ರಾಹುಲ್ ಗಾಂಧಿ ಏನೂ ಪ್ರಧಾನ ಮಂತ್ರಿ ಅಲ್ಲ ಅಥವಾ ರಾಷ್ಟ್ರದ ಯಾವುದೇ ಪ್ರಭಾವಿ ಸ್ಥಾನದಲ್ಲಿ ಅವರಿಲ್ಲ. ಒಂದು ವಿರೋಧ ಪಕ್ಷದ (ಅದು ಕೂಡ ಅಧಿಕೃತ ವಿರೋಧ ಪಕ್ಷ ಅಲ್ಲ) ಒಬ್ಬ ಉಪಾಧ್ಯಕ್ಷ ಅಷ್ಟೇ. ಅವರು ನಿರಂತರ ಚುನಾವಣೆಯ ಸೋಲಿನ ನೋವಿನಿಂದ ಹೊರಗೆ ಬರಲು ಒಂದಿಷ್ಟು ದಿನ ಯಾರ ಕಣ್ಣಿಗೂ ಬೀಳದೆ ದೂರ ಇದ್ದರೆ ಅದರಲ್ಲಿ ದೇಶಕ್ಕೆನೂ ನಷ್ಟವಿಲ್ಲ. ಹಾಗಿದ್ದರೂ ಸಹ ರಾಹುಲ್ ಗಾಂಧಿಯ ಹೆಸರು ತೆಗೆದುಕೊಂಡು ರಾಷ್ಟ್ರೀಯ ಚಾನೆಲ್ಗಳು ಆಗಾಗ ಬಡಬಡಾಯಿಸುತ್ತಿರುತ್ತವೆ. ರಾಹುಲ್ ಗಾಂಧಿ ಇಷ್ಟು ದಿನ ಕಣ್ಮರೆ ಆಗಿದ್ದರೂ ಸಹ ಕಾಂಗ್ರೆಸ್ ಪಕ್ಷದ ಒಗ್ಗಟ್ಟನ್ನು ನೋಡಿ, ಒಬ್ಬನೇ ಒಬ್ಬ ನಾಯಕ ಕೂಡ ಅಪಸ್ವರ ಎತ್ತಿಲ್ಲ. ಅಷ್ಟರಮಟ್ಟಿಗೆ ಸೋನಿಯಾ ಗಾಂಧಿಯವರ ತಾಕತ್ತನ್ನು ಮೆಚ್ಚಲೇಬೇಕು. ಗಾಂಧಿ ಕುಟುಂಬದ ಪವರ್ರೇ ಅಂತಹುದು.
ಏಳಿ ಎಂದರೆ ಏಳಲು, ಕುಳಿತು ಕೊಳ್ಳಿ ಎನ್ನಲು ಕುಳಿತು ಕೊಳ್ಳುವಂತಹ ನಾಯಕರ ದಂಡೇ ಸೋನಿಯಾ ಸುತ್ತಾ ಇರುತ್ತದೆ. ಮೊನ್ನೆ ಹಂಸರಾಜ ಭಾರದ್ವಾಜ್ ಅವರು ಹೇಳಿದ್ದು ಅದನ್ನೇ. ಅದೇನು ಹೊಸ ವಿಷಯ ಅಲ್ಲವೇ ಅಲ್ಲ. ಆದರೆ ಮಾಧ್ಯಮಗಳಿಗೆ ರಾಹುಲ್ ಕಣ್ಮರೆ ಆಗುತ್ತಿರುವುದು ಹೊಸ ಸಂಗತಿಯಾಗಿ ಯಾಕೆ ಕಾಣುತ್ತದೊ? ಅಷ್ಟಕ್ಕೂ ರಾಹುಲ್ ಗಾಂಧಿ ಭಾರತದ ಗೃಹ ಸಚಿವರೊ, ರಕ್ಷಣಾ ಸಚಿವರೊ ಆಗಿದ್ದಲ್ಲಿ ನಾವು ಚಿಂತಿಸಬೇಕಿತ್ತು. ಆದರೆ ರಾಹುಲ್ ಗಾಂಧಿಯವರಿಗೆ ಸದ್ಯಕ್ಕೆ ಅಂತಹ ಯಾವುದೇ ಜವಾಬ್ದಾರಿಗಳಿಲ್ಲ. ಇನ್ನೂ ಐಟಿ,ಬಿಟಿ ಕಂಪೆನಿಯವರೊ ಅಥವಾ ಬ್ಯಾಂಕ್ ಉದ್ಯೋಗಿಗಳಿಗೆ ಇದ್ದಂತೆ ವರ್ಷಕ್ಕೊಮ್ಮೆ ಮೋಜಿನ ಪ್ರವಾಸಕ್ಕೆ ರಾಜಕಾರಣಿಗಳು (ತಮ್ಮದೇ ಹಣದಲ್ಲಿ) ಹೋದರೆ ಒಂದೊಮ್ಮೆ ಅವರು ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದ ಪಕ್ಷದಲ್ಲಿ ಹೋದರೆ ತಪ್ಪೇನು? ರಾಹುಲ್ ಗಾಂಧಿಯವರೇನು ನಮ್ಮ ದೇವೇಗೌಡರಂತೆ ಇಡೀ ದಿನ ರಾಜಕೀಯವನ್ನೇ ಚಿಂತಿಸುತ್ತಾರೆ ಎಂದು ಭಾರತದ ಯಾವ ಪ್ರಜೆಗೂ ಅನಿಸುವುದಿಲ್ಲ.
