ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಗುಹೋಗುಗಳ ಕುರಿತು ಕೆಲವು ಮಾಧ್ಯಮಗಳು ತಮ್ಮದೇ ಊಹೆಗಳನ್ನು ಆಗಾಗ ಪ್ರಕಟಿಸುತ್ತಲೇ ಇರುತ್ತವೆ. ತಮ್ಮ ತಾಳಕ್ಕೆ ತಕ್ಕಂತೆ ಸಂಘ ಹೆಜ್ಜೆ ಹಾಕಬೇಕು ಎಂದೂ ನಿರೀಕ್ಷಿಸುತ್ತವೆ. ಆದರೆ ಮಾಧ್ಯಮಗಳ ನಿರೀಕ್ಷೆಯಂತೆ ಅಥವಾ ಅವುಗಳ ಅಭಿಪ್ರಾಯಕ್ಕೆ ತಕ್ಕಂತೆ ಸಂಘ ತನ್ನ ಯೋಜನೆ ರೂಪಿಸುವುದಿಲ್ಲ. ಸಂಘಕಾರ್ಯದ ಅಗತ್ಯಕ್ಕೆ ಅನುಗುಣವಾಗಿ ಹಾಗೂ ಸಂಘದ ವರಿಷ್ಠರ ಸಾಮೂಹಿಕ ಚಿಂತನೆಗೆ ಅನುಸಾರವಾಗಿ ಕಾರ್ಯಯೋಜನೆ, ಹುದ್ದೆಗಳ ಬದಲಾವಣೆ ನಡೆಯುತ್ತದೆ ಎನ್ನುವುದು ವಾಸ್ತವ.
ಇತ್ತೀಚೆಗೆ ಮಾ. 13, 14 ಮತ್ತು 15 ರಂದು ನಾಗ್ಪುರದಲ್ಲಿ ಆರೆಸ್ಸೆಸ್ನ ನೀತಿ ನಿರ್ಧಾರಗಳನ್ನು ನಿರೂಪಿಸುವ ಮಹತ್ವದ ವಾರ್ಷಿಕ ಸಭೆ `ಅಖಿಲ ಭಾರತೀಯ ಪ್ರತಿನಿಧಿ ಸಭಾ’ (ಎಬಿಪಿಎಸ್) ನಡೆಯಿತು. ಈ ವಾರ್ಷಿಕ ಸಭೆ ನಡೆಯುವುದಕ್ಕೆ ಕೆಲವು ದಿನಗಳಿದ್ದಾಗ ಕೆಲವು ಮಾಧ್ಯಮಗಳಲ್ಲಿ ಸುದ್ದಿಯೊಂದು ಪ್ರಕಟವಾಯಿತು. ಈ ಬಾರಿ ಆರೆಸ್ಸೆಸ್ನ ವಾರ್ಷಿಕ ಸಭೆಯಲ್ಲಿ ದತ್ತಾತ್ರೇಯ ಹೊಸಬಾಳೆ ಅವರನ್ನು ಸಂಘದ ಸರಕಾರ್ಯವಾಹರನ್ನಾಗಿ ನೇಮಕ ಮಾಡಲಾಗುವುದು ಎನ್ನುವುದೇ ಆ ಮಹತ್ವದ ಸ್ಫೋಟಕ ಸುದ್ದಿ! ಮೊದಲು ನಾಗ್ಪುರದ ಪಿಟಿಐ ಸುದ್ದಿ ಸಂಸ್ಥೆ ಈ ಸುದ್ದಿಯನ್ನು ಪ್ರಸಾರ ಮಾಡಿತು. ಅದನ್ನೇ ಅಧಿಕೃತವೆಂದು ನಂಬಿದ ಕೆಲವು ಮಾಧ್ಯಮಗಳು ಅದಕ್ಕೆ ಇನ್ನಷ್ಟು ಮಸಾಲೆ ಬೆರೆಸಿ ಮರುಪ್ರಸಾರ ಮಾಡಿದವು. ಕೆಲವು ಕನ್ನಡ ಪತ್ರಿಕೆಗಳು ಹಾಗೂ ಟಿವಿ ವಾಹಿನಿಗಳಲ್ಲೂ ಈ ಸುದ್ದಿ ಪ್ರಮುಖವಾಗಿಯೇ ಪ್ರಸಾರವಾಯಿತು. ಕನ್ನಡದ ಒಂದು ಪ್ರಮುಖ ಪತ್ರಿಕೆ ನಾಗ್ಪುರದಲ್ಲಿ ಎಬಿಪಿಎಸ್ ಆರಂಭವಾಗುವ ಹಿಂದಿನ ದಿನ `ಸರಕಾರ್ಯವಾಹ ಹೊಸಬಾಳೆ?’ ಎಂಬ ಶೀರ್ಷಿಕೆಯಡಿಯಲ್ಲಿ ಭಯ್ಯಾಜಿ ಜೋಷಿ ಸ್ಥಾನಕ್ಕೆ ದತ್ತಾಜಿ ಹೆಸರು ಘೋಷಣೆ ಸಾಧ್ಯತೆ ಎಂಬ ದಪ್ಪಕ್ಷರದ ಉಪಶೀರ್ಷಿಕೆಯೊಂದಿಗೆ ಈ ವಿಷಯಕ್ಕೆ ಇನ್ನಷ್ಟು ಮಹತ್ವ ಕೊಟ್ಟು ವರದಿ ಮಾಡಿತ್ತು. ಆ ವರದಿ ಹೀಗಿತ್ತು: `ಪ್ರಮುಖವಾಗಿ ಪ್ರಧಾನಕಾರ್ಯದರ್ಶಿ ಅಥವಾ ಸರಕಾರ್ಯವಾಹರಾಗಿ ಕರ್ನಾಟಕದ ದತ್ತಾತ್ರೇಯ ಹೊಸಬಾಳೆ ಅವರು ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ. ಮೂರ್ನಾಲ್ಕು ತಿಂಗಳುಗಳಿಂದಲೇ ಈ ಬಗ್ಗೆ ಸುದ್ದಿ ಹರಡಿತ್ತಾದರೂ, ಮಾರ್ಚ್ನಲ್ಲಿ ನಡೆಯಲಿರುವ ಪ್ರತಿನಿಧಿ ಸಭಾದಲ್ಲಿಯೇ ಈ ಬದಲಾವಣೆ ಎಂದು ಹೇಳಲಾಗುತ್ತಿತ್ತು. ಹೀಗಾಗಿ ಶುಕ್ರವಾರದಿಂದ ಆರಂಭವಾಗಲಿರುವ ಮಹಾ ಸಮಾವೇಶದಲ್ಲೇ ಹೊಸಬಾಳೆ ಅವರನ್ನು ಆಯ್ಕೆ ಮಾಡುವುದು ನಿಶ್ಚಿತ ಎನ್ನಲಾಗುತ್ತಿದೆ…’
ದತ್ತಾತ್ರೇಯ ಹೊಸಬಾಳೆ ಅವರನ್ನು ಸರಕಾರ್ಯವಾಹರನ್ನಾಗಿ ಏಕೆ ನೇಮಿಸಬೇಕೆಂಬುದಕ್ಕೂ ಆ ಪತ್ರಿಕೆಯ ಅದೇ ವರದಿಯಲ್ಲಿ ಸಮರ್ಥನೆಯನ್ನೂ ಪ್ರಕಟಿಸಲಾಗಿತ್ತು. `ಪ್ರಧಾನಿ ನರೇಂದ್ರಮೋದಿ ಅವರಿಗೆ ಪರಮಾಪ್ತರಾಗಿರುವ ದತ್ತಾತ್ರೇಯ ಹೊಸಬಾಳೆ ಅವರು ಹೊಸ ತಲೆಮಾರಿನ ಸಂಘಟಕ. ಸುರೇಶ್ ಭಯ್ಯಾಜಿ ಜೋಷಿ ಅವರ ಸ್ಥಾನಕ್ಕೆ ತರುವ ಮೂಲಕ, ಹೊಸಬಾಳೆ ಅವರನ್ನು ಮುಂದಿನ ಸರಸಂಘಚಾಲಕರಾಗಿ ನೇಮಕ ಮಾಡುವ ಸಾಧ್ಯತೆಗಳಿವೆ. ಈ ಮೂಲಕ ಆರೆಸ್ಸೆಸ್ ಮತ್ತು ಸರ್ಕಾರದ ನಡುವೆ ಉತ್ತಮ ಬಾಂಧವ್ಯ ರೂಪಿಸುವುದು ಮೋದಿ ಅವರ ಆಶಯ…’ ಈ ವರದಿಯ ಜೊತೆಗೆ ದತ್ತಾತ್ರೇಯ ಅವರ ಭಾವಚಿತ್ರವನ್ನು ಪ್ರಕಟಿಸಲಾಗಿತ್ತು.
