ತಂದೆ ಮಗನಿಗೆ ವೀರ ಕಲಿ, ಹೋರಾಟಗಾರರ ಕಥೆ ಹೇಳುತ್ತಾ ಸಾಗುತ್ತಿರುತ್ತಾರೆ. ಮಗನಿಗೆ ಕೇವಲ 3 ವರ್ಷ. ಮುಂದೆ ಸಾಗುತ್ತಿದ್ದಂತೆ ಮಗನ ಹೆಜ್ಜೆ ಸಪ್ಪಳ ಕೇಳದ ತಂದೆ ಪುನಃ ಬಂದ ದಾರಿಯಲ್ಲೇ ಹಿಂದಿರುಗಿ ಹೋಗುತ್ತಾರೆ. ಪುಟ್ಟ ಬಾಲಕ ಗದ್ದೆಯಲ್ಲಿ ಗುಂಡಿ ತೋಡುತ್ತಿರುತ್ತಾನೆ, ಏನ್ಮಾಡ್ತೀದ್ದಿಯಾ ಎಂದು ತಂದೆ ಕೇಳಿದರೆ ಸಿಕ್ಕ ಉತ್ತರ “ ಅಪ್ಪಾ, ಈ ಗದ್ದೆಯಲ್ಲೆಲ್ಲ ಬಾಂಬ್ ಬೆಳೆಯಬೇಕು. ಅದಕ್ಕೆ ಬಾಂಬ್ ಗಿಡ ನೆಡಬೇಕು, ಅದಕ್ಕಾಗಿಯೇ ಈ ಗುಂಡಿ ಎಂದು” ಅಬ್ಬಾ! ಇಂತಹ ಉತ್ತರ ಭಗತ್ ಸಿಂಗ್ ಅಲ್ಲದೇ ಇನ್ಯಾರಿಂದ ಸಿಗಲು ಸಾಧ್ಯ??
1907, ಸೆಪ್ಟೆಂಬರ್ 28 ರಂದು, ಸರ್ದಾರ್ ಕಿಶನ್ ಸಿಂಗ್, ವಿದ್ಯಾವತಿಯವರ 3 ನೇ ಪುತ್ರನ ಜನನ. ಕುಟುಂಬವೇ ಕ್ರಾಂತಿಮಯ. ಕಿಶನ್ ಸಿಂಗ್ ಮತ್ತು ಸಹೋದರರೀರ್ವರು ಹೋರಾಟ ಮಾಡಿ ಜೈಲು ಸೇರಿರುತ್ತಾರೆ. ಆದರೆ 3 ನೇ ಪುತ್ರನ ಜನನದ ವೇಳೆಗೆ ಮೂವರೂ ಬಿಡುಗಡೆಯಾಗುವ ಸನ್ನಿವೇಶ ಬಂತು. ಹೀಗೆ ಜನನದೊಂದಿಗೇ ಕುಟುಂಬಕ್ಕೆ ಅದೃಷ್ಟ ತಂದವನೇ “ಭಗತ್ ಸಿಂಗ್” (ಅದೃಷ್ಟವಂತ). ಬಹುಶಃ ಹೆಸರಿಡುವಾಗ ಈ ಅದೃಷ್ಟವಂತ ಮುಂದೆ ತಾನೇ ಕ್ರಾಂತಿಯ ಹಾದಿಯಲ್ಲಿ ನಡೆಯುತ್ತಾನೆ, ಜೈಲು ಸೇರಿ ನೇಣಿನ ಕುಣಿಕೆಗೆ 23 ವರ್ಷದಲ್ಲೇ ತಲೆ ಕೊಡುತ್ತಾನೆ ಎಂದು ಊಹಿಸಿರಲಿಕ್ಕಿಲ್ಲ.
