ಪುತ್ತೂರು : ಒಂದು ಯೋಜನೆ ಜಾರಿಯಾಗುವ ಮುನ್ನ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆಯಾಗಬೇಕು. ಇದ್ಯಾವುದೂ ಇಲ್ಲದೆ ಯೋಜನೆ ಜಾರಿ ಹೇಗೆ ಸಾಧ್ಯ. ಹೀಗಾಗಿ ನೇತ್ರಾವತಿ ನದಿ ತಿರುವು ಅಥವಾ ಎತ್ತಿನ ಹೊಳೆ ಯೋಜನೆ ಬಗ್ಗೆ ಸಮಗ್ರ ಅಧ್ಯಯನ ಬೇಕಾಗಿದೆ ಎಂದು ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ಅವರು ಎಚ್ಚರ ಬಳಗದ ವತಿಯಿಂದ ಪುತ್ತೂರು ಅನುರಾಗ ವಠಾರದಲ್ಲಿ ಭಾನುವಾರ ನಡೆದ ನೇತ್ರಾವತಿ ನದಿ ತಿರುವು ಹೋರಾಟ ಸಮಿತಿ ರಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶದ ಎಲ್ಲಾ ಅಭಿವೃದ್ಧಿ ಕಾರ್ಯಗಳ ಹಿಂದೆ ಇಂಜಿನೀಯರ್ಗಳಿದ್ದಾರೆ. ನೇತ್ರಾವತಿ ನದಿ ತಿರುಗಿಸುವ ಯೋಜನೆಯನ್ನು ಹುಟ್ಟು ಹಾಕಿದ ಪರಮಶಿವಯ್ಯ ಕೂಡ ಇಂಜಿನೀಯರ್. ಇವರು ನೀರು ಹೇಗೆ ಕೊಂಡೊಯ್ಯಬಹುದು ಎಂಬುದನ್ನಷ್ಟೇ ಪರೀಕ್ಷೆ ನಡೆಸಿದ್ದಾರೆ. ಪರಿಸರಕ್ಕೆ ಏನು ಹಾನಿಯಾಗಬಹುದು ಎಂಬುದನ್ನು ತಿಳಿದುಕೊಂಡಿಲ್ಲ. ಮುಂದಿನ ಹಾದಿ ಇದೇ ರೀತಿಯಲ್ಲಿ ಮುಂದುವರಿಯಬಾರದುಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರು ಯೋಜನೆ ಅನುಷ್ಠಾನಕ್ಕೆ ಬೆಂಬಲ ಸೂಚಿಸುತ್ತಾ, ತಾನು ಸರ್ಕಾರದ ಒಂದು ಭಾಗ ಎಂದು ಹೇಳುತ್ತಾರೆ. ಹಾಗಾದರೆ ನಾವುಗಳು ಸರ್ಕಾರದ ಭಾಗವಲ್ಲವೇ? ರಾಜಕಾರಣಿಗಳು ತಿರುಗಿಸಿ ಮಾತನಾಡುವ ಗುಣದಿಂದ ನದಿ ತಿರುವು ಯೋಜನೆ ಅನುಷ್ಠಾನಕ್ಕೆ ಬರುತ್ತಿದೆ. ಕರಾವಳಿ ಭಾಗದಲ್ಲಿ ರಾಜ್ಯ ಸರ್ಕಾರದ ಅನೇಕ ಶಾಸಕರಿದ್ದಾರೆ. ಯೋಜನೆ ಬಗ್ಗೆ ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ ಎಂದಿದ್ದಾರೆ.
ನೇತ್ರಾವತಿ ನದಿ ತಿರುವು ವಿರೋಧಿ ಸಮಿತಿಯ ಡಾ.ನಿರಂಜನ್ ರೈ ಮಾತನಾಡಿ, ಹೋರಾಟಗಳು ಒಂದೇ ಹಾದಿಯಲ್ಲಿ ನಡೆಯಬೇಕಿದೆ, ಇಲ್ಲಿ ಯಾವುದೇ ರಾಜಕೀಯಗಳು ಬೇಡ, ಊರಿನ ಎಲ್ಲಾ ಜನರಿಗೆ ಈ ಯೋಜನೆಯಿಂದ ಸಮಸ್ಯೆಯಾಗಲಿದೆ ಎಂದರು.
ಅನುರಾಗ ವಠಾರದ ಪುರಂದರ ಭಟ್ ಮಾತನಾಡಿ, ಪುತ್ತೂರಿನಲ್ಲಿ ಸಂಘಟಿಸುತ್ತಿರುವ ಸಮಿತಿಯ ಉzಶವೂ ನೇತ್ರಾವತಿ ತಿರುವು ವಿರೋಧಿಸುವುದೇ ಆಗಿದೆ. ಆದರೆ ನಿರಂಜನ್ ರೈ ಅವರ ಹೋರಾಟಕ್ಕಿಂತ ಭಿನ್ನವಾಗಿದೆ. ಇಲ್ಲಿ ಗಾಂಧಿ ಮಾರ್ಗ ಅನುಸರಿಸುತ್ತೇವೆ. ಅನ್ಯ ಮಾರ್ಗಕ್ಕೆ ಸಹಮತವಿಲ್ಲ. ಇದು ಸಾಧ್ಯವೇ ಇಲ್ಲ ಎಂದಾದಲ್ಲಿ ಮತ್ತೆ ಯೋಚನೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ನೇತ್ರಾವತಿ ಯೋಜನೆ ವಿರೋಧಿ ಸಮಿತಿ ಪುತ್ತೂರಿನಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇದರ ಅಧ್ಯಕ್ಷರಾಗಿ ಸವಣೂರು ಕೆ.ಸೀತಾರಾಮ ರೈ ಅವರನ್ನು ನೇಮಿಸಲಾಯಿತು. ಕಾರ್ಯದರ್ಶಿಯಾಗಿ ಪದ್ಮನಾಭ ಶೆಟ್ಟಿ, ಕೋಶಾಧಿಕಾರಿಯಾಗಿ ಪುರಂದರ ಭಟ್, ಜೊತೆ ಕಾರ್ಯದರ್ಶಿಯಾಗಿ ಐ.ಕೆ.ಬೊಳುವಾರು ಅವರನ್ನು ಆಯ್ಕೆ ಮಾಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.