ಬೆಳ್ತಂಗಡಿ : ದೆಹಲಿಯ ರಾಷ್ಟ್ರಪತಿ ಭವನದ ಅಶೋಕಾ ಹಾಲ್ನಲ್ಲಿ ಎ.8 ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ದೇಶದ ಅತ್ಯುನ್ನತ ಎರಡನೇ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ಸ್ವೀಕರಿಸಿ ಮರಳಿದ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ತಾಲೂಕಿನ, ಕ್ಷೇತ್ರದ ಜನತೆ ಅಭೂತಪೂರ್ವವಾಗಿ ಗುರುವಾರ ಸಂಜೆ ಸ್ವಾಗತಿಸಿದರು.
ಬಳಿಕ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಡಾ|ಹೆಗ್ಗಡೆಯವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ಭಗವಂತ ನನಗೆ ಸ್ಥಾನದ ಜೊತೆಗೆ ಯೋಗವನ್ನೂ ಕಲ್ಪಿಸಿದ್ದಾನೆ. ಇದು ನನ್ನ ಭಾಗ್ಯ. ಕ್ಷೇತ್ರದಲ್ಲಿ ಸಾಮಾಜಿಕ ಸೇವೆಗಳನ್ನು ನಡೆಸಲು ಮುಕ್ತ ಅವಕಾಶವಿರುವುದರಿಂದ ನನಗೆ ಎಲ್ಲಾ ವಿಧದ ಸೇವಾ ಕಾರ್ಯಗಳನ್ನು ನಡೆಸಲು ಅವಕಾಶ ಸಿಕ್ಕಿದೆ ಮಾತ್ರವಲ್ಲ ಅದನ್ನು ಬಳಸಿಕೊಂಡು ಯಶಸ್ವಿಯಾಗಿದ್ದೇನೆ. ಸೇವೆಗೆ ಯಾವುದೇ ವಿಭಾಗ ಇನ್ನುಳಿದಿಲ್ಲ ಎಂಬಷ್ಟರ ಮಟ್ಟಿಗೆ. ಇದಕ್ಕೆ ನನ್ನ ಕುಟುಂಬ, ಇಲ್ಲಿನ ಸಿಬ್ಬಂದಿ ವರ್ಗ, ಕ್ಷೇತ್ರದ ಜನತೆ ಮತ್ತು ತಾಲೂಕಿನ ನಾಗರಿಕರು ಕಾರಣ. ಇನ್ನು ಮುಂದೆಯೂ ವಿವಿಧ ಕಾರ್ಯಕ್ಷೇತ್ರದ ವ್ಯಾಪ್ತಿ ವಿಸ್ತರಣೆ ಆಗಲಿದೆ.
ಯಾವುದನ್ನು ನಾವು ನಿರೀಕ್ಷೆ ಮಾಡುವುದಿಲ್ಲವೋ ಅದು ನಮಗೆ ಅನಾಸಾಯವಾಗಿ ಒದಗುತ್ತದೆ. ಇದಕ್ಕೆ ಹಲವಾರು ಉದಾಹರಣೆಗಳನ್ನು ನೀಡಬಲ್ಲೆ. ಇದು ಈ ಕ್ಷೇತ್ರದ ಮಹಾತ್ಮೆ. ನಾನು ಇದುವರೆಗೆ ಯಾವುದೇ ಉಪಾಧಿಗಳನ್ನು ಬಯಸಿದವನಲ್ಲ ಹೀಗಾಗಿ ಭಾರತರತ್ನವನ್ನು ನಾನು ಅಪೇಕ್ಷಿಸುವುದಿಲ್ಲ, ಬಯಸುವುದೂ ಇಲ್ಲ ಎಂದರು.ಪದ್ಮವಿಭೂಷಣ ದೊರಕಿರುವುದು ಅನಂದದ ಅನುಭೂತಿಯನ್ನು ತಂದಿದೆ. ಸುದೀರ್ಘ, ನಿರಂತರ ಕಾರ್ಯ ಸಫಲತೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಇದು ಶ್ರೀ ಮಂಜುನಾಥಸ್ವಾಮಿಯ ದೊಡ್ಡ ಅನುಗ್ರಹ ಎಂದು ಭಾವಿಸಿದ್ದೇನೆ ಮತ್ತು ಇದು ಕ್ಷೇತ್ರಕ್ಕೆ ಹೆಮ್ಮೆಯ ವಿಷಯ. ಸಭೆ ಸಮಾರಂಭಗಳಲ್ಲಿ ಬಂದ ಕಾಣಿಕೆಗಳನ್ನು ಶ್ರೀ ಸ್ವಾಮಿಗೆ ಅರ್ಪಿತ ಎಂಬ ಭಾವನೆಯಿಂದ ಸ್ವೀಕರಿಸುತ್ತಿದ್ದೇನೆ ಎಂದು ಹೆಗ್ಗಡೆ ವಿವರಿಸಿದರು.
