ಬೆಳ್ತಂಗಡಿ : ಬೇಲಿಯೇ ಎದ್ದು ಹೊಲ ಮೇಯುತ್ತಿದೆ ಎಂಬ ಗಾದೆಮಾತು ಜನಜನಿತ. ಈ ಮಾತಿಗೆ ಪೂರಕವಾಗಿ ತಾಲೂಕಿನಲ್ಲಿ ಅರಣ್ಯ ಇಲಾಖೆ ಮತ್ತು ವನ್ಯಜೀವಿ ಇಲಾಖೆಯ ಕಾರ್ಯವೈಖರಿ ಇದೆ ಎಂಬುದು ಸಾಬೀತಾಗಿದೆ. ಕುದುರೇ ಮುಖರಾಷ್ಟ್ರೀಯ ಉದ್ಯಾನವನದ ಒಳಗೆ ದಟ್ಟಅರಣ್ಯದ ನಡುವೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ಬೃಹತ್ ಯಂತ್ರಗಳನ್ನು ಉಪಯೋಗಿಸಿ ರಸ್ತೆ ನಿರ್ಮಿಸುವ ಕಾರ್ಯವನ್ನು ಮಾಡುತ್ತಿದ್ದುಇದು ಸ್ಥಳೀಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ರಾಷ್ಟ್ರೀಯಉಧ್ಯಾನ ವನದ ಒಳಗೆ ನಾವೂರುಗ್ರಾಮದ ಕಾಸರೋಳಿ ಎಂಬಲ್ಲಿಂದ ಗೋಲ್ತಾರ ಮಲ್ಲ ಪ್ರದೇಶಕ್ಕೆ ಹಾಗೂ ಗುಂಡಲಪಾದೆ ಎಂಬಲ್ಲಿಗೆ ಈ ರಸ್ತೆ ನಿರ್ಮಾಣದ ಕಾರ್ಯ ನಡೆಯುತ್ತಿದೆ ಸುಮಾರು ಹತ್ತುಕಿಲೋಮೀಟರ್ನಷ್ಟು ರಸ್ತೆ ನಿರ್ಮಾಣ ಮಾಡಿರುವುದಾಗಿ ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ. ರಾಷ್ಟ್ರೀಯ ಉದ್ಯಾನವನದ ಒಳಗೆ ಜೆಸಿಬಿಯಂತಹ ಯಂತ್ರಗಳ ಪ್ರವೇಶಕ್ಕೆ ಅವಕಾಶವೇ ಇಲ್ಲ ಎಂದು ಅರಣ್ಯ ಇಲಾಖೆಯವರು ಹೇಳುತ್ತಾ ಬಂದಿದ್ದರು. ಆದರೆ ಇದೀಗ ಅರಣ್ಯ ಇಲಾಖೆಯೇ ಈ ರೀತಿಯಾಗಿ ಭಾರೀ ಪ್ರಮಾಣದ ಕಾಮಗಾರಿಯನ್ನು ನಡೆಸುತ್ತಿರುವುದು ವಿಶೇಷವಾಗಿದೆ. ರಸ್ತೆಯ ಕಾಮಗಾರಿಯನ್ನು ಇವರು ನಡೆಸುತ್ತಿದ್ದರೂ ಇದು ಯಾವುದೂ ಇಲ್ಲಿನ ನಿವಾಸಿಗಳಿಗೆ ಪ್ರಯೋಜನಕ್ಕೆ ಬರುವಂತದ್ದಾಗಿಲ್ಲ ಇದೆಲ್ಲವೂ ಕೇವಲ ಅರಣ್ಯ ಇಲಾಖೆಯ ಉಪಯೋಗಕ್ಕೆ ಮಾತ್ರ ಸೀಮಿತವಾಗಿರುವ ರಸ್ತೆಗಳಾಗಿವೆ.
