ಉಡುಪಿ: ಹೃದಯಾಘಾತಕ್ಕೀಡಾದವರಿಗೆ ಅತ್ಯಂತ ತುರ್ತು ಚಿಕಿತ್ಸೆ ದೊರೆಯುವಂತಾಗಲು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಫಿಲಿಪ್ಸ್ ಹೆಲ್ತ್ಕೇರ್ ಜತೆಗೂಡಿ ‘ಹಬ್ ಆ್ಯಂಡ್ ನ್ಪೋಕ್’ ಯೋಜನೆ ಹಾಕಿಕೊಂಡಿದೆ. ಇದರಂತೆ ಉಡುಪಿ ಮತ್ತು ಸುತ್ತಲಿನ 5 ಚಿಕಿತ್ಸಾಲಯಗಳಲ್ಲಿ ವೈರ್ಲೆಸ್ ಇಸಿಜಿ ಸೌಲಭ್ಯ ಅಳವಡಿಸಿಕೊಂಡಿದೆ.
ಇಸಿಜಿ ಸೌಲಭ್ಯವನ್ನು ಸುಲಭವಾಗಿ ಒದಗಿಸಿಕೊಡುವ ಯೋಜನೆ ಇದಾಗಿದ್ದು, ಇದರಿಂದ ಹೃದಯಾಘಾತಕ್ಕೆ ಕ್ಷಿಪ್ರ ಚಿಕಿತ್ಸೆ ದೊರೆಯಲು ಸಾಧ್ಯವಾಗಲಿದೆ ಎಂದು ಕೆಎಂಸಿ ಹೃದ್ರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ| ರಂಜನ್ ಶೆಟ್ಟಿ ಮತ್ತು ಫಿಲಿಪ್ಸ್ ಇನ್ನೋವೇಷನ್ ಕ್ಯಾಂಪಸ್ನ ಸಿಇಒ ಶ್ರೀನಿವಾಸ್ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹಬ್, ನ್ಪೋಕ್ಗಳು : ಈ ಚಿಕಿತ್ಸಾ ವ್ಯವಸ್ಥೆ ಹಬ್ ಮತ್ತು ನ್ಪೋಕ್ಗಳ ಮಾದರಿಯಡಿ ಕಾರ್ಯನಿರ್ವಹಿಸುತ್ತವೆ. ಕೆಎಂಸಿಯು 5 ಚಿಕಿತ್ಸಾಲಯಗಳನ್ನು ಗುರುತಿಸಿದೆ. ಇವುಗಳನ್ನು ನ್ಪೋಕ್ಗಳೆಂದು ಕರೆಯಲಾಗುತ್ತದೆ. ಸದ್ಯ ಮಲ್ಪೆ ಅರ್ಬನ್ ಹೆಲ್ತ್ ಸೆಂಟರ್, ಕಾರ್ಕಳದ ಡಾ| ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಹಿರೇಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರ, ಹೆಬ್ರಿಯ ಸಮುದಾಯ ಆರೋಗ್ಯ ಕೇಂದ್ರ ಮತ್ತು ಕುಕ್ಕಿಕಟ್ಟೆಯ ಆಯುರ್ವೇದಿಕ್ ಚಿಕಿತ್ಸಾಲಯಗಳಲ್ಲಿ (ನ್ಪೋಕ್ಗಳು) ‘ಫಿಲಿಪ್ಸ್ ಎಫೀಷಿಯ-100 ಸಿಸ್ಟಂ’ಗಳನ್ನು ಅಳವಡಿಸಲಾಗುವುದು. ಇದು ಇಸಿಜಿ ಯಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಈ ಪ್ರದೇಶದಲ್ಲಿ ಯಾರಿಗಾದರೂ ಎದೆ ನೋವು ಉಂಟಾದರೆ ಅವರು ಕೂಡಲೇ ಈ ಚಿಕಿತ್ಸಾಲಯಗಳಿಗೆ (ನ್ಪೋಕ್ಗಳು) ತೆರಳಿ ಇಸಿಜಿ ಮಾಡಿಸಿಕೊಳ್ಳಬಹುದು.