1919, ಜಲಿಯನ್ ವಾಲಾಬಾಗ್ ಹತ್ಯಾಕಾಂಡ. ಸಾವಿರಾರು ಹೋರಾಟಗಾರರ ಹತ್ಯೆ, ಅದೆಷ್ಟೋ ಜೀವಗಳು ತಾಯ್ನಾಡಿಗಾಗಿ ಕೊನೆಯುಸಿರೆಳೆದವು. ಭಗತ್ ಆಗ ಹೈಸ್ಕೂಲ್ ಸೇರಿದ್ದ. ಶಾಲೆ ಬಿಟ್ಟೊಡನೆಯೇ ಹತ್ಯೆ ನಡೆದ ಸ್ಥಳಕ್ಕೆ ಹೋಗಿದ್ದ. ಮರಳಿ ಮನೆಗೆ ಬಂದಿದ್ದು ರಾತ್ರಿ. ಕೈಯಲ್ಲಿ ಇಂಕಿನ ಬಾಟಲಿ, ಆದರೆ ಅದರಲ್ಲಿ ರಕ್ತ ತರ್ಪಣವಾಗಿದ್ದ ಮಣ್ಣು. ಅದನ್ನು ತಂದವನೇ ಪೂಜಾ ಕೋಣೆಯಲ್ಲಿಟ್ಟು ನಿತ್ಯ ಆರಾಧಿಸಲಾರಂಭಿಸಿದ. ಆತನಿಗೆ ಹೋರಾಟಗಾರರ ರಕ್ತದ ಅರ್ಘ್ಯವಾಗಿದ್ದ ಮಣ್ಣೇ ಆರಾಧ್ಯ ಎನಿಸಿಕೊಂಡಿತ್ತು.
ಚೌರಿಚೌರಾ – ಕ್ರಾಂತಿಯ ಬೀಜ ಮೊಳಕೆಯೊಡೆದ ಕ್ಷಣ
ಹೀಗೆ ಸಾಗುತ್ತಿದ್ದ ಭಗತ್ ಜೀವನದಲ್ಲಿ ತಿರುವನ್ನು ನೀಡಿದ್ದೇ ಚೌರಿಚೌರಾ. 1922 ರಲ್ಲಿ ಕಾಂಗ್ರೆಸ್ ಚೌರಿಚೌರಾ ಎಂಬಲ್ಲಿ ಮೆರವಣಿಗೆಯೊಂದನ್ನು ಆಯೋಜಿಸಿತ್ತು. ಇದನ್ನು ಉಪಯೋಗಿಸಿಕೊಂಡ ಕೆಲವರು 22 ಪೊಲೀಸರನ್ನು ಕೂಡಿ ಹಾಕಿ ಜೀವಂತ ದಹಿಸಿದರು. ನಮಗೆಲ್ಲಾ ತಿಳಿದಂತೆ ‘ಮನನೊಂದ ಮಹಾತ್ಮ’ ಮರುಕ್ಷಣವೇ ಅಸಹಕಾರ ಚಳವಳಿಯನ್ನು ಕೈಬಿಡುವಂತೆ ಆದೇಶಿಸುತ್ತಾರೆ. 13 ವರ್ಷದ ಬಾಲಕ ಭಗತ್ ಮನಸ್ಸಲ್ಲಿ ಮೂಡಿದ ಪ್ರಶ್ನೆಗಳಿಷ್ಟೇ – 22 ಪೊಲೀಸರನ್ನು ಕೊಂದರೆಂಬ ಕಾರಣಕ್ಕೆ ದೇಶದಾದ್ಯಂತ ಅಸಹಕಾರ ಚಳವಳಿ ಹಿಂಪಡೆಯುವುದು ಅದೆಷ್ಟು ಸಂಮಜಸ? ತನ್ನ ಬಾಲ್ಯದ ಹೀರೋ ಕರ್ತಾರ್ ಸಿಂಗ್ ನನ್ನು ಗಲ್ಲಿಗೇರಿಸಿದ್ದಾಗ ಹಿಂಸೆಯ ಬಗ್ಗೆ ಕಾಂಗ್ರೆಸ್ಸಿಗರ ಧ್ವನಿಯೇಕೆ ಉಡುಗಿತ್ತು?? ಪೊಲೀಸರನ್ನು ಕೊಂದಾಗ ಮಾತ್ರವೇಕೆ ಗಾಂಧೀಜಿಯ ಅಂಹಿಸಾವಾದ ಜಾಗೃತಗೊಳ್ಳುತ್ತದೆ?? ಹೌದು, ಯೋಚಿಸಿದರೆ ಇವೆಲ್ಲಾ ಪ್ರಶ್ನೆಗಳು ಸರಿಯಾಗಿಯೇ ಇವೆ. ಅಹಿಂಸಾ ಚಳವಳಿ ಬಗೆಗಿದ್ದ ನಂಬಿಕೆಯನ್ನೆಲ್ಲಾ ಕಳಕೊಂಡ ಭಗತ್ ಮುಂದೆ ಲಾಲಾ ಲಜಪತ್ ರಾಯ್ ಆರಂಭಿಸಿದ್ದ ಕಾಲೇಜು ಸೇರಿದ ಮೇಲಂತೂ ಸಂಪೂರ್ಣ ಕ್ರಾಂತಿಕಾರಿಯಾಗುತ್ತಾನೆ.
