ಬೆಳ್ತಂಗಡಿ : ಗ್ರಾಹಕರ ಹಾಗೂ ಸಹಕಾರಿ ಸಂಘದ ನಡುವೆ ಅಂತರ ಬೆಳೆದರೆ ಮುಂಬರುವ ದಿನಗಳಲ್ಲಿ ಮುಚ್ಚುವ ಸಾಧ್ಯತೆ ಅಧಿಕವಾಗಿದೆ. ಆ ನಿಟ್ಟಿನಲ್ಲಿ ಸಂಘ ಹಾಗೂ ಗ್ರಾಹಕರ ನಡುವೆ ಭಾಂದವ್ಯವನ್ನು ಗಟ್ಟಿಯಾಗಲು ಮುಂಡಾಜೆ ಸಹಕಾರಿ ಸಂಘ ಹಲವಾರು ಯೋಜನೆಯನ್ನು ಹಾಕಿಕೊಂಡು ಸಂಘದ ನಡಿಗೆ ರೈತ ಸದಸ್ಯರ ಕಡೆಗೆ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್. ಎಸ್. ಗೋಖಲೆ ಹೇಳಿದರು.
ಅವರು ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಕ್ಕಿಂಜೆ ಶಾಖಾ ವಠಾರದಲ್ಲಿ ಹೊಸ ವರುಷದ ಶುಭಾಶಯ ತಿಳಿಸಿ, ಸದಸ್ಯರ ಕಷ್ಟ ಸುಖ ತಿಳಿದು, ನೂತನ ರೂಪೇ ಕಾರ್ಡ್ ವಿತರಿಸಲು ಸಂಘದ ನಡಿಗೆ- ರೈತ ಸದಸ್ಯರ ಕಡೆಗೆ ಎಂಬ ವಿನೂತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ಯಾಂಕ್ ಹಾಗೂ ಸದಸ್ಯರ ನಡುವೆ ವ್ಯವಹಾರ ಬೆಳೆದರೆ ಮಾತ್ರ ಸಹಕಾರಿ ಸಂಘಗಳು ಉಳಿಯುತ್ತದೆ. ಸದಸ್ಯರ ಮನೆಗಳಿಗೆ ತೆರಳಿ, ಸಹಕಾರಿ ಸಂಘದ ಯೋಜನೆಗಳನ್ನು ಮನವರಿಕೆ ಮಾಡುವ ಕಾರ್ಯಕ್ರಮವನ್ನು ಪ್ರಪ್ರಥಮವಾಗಿ ಮುಂಡಾಜೆ ಸಹಕಾರಿ ಸಂಘ ಮಾಡುತ್ತಿದೆ. ಇದರಿಂದ ಸಹಕಾರಿ ಸಂಘಗಳ ಹಾಗೂ ಗ್ರಾಹಕರ ಭಾಂದವ್ಯ ಇನ್ನಷ್ಟು ಗಟ್ಟಿಯಾಗುತ್ತದೆ ಎಂದರು.
ಬೆಳ್ತಂಗಡಿ ಎಸ್ಸಿಡಿಸಿಸಿ ಬ್ಯಾಂಕ್ ಶಾಖಾ ಪ್ರಬಂಧಕ ಬಿ. ಪ್ರಮೋದ್ ಕುಮಾರ್ ರೂಪೇ ಕಾರ್ಡನ್ನು ವಿತರಿಸಿ, ಕೇಂದ್ರ ಸಹಕಾರಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ನ್ನು ನೀಡುತ್ತಿದೆ. ರೈತರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು. ಸರಕಾರ ನೀಡುವ ಸಬ್ಸಿಡಿಗಳ ಹಣವನ್ನು ಈ ಖಾತೆಯ ಮೂಲಕ ಬಳಸಿಕೊಳ್ಳಬಹುದು. ಗ್ರಾಹಕರು ಹಾಗೂ ಬ್ಯಾಂಕಿನ ಸಂಬಂಧ ನಾವು ಗ್ರಾಹಕರಿಗೆ ನೀಡುವ ಸೇವೆಯ ಮೇಲೆ ನಿಂತಿದೆ. ಈ ಸಂಬಂಧವನ್ನು ಗಟ್ಟಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸಹಕಾರಿ ಬ್ಯಾಂಕ್ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ವೇದಿಕೆಯಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ನ ವಲಯ ಮೇಲ್ವಿಚಾರಕ ಸಂದೇಶ್ ಕುಮಾರ್, ಎಸ್ಸಿಡಿಸಿಸಿ ಬ್ಯಾಂಕ್ ಕಕ್ಕಿಂಜೆ ಶಾಖೆಯ ಮೆನೇಜರ್ ವಿವೇಕ್, ನಿರ್ದೇಶಕರುಗಳಾದ ಮೋಹನ್ಚಂದ್ರ ಗೋಖಲೆ, ಅಶೋಕ್ ಕುಮಾರ್ ಜೈನ್, ಪ್ರಕಾಶ್ ನಾರಾಯಣ ರಾವ್, ಲಿಂಗಪ್ಪ ಗೌಡ, ಜ್ಯೋತಿ ಜೆ. ಫಡ್ಕೆ, ಮಿನಿ ಬೇಬಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ರೂಪೇ ಕಾರ್ಡ್ನ್ನು ವಿತರಿಸಲಾಯಿತು. ಎಟಿಎಂನ ಕಾರ್ಡ್ನ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಕೃಷ್ಣ ಆಗಮಿಸಿ, ಮಾಹಿತಿ ನೀಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡ್ಕೆ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ವಿ.ಟಿ. ಸೆಬಾಸ್ಟಿನ್ ವಂದಿಸಿದರು. ಸೋಮಂತಡ್ಕ ಶಾಖಾ ಮೆನೇಜರ್ ಮಧುಕರ್ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.