ಇನ್ನೂ ಸದ್ಯಕ್ಕೆ ಯಾವುದೇ ರಾಜ್ಯದಲ್ಲಿ ಚುನಾವಣೆಗಳು ಇಲ್ಲ. ಕರ್ನಾಟಕ ಬಿಟ್ಟರೆ ಇತರ ಯಾವುದೇ ದೊಡ್ಡ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲ. ಕಾಂಗ್ರೆಸ್ ಅನ್ನು ರಾಷ್ಟ್ರದಲ್ಲಿ ಮತ್ತೇ ಅಧಿಕಾರಕ್ಕೆ ತರಬೇಕಾದರೆ ಇನ್ನೆಷ್ಟು ವರ್ಷಗಳು ಬೇಕಾಗುತ್ತದೊ ರಾಹುಲ್ ಗಾಂಧಿಯವರಿಗೆ, ಹಾಗಿದ್ದ ಮೇಲೆ ಒಂದಿಷ್ಟು ಫೆಶ್ ಆಗಲು ಅವರು ರಜೆ ತೆಗೆದುಕೊಂಡರೆ ತಪ್ಪೇನು? ಅವರಿಗೆ ಬರಬೇಕೆಂದು ಅನಿಸಿದಾಗ ಬಂದೇ ಬರುತ್ತಾರೆ ಎಂದು ಸ್ವತ: ಹೆತ್ತ ತಾಯಿಯೇ ಹೇಳಿರುವಾಗ ನಾವು ಸುಮ್ಮನೆ ರಾಹುಲ್ ಕಾಣಿಸ್ತಿಲ್ಲ ಎಂದು ಯಾಕೆ ಚಿಂತಿಸಬೇಕು. ರಾಹುಲ್ ಗಾಂಧಿ ಆ ಊರಿನಲ್ಲಿ ಇದ್ದಾರಂತೆ, ವಿದೇಶದಲ್ಲಿ ಇದ್ದಾರಂತೆ ಎಂದು ಊಹೆಯ ಮೇಲೆ ಮಾತನಾಡಿದರೆ ಅದರಿಂದ ಚಾನೆಲ್ಗಳಿಗೆ ಕೆಲವು ದಿನ ಟಿಆರ್ಪಿ ಸಿಗಬಹುದು. ಆದರೆ ಬರುಬರುತ್ತಾ ಜನರಿಗೆ ಅದು ಕೂಡ ಬೋರಾಗುತ್ತದೆ. ಅದರ ಬದಲು ಕಾಂಗ್ರೆಸ್ನವರು ತಮ್ಮ ನಾಯಕ ಎಲ್ಲಿದ್ದಾನೆ ಎಂದು ಹೇಳಿ ಬಿಡುವುದು ಒಳಿತು ಅಥವಾ ಬಿಜೆಪಿಯವರೇ ತಮ್ಮ ಕೈಯಲ್ಲಿ ಇಷ್ಟು ಪ್ರಬಲ ಗುಪ್ತಚರ ಇಲಾಖೆ ಇರುವಾಗ ಪತ್ತೆ ಹಚ್ಚುವುದು ಒಳಿತು. ಇದ್ಯಾವುದು ಆಗದಿದ್ದರೆ ಮಾಧ್ಯಮಗಳು ಕನಿಷ್ಟ ಬರಲಿರುವ ಗ್ರಾಮ ಪಂಚಾಯತ್ ಚುನಾವಣೆಗಳ ಮೇಲೆ ತಮ್ಮ ದೃಷ್ಟಿ ಇಟ್ಟು ಜನರಿಗೆ ಜಾಗೃತಿಗೊಳಿಸುವುದು ಒಳಿತು. ಈ ನಡುವೆ ಸಿದ್ಧರಾಮಯ್ಯ ಯಥಾಪ್ರಕಾರ ಸಚಿವ ಸಂಪುಟ ವಿಸ್ತರಣೆ ಆಗಬೇಕೊ ಬೇಡವೊ ಎಂದು ಕಣಿ ಕೇಳಲು ದೆಹಲಿ ವಿಮಾನ ಹತ್ತಿದ್ದಾರೆ. ಹಿಂದೆಲ್ಲಾ ಸಿದ್ಧರಾಮಯ್ಯನವರು ಜೆಡಿಎಸ್ನಲ್ಲಿದ್ದಾಗ ಯಾವುದೇ ತೀರ್ಮಾನಗಳು ದೇವೇಗೌಡರ ಮನೆಯಲ್ಲಿಯಲ್ಲಿಯೇ ನಡೆಯುತ್ತಿತ್ತು. ಹಾಗೇ ಬೇಡಾ ಹೀಗೆ ಎಂದು ಹೇಳುವ ಅವಕಾಶ ಇತ್ತು. ಆದರೆ ಕಾಂಗ್ರೆಸ್ ಸಂಸ್ಕೃತಿನೇ ಬೇರೆ.