ಮುಂದೆ ನಡೆದಿದ್ದೆಲ್ಲಾ ಕ್ರಾಂತಿಕಾರಿ ಹೋರಾಟದ ಅದ್ಭುತ ಘಟನೆಗಳು
ವಿಪರ್ಯಾಸವೆಂದರೆ ಇದೇ ನೋಡಿ! 1928, ಅಕ್ಟೋಬರ್ 30 ರಂದು ಭಾರತೀಯರಿಗೆಷ್ಟು ಸ್ವಾತಂತ್ಯ ನೀಡಬೇಕೆಂದು ನಿರ್ಧರಿಸಲು ಸೈಮನ್ ಆಯೋಗ ಲಂಡನ್ ನಿಂದ ಭಾರತಕ್ಕೆ ಆಗಮಿಸುವುದಿತ್ತು. ಆಯೋಗ ಬಂದಿಳಿಯುವ ವೇಳೆಗೆ ಲಾಲಾ ಲಜಪತ್ ರಾಯ್, ಪಂಡಿತ್ ಮದನ್ ಮೋಹನ್ ಮಾಳವೀಯ ಪ್ರತಿಭಟನೆ ಹಮ್ಮಿಕೊಂಡಿದ್ದರು. ಪೊಲೀಸರಿಂದ ಮಾರಣಾಂತಿಕವಾಗಿ ಲಾಠಿ ಏಟು ತಿಂದ ಲಜಪತ್ ರಾಯ್, 18 ದಿನಗಳ ಕಾಲ ನರಳಿ ನವೆಂಬರ್ 17ರಂದು ಕೊನೆಯುಸಿರೆಳೆಯುತ್ತಾರೆ. ಅದಾಗಲೆ ಕ್ರಾಂತಿಯನ್ನೆ ಮೈವೆತ್ತಿದ್ದ ಭಗತ್, ರಾಜ್ ಗುರು, ಡಿಸೆಂಬರ್ 17ರಂದು ಲಾಠಿ ಚಾರ್ಜ್ ಗೆ ಆದೇಶ ನೀಡಿದ್ದ ಬ್ರಿಟಿಷ್ ಪೊಲೀಸ್ ಅಧಿಕಾರಿ ಜಾನ್ ಸೌಂಡರ್ಸ್ನನ್ನು ಗುಂಡಿಕ್ಕಿ ಕೊಲೆಗೈದು ಪರಾರಿಯಾಗುತ್ತಾರೆ.
