ಬೆಳ್ತಂಗಡಿ : ಪ್ರಾಮಾಣಿಕ ಸೇವೆ, ಕರ್ತವ್ಯಗಳಿಂದ ನಾವು ಬದುಕಬೇಕು ಮತ್ತು ಇತರರನ್ನೂ ಪ್ರೇರೇಪಿಸಬೇಕು ಎಂದು ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ಏರ್ಪಡಿಸಲಾದ 38 ನೇ ವರ್ಷದ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಹಣತೆ ತಾನು ಬೆಳಗಿ ಪರಿಸರಕ್ಕೆ ಬೆಳಕು ನೀಡುವಂತಹ ಬದುಕು ನಮ್ಮದಾಗಬೇಕು. ದೇಶದಲ್ಲಿ ಶೇ.60 ರಷ್ಟು ಇರುವ ಯುವಶಕ್ತಿ ಸಮಾಜದ ಏಳಿಗೆಗೆ ತನ್ನ ಶಕ್ತಿಯನ್ನು ವಿನಿಯೋಗಿಸಿದಾಗ ವಿಶ್ವದಲ್ಲಿ ಭಾರತ ಬೆಳಗಲು ಸಾಧ್ಯ. ಶ್ರೀಕ್ಷೇತ್ರದಲ್ಲಿ ವಸ್ತು ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವ ಮೂಲಕ ಸಮಾಜದ ಜನರಿಗೆ ಉಪಯುಕ್ತ ಮಾಹಿತಿಗಳನ್ನು ನೀಡಲಾಗುತ್ತಿದೆ. ವೈಜ್ಞಾನಿಕತೆಯ ಅರಿವೂ ಇಲಿ ಉಂಟಾಗುತ್ತದೆ ಎಂದ ಅವರು ಒಟ್ಟಾಗಿ ಬದುಕುವ ಮತ್ತು ನಾವೆಲ್ಲ ಒಂದೇ ತಾಯಿಯ ಮಕ್ಕಳು ಎಂಬ ಭಾವನೆ ನಮ್ಮಲ್ಲಿ ಬಲವಾಗಬೇಕು ಎಂದು ಅವರು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಅವರು ಕ್ಷೇತ್ರದಲ್ಲಿ ಜಾತ್ರೆ, ನೇಮ, ಶಿವರಾತ್ರಿ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಸಂಪ್ರದಾಯವಿಲ್ಲ. ಆದರೆ ಲಕ್ಷದೀಪೋತ್ಸವಕ್ಕೆ ಅಂತಹ ಯಾವುದೇ ಬಂಧವಿಲ್ಲ. ಹೀಗಾಗಿ ಬಂದ ಭಕ್ತ ಸಮೂಹಕ್ಕೆ ಜ್ಞಾನ ಸಂಪಾದನೆಯೂ ಆಗಬೇಕು ಎಂಬ ಉದ್ದೇಶದಿಂದ ವಸ್ತುಪ್ರದರ್ಶನ, ಸರ್ವಧರ್ಮ, ಸಾಹಿತ್ಯ ಸಮ್ಮೇಳನಗಳನ್ನು ನಡೆಸುತ್ತಾ ಬರಲಾಗಿದೆ. ಪ್ರದರ್ಶನದಲ್ಲಿ ಸರಕಾರದ, ಬ್ಯಾಂಕುಗಳ ಯೋಜನೆಗಳನ್ನು ಪ್ರಚುರ ಪಡಿಸುವ ಉದ್ದೇಶ ಇಲ್ಲಿದೆ ಎಂದರು.
ಧ.ಮಂ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಪ್ರಭಾಕರ್ ಉಪಸ್ಥಿತರಿದ್ದರು. ಅಭಿಯಂತರ ಜಗದೀಶ್ ಪ್ರಸಾದ್ ಸ್ವಾಗತಿಸಿದರು. ಹಿಂದಿ ಪ್ರಾಧ್ಯಾಪಕ ಸುನಿಲ್ ಪಂಡಿತ್ ವಂದಿಸಿದರು. ಡಾ| ಬಿ.ಎ.ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.
ವಸ್ತುಪ್ರದರ್ಶನದಲ್ಲಿ ೧೯೫ ಮಳಿಗೆಗಳಿವೆ. ಬ್ಯಾಂಕ್, ಸರಕಾರಿ, ವಾಹನ, ಶಿಕ್ಷಣ ಸಂಸ್ಥೆ, ಪುಸ್ತಕಗಳ, ಬಟ್ಟೆಗಳು, ತರಕಾರಿ ಬೀಜಗಳು, ಮರದಕರಕುಶಲ ವಸ್ತುಗಳು, ಕೃಷಿ ಉಪರಣಗಳು, ಅಡುಗೆ ವಸ್ತುಗಳು, ಗೊಂಬೆಗಳು, ಆಯುರ್ವೇದಿಕ್ ವಸ್ತುಗಳು, ವಿವಿಧ ಬಗೆಯ ತಿಂಡಿತಿನಸುಗಳ ಮಳಿಗೆಗಳು ೬ ದಿನಗಳ ಕಾಲ ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಾಗಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.