ಆದರೆ ನಾಗ್ಪುರದಲ್ಲಿ ನಡೆದ ಎಬಿಪಿಎಸ್ ಸಮಾವೇಶದಲ್ಲಿ ಸತತ ಮೂರನೇ ಅವಧಿಗೆ ಸಂಘದ ಸರಕಾರ್ಯವಾಹರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ಸುರೇಶ್ ಭಯ್ಯಾಜಿ ಜೋಷಿ ಅವರೇ. ಮುಂದಿನ 2018 ರ ಮಾರ್ಚ್ವರೆಗೂ ಅವರೇ ಸರಕಾರ್ಯವಾಹರಾಗಿ ಇದೇ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.
ದತ್ತಾತ್ರೇಯ ಹೊಸಬಾಳೆ ಅವರು ಈಗಿನ ಅದೇ ಸಹ ಸರಕಾರ್ಯವಾಹ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಮಾಧ್ಯಮಗಳ ಊಹೆ ಕೊನೆಗೂ ಠುಸ್ ಆಗಿದೆ. ಮಾಧ್ಯಮಗಳಲ್ಲಿ ದತ್ತಾತ್ರೇಯ ಅವರ ಕುರಿತು ಪ್ರಕಟವಾದ ವರದಿಗೆ ಆರೆಸ್ಸೆಸ್ ವರಿಷ್ಠರಾಗಲಿ ಅಥವಾ ಸ್ವತಃ ದತ್ತಾಜಿ ಅವರಾಗಲಿ ಕಿಂಚಿತ್ತೂ ತಲೆಕೆಡಿಸಿಕೊಂಡಿರಲಿಲ್ಲ. ಹೆಚ್ಚೆಂದರೆ ಈ ವರದಿಯನ್ನು ಓದಿ ಒಮ್ಮೆ ಮನಸಾರೆ ಅವರೆಲ್ಲ ನಕ್ಕಿದ್ದಿರಬಹುದು, ಅಷ್ಟೇ. ಜನವರಿ ತಿಂಗಳಲ್ಲಿ ಭುವನೇಶ್ವರದಲ್ಲಿ ಸಂಘಪರಿವಾರದ ಸಾಪ್ತಾಹಿಕ ಹಾಗೂ ಮಾಸಪತ್ರಿಕೆಗಳ ಸಂಪಾದಕರ ಬೈಠಕ್ನಲ್ಲಿ ದತ್ತಾಜಿ ಅವರು ಭೇಟಿಯಾದಾಗ, ಮಾಧ್ಯಮಗಳಲ್ಲಿ ಅವರ ಕುರಿತ ಈ ವರದಿಯ ಬಗ್ಗೆ ನಾನು ಅವರಲ್ಲಿ ಪ್ರಸ್ತಾಪಿಸಿದ್ದೆ. ಆಗ ಅವರು ಸುಮ್ಮನೇ ನಕ್ಕಿದ್ದರು. `ಪತ್ರಿಕೆಗಳ ಊಹೆ ತಾನೆ?’ ಎಂದಷ್ಟೇ ಪ್ರತಿಕ್ರಿಯಿಸಿದ್ದರು.