ಬಾಲಕನಾಗಿ ಬಾಂಬ್ ಬೆಳೆಯಲೆಂದು ಗುಂಡು ತೋಡಿದ್ದವ ಕ್ರಾಂತಿಯ ಬಾಂಬ್ ಸ್ಪೋಟಿಸಿದ ಕ್ಷಣ
ಕ್ರಾಂತಿಕಾರಿ ಚಂದ್ರಶೇಖರ ಆಜಾದ್ ರ ಪರಿಚಯವಾಗುತ್ತದೆ. 1929 ರಲ್ಲಿ ಶಾಸನ ಸಭೆಯಲ್ಲಿ ಬ್ರಿಟಿಷ್ ಸರಕಾರ ‘ವೀಟೋ’ ಅಧಿಕಾರ ಬಳಸಿ 2 ಮಸೂದೆಗಳನ್ನು ಅಂಗೀಕಾರ ಮಾಡುವ ಸಿದ್ಧತೆಯಲ್ಲಿತ್ತು. ಅವೆರಡು ಮಸೂದೆಗಳು ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕುವ ಉದ್ದೇಶ ಹೊಂದಿತ್ತು. 1929, ಏಪ್ರಿಲ್ 8 ರಂದು ಅಧಿವೇಶನ ಆರಂಭ. ಪ್ರೇಕ್ಷಕರ ಗ್ಯಾಲರಿಯಲ್ಲಿ ಬಾಂಬ್ ಮತ್ತು ರಿವಾಲ್ವರ್ ಗಳೊಂದಿಗೆ ಪನಾಮ ಹ್ಯಾಟ್ ಧರಿಸಿದ್ದ ಭಗತ್ ಮತ್ತು ಬಟುಕೇಶ್ವರ್ ದತ್ ಆಸೀನರಾಗಿದ್ದರು. ವೀಟೋ ಅಧಿಕಾರ ಬಳಸಿ ಮಸೂದೆ ಅಂಗೀಕರಿಸಿ ವೈಸ್ ರಾಯ್ ಕಾನೂನು ಮಾಡುವಂತೆ ಘೋಷಿಸುತ್ತಿದ್ದಂತೆ ಸದನದೊಳಗೆ ಬಾಂಬ್ ಸ್ಪೋಟ. ಇದ್ದಕ್ಕಿದಂತೆಯೇ ‘ಇಂಕ್ವಿಲಾಬ್ ಜಿಂದಾಬಾದ್’ ಎಂಬ ಘೋಷಣೆ. ತಪ್ಪಿಸಿಕೊಳ್ಳುವ ಅವಕಾಶವಿದ್ದರೂ ಭಗತ್ ವಿಚಾರಣೆ ಎದುರಿಸುವ ಮೂಲಕ, ತನ್ನ ದಿಟ್ಟ ಉತ್ತರಗಳ ಮೂಲಕ ಕ್ರಾಂತಿಯ ಸಂದೇಶವನ್ನು ದೇಶದ ತುಂಬೆಲ್ಲಾ ಪಸರಿಸುವಂತೆ ಮಾಡುವ ಸಲುವಾಗಿ ಬಂಧಿಗಳಾದರು. ವಿಚಾರಣೆಗಳ ಬಳಿಕ, 1930 ಅಕ್ಟೋಬರ್ 7 ರಂದು ತೀರ್ಪು ಬಂದಿತು. ಶಾಸನ ಸಭೆಯಲ್ಲಿ ಸ್ಪೋಟ ಮಾಡಿದ್ದಕ್ಕಾಗಿ ಭಗತ್ ಸಿಂಗ್, ರಾಜಗುರು, ಸುಖದೇವ್ ಗೆ ಗಲ್ಲು ಶಿಕ್ಷೆ!!
ಮಾರ್ಚ್ 23 – ಪ್ರತಿ ವರ್ಷ ಮನದಲ್ಲಿ ಸೂತಕದ ಛಾಯೆ
ಇದೇಕೆ ಕ್ರಾಂತಿಯ ಕುಡಿಯೊಬ್ಬ ದೇಶಕ್ಕಾಗಿ ಹೋರಾಡಿ ಪ್ರಾಣ ನೀಡಿದ ದಿನ, ಹೆಮ್ಮೆಯಿಂದ ಮನಸ್ಸು ಬೀಗಬೇಕು ಹೊರತು ಮನವೇಕೆ ಸೂತಕದ ಮನೆಯಾಗಬೇಕು ಎಂದು ಯೋಚಿಸುತ್ತಿದ್ದೀರಾ?? ಬೇಸರವಿರುವುದು ಮಹಾತ್ಮನ ಮೇಲೆ. ಹೇ, ಮಹಾತ್ಮ! ಇದೇಕೆ ಈ ರೀತಿ ಮಾಡಿದೆ ಎಂಬ ಪ್ರಶ್ನೆ ನಿಮ್ಮಲ್ಲಿ ಕೇಳಿಕೊಂಡರೆ ಅರಿವಾದೀತು ಮನಸ್ಸೇಕೆ ಸೂತಕದ ಮನೆಯಾಗುತ್ತದೆ ಎಂದು.