ಸಿದ್ಧರಾಮಯ್ಯನವರೇನೂ ಗಾಂಧಿ ಕುಟುಂಬದಿಂದ ಬಂದವರಲ್ಲವಲ್ಲ, ಸರಿಯಾಗಿ ನೋಡಿದರೆ ಅವರಿಗೂ ನೆಹರೂ-ಗಾಂಧಿ ಕುಟುಂಬಕ್ಕೂ ಅಷ್ಟಕಷ್ಟೇ. ಅತ್ತ ಪರಮೆಶ್ವರ ಸೋಲದೆ, ಇತ್ತ ಸಿದ್ಧರಾಮಯ್ಯ ಬಹುಮತದೊಂದಿಗೆ ಗೆಲ್ಲದೆ ಇದ್ದಿದ್ದರೆ ಸಿದ್ದು ಇನೈದು ವರ್ಷ ಕಳೆದರೂ ಸಿಎಂ ಆಗುತ್ತಿರಲಿಲ್ಲ. ಆದರೆ ರಾಜಕೀಯದಲ್ಲಿ ಎಲ್ಲವೂ ಆಗುತ್ತದೆ. ಆದರೆ ಕಾಂಗ್ರೆಸ್ಸಿನ ಸಂಸ್ಕೃತಿ ಇಷ್ಟು ಒರಟಾಗಿದೆ ಎಂದು ಸಿದ್ಧರಾಮಯ್ಯನವರಿಗೆ ಗೊತ್ತಾದಾಗ ಮಾತ್ರ ಕಾಲ ಮಿಂಚಿತ್ತು. ಇರುವ ೩೨ ಸಚಿವ ಸ್ಥಾನಗಳಲ್ಲಿ ಯಾರಿಗೆ ಯಾವುದು ಕೊಡಬೇಕು, ಯಾರಿಗೆ ಏನೂ ಲಾಭವಿಲ್ಲದ ಖಾತೆ ಕೊಡಬೇಕು, ಯಾರಿಗೆ ನಾಮಕಾವಾಸ್ತೆ ಸಚಿವರನ್ನಾಗಿಸಬೇಕು, ಯಾರಿಗೆ ಸಚಿವ ಸಂಪುಟದಿಂದ ಹೊರಗೆ ಇಡಬೇಕು ಇಷ್ಟೆಲ್ಲಾ ಆಟ ಆಡಿ ನಂತರ ತಾನು ಹೇಗೆ ನೆಮ್ಮದಿಯಿಂದ ಇರಬೇಕು ಎಂದು ಗೊತ್ತಾಗುವಷ್ಟರಲ್ಲಿ ಸಿದ್ದು ಪಕ್ಕದಲ್ಲಿ ದಲಿತ ಸಿಎಂ ಬಾಂಬ್ ಬಿದ್ದಾಗಿತ್ತು.
ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣ ಎಲ್ಲಿಯಾದರೂ ನಡೆಯದೇ ಹೋಗಿದಿದ್ದರೆ ಇಷ್ಟು ಹೊತ್ತಿಗಾಗಲೇ ಸಿದ್ದು ಸ್ಥಾನ ಪಲ್ಲಟವಾಗುತ್ತಿತ್ತೊ ಏನೋ? ಆದರೆ ಸದ್ಯಕ್ಕೆ ಆ ಪ್ರಕರಣ ಸಿಬಿಐ ಅಂಗಳದಲ್ಲಿ ಇರುವುದರಿಂದ ಮುಳ್ಳಿನ ಖುರ್ಚಿ ಸಿಎಂ ಸ್ಥಾನ ಯಾರಿಗೂ ಬೇಡಾ. ಅದರ ನಡುವೆ ದೆಹಲಿ ದಂಡಯಾತ್ರೆಯನ್ನು ಸಿದ್ದು ಯಥಾ ಪ್ರಕಾರ ನಡೆಸಿಕೊಂಡೇ ಬರುತ್ತಿದ್ದಾರೆ. ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯ ತನಕ ಬೇಡಾ ಎಂದು ಹೈಕಮಾಂಡ್ ಹೇಳಿಯಾಗಿದೆ. ಇನ್ನೂ ಸಚಿವ ಸಂಪುಟ ಪುನಾರಚನೆ ಪ್ರಶ್ನೆ ಬಂದಾಗ ಮುಂದಿನ ಸುತ್ತಿನ ಬಂಡಾಯ ಪ್ರಾರಂಭವಾಗುತ್ತದೆ. ಅಲ್ಲಿ ತನಕ ಸಿದ್ದು ಕೂಡ ಸೇಫ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.