ಬೆಳ್ತಂಗಡಿ : ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ 50ನೇ ವರ್ಷದ ಸಂಭ್ರಮಾಚರಣೆ ಸಂದರ್ಭ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದ್ದ ಪ್ರೇಕ್ಷಕರನ್ನು ಹೊಸ ಲೋಕಕ್ಕೆ ಕೊಂಡೊಯ್ಯಿತು. ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಹಿರಿಯ ವಿದ್ಯಾರ್ಥಿಗಳು, ಆಹ್ವಾನಿತರು, ಊರವರು ಕಾರ್ಯಕ್ರಮಗಳ ಸೊಬಗನ್ನು ಆಸ್ವಾದಿಸಿದರು.
ಮೊದಲ ಕಾರ್ಯಕ್ರಮವನ್ನು ರಘುದೀಕ್ಷಿತ್ ಅವರ ವಿನೂತನ ಸಂಗೀತ ಯುವಕರನ್ನು ಹುಚ್ಚೆಬ್ಬಿಸಿತು. ಸುಮಾರು ಎರಡು ಗಂಟೆಗಳ ಕಾಲ ಅವರು ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತದ ಮಿಲನದ ಸೊಬಗನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟರು. ಹಾಡುಗಳನ್ನು ಹಾಡುತ್ತಿದ್ದಂತೆ ಶ್ರೋತೃಗಳನ್ನೂ ಜೋಡಿಸಿಕೊಂಡು ಹೋಗುತ್ತಿದ್ದ ರಘು ದೀಕ್ಷಿತ್ ವಿದ್ಯಾರ್ಥಿಗಳಿಗೆ ಈ ಮೂಲಕ ಮತ್ತಷ್ಟು ಆಪ್ತರಾದರು. ಅವರ ಗಾಯನದ ಶೈಲಿ, ನಡೆ, ನುಡಿ, ಹಾವ ಭಾವಗಳಿಗೆ ಮನಸೋತ ಪ್ರೇಕ್ಷಕರು ತಾವೂ ತಾಳ ಹಾಕಿದರಲ್ಲದೆ ಗಾಯಕರಾದರು, ನೃತ್ಯಗಾರರಾದರು. ಒಟ್ಟಾರೆ ರಘು ದೀಕ್ಷಿತ್ ಎಲ್ಲರನ್ನೂ ತನ್ನ ವಿಶಿಷ್ಟ ಶೈಲಿಯ ಸಂಗೀತದಿಂದ ಹುಚ್ಚೆಬ್ಬಿಸಿ 50 ರ ಸುವರ್ಣ ಸಂಭ್ರಮವನ್ನು ಜನರಲ್ಲಿ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದರು.
ಬಳಿಕ ಉಜಿರೆ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಸಿದ್ದರಾದರು. ಮೊದಲಿಗೆ ಯಕ್ಷಗಾನ ಬ್ಯಾಲೆ ಪ್ರದರ್ಶನ ಶಿವರಾಮ ಕಾರಂತರ ಬ್ಯಾಲೆ ಪ್ರಯೋಗವನ್ನು ನೆನಪಿಸಿತು. ಯುವ ಭಾಗವತ ಸತೀಶ್ ಪಟ್ಲ ಅವರ ಧ್ವನಿ ಮುದ್ರಿಕೆಯ ಭಾಗವತಿಕೆಯ ಹಿನ್ನೆಲೆಯಲ್ಲಿ ಮೂಡಿ ಬಂದ ಬ್ಯಾಲೆಯಲ್ಲಿ ಕೇಸರಿ ತಟ್ಟಿ, ಮುಡಿ ಕಿರೀಟವನ್ನು ಹೊತ್ತ ಬಣ್ಣದ ವೇಷಗಳು, ಮಹಿಷಾಸುರ, ಕೋಲು ಕಿರೀಟ, ಪಗಡಿ ಹಾಗು ಯಕ್ಷಗಾನದ ಎಲ್ಲಾ ವೈವಿಧ್ಯಮಯ ಪ್ರಕಾರಗಳ ಪ್ರದರ್ಶನ ಸಹಸ್ರಾರು ಮಂದಿಯ ಕರತಾಡನಕ್ಕೆ ಕಾರಣವಾಯಿತು. ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೆಂಕು ಹಾಗು ಬಡಗು ತಿಟ್ಟಿನ ಕಲೆಯನ್ನು ಪ್ರದರ್ಶಿಸಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಉತ್ತರ ಕರ್ನಾಟಕದಲ್ಲಿ ಪ್ರಚಲಿತದಲ್ಲಿರುವ ಕಂಸಾಳೆಯನ್ನು ಸುಮಾರು ೨೫ ವಿದ್ಯಾರ್ಥಿಗಳು ಪ್ರದರ್ಶಿಸಿದ ರೀತಿ ಅದ್ಭುತವಾಗಿ ಮೂಡಿ ಬಂತು. ಈ ವಿದ್ಯಾರ್ಥಿಗಳು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನವಾಗಿರುವ ತಂಡವಾಗಿದ್ದು ಗುರುವಾರ ಸಂಜೆಯೂ ಜನಪದ ಕಲೆಯನ್ನು ಉಜಿರೆಯಲ್ಲಿ ಸೇರಿದ್ದ ನಾಗರಿಕರ ಮನಮುಟ್ಟಿತು. ನೃತ್ಯದೊಂದಿಗೆ ಪ್ರದರ್ಶಿಸಿದ ಕಸರತ್ತುಗಳು, ಅದಕ್ಕೆ ತಕ್ಕಂತೆ ಮೂಡಿ ಬಂದ ಸಂಗೀತ, ಕಲೆಗೆ ಒಪ್ಪುವಂತೆ ಇದ್ದ ವೇಷಭೂಷಣ ಎಲ್ಲರನ್ನೂ ಆಕರ್ಷಿಸಿತು.
ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಕ್ರೀಡಾಂಗಣದಲ್ಲಿ ವಿವಿಧ ಪ್ರದರ್ಶನಗಳನ್ನು, ಮಳಿಗೆಗಳನ್ನೂ ಏರ್ಪಡಿಸಲಾಗಿತ್ತು. ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಉತ್ತಮ ಛಾಯಾಗ್ರಾಹಕರೂ ಆಗಿದ್ದು, ಅವರು ತಮ್ಮ ಪ್ರವಾಸ ಸಂದರ್ಭ ಕ್ಲಿಕ್ಕಿಸಿದ ಅಪೂರ್ವವಾದ ಫೋಟೋಗಳ ಪ್ರದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಕ್ರೀಡಾಂಗಣದ ಪ್ರವೇಶ ದ್ವಾರದ ಬಳಿ 1969-70 ರಲ್ಲಿ ಕಾಲೇಜಿನ ಕಟ್ಟಡ ನಿರ್ಮಾಣದ ಸಂದರ್ಭ ಡಾ| ಹೆಗ್ಗಡೆಯವರು ಕಾಮಗಾರಿ ವೀಕ್ಷಣೆಗೆ ಕಾರ್ನಲ್ಲಿ ಬರುತ್ತಿದ್ದರು. ಆ ಅಪೂರ್ವ ಹಳೆಯ ಮಾದರಿ ಕಾರನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಇನ್ನೊಂದೆಡೆ ಕಾಲೇಜು ಬೆಳೆದು ಬಂದ ರೀತಿಯ ಸಚಿತ್ರ ಪ್ರದರ್ಶನ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ವಿವರವುಳ್ಳ ಪ್ರದರ್ಶನ, ಮತ್ತೊಂದೆಡೆ ಆಹಾರದ ಮಳಿಗೆಗಳನ್ನೂ ತೆರೆಯಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.