ದುಂಡುಮೇಜಿನ ಮೀಟಿಂಗ್ ಎಂಬ ವಕ್ರ ನಡೆ
ದೇಶದಾದ್ಯಂತ ನೇಣು ಶಿಕ್ಷೆ ಹಿಂಪಡೆಯಬೇಕೆಂಬ ಸಹಿ ಸಂಗ್ರಹಣೆ ನಡೆದಿತ್ತು. ಅದೇ ಸಮಯಕ್ಕೆ ದುಂಡುಮೇಜಿನ ಸಭೆಗೆ ಪಾಲ್ಗೊಳ್ಳುವಂತೆ, ಅಸಹಕಾರ ಚಳವಳಿಯನ್ನು ನಿಲ್ಲಿಸುವಂತೆ ಕಾಂಗ್ರೆಸ್ಸನ್ನು ಬ್ರಿಟಿಷ್ ಸರಕಾರ ಆಗ್ರಹಿಸಿತ್ತು. ರೌಂಡ್ ಟೇಬಲ್ ಮೀಟಿಂಗ್ ಗೆ ಹೊರಟಿದ್ದ ಗಾಂಧೀಜಿಗೆ, ಗಲ್ಲು ಶಿಕ್ಷೆಯನ್ನು ತೆಗೆದು ಹಾಕುವಂತೆ ಬ್ರಿಟನ್ ಆಡಳಿತದ ಮನವೊಲಿಸಬೇಕೆಂದು ಮನವಿ ಮುಂದಿಡಲಾಯಿತು. ಮುಂದೆ 1931 ರಲ್ಲಿ ಲಾರ್ಡ್ ಇರ್ವಿನ್ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಅಸಹಕಾರ ಚಳವಳಿಯನ್ನು ಕೈ ಬಿಡಲು ಗಾಂಧೀಜಿ ಒಪ್ಪಿದರು. ಆದರೆ ಇದಕ್ಕಿಂತಲೂ ದೊಡ್ಡ ದುರಂತವೇನೆಂದರೆ, ಇರ್ವಿನ್ ಜೊತೆ ದುಂಡು ಮೇಜಿನ ಸಭೆಯಲ್ಲಿ ಭಗತ್ ಗೆ ಮಾಫಿ ಮಾಡುವ ವಿಚಾರವೊಂದನ್ನು ಬಿಟ್ಟು, ಮಹಾತ್ಮ ಬೇರೆಲ್ಲಾ ವಿಷಯಗಳನ್ನು ಚರ್ಚಿಸಿದ್ದರು. ಅಸಹಕಾರ ಚಳವಳಿ ಹಿಂಪಡೆಯಲೂ ಒಪ್ಪಿದ್ದರು!!! ಒಪ್ಪಂದಕ್ಕೆ ಸಹಿ ಹಾಕಬೇಕಿದ್ದರೆ ಭಗತ್ ನ ಬಿಡುಗಡೆ ಆಗಬೇಕು ಎಂಬ ಒಂದು ಷರತ್ತು ನೀವು ಹಾಕಿದ್ದರೆ ನಮಗೆ ಬಹುಶಃ ಬೇಗನೆ ಸ್ವಾತಂತ್ರ್ಯ ಸಿಗುತ್ತಿತ್ತು! ಮಹಾತ್ಮ, 23 ವರ್ಷದ ಯುವಕ 62 ವರ್ಷದ ತಮ್ಮೆದುರು ದೇಶದಾದ್ಯಂತ ಹೆಸರು ವಾಸಿಯಾಗಿದ್ದೇ ತಮ್ಮನ್ನು ಈ ರೀತಿ ಮಾಡಿಸಿತೇ?? ಇದ್ಯಾಕೆ, ಭಾರತೀಯನಿಗೆ ಈ ರೀತಿಯ ದ್ರೋಹ ಬಗೆದಿರಿ? ದೇಶದಾದ್ಯಂತ ನಡೆಯುತ್ತಿದ್ದ ಸಹಿ ಅಭಿಯಾನದಲ್ಲಿ ತಾವಂದಿದ್ದು “ಅವನೊಬ್ಬ ಮಿಸ್ ಗೈಡೆಡ್ ಪೇಟ್ರಿಯಾಟ್ – ದಾರಿ ತಪ್ಪಿದ ದೇಶಭಕ್ತ” ಎಂದು. ಭಾರತೀಯನಿಗೆ ದ್ರೋಹ ಬಗೆಯುವಾಗ ತಪ್ಪು ದಾರಿಯಲ್ಲಿ ನಡೆಯುತ್ತಿದ್ದೇನೆ ಎಂದೆನಿಸಲಿಲ್ಲವೇ ಮಹಾತ್ಮ??? 23 ವರ್ಷದ ಯುವಕನ ವಿರುದ್ಧ ಶತ್ರುಗಳು ದ್ವೇಷವನ್ನು ಸಾಧಿಸುವಂತೆ ನೀವು ನಡೆದುಕೊಂಡಿರಲ್ಲ, ಅದೇಗೆ ಅಹಿಂಸಾವಾದಿಯಾದಿರಿ??