ಹೇಮಾವತಿ ವಿ.ಹೆಗ್ಗಡೆ ಅವರು ಮಾತನಾಡುತ್ತಾ ದ್ವೇಷಕ್ಕೆ ಹಲವಾರು ಕಾರಣಗಳಿರುತ್ತವೆ. ಆದರೆ ಪ್ರೀತಿಗೆ ಹಾಗಿಲ್ಲ. ದೀನದಲಿತರ ಸೇವೆ ಮಾಡಲು ಉತ್ತಮ ಅವಕಾಶ ಕ್ಷೇತ್ರದಲ್ಲಿದೆ. ಅದಕ್ಕೆ ನಾವು ಮಾಧ್ಯಮವಾಗಿದ್ದೇವೆ. ಊರಿನವರು, ಸಿಬ್ಬಂದಿಗಳು, ಅಭಿಮಾನಿಗಳೇ ನಮ್ಮ ಆಸ್ತಿ ಮತ್ತು ಶಕ್ತಿ. ಗ್ರಾಮಾಭಿವೃದ್ಧಿಯೋಜನೆ ನನ್ನ ಬಾಳಿನಲ್ಲೂ ಪರಿವರ್ತನೆ ತಂದಿದೆ. ಏನೇ ಕಷ್ಟ ಬಂದರೂ, ಸುಖ ಸಿಕ್ಕರೂ ಇಲ್ಲಿ ಹೇಳಿಕೊಳ್ಳಲು ಶ್ರೀ ಮಂಜುನಾಥಸ್ವಾಮಿ ಇದ್ದಾನೆ. ಇದು ನಮ್ಮ ಭಾಗ್ಯ. ಇಲ್ಲಿನ ಹಿರಿಯರು ಮಾಡಿದ ಸೇವೆ, ತ್ಯಾಗದ ಫಲದಿಂದಲೇ ಕ್ಷೇತ್ರ ಉನ್ನತಿಗೆ ಬರಲು ಕಾರಣವಾಗಿದೆ. ನೆರಳಾಗಿ, ಬಂಧುಗಳಾಗಿ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿರುವ ಸಿಬ್ಬಂದಿ, ಜನತೆ ಜತೆಗಿದ್ದಾರೆ ಎಂಬುದು ಸಂತೋಷ ತಂದಿದೆ ಎಂದರು.
ವೇದಿಕೆಯಲ್ಲಿ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಯು.ವಿಜಯರಾಘವ ಪಡ್ನೆಟ್ನಾಯ, ಸುರೇಂದ್ರಕುಮಾರ್, ಹರ್ಷೇಂದ್ರಕುಮಾರ್, ರಾಜೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್, ಪ್ರೊ.ಎಸ್.ಪ್ರಭಾಕರ್, ಶ್ರೇಯಸ್ಸ್ಕುಮಾರ್ ಇದ್ದರು. ವೇದಘೋಷದಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಾಸಕ ಕೆ.ವಸಂತ ಬಂಗೇರ ಸ್ವಾಗತಿಸಿದರು. ಶ್ರೀನಿವಾಸ ರಾವ್ ವಂದಿಸಿದರು. ಡಾ.ಪ್ರದೀಪ್ ನಾವುರ ಕಾರ್ಯಕ್ರಮ ನಿರ್ವಹಿಸಿದರು.
ಸಂಜೆ 4-45ಕ್ಕೆ ಕ್ಷೇತ್ರಕ್ಕೆ ಆಗಮಿಸಿದ ಡಾ|ಹೆಗ್ಗಡೆಯವರನ್ನು ಕ್ಷೇತ್ರದ್ವಾರದಲ್ಲಿ ಶಾಸಕ ಕೆ.ವಸಂತ ಬಂಗೇರ ಸ್ವಾಗತಿಸಿದರು. ಬಳಿಕ ಸನಿಹದಲ್ಲೇ ನಿರ್ಮಿಸಿದ ವೇದಿಕೆಯಲ್ಲಿ ಡಾ|ಹೆಗ್ಗಡೆಯವರು ಕಥಕಳಿ, ಬರ್ಕೆ ಹುಲಿ ಕುಣಿತ, ದೇವರಕುಣಿತ, ಮೈಸೂರುಇಂಗ್ಲೀಷ್ ಬ್ಯಾಂಡ್, ವಿವಿಧ ವೇಷಧಾರಿಗಳ ಗುಂಪು ಮೊದಲಾದುವುದನ್ನು ವೀಕ್ಷಿಸಿದರು.ಅಲ್ಲಿಂದ ಹೆಗ್ಗಡೆದಂಪತಿಯನ್ನು ಪುಷ್ಪಕ ವಿಮಾನದಂತಹ ರಚನೆಯಲ್ಲಿ ಕುಳ್ಳಿರಿಸಿ ಭವ್ಯವಾದ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು.
ಪದ್ಮ(ಕಮಲ)ದ ಆಕಾರದ ಬೃಹತ್ ವೇದಿಕೆಯನ್ನು ನಿರ್ಮಿಸಿ ಅದರಲ್ಲಿ ಹೆಗ್ಗಡೆಯವರನ್ನು ಕುಳ್ಳಿರಿಸಲಾಯಿತು. ವಿನೂತನ ಶೈಲಿಯ ಈ ವೇದಿಕೆಯ ಸುತ್ತ ಕೊಳವೊಂದನ್ನು ನಿರ್ಮಿಸಿ ಅದರಲ್ಲಿ ಬಾತುಕೋಳಿಗಳನ್ನು ಬಿಡಲಾಗಿತ್ತು. ಹಿಂಬದಿ ನೀರಿನಝರಿಯನ್ನು ನಿರ್ಮಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.