ಬೆಳ್ತಂಗಡಿ: ವೈಚಾರಿಕತೆ ಮತ್ತು ಸೃಜನಶೀಲತೆಯ ಅದ್ಭುತ ಮಿಲನವನ್ನು ಕುವೆಂಪು ಸಾಹಿತ್ಯ ಹೊಂದಿದೆ ಎಂದು ನಾಡಿನ ಖ್ಯಾತ ಹಿರಿಯ ಸಾಹಿತಿ ಕೆ.ಟಿ.ಗಟ್ಟಿ ಅಭಿಪ್ರಾಯಪಟ್ಟರು.
ಅವರು ಬುಧವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಬೆಳ್ತಂಗಡಿಯ ಮಾನವ ಬಂಧುತ್ವ ವೇದಿಕೆ ಹಾಗೂ ಸಮುದಾಯ ಸಾಂಸ್ಕೃತಿಕ ಸಂಘಟನೆ ಆಶ್ರಯದಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಹಾಗೂ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಭಾವನೆಯ ಆಳಕ್ಕೆ ಇಳಿದರೆ ಕಾವ್ಯ, ಸಾಹಿತ್ಯ ಸೃಷ್ಟಿಯಾಗುತ್ತದೆ. ಕಾವ್ಯ ಹುಟ್ಟುವುದು ಅಂತರಾತ್ಮದಲ್ಲಿ. ಅದಕ್ಕೆ ಪ್ರಚೋದನೆ ಸಿಗುವುದು ನಮ್ಮ ಸುತ್ತಲಿನ ಪ್ರಪಂಚ. ಕುವೆಂಪು ನನ್ನ ಆರಾಧ್ಯಮೂರ್ತಿ. ಅವರ ಭಾಷೆ ಮುತ್ತು ರತ್ನಗಳನ್ನು ಪೋಣಿಸಿದಂತೆ. ಭಾಷೆಗೆ ಓದು ಪೂರಕ ಎಂದ ಅವರು, ವೈಚಾರಿಕತೆ ಮತ್ತು ಸೃಜನಶೀಲತೆಯನ್ನು ಬೇರ್ಪಡಿಸುವುದು ಸರಿಯಲ್ಲ. ಅವು ಒಂದಕ್ಕೊಂದು ಹೊಂದಿಕೊಂಡಿರುವಂತಹದು. ಕುವೆಂಪು ಸಾಹಿತ್ಯದಲ್ಲಿ ಅದನ್ನು ಹೇರಳವಾಗಿ ಗಮನಿಸಬಹುದು ಎಂದರು.
ಮಾತೃಭಾಷೆ ಯಾವಾಗಲೂ ಪುಷ್ಪದಂತೆ ಅರಳಿಕೊಂಡಿರಬೇಕು. ಯಾವ ಭಾಷೆಯನ್ನಾದರೂ ಕಲಿಯಲು ನಾವು ಸ್ವತಂತ್ರರು. ಆದರೆ ಮಾತೃಭಾಷೆಯನ್ನು ಯಾವ ರಾಜ್ಯ, ದೇಶಕ್ಕೆ ಹೋದರು ಮರೆಯಬಾರದು. ಜೀವಸತ್ವ, ಜೀವರಸ ಇರುವುದು ಮಾತೃಭಾಷೆಯಲ್ಲಿ. ಸಾಮರ್ಥ್ಯ ವ್ಯಕ್ತವಾಗುವುದು ಭಾಷೆಯ ಮೂಲಕ ಎಂದು ಗಟ್ಟಿ ಪ್ರತಿಪಾದಿಸಿದರು.
ಮೂಡಬಿದರೆ ಆಳ್ವಾಸ್ ಪ.ಪೂ. ಕಾಲೇಜಿನ ಉಪನ್ಯಾಸಕಿ ಸುಲತಾ ವಿದ್ಯಾಧರ ಅವರು ಕುವೆಂಪು ಸಾಹಿತ್ಯದಲ್ಲಿ ಮಹಿಳೆ ಕುರಿತು, ಮಹಿಳೆಯಯನ್ನು ದ್ವಿತೀಯ ದರ್ಜೆ ಪ್ರಜೆಯಾಗಿ ಕಾಣಿತ್ತಿದ್ದ ಕಾಲಘಟ್ಟದಲ್ಲಿ ಆಕೆಯನ್ನು ದೈವತ್ವಕ್ಕೆ ಏರಿಸಿ ಗೌರವದ ಸ್ಥಾನ ಮಾನ ನೀಡಬೇಕೆಂದು ತಮ್ಮ ಕೃತಿಗಳಲ್ಲಿ ಪ್ರತಿಪಾದಿಸಿದ್ದಾರೆ ಎಂದರು.
ಚಿಂತಕ ವಿಲ್ಫ್ರೆಡ್ ಡಿಸೋಜ ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ ಬಗ್ಗೆ ವಿಚಾರ ಮಂಡಿಸಿ, ಕುವೆಂಪು ಸಾಹಿತ್ಯ ಮತ್ತು ಚಿಂತನೆಗಳು ಎಲ್ಲಾ ಧರ್ಮಗಳ ವೈದಿಕಶಾಹಿ ವ್ಯವಸ್ಥೆಯ ವಿರುದ್ಧದ ಧ್ವನಿಯಾಗಿತ್ತು. ಮೌಢ್ಯ ಮತ್ತು ಅನಾಚಾರಗಳನ್ನು ಮೀರಿದ ಆಧ್ಯಾತ್ಮಿಕತೆ ಅವರದ್ದಾಗಿತ್ತು.
ಅಧ್ಯಕ್ಷತೆಯನ್ನು ಪತ್ರಕರ್ತ, ಮಾ.ಬಂ.ವೇದಿಕೆ ಸಂಚಾಲಕ ಶಿಬಿ ಧರ್ಮಸ್ಥಳ ವಹಿಸಿದ್ದರು. ಈ ಸಂದರ್ಭ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರ ಹೆಸರನ್ನು ಪ್ರಕಟಿಸಲಾಯಿತು. ಆಶಾ ಸುಜಿತ್ ಕಾರ್ಯಕ್ರಮ ನಿರ್ವಹಿಸಿ ಚೆನ್ನಕೇಶವ ಸ್ವಾಗತಿಸಿದರು. ಅದಿತಿ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.