ಮಂಗಳೂರು : ಅಕ್ಟೋಬರ್ 30ರ ಶುಕ್ರವಾರ ತುಳು ಸಿನಿಮಾ ರಂಗದಲ್ಲಿ ಒಂದು ಅಸಾಮಾನ್ಯ ದಾಖಲೆಗೆ ಸಾಕ್ಷಿಯಾದ ದಿನ. ಸಮಸ್ತ ತುಳುವರೂ ಸಂಭ್ರಮಿಸಬೇಕಾದ ಹೊತ್ತಿದು. ಜತೆಗೆ ಬೇರೆ ಭಾಷೆಗಳ ಚಿತ್ರೋದ್ಯಮಿಗಳೂ ತುಳುವಿನ ಆಶ್ಚರ್ಯದ ದೃಷ್ಟಿ ಬೀರಿ, ನಮ್ಮನ್ನು ಗೌರವದಿಂದ ಕಾಣುವಂತೆ ಮಾಡುವ ಕ್ಷಣವಿದು. ಇವೆಲ್ಲವುಗಳಿಗೂ ಕಾರಣವೆಂದರೆ – ಜಯಕಿರಣ ಫಿಲಂಸ್ ಲಾಂಚನದಲ್ಲಿ ತಯಾರಾದ ಚಾಲಿಪೋಲಿಲು ತುಳು ಸಿನಿಮಾ ಇಂದು (ಅ.30ಕ್ಕೆ) 365ನೇ ದಿನದ ಪ್ರದರ್ಶನ ಕಾಣುತ್ತಿದೆ. ಅಂದರೆ ಒಂದು ವರ್ಷ ಭರ್ತಿ!
ಶಹಬ್ಬಾಸ್! ಹಲವು ಪ್ರಥಮಗಳು ಮತ್ತು ಕೆಲವು ದಾಖಲೆಗಳನ್ನು ಬರೆದಿರುವ ಚಾಲಿಪೋಲಿಲು ಹೊಸಬರು ಮಾಡಿರುವ ಚಿತ್ರ. ಜಯಕಿರಣ ಫಿಲಂಸ್ನ ಚೊಚ್ಚಲ ಚಿತ್ರ. ವೀರೇಂದ್ರ ಶೆಟ್ಟಿ ಕಾವೂರು ಅವರ ಚೊಚ್ಚಲ ನಿರ್ದೇಶನ ಮತ್ತು ಪತ್ರಕರ್ತ ಪ್ರಕಾಶ್ ಪಾಂಡೇಶ್ವರ ಅವರ ಚೊಚ್ಚಲ ನಿರ್ಮಾಣದ ಸಿನೆಮಾ. ಯಾರೂ ನಿರೀಕ್ಷಿಸದ ಮತ್ತು ಊಹಿಸದಂಥ ಸಾಧನೆ ಮಾಡಿರುವ ಒಂದು ಅತಿಶ್ರೇಷ್ಠ ಚಿತ್ರ ಎಂದು ದಾಖಲಾಗಿರುವ ಚಾಲಿಪೋಲಿಲು ತುಳು ಸಿನಿಮಾ ರಂಗಕ್ಕೆ ಒಂದು ಎತ್ತರದ ಸ್ಥಾನಮಾನ ತಂದುಕೊಡುವಲ್ಲಿ ಸಫಲವಾಗಿದೆ.
