ಉಡುಪಿ : ಉಡುಪಿ ಎಂದಾಕ್ಷಣ ಕಣ್ಣೆದುರು ಕಟ್ಟುವ ದೃಶ್ಯ ಶ್ರೀಕೃಷ್ಣಮಠ, ಪರ್ಯಾಯೋತ್ಸವ. ಪ್ರತಿ ಎರಡು ವರ್ಷಗಳಿಗೊಮ್ಮೆ ಪರ್ಯಾಯೋತ್ಸವ ನಡೆಯುವುದಾದರೂ ಸುಮಾರು ಐದು ಶತಮಾನಗಳ ಇತಿಹಾಸದಲ್ಲಿ ದಾಖಲೆ ನಿರ್ಮಿಸುತ್ತಿರುವುದರಿಂದ ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ ಮುಂದಿನ ಪರ್ಯಾಯಕ್ಕೆ ಎಲ್ಲಿಲ್ಲದ ಮಹತ್ವ ಬಂದಿದೆ. ಇದೇ ಬರುವ ಜನವರಿ 18 ರಂದು ಶ್ರೀಪಾದರು ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರೊಡಗೂಡಿ ಐದನೆಯ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ.
ಉಡುಪಿಯ ಶ್ರೀಅನಂತೇಶ್ವರ ಮತ್ತು ಶ್ರೀಚಂದ್ರಮೌಳೀಶ್ವರ ದೇವಸ್ಥಾನ ಅತೀ ಪ್ರಾಚೀನ. ಹಿಂದೆ ಹಿಂದೆ ಹೋದರೆ ಉಡುಪಿಗೆ ರಜತಪೀಠಪುರ ಎಂಬ ಹೆಸರೂ ಇತ್ತು. ತುಳುನಾಡಿನ ಸಪ್ತಕ್ಷೇತ್ರಗಳಲ್ಲಿ ಮೊದಲ ಸ್ಥಾನ ಪಡೆದ ಹಿರಿಮೆಯೂ (ರೂಪ್ಯಪೀಠಂ ಕುಮಾರಾದ್ರಿಃ…) ಇದೆ. ಹಿಂದಿನಿಂದಲೂ ಜನರು ಬಂದು ಹೋಗುವ, ಧಾರ್ಮಿಕವಾಗಿ ಪಂಚಾಯ್ತಿಕಟ್ಟೆಯಂತೆ ಈ ಸ್ಥಳ ಕಾರ್ಯಾಚರಿಸುತ್ತಿತ್ತು ಎಂದು ತಿಳಿದುಬರುತ್ತದೆ. ಉಡುಪಿಯನ್ನು ಕೇಂದ್ರವಾಗಿರಿಸಿಕೊಂಡರೆ ನಾಲ್ದಿಕ್ಕುಗಳಲ್ಲಿ ತಾಂಗೋಡು, ಮಾಂಗೋಡು, ಅರಿತೋಡು, ಮುಚ್ಲಕೋಡು ನಾಗಾಲಯಗಳಿವೆ, ನಾಲ್ಕು ದೇವಿಯ ಆಲಯಗಳೂ ನಾಲ್ದಿಕ್ಕುಗಳಲ್ಲಿ ಕಂಗೊಳಿಸುತ್ತಿವೆ.
