ಬೆಳ್ತಂಗಡಿ : ದುಶ್ಚಟಗಳನ್ನು ತಡೆಗಟ್ಟಲಾರದವರು ನಮ್ಮ ಮಧ್ಯೆ ಇದ್ದು ನೀರಸ ಬದುಕು ನಡೆಸುತ್ತಿದ್ದಾರೆ. ಅಂತಹವರನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯವರು ಹುಡುಕಿ ಸಮಾಜದ ಮುಖ್ಯವಾಹಿನಿಗೆ ಕರೆತರುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇದರ ಅಧ್ಯಕ್ಷ ಎಮ್. ಆರ್. ರಂಗಶಾಮಯ್ಯ ಹೇಳಿದರು.
ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇದರ ಸುವರ್ಣ ಮಹೋತ್ಸವದ ಅಂಗವಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ವತಿಯಿಂದ ದುಶ್ಚಟ ದುರಾಭ್ಯಾಸಗಳ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಂಗಳವಾರ ಹಮ್ಮಿಕೊಂಡ ವರ್ಣಜಾಗೃತಿ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಮದ್ಯವರ್ಜನ ಶಿಬಿರಗಳಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳ ಸಂಯಮ ಮತ್ತು ಶಿಸ್ತನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇದರ ಹಿಂದಿನ ಶಕ್ತಿ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಮತ್ತು ಡಾ| ವೀರೇಂದ್ರ ಹೆಗ್ಗಡೆಯವರು. ಶಾಲಾ, ಕಾಲೇಜು ವಿದ್ಯಾರ್ಥಿಗಳು ದುಶ್ಚಟಗಳಿಂದ ಜೀವನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ ಎಂದ ಅವರು ಇಂದಿನ ವರ್ಣ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದು ರಾಜ್ಯದ ಜನತೆಗೆ ಪ್ರೇರಣೆ ನೀಡಲಿ ಎಂದು ಹಾರೈಸಿದರು.
ವೇದಿಕೆ ಕಾರ್ಯದರ್ಶಿ ವಿವೇಕ್ ವಿ.ಪಾಯಸ್ ಪ್ರಸ್ತಾವಿಸಿ, ಜನಜಾಗೃತಿ ವೇದಿಕೆಯಿಂದ ಮಾಹಿತಿ, ಪ್ರಚಾರ, ಹಕ್ಕೋತ್ತಾಯ ಹಾಗೂ ಮದ್ಯವರ್ಜನ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ೯೦೪ ಮದ್ಯವರ್ಜನ ಶಿಬಿರಗಳನ್ನು ಮಾಡಿ 62 ಸಾವಿರ ಮಂದಿ ಪಾನಮುಕ್ತರಾಗಿದ್ದಾರೆ. ಯುವ ಜನತೆಯನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಶಾಲಾ-ಕಾಲೇಜು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ನಿಕಟಪೂರ್ವ ಅಧ್ಯಕ್ಷ ಕೆ. ದೇವದಾಸ್ ಹೆಬ್ಬಾರ್, ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲ್ಯಾನ್, ಜಿಲ್ಲಾಧ್ಯಕ್ಷ ಮಹಮ್ಮದ್ ಇಸ್ಮಾಯಿಲ್, ಕಾಲೇಜಿನ ಪ್ರಾಚಾರ್ಯ ದಿನೇಶ್ ಚೌಟ, ಉಪಪ್ರಾಚಾರ್ಯ ಮೋಹನ ನಾರಾಯಣ್, ಹಿರಿಯ ಕಲಾವಿದ ರಮೇಶ್ ರಾವ್ ಉಡುಪಿ ಉಪಸ್ಥಿತರಿದ್ದರು.
ಸಂವಹನಕಾರ ರಾಜೇಂದ್ರ ಕೇದಿಗೆ ಸಂಯೋಜನೆಯಲ್ಲಿ ರಾಜ್ಯದಿಂದ ೨೧ ಮಂದಿ ಕಲಾವಿದರು ಹಾಗೂ ೧೫ ಮಂದಿ ವಿದ್ಯಾರ್ಥಿ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಗಣೇಶ್ ವಂದಿಸಿದರು.
ನಾಳೆ (ಡಿ.16) ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭವು ಧರ್ಮಾಧಿಕಾರಿ ಡಾ| ವೀರೆಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಲಾಕೃತಿಗಳ ಪ್ರದರ್ಶನ ಉದ್ಘಾಟನೆಯನ್ನು ಎಸ್ಡಿಎಮ್ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ| ಬಿ.ಯಶೋವರ್ಮ ನೆರವೇರಿಸಲಿದ್ದಾರೆ. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಸತೀಶ್ ಹೊನ್ನವಳ್ಳಿ, ಎಸ್ಕೆಡಿಆರ್ಡಿಪಿ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್. ಮಂಜುನಾಥ್ ಉಪಸ್ಥಿತರಿರುತ್ತಾರೆ.
ಮದ್ಯವರ್ಜನ ಶಿಬಿರಗಳನ್ನು ನಿರ್ವಹಿಸುವುದಕ್ಕೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯಿಂದ ರೂ. 25 ಲಕ್ಷ ನೀಡುವುದಾಗಿ ಅಧ್ಯಕ್ಷ ಎಮ್. ಆರ್. ರಂಗಶಾಮಯ್ಯ ಪ್ರಕಟಿಸಿದ್ದರು. ಅದರಲ್ಲಿ ರೂ. 10 ಲಕ್ಷದ ಮೊದಲ ಕಂತನ್ನು ಈಗಾಗಲೇ ಮದ್ಯವರ್ಜನ ಶಿಬಿರಗಳಿಗೆ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.