ಅದಾದ ಬಳಿಕ ಕನ್ನಡದ ಸುದ್ದಿ ವಾಹಿನಿಯೊಂದು ಫೆಬ್ರವರಿ ತಿಂಗಳ ಮೂರನೇ ವಾರದ ಒಂದು ದಿನ ದತ್ತಾತ್ರೇಯ ಹೊಸಬಾಳೆ ಈ ಬಾರಿ ಸರಕಾರ್ಯವಾಹರಾಗುವುದು ನಿಶ್ಚಿತ. ಕೇವಲ ಘೋಷಣೆಯಷ್ಟೇ ಬಾಕಿ ಎಂಬಂತೆ ಬ್ರೇಕಿಂಗ್ನ್ಯೂಸ್ ಸ್ಫೋಟಿಸಿತ್ತು. ಅನೇಕ ಆತ್ಮೀಯರು ನನಗೆ ಫೋನ್ ಮಾಡಿ, ಈ ವಿಷಯ ತಿಳಿಸಿ ಸಂತಸ ವ್ಯಕ್ತಪಡಿಸಿದ್ದರು. ಆದರೆ ಅವರ್ಯಾರಿಗೂ ಸಂಘದಲ್ಲಿ ಯಾವುದೇ ಹುದ್ದೆಗಳನ್ನು ಮೊದಲೇ ಘೋಷಿಸುವುದಿಲ್ಲ. ಅಲ್ಲದೇ ಮಾಧ್ಯಮಗಳಿಗೆ ಘೋಷಣೆಗೆ ಮುನ್ನವೇ ಈ ವಿಷಯ ತಿಳಿಸುವುದಿಲ್ಲ ಎಂಬ ಸಂಗತಿಯ ಅರಿವಿರಲಿಲ್ಲ. ಟಿವಿ ವಾಹಿನಿ ಪ್ರಕಟಿಸಿದ್ದನ್ನೇ ನಿಜವೆಂದು ಅವರು ಭಾವಿಸಿದ್ದರು. ಟಿವಿ ವಾಹಿನಿಯಲ್ಲಿ ಪ್ರಕಟವಾದ ಬ್ರೇಕಿಂಗ್ ನ್ಯೂಸನ್ನೇ ನಿಜವೆಂದು ಭಾವಿಸಿದ ಸಂಘದ ಅನೇಕ ಅಭಿಮಾನಿಗಳು, ಹಿತೈಷಿಗಳು ದತ್ತಾತ್ರೇಯ ಹೊಸಬಾಳೆ ಅವರಿಗೆ ಫೋನ್ ಮೂಲಕ ಶುಭಾಶಯ ಹೇಳಿದ್ದೂ ಇದೆ. ಕೆಲವರಂತೂ ಮೆಸೇಜ್ ಮೂಲಕ ತಮ್ಮ ಹಾರ್ದಿಕ ಶುಭಾಶಯಗಳನ್ನೂ ತಿಳಿಸಿಬಿಟ್ಟಿದ್ದರು. ಅದನ್ನೆಲ್ಲ ಗಮನಿಸಿದ ದತ್ತಾತ್ರೇಯ ಅವರು ಆಗಲೂ ಸುಮ್ಮನೇ ನಕ್ಕಿದ್ದಿರಬಹುದು! ಅದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆಯನ್ನು ಅವರು ವ್ಯಕ್ತಪಡಿಸಿರಲಿಕ್ಕಿಲ್ಲ.
ಮಾಧ್ಯಮಗಳ ವರದಿ ನಿಜವಾಗಲಿಲ್ಲವೆಂದು ಕೆಲವರಿಗೆ ಬೇಸರ ಆಗಿದ್ದಿರಲೂ ಬಹುದು. ಆದರೆ ಸಂಘವನ್ನು ತಲಸ್ಪರ್ಶಿಯಾಗಿ ಅರ್ಥ ಮಾಡಿಕೊಂಡವರಿಗೆ, ಸಂಘದ ಪ್ರತಿಯೊಂದು ಚಟುವಟಿಕೆಯನ್ನು ಅತಿ ಸಮೀಪದಿಂದ ಸೂಕ್ಷ್ಮವಾಗಿ ಗಮನಿಸಿದವರಿಗೆ ಇಂತಹ ಯಾವುದೇ ಬೇಸರ ಖಂಡಿತ ಆಗಿಲ್ಲವೆಂದು ಖಡಾಖಂಡಿತವಾಗಿ ಹೇಳಬಲ್ಲೆ. ಏಕೆಂದರೆ ಸಂಘದಲ್ಲಿ ಹುದ್ದೆಯೆನ್ನುವುದು ಅಧಿಕಾರ ಚಲಾಯಿಸುವ ಸ್ಥಾನವಲ್ಲ. ಅದೊಂದು ಕರ್ತವ್ಯವನ್ನು, ಜವಾಬ್ದಾರಿಯನ್ನು ನಿರ್ವಹಿಸುವುದಕ್ಕೆ ಇರುವ ಸ್ಥಾನ, ಅಷ್ಟೆ. ಸಂಘದ ವಿವಿಧ ಉನ್ನತ ಹುದ್ದೆಗಳಿಗೆ ಪ್ರತಿ ಮೂರು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆಯಾದರೂ ಅದೊಂದು ಸಾಂವಿಧಾನಿಕ ಪ್ರಕ್ರಿಯೆಯನ್ನು ಪೂರೈಸುವುದಕ್ಕಾಗಿ ಮಾತ್ರ ಇರುವಂತಹ ವ್ಯವಸ್ಥೆ. ಸಂಘದ ಇನ್ನಿತರ ಸಾಮಾನ್ಯ ಹುದ್ದೆಗಳಿಗೂ ಚುನಾವಣೆ ನಡೆಯದೆ, ನಿಯುಕ್ತಿಯಾಗುತ್ತದೆ. ಸಂಘದ ವರಿಷ್ಠರು ಆಯಾ ಹುದ್ದೆಗಳಿಗೆ ಯಾರು ಸಮರ್ಥ ವ್ಯಕ್ತಿ ಎಂಬುದನ್ನು ಸಮಾಲೋಚಿಸಿ, ಅನಂತರ ಹೆಸರನ್ನು ಘೋಷಿಸುತ್ತಾರೆ. ತನಗೆ ಇಂತಹದೇ ಹುದ್ದೆ ನೀಡಬೇಕೆಂಬ ಆಗ್ರಹ ರಾಜಕೀಯ ಪಕ್ಷಗಳಲ್ಲಿ ಕಂಡುಬರುವುದು ಸಾಮಾನ್ಯ. ಆದರೆ ಸಂಘದಲ್ಲಿ ಅಂತಹ ಆಗ್ರಹದ ಸೊಲ್ಲೇ ಇರುವುದಿಲ್ಲ. ಬದಲಿಗೆ, ಕೆಲವು ಬಾರಿ ನನಗೆ ಇಂತಹ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವೇ ಎಂದು ಆ ಹುದ್ದೆಯಲ್ಲಿರುವವರು ಹಿರಿಯರ ಬಳಿ ಅಲವತ್ತುಕೊಳ್ಳುವುದುಂಟು. ಅನಾರೋಗ್ಯ, ಇಳಿವಯಸ್ಸು ಮತ್ತಿತರ ಕಾರಣಗಳಿಗಾಗಿ ತನಗೆ ಉನ್ನತ ಹುದ್ದೆ ಬೇಡ ಎನ್ನುವವರ ಸಂಖ್ಯೆಯೂ ಸಂಘದಲ್ಲಿ ಸಾಕಷ್ಟಿದೆ. ಸಂಘದ ವರಿಷ್ಠರು ಇವನ್ನೆಲ್ಲ ಪರಿಗಣಿಸಿ ಯಾವ ಹುದ್ದೆಗೆ ಯಾರು ನಿಯುಕ್ತಿಯಾಗಬೇಕೆಂಬುದನ್ನು ಸಾಮೂಹಿಕ ಚಿಂತನೆ ಮೂಲಕ ನಿರ್ಧರಿಸುತ್ತಾರೆ. ಅದೇ ಅಂತಿಮ ನಿರ್ಧಾರವಾಗಿರುತ್ತದೆ.
ಆದರೆ ಸಂಘವನ್ನು ಅರೆಬರೆಯಾಗಿ ಅರಿತುಕೊಂಡಿರುವ ಮಾಧ್ಯಮದ ಮಿತ್ರರಿಗೆ ಈ ಸಂಗತಿಗಳ ಅರಿವು ಅಷ್ಟಾಗಿ ಇಲ್ಲವೆಂದೇ ಹೇಳಬೇಕಾಗಿದೆ. ಹಾಗಿಲ್ಲದಿದ್ದರೆ ಕೆಲವು ಮಾಧ್ಯಮಗಳು ದತ್ತಾತ್ರೇಯ ಹೊಸಬಾಳೆ ಅವರನ್ನು ಸರಕಾರ್ಯವಾಹರ ಹುದ್ದೆಗೇರಿಸುವ `ಸಾಹಸ’ ಮಾಡುತ್ತಿರಲಿಲ್ಲ. ಯಾವುದೇ ಆಧಾರಗಳಿಲ್ಲದೆ ಇಂತಹದೊಂದು ಮಹತ್ವದ ಸುದ್ದಿಯನ್ನು ಮಾಧ್ಯಮ ಮಿತ್ರರು ಅದು ಹೇಗೆ ಪ್ರಕಟಿಸಿದರೋ ನನಗಂತೂ ಅರ್ಥವಾಗುತ್ತಿಲ್ಲ.