ಸುಮಾರು ಎಂಟು ಶತಮಾನಗಳ ಹಿಂದೆ ಸರಿದರೆ : ಉಡುಪಿಯ ಮಕರಸಂಕ್ರಾಂತಿ ಉತ್ಸವಕ್ಕೆ ಬಹಳ ಪ್ರಾಶಸ್ತ್ಯವಿದೆ. ಅನಂತೇಶ್ವರ ದೇವಳದಲ್ಲಿ ಒಮ್ಮೆ ಮಕರಸಂಕ್ರಾಂತಿ ಉತ್ಸವ ನಡೆಯುತ್ತಿತ್ತು. ಈಗಲೂ ಮಕರಸಂಕ್ರಾಂತಿ ಉತ್ಸವಕ್ಕೆ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನದ ಉತ್ಸವ ಮೂರ್ತಿಗಳು ಬರುವುದನ್ನು ಕಂಡಾಗ ಆ ಕಾಲದ ಮಕರ ಸಂಕ್ರಾಂತಿ ಉತ್ಸವದ ಉಲ್ಲೇಖಕ್ಕೆ ಅಧಿಕೃತತೆ ಬರುತ್ತದೆ. ಸೇರಿದ ಸಾವಿರಾರು ಜನರ ನಡುವೆ ಆಗ ಬಂದವನೊಬ್ಬ ಹುಂಬ. ಮೈಮೇಲೆ ಆವೇಶ ಬಂದವನಂತೆ ಓಡಿಬಂದ. ದೇವಸ್ಥಾನದ ಎದುರಿಗೆ ಇರುವ ಸುಮಾರು 20 ಅಡಿ ಎತ್ತರದ ಕಲ್ಲುಕಂಬವನ್ನು ಏರಿದ. ಏರಿದ್ದು ಮಾತ್ರವಲ್ಲದೆ ಅದರ ಮೇಲೆ ನಿಂತು ನರ್ತಿಸಿದ. ಪ್ರಾಯಃ ಆಗ ಧ್ವಜಸ್ತಂಭ ಪಕ್ಕದಲ್ಲಿದ್ದಿರಬಹುದು. ಈಗಲೂ ಘಟನೆಗೆ ಸಾಕ್ಷಿಯಾದಂತಿರುವ ಕಲ್ಲಿನ ಕಂಬವನ್ನು ನೋಡಿದರೆ ಅದನ್ನು ಏರುವುದು, ಅದರ ಮೇಲೆ ನಿಂತು ನರ್ತಿಸುವುದು ಅಸಾಧ್ಯ. ಈ ಕುತೂಹಲದ ಘಟನೆಗಳನ್ನು ಮಧ್ವವಿಜಯ ದಾಖಲಿಸಿದೆ.
ತತ್ – ಪ್ರೀತಯೇ ರಜತ-ಪೀಠ-ಪುರಾಧಿವಾಸೀ| ದೇವೋ ವಿವೇಶ ಪುರುಷಂ ಶುಭ-ಸೂಚನಾಯ||…
ಉತ್ತುಂಗ-ಕೇತು-ಶಿಖರೇ ಸ ಕೃತಾಂಗ -ಹಾರೋ| ರಂಗಾಂತರೇ ನಟ ಇವಾಖೀಲ- ವಿಸ್ಮಯಾತ್ಮಾ||
ಆತ ಎಲ್ಲರನ್ನೂ ಕೂಗಿ ಆಣೆ ಇಟ್ಟು ತೋಳೆತ್ತಿ ಗಟ್ಟಿದನಿಯಲ್ಲಿ ಹೀಗೆಂದು ಹೇಳಿದ: ‘ಎಲ್ಲಾ ಜನರಿಗೆ ಹಿತವ ತರಬಲ್ಲವನು, ಎಲ್ಲವನು ಬಲ್ಲವನು, ಸದ್ಯದಲ್ಲಿಯೇ ಹುಟ್ಟಿ ಬರಲಿದ್ದಾನೆ’.