ಇಸಿಜಿ ವರದಿ ಕೂಡಲೇ ಕೆಎಂಸಿಯಲ್ಲಿರುವ ನಿರ್ವಹಣಾ ಕೇಂದ್ರ (ಹಬ್) ಮತ್ತು ಸಂಬಂಧಿಸಿದ ತಜ್ಞ ವೈದ್ಯರ ಮೊಬೈಲ್ಗೆ ರವಾನೆಯಾಗುತ್ತದೆ. ಇಸಿಜಿ ವರದಿ ಗಮನಿಸುವ ಕೆಎಂಸಿ ತಜ್ಞರು ಯಾವ ರೀತಿಯ ಚಿಕಿತ್ಸೆ ಬೇಕು ಎಂಬುದನ್ನು ಕೂಡಲೇ ತಿಳಿಸುತ್ತಾರೆ. ಅಲ್ಲದೆ ಈ ಚಿಕಿತ್ಸೆಗಾಗಿ ಕೆಎಂಸಿಯ ತುರ್ತು ನಿಗಾ ವಿಭಾಗದಲ್ಲಿ ಯಾವ ರೀತಿಯ ಸಿದ್ಧತೆಗಳು ಅಗತ್ಯ ಎಂಬುದು ಕೂಡ ನಿರ್ಧಾರವಾಗುತ್ತದೆ. ರೋಗಿಯನ್ನು ಕೂಡಲೇ ಕೆಎಂಸಿಗೆ (ಅಗತ್ಯವೆನಿಸಿದರೆ) ಕರೆದೊಯ್ದರೆ ಅಲ್ಲಿ ಯಾವುದೇ ಸಮಯ ವ್ಯರ್ಥವಾಗದೆ ಕ್ಷಿಪ್ರವಾಗಿ ಚಿಕಿತ್ಸೆ ದೊರೆಯುತ್ತದೆ. ಇಂತಹ ಇಸಿಜಿ ಯಂತ್ರಗಳ ಮೂಲಕ ತಪಾಸಣೆ ಮಾಡಲು ಚಿಕಿತ್ಸಾಲಯಗಳಲ್ಲಿ ವೈದ್ಯರೇ ಇರಬೇಕೆಂದೇನಿಲ್ಲ. ಅಲ್ಲಿನ ತಂತ್ರಜ್ಞರು ಅಥವಾ ದಾದಿಯರು ಕೂಡ ಸುಲಭವಾಗಿ ಇಸಿಜಿ ಮಾಡಬಹುದು ಎಂದು ಅವರು ವಿವರಿಸಿದರು.
ಮುಂದೆ ವಿಸ್ತರಣೆ : ಪ್ರಸ್ತುತ ಇದನ್ನು ಪ್ರಾಯೋಗಿಕವಾಗಿ ಉಡುಪಿ ಜಿಲ್ಲೆಯ 5 ಕಡೆಗಳಲ್ಲಿ ಮಾತ್ರ ಅಳವಡಿಸಿ ಮುಂದೆ ರಸ್ತೆ ಸಂಪರ್ಕ ತೊಂದರೆ ಇರುವ ತೀರಾ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಟ್ರಾಫಿಕ್ ಸಮಸ್ಯೆ ಹೆಚ್ಚಿರುವ ನಗರಗಳಲ್ಲಿ ಇದನ್ನು ಅಳವಡಿಸುವ ಉದ್ದೇಶವಿದೆ. ವೈದ್ಯರಿಂದ ವೈದ್ಯರು ಅಥವಾ ಒಂದು ಕ್ಲಿನಿಕ್ನಿಂದ ಇನ್ನೊಂದು ಕ್ಲಿನಿಕ್ಗೆ ತಪಾಸಣೆಗೆ ತೆರಳಿ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಲು ಈ ವ್ಯವಸ್ಥೆ ನೆರವಾಗಲಿದೆ. ಅಲ್ಲದೆ ಇಸಿಜಿ ವ್ಯವಸ್ಥೆ ಇಲ್ಲದ ಪ್ರದೇಶಗಳಲ್ಲಿ ಇಂತಹ ಸಿಸ್ಟಂ ಅಳವಡಿಸುವುದರಿಂದ ಇಸಿಜಿ ಮಾಡಿಕೊಳ್ಳುವವರಿಗೆ ಅನುಕೂಲವಾಗುತ್ತದೆ. ಜತೆಗೆ ಅನವಶ್ಯಕವಾಗಿ ಕೆಎಂಸಿಗೆ ಬಂದು ಇಸಿಜಿ ಮಾಡಿಕೊಳ್ಳುವುದು ಕೂಡ ತಪ್ಪುತ್ತದೆ. ಎದೆನೋವು ಆರಂಭವಾದ (ಹೃದಯಘಾತದ ಎದೆನೋವು ಆಗಿದ್ದರೆ) ಒಂದು ತಾಸಿನ ಒಳಗೆ ಚಿಕಿತ್ಸೆ ದೊರೆಯುವುದು ಅತ್ಯವಶ್ಯ. ಇದನ್ನು ‘ಗೋಲ್ಡನ್ ಹವರ್’ ಎಂದು ಕರೆಯಲಾಗುತ್ತದೆ. ಹಾಗಾಗಿ ಇಸಿಜಿ ತಪಾಸಣೆ ಕೂಡಲೇ ದೊರೆತರೆ ಮುಂದಿನ ಚಿಕಿತ್ಸೆಗೆ ತಗಲುವ ಅವಧಿ ಕಡಿಮೆಯಾಗುತ್ತದೆ ಎಂದು ಡಾ| ರಂಜನ್ ಶೆಟ್ಟಿ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.