ಪುತ್ತೂರು : ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರು ಶಿಷ್ಯರ ನಡುವಣ ಸಂಬಂಧ ಅತ್ಯಂತ ಪವಿತ್ರವಾದುದು. ಯಾವ ರೀತಿ ಉತ್ತಮ ಗುರುವನ್ನು ಪಡೆಯಲು ಶಿಷ್ಯನು ಕಾತರಿಸುತ್ತಾನೋ ಅದೇ ರೀತಿ ಉತ್ತಮ ಶಿಷ್ಯ ವರ್ಗವನ್ನು ಪಡೆಯುವ ಆಕಾಂಕ್ಷೆ ಎಲ್ಲಾ ಗುರುಗಳಿರುತ್ತದೆ ಎಂದು ಬೆಳ್ಳಾರೆ ಡಾ| ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ರಾಜಶೇಖರ ಹೆಬ್ಬಾರ್ ಹೇಳಿದರು.
ಅವರು ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ವಿದ್ಯಾರ್ಥಿಗಳು ಯಾವುದೇ ಕೀಳರಿಮೆಯಿಲ್ಲದೆ, ಸದೃಢವಾದ ಚಿಂತನೆಯೊಂದಿಗೆ ನಿರಂತರ ಅಧ್ಯಯನಶೀಲರಾಗಿರಬೇಕು. 21ನೆಯ ಶತಮಾನದಲ್ಲಿರುವ ನಮ್ಮ ಅಧ್ಯಯನ ಕ್ರಮದಲ್ಲಿಯೂ ಬಹಳಷ್ಟು ಬದಲಾವಣೆಯಾಗಿದೆ. ನಾವು ಮಾಹಿತಿ ತಂತ್ರಜ್ಞಾನದಲ್ಲಿ ಆಗಿರುವ ಕ್ರಾಂತಿಕಾರಿ ಬದಲಾವಣೆಗಳನ್ನು ಧನಾತ್ಮಕವಾಗಿ ಬಳಸಬೇಕು. ಒಂದು ಶಿಕ್ಷಣ ಸಂಸ್ಥೆಯ ಶ್ರೇಯೊಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಜ್ಞಾನದಾಹವನ್ನು ತೀರಿಸುವ ಶಿಕ್ಷಕರು ಮಹತ್ತರವಾದ ಪಾತ್ರವನ್ನು ವಹಿಸುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಭಾಗವಹಿಸಿದ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಲಿಯೊ ನೊರೊನ್ಹ ಮಾತನಾಡಿ, ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವವೆಂದರೆ ಅದು ಆಡಳಿತ ಮಂಡಳಿ, ಹೆತ್ತವರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಒಟ್ಟು ಸೇರಿ ವಾರ್ಷಿಕ ಪ್ರಗತಿಯನ್ನು ಪರಾಮರ್ಶೆ ಮಾಡಲು ಇರುವ ಸುವರ್ಣಾವಕಾಶ ಎಂದು ಹೇಳಿದರು.
ಗೌರವ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾಗಿರುವ ಡಾ| ಆಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ವಿದ್ಯೆ, ವಿದ್ಯಾಭ್ಯಾಸ, ವಿದ್ಯಾರ್ಥಿ, ಅಧ್ಯಾಪಕ, ವಿದ್ಯಾಸಂಸ್ಥೆಗಳು ಇತ್ಯಾದಿ ಮಾನವ ಸಮಾಜದ ಸಂಸ್ಕೃತಿ, ಸಮೃದ್ಧಿ, ಪ್ರಗತಿ, ಉನ್ನತಿಗಳನ್ನು ನಿರ್ಧರಿಸುವ ಶಬ್ದಗಳು. ವ್ಯಕ್ತಿಯ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೊಂದೇ ಮಾರ್ಗ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಸಂಚಾಲಕರಾದ ಆಲ್ಫ್ರೆಡ್ ಜೆ. ಪಿಂಟೊ ಮಾತನಾಡಿ, ಶಿಕ್ಷಣವೆಂದರೆ ನಮ್ಮ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ಶಕ್ತಿ ಸಾಮರ್ಥ್ಯವನ್ನು ನೀಡುವ ಒಂದು ನಿರಂತರ ಪ್ರಕ್ರಿಯೆ ಎಂದು ಹೇಳಿದರು.
ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಾ| ಸೂರ್ಯನಾರಾಯಣ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಜಯರಾಜ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.