ಉತ್ಪತ್ಸ್ಯೇತೇ ಜಗತಿ ವಿಶ್ವ-ಜನೀನ-ವೃತ್ತಿಃ| ವಿಶ್ವಜ್ಞ ಏವ ಭಗವಾನಚಿರಾದಿಹೇತಿ||
ವಿಶ್ವ ಜನೀನ ಶಬ್ದ ಸಮಾಜಕ್ಕೆ ಹಿತವನ್ನು ಉಂಟು ಮಾಡುವ ಎಂಬರ್ಥವಿದೆ. ಶಬ್ದಗಳಿಗೆ ಅನ್ವಯ ಮಾಡುವ ಅರ್ಥ ಕಾಲ ಕಾಲಕ್ಕೆ ಬದಲಾಗುತ್ತಿರುತ್ತದೆ. ಬಂದವನನ್ನು ‘ಅಕುಶಲಂ’ ಎಂದು ಉಲ್ಲೇಖೀಸಲಾಗಿದೆ. ಅಂದರೆ ಪೆದ್ದ. ಆತ ಇಷ್ಟೆಲ್ಲಾ ಹೇಳಲು ಆಗದವ. ಆದರೂ ಹೇಳಿದ…
ಸ್ತಂಭದಲ್ಲೊಂದು ಸೋಜಿಗ ! : ಈ ಸ್ತಂಭದ ಮೇಲೆ ಮಳೆಗಾಲದಲ್ಲಿ ಒಂದು ಅಶ್ವತ್ಥನ ಸಸಿಯೊಂದು ಚಿಗುರುತ್ತದೆ. ಬೇಸಗೆ ಕಾಲದಲ್ಲಿ ಎಲೆ ಉದುರಿಹೋಗಿ ಅಸ್ತಿತ್ವ ಹೋದಂತೆ ಭಾಸವಾಗುತ್ತದೆ. ಇದು ಹೇಗೆ ಬೇರು ಬಿಡುತ್ತದೆ ಎನ್ನುವುದು ಸೋಜಿಗ. ಎಷ್ಟೋ ಮಳೆಗಾಲವನ್ನು ಕಂಡದ್ದರಿಂದ ಒಂದಿಷ್ಟು ಪಾಚಿ ಕಟ್ಟಿರುವುದು ಸಹಜ. ಈ ಪಾಚಿಯಲ್ಲಿ ಎಷ್ಟು ಬೇರು ಹರಡಲು ಸಾಧ್ಯವೋ ಅಷ್ಟು ಮಾತ್ರ ಹರಡಿರುತ್ತದೆ ಎಂದು ಊಹಿಸಬಹುದು. ಪೋಷಕ ದ್ರವ್ಯ ಇಲ್ಲದಾಗ ಅಸ್ತಿತ್ವ ಕಳೆದುಕೊಂಡಂತೆ ಕಾಣುತ್ತದೆ, ವಾಸ್ತವ ಲೋಕದಲ್ಲಿಯೂ ಹೀಗೆಯೆ. ಪೋಷಕ ಸಾಮಗ್ರಿ ಇಲ್ಲದಾಗ ಶಕ್ತಿ ಕುಂದಿರುತ್ತದೆ. ಪೋಷಕ ಸಾಮಗ್ರಿ ಸಿಕ್ಕಿದಾಗ ಮತ್ತೆ ವಿಜೃಂಭಣೆ ಕಾಣುತ್ತದೆ. ಪೋಷಕ ಸಾಮಗ್ರಿ ಕೊರತೆ ಇದ್ದಾಗ ಜೀವ(ಶಕ್ತಿ) ಅವ್ಯಕ್ತವಾಗಿರುತ್ತದೆ. ಎರಡೂ ಬಗೆ ಖಾಯಂ ಆಗಿ ಇರುವುದಿಲ್ಲ. ಸುಖ-ದುಃಖ, ಲಾಭ-ನಷ್ಟದಂತೆ ಇದು ಪ್ರಕೃತಿಯಲ್ಲಿ ಕಂಡು ಬರುವ ಸಮತ್ವ (ಸಮತೋಲನ), ಇದು ಎಲ್ಲರಲ್ಲಿಯೂ ಪ್ರತಿಫಲಿಸುತ್ತಿರುತ್ತವೆ. ವ್ಯಕ್ತಿ (ಜೀವಿ) ಮಾತ್ರವಲ್ಲದೆ ಸಂಸ್ಕೃತಿ, ಜೀವನಶೈಲಿ, ನಾಗರೀಕತೆಗಳ ಹುಟ್ಟು ಸಾವು ಮತ್ತೆ ಹುಟ್ಟು, ಮತ್ತೆ ಬೆಳವಣಿಗೆ- ಇಳಿ ಮುಖ… ಇವುಗಳ ನಡುವೆ ಕಾಲ ಪ್ರವಾಹದ ಗರ್ಭ ಅಗಾಧ, ಸೋಜಿಗ… ಆದರೆ ನಮ್ಮ ತಿಳಿವಳಿಕೆಗೆ ತಕ್ಕಂತೆ ಕಾಲವನ್ನು ಜಗ್ಗಿ ನೋಡುತ್ತೇವೆ, ಹೆಚ್ಚೆಂದರೆ ನಮ್ಮ ಮೂರು ತಲೆಮಾರುಗಳ ಹಿಂದೆ ಮಾನಸಿಕವಾಗಿ, ತಿಳಿವಳಿಕೆಪೂರ್ವಕವಾಗಿ ಹೋಗುತ್ತೇವೆ.
