ಬೆಳ್ತಂಗಡಿ : ಸಮಾರು 1 ಲಕ್ಷದಷ್ಟು ಕನ್ನಡ ಹಸ್ತಪ್ರತಿಗಳು ಸಂಗ್ರಹವಾಗಿದ್ದು, ಇದು ಕೇವಲ ಅರ್ಧದಷ್ಟು ಮಾತ್ರ. ಸಂಗ್ರಹವಾಗಿರುವ ಹಸ್ತಪ್ರತಿಗಳನ್ನು ಸಮರ್ಪಕವಾಗಿ ಸಂರಕ್ಷಿಸುವ ಕಾರ್ಯ ನಡೆಯುತ್ತಿಲ್ಲ. ಅದಕ್ಕಾಗಿ ಹಸ್ತಪ್ರತಿ ಸಂರಕ್ಷಣೆಗೆ ಕಡ್ಡಾಯ ಹಸ್ತಪ್ರತಿ ನೀತಿ ಸಂಹಿತೆಯನ್ನು ಜಾರಿಗೆ ತರಬೇಕು ಎಂದು ಹಿರಿಯ ವಿದ್ವಾಂಸ ಡಾ| ವೀರಣ್ಣ ರಾಜೂರ ಆಗ್ರಹಿಸಿದ್ದಾರೆ.
ಅವರು ಶುಕ್ರವಾರ ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ಹಂಪಿ ವಿವಿಯ ಹಸ್ತಪ್ರತಿ ಶಾಸ್ತ್ರ ವಿಭಾಗ, ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನ ಧರ್ಮಸ್ಥಳ, ಡಾ| ಹಾ.ಮಾ.ನ ಸಂಶೋಧನಾ ಕೇಂದ್ರ ಹಾಗೂ ಎಸ್ಡಿಎಂ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ನಡೆದ ಅಖಿಲ ಕರ್ನಾಟಕ 12 ನೆಯ ಹಸ್ತಪ್ರತಿ ಸಮ್ಮೇಳನ ಮತ್ತು ಎರ್ತೂರು ಶಾಂತಿರಾಜ ಶಾಸ್ತ್ರಿ ಸಾಹಿತ್ಯ ಸಂಸ್ಮರಣೆ ಕಾರ್ಯಕ್ರಮದ ಸರ್ವಾಧ್ಯಕ್ಷ ಸ್ಥಾನದಿಂದ ಮಾತನಾಡಿದರು.
ನಮ್ಮ ರಾಜ್ಯದ ಗ್ರಾಮೀಣ ಪ್ರದೇಶದಿಂದ ಇನ್ನೂ ಸಂಗ್ರಹವಾಗಬೇಕಗಿರುವುದು ಬಹಳಷ್ಟು ಇದೆ. ಭಾವುಕ ಭಕ್ತಿ, ಮೂಢನಂಬಿಕೆಗಳಿಂದಾಗಿ ಹಸ್ತಪ್ರತಿಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುತ್ತಿದ್ದಾರೆ. ಇವು ಕ್ರಮೇಣ ನಾಶವಾಗುವ ಹಂತಕ್ಕೆ ತಲುಪುತ್ತವೆ. ಇದನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸರಕಾರ ಹಾಗೂ ಸಂಘ ಸಂಸ್ಥೆಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕಾದ ಅಗತ್ಯ ಇದೆ ಎಂದರು.
ಕನ್ನಡ ಹಸ್ತಪ್ರತಿಗಳ ಸಂಪಾದನೆಯ ಹೊಸ ಸಾಧ್ಯತೆಯ ಬಾಗಿಲುಗಳನ್ನು ತೆರೆದು ತೊರಿಸಿದವರು ಎಮ್.ಎಮ್. ಕಲ್ಬುರ್ಗಿಯವರು. ಅವರ ಕನ್ನಡ ಗ್ರಂಥ ಸಂಪಾದನ ಶಾಸ್ತ್ರ ಗ್ರಂಥ ಈ ನಿಟ್ಟಿನಲ್ಲಿ ಮಹತ್ವದ್ದು. ಒಟ್ಟು ಕಾವ್ಯ ಪರಂಪರೆಯನ್ನು ಮಾರ್ಗ-ದೇಶಿ- ಜಾನಪದ ಎಂದು ವಿಂಗಡಿಸಿ ಮೂರು ಪ್ರತ್ಯೇಕವಾದ ಗ್ರಂಥ ಸಂಪಾದನ ವಿಧಾನಗಳನ್ನು ಗುರುತಿಸಿದರು. ಈ ಮೂಲಕ ಗ್ರಂಥ ಸಂಪಾದಾನ ಕಾರ್ಯಕ್ಕೆ ಹೊಸ ಆವಿಷ್ಕಾರವನ್ನು ತಂದು ಕೊಟ್ಟರು ಎಂದರು.
