ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾದ ರಂಗಾಯಣವನ್ನು ನಾಟಕಕಾರ ಬಿ.ವಿ.ಕಾರಂತರ ಹುಟ್ಟೂರಾದ ಮಂಚಿಯಲ್ಲಿಯೇ ಸ್ಥಾಪಿಸುವ ಚಿಂತನೆ ನಡೆಸಬೇಕೆಂದು ಮಂಗಳೂರು ಆಕಾಶವಾಣಿ ಸಹಾಯಕ ನಿರ್ದೇಶಕ ಡಾ. ವಸಂತ ಕುಮಾರ್ ಪೆರ್ಲ ಅವರು ಹೇಳಿದರು.
ಬಿ.ವಿ.ಕಾರಂತ ರಂಗ ಭೂಮಿಕಾ ಟ್ರಸ್ಟ್, ಮಂಚಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಬಿ.ವಿ.ಕಾರಂತ ನೆನಪಿನ ಮಂಚಿ ನಾಟಕೋತ್ಸವವನ್ನು ಶುಕ್ರವಾರ ಉದ್ಘಾಟಿಸಿದ ಅವರು, ಮೈಸೂರು, ಧಾರಾವಾಡ, ಗುಲ್ಬರ್ಗಾದಲ್ಲಿ ಕಾರಂತರ ಪರಿಕಲ್ಪನೆಯಲ್ಲಿ ರಂಗಾಯಣ ಹುಟ್ಟಿಕೊಂಡಿವೆ. ಹಾಗಾಗಿ ಮಂಗಳೂರು ರಂಗಾಯಣ ಅವರ ಹುಟ್ಟೂರಿನಲ್ಲಿ ಸ್ಥಾಪನೆಗೊಳ್ಳುವುದು ಹೆಚ್ಚು ಅರ್ಥಪೂರ್ಣ. ಈ ಹಿನ್ನೆಲೆಯಲ್ಲಿ ಸರಕಾರಕ್ಕೆ ಒತ್ತಡ ತರುವ ಕೆಲಸ ಸಚಿವರು, ಶಾಸಕರಿಂದ ಆಗಬೇಕೆಂದು ತಿಳಿಸಿದರು.
ಕಾರಂತರ ಜನ್ಮಸ್ಥಳಕ್ಕೆ ಭೇಟಿ: ಕುಕ್ಕಾಜೆ ಗ್ರಾಮದ ಮಂಚಿ, ಬಾಬುಕೋಡಿಯಲ್ಲಿರುವ ಕಾರಂತರ ಜನ್ಮಸ್ಥಳಕ್ಕೆ ಪೆರ್ಲ ಭೇಟಿ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಭಾರತೀಯ ರಂಗಭೂಮಿಕೆಯನ್ನು ಶ್ರೀಮಂತಗೊಳಿಸಿದ ಕಾರಂತರ ಜನಿಸಿದ ಮನೆ, ಬಾಲ್ಯದ ಪರಿಸರ ಹಾಗೂ ಓದಿದ ಶಾಲೆಗಳನ್ನು ರಾಷ್ಟ್ರೀಯ ಸ್ಮಾರಕಗಳಾಗಿ ರೂಪುಗೊಳ್ಳಬೇಕು. ರಂಗ ಅಧ್ಯಯನ ಕೇಂದ್ರಗಳು ಸ್ಥಾಪನೆಗೊಳ್ಳಬೇಕೆಂದು ಪ್ರತಿಕ್ರಿಯಿಸಿದರು.
ವಿಟ್ಲ ಕನ್ನಡ ಸಂಘದ ಅಧ್ಯಕ್ಷ ಅನಂತಕೃಷ್ಣ ಹೆಬ್ಬಾರ್ ಅಧ್ಯಕ್ಷತೆ ವಹಿಸಿದರು. ಮೈಸೂರು ರಂಗಾಯಣದ ಹಿರಿಯ ಕಲಾವಿದ ಕೃಷ್ಣ ಕುಮಾರ ನಾರ್ಣಕಜೆ, ಹಿರಿಯ ಕಲಾವಿದ ಮಹಾಬಲೇಶ್ವರ ಹೆಬ್ಬಾರ್, ಅಭಿರುಚಿ ಜೋಡುಮಾರ್ಗದ ಅಧ್ಯಕ್ಷ ಪ್ರೊ.ಎ.ಪಿ.ರಾವ್, ಗೋಪಾಲ ಅಂಚನ್, ಟ್ರಸ್ಟ್ ಪದಾಧಿಕಾರಿಗಳಾದ ಬಿ.ಚಂದ್ರಶೇಖರ್ ರಾವ್, ಶಾರದಾ ಎಸ್.ರಾವ್ ಉಪಸ್ಥಿತರಿದ್ದರು. ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಪ್ರಸ್ತಾವಿಸಿದರು. ಉಪಾಧ್ಯಕ್ಷ ಕೆ.ಗಣೇಶ್ ಐತಾಳ್ ಸ್ವಾಗತಿಸಿ, ಜತೆ ಕಾರ್ಯದರ್ಶಿ ಎಂ.ಉಮಾನಾಥ ರೈ ವಂದಿಸಿದರು. ಜತೆ ಕಾರ್ಯದರ್ಶಿ ಎನ್.ರಮಾನಂದ ನಿರೂಪಿಸಿದರು.
ನಾಟಕ ಪ್ರದರ್ಶನ: ಕಾರ್ಯಕ್ರಮದ ಬಳಿಕ ಮೈಸೂರು ರಂಗಾಯಣದ ಕಿರಿಯ ಕಲಾವಿದರು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರ ಬೆಪ್ತಕ್ಕಡಿ ಬೋಳೇಶಂಕರ ನಾಟಕ ಪ್ರದರ್ಶಿಸಿದರು. ಶ್ರೀನಿವಾಸ ಭಟ್ಟ ಅವರ ಸಂಗೀತದಲ್ಲಿ ವಿ.ರಂಗನಾಥ ಅವರು ನಾಟಕವನ್ನು ನಿರ್ದೇಶಿಸಿದರು. ನಾಳೆ ಸಂಜೆ 6 ಕ್ಕೆ ಉಡುಪಿ ರಂಗಭೂಮಿಯ ಕಲಾವಿದರು ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರ ನಾಗಮಂಡಲವನ್ನು ಪ್ರದರ್ಶಿಸಲಿದ್ದಾರೆ. ಡಾ.ಕಾತ್ಯಾಯಿನಿ ಕುಂಜಿಬೆಟ್ಟು ತುಳುವಿಗೆ ಅನುವಾದಿಸಿದ್ದಾರೆ. ಗೀತಂ ಗಿರೀಶ್ ಸಂಗೀತ ನೀಡಿದ್ದು, ರವಿರಾಜ್ ಎಚ್.ಪಿ. ಅವರು ನಿರ್ದೇಶಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.