮಾಹಿತಿ ನೀಡಿದರು.
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಪ್ರವೀಣ್ಕುಮಾರ್ ಇಂದ್ರ, ನಾರಾವಿ ಗ್ರಾ.ಪಂ. ಅಧ್ಯಕ್ಷ ರವೀಂದ್ರ ಪೂಜಾರಿ ಬಾಂದೊಟ್ಟು, ದ.ಕ.ಜಿಲ್ಲಾ ಎಂಡೋ ಸಂತ್ರಸ್ತರ ವಿವಿಧೋದ್ಧೇಶ ಸಹಕಾರಿ ಸಂಘ ಅಲಂಕಾರು ಪುತ್ತೂರು ಇದರ ಗಂಗಾರತ್ನ ವಸಂತ, ಜಿಲ್ಲಾ ವಿಕಲಚೇತನ ಶಾಲಾ ಸದಸ್ಯ ಪಿ.ಎಸ್.ಪ್ರಭಾಕರ್, ಬೆಳ್ತಂಗಡಿಯ ನೋಟರಿ ಮುರಳಿ ಬಿ., ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ಕೆ.ಚಂದ್ರಕಲಾ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಜಯಂತ ಕೋಟ್ಯಾನ್, ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ಶಾಲಾ ಮುಖ್ಯೋಪಾಧ್ಯಾಯ ಶೀನ ನಾಯ್ಕ, ಎಪಿಎಂಸಿ ಅಧ್ಯಕ್ಷ ಧರಣೇಂದ್ರಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಶ್ರೀನಿವಾಸ ಕಿಣಿ, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ| ನವೀನ್ಚಂದ್ರ ಕುಲಾಲ್ ವೇದಿಕೆಯಲ್ಲಿದ್ದರು.
ವೇಣೂರು, ಅಳದಂಗಡಿ, ಬೆಳ್ತಂಗಡಿ, ಶಿರ್ತಾಡಿ, ಫ್ರೆಂಡ್ಸ್ ಕ್ಲಬ್ ಹೊಸಂಗಡಿ, ದ.ಕ.ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ, ನಾಗರಿಕ ಸೇವಾ ಸಮಿತಿ ಗುರುವಾಯನಕೆರೆ, ಗ್ರಾ.ಪಂ. ನಾರಾವಿ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಯೇನಪೋಯ ಹಾಸ್ಪಿಟಲ್ ಮಂಗಳೂರು ಇಲ್ಲಿನ ತಜ್ಞ ವೈದ್ಯರಿಂದ ಆರೋಗ್ಯತಪಾಸಣಾ ಶಿಬಿರ ನಡೆಯಿತು.
ಶಿಕ್ಷಕ ಧರಣೇಂದ್ರಕುಮಾರ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನಾರಾವಿ ಅಧ್ಯಕ್ಷ ರಾಮಚಂದ್ರ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಧನಂಜಯ ಕುಮಾರ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.