ಇದು ಹೇಗಾದರೂ ಇರಲಿ, ಆದರೆ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಪ್ರತಿವರ್ಷ ಸರಕಾರ್ಯವಾಹರು ನೀಡಲಿರುವ ವಾರ್ಷಿಕ ವರದಿಯನ್ನಾದರೂ ಮಾಧ್ಯಮದವರು ಒಮ್ಮೆ ಪೂರ್ತಿಯಾಗಿ ಓದಿದ್ದಾರಾ? ಅವರೇನಾದರೂ ಅದನ್ನು ಪೂರ್ತಿಯಾಗಿ ಓದಿದ್ದರೆ ಅಲ್ಲೊಂದಿಷ್ಟು ಒಳನೋಟಗಳು ಅವರಿಗೆ ಖಂಡಿತ ಸಿಗುತ್ತಿತ್ತು. ಸಂಘಪರಿವಾರದ ಪತ್ರಿಕೆಗಳ ಹೊರತಾಗಿ ಉಳಿದ ಯಾವುದೇ ಪತ್ರಿಕೆಗಳು ಸರಕಾರ್ಯವಾಹರ ವಾರ್ಷಿಕ ವರದಿಯನ್ನು ಪ್ರಕಟಿಸುವ ಗೋಜಿಗೆ ಹೋಗುವುದಿಲ್ಲ. ಎಬಿಪಿಎಸ್ನ ನಿರ್ಣಯಗಳ ಸಾರಾಂಶವನ್ನು ಮಾತ್ರ ಪ್ರಕಟಿಸುವುದಕ್ಕೆ ಮಾಧ್ಯಮಗಳು ಸೀಮಿತ ಗೆರೆ ಹಾಕಿಕೊಳ್ಳುತ್ತವೆ.
ನಿಜವಾಗಿ ಸರಕಾರ್ಯವಾಹರ ವಾರ್ಷಿಕ ವರದಿಯಲ್ಲಿ ಸುದ್ದಿಗೆ ಅರ್ಹವಾಗುವಂತಹ ಸಂಗತಿಗಳು ಇವೆಯೇ? ಈ ಬಾರಿ ಸರಕಾರ್ಯವಾಹರ ವರದಿಯ ಆರಂಭದಲ್ಲಿ, ಇಹಲೋಕ ತ್ಯಜಿಸಿದ ದೇಶದ ಅನೇಕ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮಾಹಿತಿಗಳಿವೆ. ಸಂಘದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ನಿಧನರಾದವರಷ್ಟೇ ಅಲ್ಲದೇ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಮೃತರಾದವರಿಗೂ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಆ ಪೈಕಿ ಕಾನೂನು – ನ್ಯಾಯಗಳ ಕ್ಷೇತ್ರಗಳಲ್ಲಿ ಬದ್ಧತೆ ಮತ್ತು ಬುದ್ಧಿಮತ್ತೆಗೆ ಹೆಸರಾದ ವಿ.ಆರ್. ಕೃಷ್ಣ ಅಯ್ಯರ್, ದೆಹಲಿಯ ಖ್ಯಾತ ಅಂಕಣಕಾರ ಮತ್ತು ವ್ಯಂಗ್ಯಚಿತ್ರಕಾರ ರಾಜೇಂದ್ರ ಪುರಿ, ಔಟ್ಲುಕ್ ಪತ್ರಿಕೆ ಸ್ಥಾಪಕ ಸಂಪಾದಕ ವಿನೋದ್ಮೆಹ್ತಾ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಎ.ಆರ್. ಅಂತುಳೆ, ಮಾಜಿ ಕೇಂದ್ರ ಸಚಿವ ಮುರಳಿ ದೇವರಾ… ಮೊದಲಾದ ಗಣ್ಯರ ಹೆಸರುಗಳಿವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಎಬಿಪಿಎಸ್ನಲ್ಲಿ ಶ್ರದ್ಧಾಂಜಲಿಗೆ ಭಾಜನರಾದ ಪಟ್ಟಿಯಲ್ಲಿ ಸಿಪಿಎಂನ ಸ್ಥಾಪಕ ಸದಸ್ಯ ಎಂ.