ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ನಂದಾವರದಲ್ಲಿ ಎ. 5ರಂದು ವಶಪಡಿಸಲಾದ ಅಕ್ರಮ ಮರಳು 9 ಬೋಟ್ಗಳಿಗೆ 1.68 ರೂ. ಲಕ್ಷ ದಂಡ ವಿಧಿಸಿದ್ದಾಗಿ ಬಂಟ್ವಾಳ ತಹಸೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.
ಅದೇ ರೀತಿಯಲ್ಲಿ ಕಡೇಶ್ವಾಲ್ಯ ಮತ್ತು ಬರಿಮಾರ್ನಲ್ಲಿ ವಿವಿಧ ಸಂದರ್ಭಗಳಲ್ಲಿ ವಶಪಡಿಸಲಾದ ಮರಳು ದಾಸ್ತಾನಿಗೆ 45 ಸಾವಿರ ರೂ. ದಂಡ ವಿಧಿಸಿದ್ದಾಗಿ ವಿವರ ನೀಡಿದ್ದಾರೆ.
ಅಕ್ರಮ ಮರಳು ಸಾಗಾಟದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದ ದೂರಿನ ಹಿನ್ನೆಲೆಯಲ್ಲಿ, ಅದರಲ್ಲೂ ಸಜೀಪಮುನ್ನೂರು ಗ್ರಾಮದ ನಂದಾವರದಲ್ಲಿ ಪ್ರತಿಭಟನೆಗೆ ಜನರು ಮುಂದಾಗಿದ್ದು ತಹಶೀಲ್ದಾರ್ ಕಠಿಣ ಕಾನೂನು ಕ್ರಮದ ಮೂಲಕ ಎಚ್ಚರಿಕೆ ನೀಡಿದ್ದರು.
ಅಕ್ರಮ ಮರಳು ದಂಧೆಕೋರರು ಎಚ್ಚರಿಕೆಯನ್ನು ತಿರಸ್ಕರಿಸಿ ರಾತೋರಾತ್ರಿ ದಾಸ್ತಾನು ಮರಳನ್ನು ಸಾಗಿಸಿದ ಬಳಿಕ ನಂದಾವರ ನೇತ್ರಾವತಿ ನದಿ ವಠಾರದ ಮರಳುಗಾರಿಕೆ ಅಡ್ಡೆಗೆ ಗಣಿ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಶುಕ್ರವಾರ ರಾತ್ರಿ ದಾಳಿ ನಡೆಸಿ ಬೋಟ್ಗಳನ್ನು ವಶಕ್ಕೆ ಪಡೆದಿದ್ದರು.
ಮುಂದಕ್ಕೆ ಇಲ್ಲಿ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿ ದಾಸ್ತಾನು ಇರಿಸಲಾದ ಎಲ್ಲಾ ಪರಿಕರಗಳನ್ನು ಸ್ಥಳದಿಂದ ತೆರವುಗೊಳಿಸಲು ಆದೇಶಿಸಿದ್ದಾರೆ. ಮರಳು ಸಾಗಾಟದ ರಸ್ತೆಗೆ ತಡೆಬೇಲಿ ಹಾಕುವಂತೆ ಸಜೀಪಮುನ್ನೂರು ಗ್ರಾಮ ಪಂಚಾಯತ್ಗೆ ಸೂಚಿಸಿದ್ದಾಗಿ ತಿಳಿಸಿದ್ದಾರೆ.
ಕಡೇಶ್ವಾಲ್ಯದಲ್ಲಿ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿ 15 ಸಾವಿರ ರೂ. ದಂಡ ವಿಧಿಸಲಾಗಿದ್ದು, ಮರಳು ಮೇಲೆತ್ತಲು ಬಳಸಲಾಗುತ್ತಿದ್ದ ಯಂತ್ರೋಪಕರಣವನ್ನು ತೆರವು ಮಾಡಿದ್ದಾಗಿ ತಿಳಿಸಿದರು. ಬರಿಮಾರ್ ಮರಳುಗಾರಿಕೆಯನ್ನೂ ತೆರವುಗೊಳಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಅಕಾರಿ ಮೂರ್ತಿ ಹೇಳಿದರು.
ಯಾವುದೇ ಪ್ರದೇಶಗಳಲ್ಲಿ ಅನಧಿಕೃತ ಮರಳುಗಾರಿಕೆ ನಡೆಸಿದ್ದಲ್ಲಿ ಸ್ಥಳೀಯ ಗ್ರಾ.ಪಂ ಅಧಿಕಾರಿಗಳು ಹಾಗೂ ಗ್ರಾಮಲೆಕ್ಕಾಧಿಕಾರಿಗಳು ತಕ್ಷಣ ಮಾಹಿತಿ ನೀಡಬೇಕು ಎಂದು ಇದೇ ಸಂದರ್ಭ ಸೂಚಿಸಿದ್ದನ್ನು ವಿವರಿಸಿದರು.
ಸಹಾಯಕ ಆಯುಕ್ತ ಡಾ. ಡಿ.ಆರ್.ಅಶೋಕ್, ಎಎಸ್ಪಿ ರಾಹುಲ್ ಕುಮಾರ್ ನಿರ್ದೇಶನದಂತೆ ಕಾರ್ಯಾಚರಣೆ ನಡೆಸಿದ್ದು, ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಮೂರ್ತಿ, ವೃತ್ತ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪ, ಪಿಎಸ್ಐ ನಂದಕುಮಾರ್, ರೆವೆನ್ಯೂ ಇನ್ಸ್ಪೆಕ್ಟರ್ ನಾರಾಯಣ ಪೂಜಾರಿ, ಗ್ರಾಮ ಲೆಕ್ಕಾಧಿಕಾರಿ ತೌಸೀಫ್, ರಾಜ್ಕುಮಾರ್ ಕಾರ್ಯಾಚರಣೆಯಲ್ಲಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.