ಬಂಟ್ವಾಳ : ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿರುವ ಬಂಟ್ವಾಳ ಪುರಸಭೆಯ ಕಸ ವಿಲೇವಾರಿ ಸಮಸ್ಯೆ ಹಾಗೂ ಕಂಚಿನಡ್ಕ ಪದವಿನಲ್ಲಿ ಸ್ಥಗಿತಗೊಂಡಿರುವ ತ್ಯಾಜ್ಯ ಸಂಸ್ಕರಣ ಘಟಕದ ಮುಂದುವರಿದ ಕಾಮಗಾರಿಯ ಅಲ್ಪಾವಧಿ ಟೆಂಡರಿಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಆಡಳಿತಾತ್ಮಕ ಮಂಜೂರಾತಿ ನೀಡುವ ಮೂಲಕ ವಿವಾದಕ್ಕೆ ತೆರೆಎಳೆದಿದ್ದಾರೆ.
ಕಂಚಿನಡ್ಕ ಪದವಿನಲ್ಲಿ ಬಂಟ್ವಾಳ ಪುರಸಭೆಯಿಂದ ನಿರ್ಮಾಣ ಹಂತದಲ್ಲಿರುವ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣ ಘಟಕಕ್ಕಿದ್ದ ಕಾನೂನಾತ್ಮಕ ತೊಡಕುಗಳು ನಿವಾರಣೆಯಾದ ಬಳಿಕವೂ ಕಾಮಗಾರಿಗೆ ತಡೆಉಂಟಾಗಿತು. ಕಳೆದ ಸಾಮಾನ್ಯ ಸಭೆಯಲ್ಲಿ ಘಟಕದ ಮುಂದುವರಿದ ಕಾಮಗಾರಿಗೆ ಅಲ್ಪಾವಧಿ ಟೆಂಡರ್ ಕರೆದು ಆಡಳಿತಾತ್ಮಕ ಮಂಜುರಾತಿಗಾಗಿ ಜಿಲ್ಲಾಧಿಕಾರಿಯವರನ್ನು ಕೋರಲಾಗಿತ್ತು. ಆದರೆ ಜಿಲ್ಲಾಧಿಕಾರಿಯವರು ಕುಂಟು ನೆಪವೊಡ್ಡಿ ಈ ಕಡತವನ್ನೇ ವಾಪಾಸ್ ಕಳುಹಿಸಿದ್ದರು. ಇದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿ ಇದಕ್ಕೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರೇ ತೊಡಕಾಗಿದ್ದಾರೆ ಎನ್ನುವ ಆರೋಪವನ್ನು ಸರ್ವಸದಸ್ಯರು ಮಾಡಿದ್ದು, ಸಭೆ ಮೊಟಕುಗೊಳಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಧರಣಿ ನಡೆಸಲು ನಿರ್ಧರಿಸಿದ್ದರು.
ಇದರ ಹಿಂದೆ ಗಣಿ,ಭೂಮಾಪಿಯಾಗಳ ಒತ್ತಡ ಇದೆ ಎಂದು ಸದಸ್ಯರು ನೇರ ಆರೋಪವನ್ನು ಹೊರೆಸಿದ್ದರು. ಈ ಹಿಂದಿನ ನಾಲ್ಕೈದು ಸಭೆಗಳಲ್ಲೂ ಕಸ ವಿಲೇವಾರಿ ಸಮಸ್ಯೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು ಜಿಲ್ಲಾಧಿಕಾರಿಯ ವಿರುದ್ದ ಸದಸ್ಯರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿಕೊಂಡೇ ಬಂದಿದ್ದರೂ ಜಿಲ್ಲಾಧಿಕಾರಿ ಈ ಬಗ್ಗೆ ತಲೆಕೆಡಿಸಿ ಕೊಂಡಿರಲಿಲ್ಲ.
ಈ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈಯವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಸಹಿತ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪುರಸಭಾ ಸದಸ್ಯರ ಹಠಾತ್ ಸಭೆಯು ಕಳೆದ ವಾರ ಬಂಟ್ವಾಳದ ಪ್ರವಾಸಿ ಮಂದಿರದಲ್ಲಿ ನಡೆದಿತ್ತು ಅದರಂತೆ ಜಿಲ್ಲಾಧಿಕಾರಿಯವರು ಕೊನೆಗೂ ಕಂಚಿನಡ್ಕ ಪದವಿನ ತ್ಯಾಜ್ಯ ಸಂಸ್ಕರಣಾ ಘಟಕದ ಮುಂದುವರಿದ ಕಾಮಗಾರಿಗೆ ಅಸ್ತು ಎಂದಿದ್ದು ಪುರಸಭೆ ಈ ವಿಚಾರದಲ್ಲಿ ಸದ್ಯ ನಿಟ್ಟಿಸಿರು ಬಿಟ್ಟಿದೆ. ಶೀಘ್ರವೇ ಪುರಸಭೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.
ಬಿಸಿ ಮುಟ್ಟಿಸಿದ್ದರು : ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಪುರಸಭಾ ಸದಸ್ಯರು ಜಿಲ್ಲಾಧಿಕಾರಿಯವರ ವಿರುದ್ದ ಈ ವಿಚಾರದಲ್ಲಿ ಹರಿಹಾಯ್ದಿದ್ದರು. ಸದಸ್ಯರ ಆರೋಪಗಳ ಸುರಿಮಳೆಯಿಂದ ಕೆಂಡಾಮಂಡಲರಾದ ಸಚಿವ ರಮಾನಾಥ ರೈವರು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ನಗರ ಕೋಶದ ಯೋಜನಾ ನಿರ್ದೇಶಕ ತಾಕತ್ತ್ ರಾವ್ ಹಾಗೂ ಸಹಾಯಕ ಎಂಜಿನಿಯರ್ ಶ್ರೀಧರ್ ಅವರನ್ನು ತೀವ್ರ ತರಾಟೆಗೆ ತೆಗದುಕೊಂಡರು. ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ಎತ್ತಂಗಡಿಗೊಳಿಸುವ ಎಚ್ಚರಿಕೆಯನ್ನು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.