ಸುಳ್ಯ: ಸಾಕಷ್ಟು ಸಿದ್ಧತೆಗಳನ್ನು ನಡೆಸಿ, ಕೇಸುಗಳನ್ನು ವಾದಿಸಿ ವಕೀಲರುಗಳು ಜನರಿಗೆ ತ್ವರಿತ ನ್ಯಾಯ ಮತ್ತು ಉತ್ತಮ ಸೇವೆಯನ್ನು ನೀಡಲು ಪ್ರಯತ್ನಿಸಬೇಕು. ಪ್ರತಿಯೊಂದು ವ್ಯಾಜ್ಯವೂ ವಕೀಲರುಗಳಿಗೆ ಒಂದೊಂದು ಪರೀಕ್ಷೆ ಇದ್ದಂತೆ. ಪ್ರತಿಯೊಂದು ವ್ಯಾಜ್ಯಗಳಿಗೂ ಸಾಕಷ್ಟು ಸಿದ್ಧತೆಗಳು, ಅಧ್ಯಯನ ನಡೆಸಬೇಕಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರೂ ಆದ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲ ಗೌಡ ಹೇಳಿದ್ದಾರೆ.
ಅವರು ಸುಳ್ಯ ವಕೀಲರ ಸಂಘದ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಸುಳ್ಯ ವಕೀಲರ ಸಂಘಕ್ಕೆ ಸುಸಜ್ಜಿತವಾದ ಕಟ್ಟಡ ನಿರ್ಮಾಣಗೊಂಡಿರುವುದರಿಂದ ವಕೀಲರಿಗೆ ಕಾರ್ಯನಿರ್ವಹಿಸಲು ಉತ್ತಮ ವಾತಾವರಣ ದೊರೆಯುವುದರ ಜೊತೆಗೆ ಇಲ್ಲಿಗೆ ಬರುವ ಸಾಮಾನ್ಯ ಜನರಿಗೆ, ಕಕ್ಷಿದಾರರಿಗೆ ಸಹಾಯಕವಾಗಲಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಮಾತನಾಡಿ, ಪ್ರತಿಯೊಬ್ಬರೂ ಕನಸು ಕಾಣಬೇಕು. ಕನಸು ಕಾಣುವುದನ್ನು ರೂಢಿಸಿಕೊಂಡರೆ ಮಾತ್ರ ಏನನ್ನಾದರೂ ಸಾಧಿಸಬಹುದು. ಯುವಜನರು ತಾವು ಕಾಣುವ ಕನಸನ್ನು ಸಾಧಿಸುವ ಪ್ರಯತ್ನವನ್ನು ಸದಾ ನಡೆಸುತ್ತಿರಬೇಕು ಎಂದು ಹೇಳಿದರು. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದಲ್ಲಿ ಕಾನೂನು ಪಾಲನೆಗೆ ಹೆಚ್ಚು ಸಹಕಾರಿಯಾಗಲಿದೆ. ಇದರಿಂದ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಲು ಸಾಧ್ಯ ಎಂದು ಅವರು ಹೇಳಿದರು.
ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಕರ್ತವ್ಯ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಪಡೆಯಲು ಸಾಧ್ಯ. ಯಾವುದೇ ರೀತಿಯ ಬದಲಾವಣೆಗೆ ಎಲ್ಲರ ಪಾಲೂ ಮಹತ್ವದ್ದು ಎಂದು ಅವರು ಹೇಳಿದರು. ಉತ್ಸಾಹ, ಸ್ಫೂರ್ತಿಯ ಜೊತೆಗೆ ಪ್ರೀತಿ ಮತ್ತು ವಿಶ್ವಾಸವನ್ನೂ ಮೈಗೂಡಿಸಿಕೊಳ್ಳುವುದು ಸಾಧನೆ ಮಾಡಲು ಸಹಕಾರಿ ಎಂದರು.
ಕರ್ನಾಟಕ ರಾಜ್ಯ ಕಾನೂನು ವಿ.ವಿ.ಯ ಉಪಕುಲಪತಿ ಡಾ.ಟಿ.ಆರ್.ಸುಬ್ರಹ್ಮಣ್ಯ, ಕರ್ನಾಟಕ ರಾಜ್ಯ ವಕೀಲರ ಪರಿಷತ್ನ ಅಧ್ಯಕ್ಷ ಪಿ.ಪಿ.ಹೆಗ್ಡೆ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅತಿಥಿಗಳಾಗಿದ್ದರು.
ದಕ್ಷಿಣ ಕನ್ನಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಮಾ.ಎಂ.ಜಿ. ಸ್ವಾಗತಿಸಿ, ಸುಳ್ಯ ವಕೀಲರ ಸಂಘದ ಅಧ್ಯಕ್ಷ ಬಿ.ವೆಂಕಪ್ಪ ಗೌಡ ವಂದಿಸಿದರು. ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಎ.ಜಿ.ಧರ್ಮರಾಜ್ ಉಪಸ್ಥಿತರಿದ್ದರು.
ಸುಮಾ ಕೆ.ಎಸ್.ಪ್ರಾರ್ಥಿಸಿದರು. ಬೇಬಿ ವಿದ್ಯಾ, ದಳ ಸುಬ್ರಾಯ ಭಟ್ ಮತ್ತು ಬಿ.ಎಸ್.ಶರೀಫ್ ನಿರೂಪಿಸಿದರು.
ನೂತನ ಕಟ್ಟಡದ ನಿರ್ಮಾಣಕ್ಕಾಗಿ ಶ್ರಮಿಸಿದ ವಕೀಲರ ಸಂಘದ ಅಧ್ಯಕ್ಷ ಬಿ.ವೆಂಕಪ್ಪ ಗೌಡರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ವಕೀಲರ ಸಂಘದ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.