ಮೊದಲು ಪಾಶ್ಚಾತ್ಯರು ಹಸ್ತಪ್ರತಿಗಳನ್ನು ಆಧಾರಿಸಿ ಕನ್ನಡ ಗ್ರಂಥಗಳ ಪರಿಷ್ಕರಣೆಗೆ ಮುಂದಾದರು. ನಂತರ ದೇಸೀ ಪಂಡಿತರಿಂದ ಅದು ನಿರಂತರ ಪ್ರಕ್ರಿಯೆಯಾಗಿ ಮುಂದುವರಿಯಿತು. ಇದೀಗ ಯುವ ಸಮುದಾಯ ಹಸ್ತಪ್ರತಿ ಶಾಸ್ತ್ರದ ಬಗ್ಗೆ ಯಾವುದೇ ಆಸಕ್ತಿಯನ್ನು ವಹಿಸುತ್ತಿಲ್ಲ. ಹಸ್ತಪ್ರತಿ ಶಾಸ್ತ್ರವೆಂಬುದು ಸುಲಭದ ಕಾರ್ಯವಲ್ಲ. ಪ್ರಸಿದ್ದಿ, ಪ್ರತಿಷ್ಠೆ ಮತ್ತು ಫಲದಾಯಕವಾದ ಕ್ಷೇತ್ರವೂ ಅಲ್ಲ. ನಿರಂತರ ಪರಿಶ್ರಮ ನಿತಾಂತ ಸಂಯಮ, ಉತ್ಕಟ ನಿಷ್ಠೆ, ನಿಸ್ವಾರ್ಥಗಳನ್ನು ಅಪೇಕ್ಷಿಸುವ ಅಭಿಯಾನ ಇದು. ಈ ಕುರಿತು ವಿದ್ಯಾರ್ಥಿಗಳಿಗೆ ಸೂಕ್ತವಾದ ತರಬೇತಿಗಳನ್ನು ನೀಡಿ ಈ ಬಗ್ಗೆ ಪ್ರೀತಿ ಕುದುರಿಸುವ ಕಾರ್ಯ ಆಗಬೇಕು. ಹಂಪಿ ವಿವಿ ಹಸ್ತಪ್ರತಿಗಳ ಶೇಖರಣೆ ಸಂರಕ್ಷಣೆ ಮತ್ತು ಅಧ್ಯಯನದ ಬಗ್ಗೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ ಎಂದರು.
ಸಮ್ಮೇಳನವನ್ನು ಉದ್ಘಾಟಿಸಿದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರು ದೇಶದ ಪ್ರಾಚೀನ ಜ್ಞಾನ ಸಂಪತ್ತು ಹಸ್ತಪ್ರತಿಗಳಲ್ಲಿ ದಾಖಲಾಗಿದೆ. ಇದು ನಶಿಸಿ ಹೋಗದಂತೆ ನೋಡಿಕೊಳ್ಳಬೇಕಾಗಿದೆ. ಹಸ್ತಪ್ರತಿ ಎಂಬುದು ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಇದೆ. ಇದನ್ನು ಬರೆಯುವವರು ದೀಕ್ಷೆ ತೊಟ್ಟವರಂತೆ ಇರುತ್ತಿದ್ದರು. ಶ್ರೀ ಕ್ಷೇತ್ರದಲ್ಲಿ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದಲ್ಲಿ 45 ವರ್ಷಗಳಿಂದ ಸುಮಾರು 5000 ತಾಡಪತ್ರಗಳನ್ನು ವೈಜ್ಞಾನಿಕವಾಗಿ ಸಂರಕ್ಷಣೆ ಮಾಡಿ ಇಡಲಾಗಿದೆ ಎಂದರು.