ದಿಲ್ ಸೇ ಮರ್ ಕರ್ ಭೀ ನೇ ನಿಕ್ಲೇಗಿ ವತನ್ ಕೀ ವುಲ್ಫತ್
ಮೇರಿ ಮಿಠ್ಠೀ ಸೇ ಖುಷ್ಬುಯೇ ವತನ್ ಆಯೇಗಿ!
ನಾನು ಸತ್ತ ನಂತರವೂ ನನ್ನೊಳಗಿನ ತಾಯ್ನಾಡಿನ ಪ್ರೀತಿ ಹೋಗುವುದಿಲ್ಲ,
ನನ್ನ ದೇಹದ ಬೂದಿ ಕೂಡ ಮಣ್ಣಿನ ಸುಗಂಧವನ್ನು ಹೊರಸೂಸುತ್ತಿರುತ್ತದೆ !
ಈ ರೀತಿ ಹೇಳುತ್ತಲೇ, ನಗು ನಗುತ್ತಲೇ, ಕಪ್ಪು ಬಟ್ಟೆ ತೊಡದೇ, ಕೈಗೆ ಕೋಳ ಹಾಕಿಸಿಕೊಳ್ಳದೆ, ಕುಣಿಕೆಯನ್ನು ಪ್ರೀತಿಯಿಂದ ಚುಂಬಿಸುತ್ತಲೇ ಮಾರ್ಚ್ 23 ರಂದು ರಾತ್ರಿ 7-22 ಕ್ಕೆ ಸುಖದೇವ್, ಭಗತ್ ಸಿಂಗ್, ರಾಜ ಗುರು ತಲೆಕೊಟ್ಟು ನಮ್ಮಿಂದ ದೂರವಾದರು. ಭಗತ್.. ಈ ಮಣ್ಣಿನ ಸುಗಂಧವೆಲ್ಲಾ ನಿಮ್ಮ ಹೋರಾಟದ, ಕ್ರಾಂತಿಯ ಕಿಚ್ಚನ್ನು ನಮಗೆ ನೀಡುತ್ತಿದೆ.
ಇಂತಹ ವೀರ ಸುಪುತ್ರರ ಪ್ರಾಣಾರ್ಪಣೆಯ ಪರಿಣಾಮ ಇಂದು ಕೋಟಿ ಕೋಟಿ ಕುಟುಂಬಗಳು ಸುರಕ್ಷಿತವಾಗಿವೆ. ಸ್ವಾತಂತ್ರ್ಯ ದೇವಿಯ ಹಣೆಯಲ್ಲಿ ಶುಭ ತಿಲಕ ಕಂಗೊಳಿಸುತ್ತಿದೆ. ಮತ್ತೊಮ್ಮೆ ಅದು ಅಳಿಯದಂತೆ ನೋಡಿಕೊಳ್ಳುವುದು ಇಂದಿನ ಯುವ ಜನತೆಯ ಕರ್ತವ್ಯವಾಗಿದೆ. ಇಲ್ಲವಾದಲ್ಲಿ ಆ ವೀರರ ನೋವು, ಅವರ ಸಂಕಟ ಎಲ್ಲವೂ ವ್ಯರ್ಥವಾದೀತು. ಈ ಮೊರೆಗೆ ಓಗೊಡುವ ಹೃದಯಗಳು ನಾವಾಗಬಾರದೇಕೆ ? ಇದೇ ಶಿವಭಕ್ತಿ, ಇದೇ ದೇಶಭಕ್ತಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.