ಇಲ್ಲಿನ ಮೂಲನಿವಾಸಿಗಳು ತಮ್ಮ ಮನೆಗಳಿಗೆ ಹೋಗುವ ರಸ್ತೆಗಳ ದುರಸ್ತಿಗೆ ಅನುಮತಿ ಕೇಳಿದರೆ ಅದನ್ನು ನಿರಾಕರಿಸುವ ಅಧಿಕಾರಿಗಳು ಇದೀಗ ತಾವಾಗಿಯೇ ಯಂತ್ರಗಳನ್ನು ತಂದು ಅವರ ಅನುಕೂಲಕ್ಕಾಗಿ ರಸ್ತೆ ನಿರ್ಮಿಸುತ್ತಿರುವುದು ಇಲ್ಲಿನ ಮೂಲ ನಿವಾಸಿಗಳ ತೀವ್ರ ಅಸಾಮಾಧಾನಕ್ಕೆ ಕಾರಣವಾಗಿದೆ. ಕುದುರೇ ಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ದಶಕದ ಹಿಂದೆಯೆ ಮರಗಳನ್ನು ಕಡಿದು ತಮ್ಮ ಅನುಕೂಲಕ್ಕಾಗಿ ಅರಣ್ಯ ಇಲಾಖೆಯವರು ರಸ್ತೆಗಳನ್ನು ನಿರ್ಮಿಸಿದ್ದರು. ರಾಷ್ರೀಯ ಉದ್ಯಾನವನದ ಒಳಗೆ ಪ್ರವಾಸೋಧ್ಯಮ ಅಭಿವೃದ್ದಿಗಾಗಿ ಈ ರೀತಿ ರಸ್ತೆಗಳ ನಿರ್ಮಾಣಕಾರ್ಯ ನಡೆಯುತ್ತಿದೆ ಎಂಬ ಹಿನ್ನಲೆಯಲ್ಲಿ ಜನರಿಂದ ವ್ಯಕ್ತವಾಗಿದ್ದ ವಿರೋಧ ವ್ಯಕ್ತವಾಗಿತ್ತು. ಈ ರಸ್ತೆಗಳು ಹಾಗೆಯೇ ಉಳಿದಿದ್ದು ಇದೀಗ ಇದರ ಭಾಗವಾಗಿರುವ ರಸ್ತೆಗಳನ್ನು ಮರು ದುರಸ್ತಿ ಮಾಡುವಕಾರ್ಯ ನಡೆಯುತ್ತಿದೆ.
ಇದಕ್ಕಾಗಿ ಹತ್ತಾರು ಒಣಗಿದ ಹಾಗೂ ಜೀವಂತ ಮರಗಳನ್ನು ಕಡಿಯಲಾಗಿದ್ದು ರಸ್ತೆ ಬದಿಯಲ್ಲಿಯೇ ಹಾಕಲಾಗಿದೆ. ಅರಣ್ಯ ನಾಶ ಮಾಡಲಾಗಿರುವುದು ಕಂಡು ಬರುತ್ತದೆ ಎಂದು ಇಲ್ಲಿನ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಈ ಕಾಮಗಾರಿಗಳ ಬಗ್ಗೆ ಇಲ್ಲಿನ ಮೂಲನಿವಾಸಿಗಳಲ್ಲಿ ಹಲವಾರು ಗೊಂದಲಗಳಿದ್ದು ಜನರು ಎಲ್ಲವನ್ನೂ ಭಯದಿಂದಲೇ ನೋಡುತ್ತಿದ್ದಾರೆ. ಇಲಾಖೆ ಇನ್ನಾದರೂ ಇದಕ್ಕೆ ಪರಿಹಾರಕಾಣಬೇಕಾಗಿದೆ.
ರಸ್ತೆ ದುರಸ್ತಿ ಮಾಡಲು, ಅಂಗನವಾಡಿ ಕಟ್ಟಡಕಟ್ಟಲು, ವಿದ್ಯುತ್ ಲೈನ್ ಎಳೆಯಲು, ಒಂದು ಸಣ್ಣ ಕಾಲು ಸಂಕ ಹಾಕಲು ಅಡ್ಡಿಪಡಿಸುವ ಅಧಿಕಾರಿಗಳು ಇಷ್ಟು ದೊಡ್ಡ ಯಂತ್ರೋಪಕರಣಗಳನ್ನು ತಂದುಕಾಡಿನಲ್ಲಿ ಕೆಲಸ ಮಾಡಿಸುತ್ತಿರುವುದು ಹೇಗೆ ಮೊದಲು ನಮ್ಮ ಮನೆಗಳಿಗೆ ಹೋಗುವ ರಸ್ತೆಗಳ ದುರಸ್ತಿಗೆ ಅವಕಾಶ ನೀಡಲಿ ಇಲ್ಲವಾದಲ್ಲಿ ಇದೀಗ ಅರಣ್ಯ ನಾಶ ಮಾಡಿರುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಿ. – ದಯಾನಂದ ಸವಣಾಲು. ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮುಖಂಡ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.