ಪಿ. ರಾಘವನ್, ಕಮ್ಯುನಿಸ್ಟ್ ಚಿಂತನೆಗಳ ಪ್ರತಿಪಾದಕ ಗೋವಿಂದ ಪಾನ್ಸರೆ ಅವರ ಹೆಸರು ಕೂಡ ಸೇರಿದೆ! ೨೦೧೪ರ ಎಬಿಪಿಎಸ್ನ ಶ್ರದ್ಧಾಂಜಲಿ ಪಟ್ಟಿಯಲ್ಲ್ಲೂ ಮಹಾರಾಷ್ಟ್ರದ ಹಿರಿಯ ದಲಿತ ಸಾಹಿತಿ ನಾಮದೇವಜೀ ಢಸಾಳ, ದಾವೂದಿ ಬೋಹರಾ ಸಮಾಜದ ಧರ್ಮಗುರು ಸೈಯೆದ್ನಾ ಮುಹಮದ್ ಬುರ್ಹಾನುದ್ದೀನ್ ಅವರ ಹೆಸರು ಕೂಡ ಸೇರಿತ್ತು. ಕಮ್ಯುನಿಸ್ಟ್ ಪಕ್ಷದ ಎಂ.ಪಿ.ರಾಘವನ್, ಗೋವಿಂದ ಪಾನ್ಸರೆ, ಕಾಂಗ್ರೆಸ್ನ ಎ.ಆರ್. ಅಂತುಳೆ, ಮುರಳಿ ದೇವರಾ ಮುಂತಾದವರು ಒಂದಲ್ಲ ಒಂದು ಸಂದರ್ಭದಲ್ಲಿ ಆರೆಸ್ಸೆಸ್ ವಿರುದ್ಧ ಕತ್ತಿ ಮಸೆದವರೇ! ಆದರೆ ಸಂಘ ಅದ್ಯಾವುದನ್ನೂ ನೆನಪಿಡದೆ, ಆ ವ್ಯಕ್ತಿಗಳ ಸಾಧನೆಗೆ ಮಾತ್ರ ಮಹತ್ವಕೊಟ್ಟು ತನ್ನ ಉನ್ನತ ನೀತಿ ನಿರೂಪಣಾ ಸಭೆಯಲ್ಲಿ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದೆ.
ಆದರೆ ಕಮ್ಯುನಿಸ್ಟ್ ಪಕ್ಷದ ಪಾಲಿಟ್ಬ್ಯೂರೋ ಸಭೆಗಳಲ್ಲಾಗಲಿ, ಎಐಸಿಸಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗಳಲ್ಲಾಗಲಿ ಮೃತರಾದ ಸಂಘಪರಿವಾರದ ಯಾವುದೇ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಒಂದೇ ಒಂದು ನಿದರ್ಶನ ಕಂಡುಬರುತ್ತಿಲ್ಲ. ಅವರ ಪಾಲಿಗೆ ಸಂಘಪರಿವಾರದ ವ್ಯಕ್ತಿಗಳೆಲ್ಲ ಮೃತರಾದ ಬಳಿಕವೂ ಅಸ್ಪೃಶ್ಯರು! ಶ್ರದ್ಧಾಂಜಲಿಗೆ ಅನರ್ಹರಾದವರು! ಮಾಧ್ಯಮ ಮಿತ್ರರು ಇಂತಹ ಸೂಕ್ಷ್ಮ ಅಂಶಗಳನ್ನು ಗಮನಿಸದಿರುವುದು ಅವರ ಬೌದ್ಧಿಕ ಮಿತಿಗೆ ಹಾಗೂ ಗ್ರಹಿಕೆಯ ಕೊರತೆಗೆ ಸಾಕ್ಷಿ.
ಯಾವುದನ್ನು ಸುದ್ದಿಯಾಗಿಸಬೇಕು, ಯಾವುದು ಸುದ್ದಿಯಲ್ಲ, ಯಾವುದು ಸುದ್ದಿಯಾದರೆ ಸಮಾಜಕ್ಕೆ, ದೇಶಕ್ಕೆ ಹಿತಕರ ಎಂಬ ಪರಿಜ್ಞಾನ ಮಾಧ್ಯಮ ಮಿತ್ರರಿಗೆ ಇನ್ನಷ್ಟು ಇರಬೇಕಾದ ಅಗತ್ಯವಂತೂ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.