ನಮ್ಮ ದಾಖಲೆಗೂ ಪ್ರಯತ್ನಿಸುತ್ತಿಲ್ಲ, ಎರಡು, ಮೂರು ತಲೆಮಾರುಗಳ ದಾಖಲೆಯೂ ಸಂಗ್ರಹಿಸಿಲ್ಲ. ನಮ್ಮ ದಾಖಲೆ ಸಂಗ್ರಹ ಏನಿದ್ದರೂ ಆಸ್ತಿ, ಸಂಪತ್ತಿಗೆ ಸಂಬಂಧಿಸಿದ್ದು. ಚರಿತ್ರೆ ಅಧ್ಯಯನ ಮಾಡುವಾಗ ದಾಖಲೆ ಎಂದರೆ ಶಾಸನಗಳು. ಈಗ ಉದ್ಘಾಟನೆ, ಶಂಕುಸ್ಥಾಪನೆಗೆ ನಾಮಫಲಕ ಹಾಕುವುದೆಲ್ಲವೂ ಮುಂದೆ ಐತಿಹಾಸಿಕವಾಗುವ ಶಾಸನಗಳು. ಇವು ಎಷ್ಟು ವರ್ಷ ಬದುಕುತ್ತಿವೆ ಎನ್ನುವುದನ್ನು ಒಮ್ಮೆ ಕಣ್ಣಾಡಿಸಬೇಕು. ನಮ್ಮ ನಾಲ್ಕನೆಯ ತಲೆಮಾರು ಎಂದಾಗ ಬರೇ ಕಲ್ಪನೆಗಳು, ಭಾವನೆಗಳು ಬರುತ್ತವೆ. ಬೇರೆಯವರ ನಾಲ್ಕನೆಯ ತಲೆಮಾರೆಂದಾಗ ಸಾಕ್ಷ್ಯ ಬೇಕು. ಕೇವಲ ನಾಲ್ಕು, ಐದನೆಯ ತಲೆಮಾರುಗಳ ಹಿಂದಕ್ಕೆ ಸಾಕ್ಷ್ಯ ಸಂಗ್ರಹ ಕಷ್ಟವಾದರೆ ನೂರಾರು, ಸಾವಿರಾರು, ಲಕ್ಷ ಕೋಟಿ ವರ್ಷಗಳ ಹಿಂದಕ್ಕೆ ಚಲಿಸಿದರೆ ಎಲ್ಲಿಯ ಸಾಕ್ಷ್ಯ? ಎಲ್ಲಿಯ ಪುರಾವೆ?
ಆಗ ಕಲ್ಲಿನ ಕಂಬವನೇರಿದವನನ್ನು ಮಾತ್ರ ‘ಅಕುಶಲಂ’ ಎಂದು ಹೇಳಲಾಗದು. ಈಗಲೂ ಈ ಸ್ತಂಭದ ಐತಿಹಾಸಿಕ ಮಹತ್ವ ಬಹುತೇಕರಿಗೆ ಗೊತ್ತಿಲ್ಲ, ಅಂದರೆ ಈಗಲೂ ‘ಅಕುಶಲರು’ ದೊಡ್ಡ ಸಂಖ್ಯೆಯಲ್ಲಿದ್ದಾರೆಂದರ್ಥ. ಸ್ತಂಭದ ಮೇಲೆ ಏರಿದವ ‘ಕುಶಲ’ನಂತೆ ಹೇಳಿದರೂ ಈಗಲೂ ಕಂಬದ ಕಟ್ಟೆಯ ಮೇಲೆ ಕುಳಿತವರು ದೀಪದ ಕಾಲಬುಡ ಕತ್ತಲೆಯಂತೆ ‘ಅಕುಶಲ’ರಾಗಿ ವರ್ತಿಸುವುದೂ ಸೋಜಿಗ. ‘ಕುಶಲ’ರಾಗಲು ಒಂದು ಯೋಗ ಬೇಕೆನ್ನುವುದುಂಟು, ಇದೂ ವಿಶ್ವಶಕ್ತಿಯ ಸೋಜಿಗ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.