ಹಸ್ತಪ್ರತಿ ವಿಚಾರದಲ್ಲಿ ಸಂಶೋಧನೆ ಮಾಡುವವರ ಕೊರತೆ ಇದೆ. ಇದರಲ್ಲಿ ಹೆಚ್ಚು ಆಸಕ್ತಿಯನ್ನು ಹುಟ್ಟಿಸಲು ವಿವಿಯವರು ವಿದ್ಯಾರ್ಥಿ ವೇತನ ಮತ್ತಿತರ ಪ್ರೋತ್ಸಾಹವನ್ನು ಕೊಟ್ಟರೆ ಶ್ರೀ ಕ್ಷೇತ್ರದಿಂದಲೂ ಇದಕ್ಕೆ ಪೂರಕ ವ್ಯವಸ್ಥೆ ಮಾಡಲು ಸಿದ್ದ ಎಂದರು. ಈ ಸಂದರ್ಭ ಅವರು ಡಾ|ಎಸ್.ಡಿ ಶೆಟ್ಟಿ ಮತ್ತು ಡಾ. ಎಸ್.ಆರ್. ವಿಘ್ನರಾಜ ಸಂಪಾದಿಸಿದ ಮೂರನೆಯ ಪದ್ಮನಾಭ ಕವಿಯ ರಾಮಚಂದ್ರ ಚರಿತ ಪುರಾಣ ಹಾಗೂ ಡಾ| ವೀರೇಶ ಬಡಿಗೇರ ಸಂಪಾದಕತ್ವದ ಹಸ್ತಪ್ರತಿ ವ್ಯಾಸಂಗ- 14 ಎಂಬ ಎರಡು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿವಿಯ ಕುಲಪತಿ ಡಾ|ಮಲ್ಲಿಕಾ ಎಸ್. ಘಂಟಿ ಅವರು ಶಾಸನ ಶಾಸ್ತ್ರವೆಂದರೆ ಅದು ಕೇವಲ ಸಾಹಿತ್ಯ ಮಾತ್ರವಲ್ಲ. ಆ ಕಾಲದ ಸತ್ಯವನ್ನು ಹೇಳುವ ಸಾಕ್ಷಿ ಪ್ರಜ್ಞೆಯಾಗಿದೆ. ಸಹಿಷ್ಣುತೆಯಿಂದ ದೂರ ಸರಿಯುತ್ತಿರುವ ಇಂದಿನ ದಿನಗಳಲ್ಲಿ ಸಾಹಿತ್ಯದ ಮುಖೇನ ಇತಿಹಾಸವನ್ನು ತಿಳಿದುಕೊಳ್ಳುವ ಆ ಮೂಲಕ ನಮ್ಮ ಹಿರಿಯರು ಹೇಗೆ ಸಹಿಷ್ಣುತೆಯಿಂದ ಬದುಕಿದ್ದರು ಎಂದು ಅರ್ಥ ಮಾಡಿಕೊಳ್ಳಬೇಕಾದ ಕಾರ್ಯ ನಡೆಯಬೇಕಾಗಿದೆ. ಇತಿಹಾಸದ ಸಾಕ್ಷಿ ಪ್ರಜ್ಞೆಯಾಗಿರುವ ಈ ಜ್ಞಾನ ಪರಂಪರೆಯನ್ನು ಮುಂದಿನ ತಲೆಮಾರಿಗೆ ಉಳಿಸಿಕೊಳ್ಳುವ ಕಾರ್ಯವನ್ನು ನಾವು ಮಾಡಬೇಕಾಗಿದೆ. ಕನ್ನಡ ವಿವಿಯು ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿರದೆ ಕನ್ನಡ ಹೇಗೆ ಅನ್ನ ನೀಡುವ ಭಾಷೆಯಾಗಿ ಬೆಳೆಯಬಲ್ಲುದು ಎಂಬ ಬಗ್ಗೆ ಚಿಂತನೆ ನಡೆಸುವ ಕಾರ್ಯ ಮಾಡುತ್ತಿದೆ. ಎಲ್ಲವನ್ನೂ ಆರ್ಥಿಕತೆಯ ಮೇಲೆ ನಿರ್ಧರಿಸುವ ಈ ದಿನಗಳಲ್ಲಿ ಹಸ್ತಪ್ರತಿ ಕ್ಷೇತ್ರಕ್ಕೆ ಹೊಸ ತಲೆಮಾರು ಕಾಲಿಡಬೇಕಾದರೆ ಅವರಿಗೆ ಆರ್ಥಿಕ ಭದ್ರತೆಯೂ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ, ಸಂಘ ಸಂಸ್ಥೆಗಳು ಚಿಂತನೆ ನಡೆಸಬೇಕು. ಹಂಪಿ ವಿವಿಯು ಈ ಕ್ಷೇತ್ರದ ಬಗ್ಗೆ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ವರ್ತೂರು ಶಾಂತಿರಾಜ ಶಾಸ್ತ್ರೀ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರ್ ಅವರು ಶುಭ ಹಾರೈಸಿದರು. ವೇದಿಕೆಯಲ್ಲಿ ಡಿ.ಹೇಮಾವತಿ ಹೆಗ್ಗಡೆ, ಕಾಲೇಜಿನ ಪ್ರಾಚಾರ್ಯ ಡಾ| ಬಿ. ಯಶೋವರ್ಮ, ಧ.ಮಂ.ಸಂ.ಸಂ. ಪ್ರತಿಷ್ಠಾನ ನಿರ್ದೆಶಕ ಡಾ| ಎಸ್. ಡಿ. ಶೆಟ್ಟಿ ಉಪಸ್ಥಿತರಿದ್ದರು. ಇದೇ ವೇಳೆ ಹಸ್ತಪ್ರತಿಗಳ ಹಾಗೂ ಅದಕ್ಕೆ ಸಂಬಂಧಪಟ್ಟ ಪುಸ್ತಕಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಹಂಪಿ ಕನ್ನಡ ವಿವಿ ಹಸ್ತಪ್ರತಿ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ| ಎಫ್.ಟಿ.ಹಳ್ಳಿಕೇರಿ ಸ್ವಾಗತಿಸಿ ಪ್ರಸ್ತಾವಿಸಿದರು. ಡಾ| ರಾಜಶೇಖರ ಹಳೇಮನಿ ವಂದಿಸಿದರು. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ| ಬಿ.ಪಿ.ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.