5 ಚಿತ್ರಮಂದಿರಗಳಲ್ಲಿ 75 ದಿನ ಮತ್ತು 3 ಥಿಯೇಟರ್ಗಳಲ್ಲಿ 100 ದಿನಗಳ ಪ್ರದರ್ಶನ ಕಂಡಿರುವ ಚಾಲಿಪೋಲಿಲು ಈಗ 1 ವರ್ಷ ಪೂರ್ತಿಗೊಳಿಸಿರುವುದು ಮಹಾ ಸಾಧನೆ. ದೇಶದ ವಿವಿಧ ನಗರಗಳಲ್ಲಿರುವ ಪಿವಿಆರ್ ಸಿನಿಮಾ ಮಂದಿರದಲ್ಲೇ ಇದೇ ಮೊದಲ ಬಾರಿಗೆ ಪ್ರಾದೇಶಿಕ ಸಿನಿಮಾವೊಂದು ಇಷ್ಟು ದಿನಗಳ ಪ್ರದರ್ಶನ ಕಂಡಿದೆ ಎಂದು ಪಿವಿಆರ್ ಮಲ್ಟಿಪ್ಲೆಕ್ಸ್ನ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾದೇಶಿಕ ಭಾಷೆಯ ಚಿತ್ರವೊಂದು ಇಲ್ಲಿ 200 ದಿನಗಳ ಪ್ರದರ್ಶನವನ್ನೇ ಕಂಡಿಲ್ಲ. ಹಾಗಿರುವಾಗ ಚಾಲಿಪೋಲಿಲು ಸಾಧನೆ ಎಂಥದ್ದು ಎಂಬುದನ್ನು ನಾವೇ ನಿರ್ಧರಿಸಬಹುದಾಗಿದೆ.
ಉತ್ತಮ ಸಂದೇಶ, ಅಶ್ಲೀಲವಿಲ್ಲದ ಹಾಸ್ಯ, ಅತ್ಯುತ್ತಮ ಕ್ಯಾಮರಾ, ಮನಸೆಳೆಯುವ ಹಾಡುಗಳು, ಪ್ರಬುದ್ಧ ನಟನೆ, ಕರಾವಳಿಗೆ ಒಗ್ಗಿಕೊಳ್ಳುವಂಥ ಚಿತ್ರಣಗಳು, ವಿಡಂಬನಾ ಶೈಲಿಯಲ್ಲಿ ಕಥೆ ಮುಂದುವರಿಯುವುದು, ಕೋಮುಸೌಹಾರ್ದದ ಪಾಠ…ಮುಂತಾದ ಹಲವಾರು ಗುಣಾತ್ಮಕ ಅಂಶಗಳು ಈ ಚಿತ್ರವನ್ನು ಇಂಥದ್ದೊಂದು ಯಶಸ್ಸಿಗೆ ತಂದು ನಿಲ್ಲಿಸಿದೆ.
ಮಹಿಳೆಯರು, ಮಕ್ಕಳು, ಯುವಜನತೆ ಸೇರಿದಂತೆ ಎಲ್ಲರನ್ನೂ ಆಕರ್ಷಿಸುವಲ್ಲಿ ಈ ಚಿತ್ರ ಯಶಸ್ವಿಯಾಗಿದೆ. ಮಾಡಿದರೆ ಇಂಥ ಸಿನಿಮಾ ಮಾಡಬೇಕು ಎಂದು ಎಲ್ಲರೂ ಹೇಳುವಂತೆ ಮಾಡಿದ ಚಾಲಿಪೋಲಿಲು ತುಳು ಸಿನಿಮಾ ರಂಗಕ್ಕೆ ಎಲ್ಲೆಡೆಗಳಿಂದಲೂ ಗೌರವ ತಂದುಕೊಟ್ಟಿದೆ. ಈಗಲೂ ಪ್ರೇಕ್ಷಕರು ಬೆಂಬಲಿಸುವುದನ್ನು ಗಮನಿಸುವಾಗ ಇದು 400 ದಿನಗಳ ಪ್ರದರ್ಶನ ಕಾಣುವ ಸಾಧ್ಯತೆಯೂ ಇದೆ. ಒಂದು ವರ್ಷದ ಸಾಧನೆಯನ್ನು ಕನ್ನಡದಲ್ಲಿಯೂ ಕೆಲವೇ ಕೆಲವು ಸಿನಿಮಾಗಳು ಮಾತ್ರವೇ ಮಾಡಿದ್ದು, ಅಂಥದ್ದರಲ್ಲಿ ಚಾಲಿಪೋಲಿಲು ಸಾಧನೆ ಶ್ಲಾಘನೀಯವಾದುದು. ಈ ಯಶಸ್ಸಿನ ಹಿಂದೆ ಚಿತ್ರತಂಡದ ಶ್ರಮ, ಸೃಜನಶೀಲತೆ, ಪ್ರೇಕ್ಷಕರ ಬೆಂಬಲದ ಪಾಲು ಇದ್ದೇ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.