News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 16th September 2026

×
Home About Us Advertise With s Contact Us

ಭಾರತೀಯ ನೌಕಾಪಡೆಯ ನೌಕೆಗೆ ಪಾಕಿಸ್ಥಾನದ ಹಡಗು ಡಿಕ್ಕಿ; ಭಾರತ ಕಿಡಿ

ನವದೆಹಲಿ: ಪಾಕಿಸ್ತಾನದ ನೌಕಾಪಡೆಯ ಹಡಗು ಮತ್ತು ಭಾರತೀಯ ಹಡಗಿನ ನಡುವೆ ಡಿಕ್ಕಿ ಸಂಭವಿಸಿದ ಘಾನೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಘಟನೆಯ ನಂತರ ಪಾಕಿಸ್ತಾನದ ‘ಚಾರ್ಜ್ ಡಿ ಅಫೇರ್ಸ್’ (ತಾತ್ಕಾಲಿಕ ರಾಯಭಾರಿ) ಅವರಿಗೆ ಸಮನ್ಸ್‌ ಜಾರಿಗೊಳಿಸಿದೆ. ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಪಾಕಿಸ್ತಾನದ ನೌಕಾಪಡೆಯ ಘಟಕಗಳು ತೋರಿದ “ಸ್ವೀಕಾರಾರ್ಹವಲ್ಲದ ಮತ್ತು ವೃತ್ತಿಪರವಲ್ಲದ ನಡವಳಿಕೆ”ಯಿಂದಾಗಿ ಈ ಡಿಕ್ಕಿ ಸಂಭವಿಸಿದೆ ಎಂದು ಆರೋಪಿಸಿ, ತೀವ್ರ ಆಕ್ಷೇಪ ವ್ಯಕ್ತಪಡಿಸಲು ಪಾಕಿಸ್ತಾನದ ರಾಜತಾಂತ್ರಿಕ ಸಾದ್ ಅಹ್ಮದ್ ವರೈಚ್ ಅವರನ್ನು ಕರೆಸಲಾಗಿತ್ತು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಈ ಘಟನೆಯು ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ನಡೆದಿದೆ ಮತ್ತು ಇದರಿಂದ ಯಾವುದೇ ದೊಡ್ಡ ಹಾನಿಯಾಗಿಲ್ಲ ಎಂದು ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಆದಾಗ್ಯೂ, ಪಾಕಿಸ್ತಾನದ ನೌಕಾಪಡೆಯ ಹಡಗಿನ ನಡವಳಿಕೆಯು, ಮಿಲಿಟರಿ ವ್ಯಾಯಾಮಗಳು, ಕವಾಯತುಗಳು ಮತ್ತು ಸೈನ್ಯದ ಚಲನವಲನಗಳ ಕುರಿತು ಮುಂಚಿತವಾಗಿ ಮಾಹಿತಿ ನೀಡುವ ಸಂಬಂಧ 1991ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಾಡಿಕೊಂಡ ಒಪ್ಪಂದದ 10ನೇ ವಿಧಿಯ ನೇರ ಉಲ್ಲಂಘನೆಯಾಗಿದೆ ಎಂದು ಸಚಿವಾಲಯವು ಗಮನಸೆಳೆದಿದೆ.

“ಇಂತಹ ಘಟನೆಗಳು ಮರುಕಳಿಸುವುದನ್ನು ತಡೆಯಲು, ಎಲ್ಲಾ ಮಿಲಿಟರಿ ಘಟಕಗಳು ಸೂಕ್ತ ಎಚ್ಚರಿಕೆ ವಹಿಸಬೇಕು ಮತ್ತು ಉಭಯ ದೇಶಗಳ ನಡುವಿನ ಸಂಬಂಧಿತ ಒಪ್ಪಂದಗಳ ನಿಯಮಗಳನ್ನು ಗೌರವಿಸಬೇಕು ಎಂಬ ವಿಷಯವನ್ನು ಸಂಬಂಧಪಟ್ಟ ಪಾಕಿಸ್ತಾನದ ಅಧಿಕಾರಿಗಳಿಗೆ ತಿಳಿಸುವಂತೆ ಪಾಕಿಸ್ತಾನದ ಚಾರ್ಜ್ ಡಿ ಅಫೇರ್ಸ್ ಅವರಿಗೆ ಸೂಚಿಸಲಾಯಿತು,” ಎಂದು ಅದು ಹೇಳಿದೆ.

ಭಾರತದ ಸಂದೇಶವನ್ನು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ತಲುಪಿಸುವಂತೆಯೂ ಪಾಕಿಸ್ತಾನದ ರಾಜತಾಂತ್ರಿಕರಿಗೆ ನಿರ್ದೇಶನ ನೀಡಲಾಯಿತು.

ಮೂಲಗಳ ಪ್ರಕಾರ, ಸೆಪ್ಟೆಂಬರ್ 15 ರ ಸಂಜೆ ಈ ಘಟನೆ ನಡೆದಿದೆ. ಉತ್ತರ ಅರೇಬಿಯನ್ ಸಮುದ್ರದಲ್ಲಿ ನಿತ್ಯದ ಕಣ್ಗಾವಲು ಕಾರ್ಯಾಚರಣೆಯಲ್ಲಿದ್ದ ಭಾರತೀಯ ನೌಕಾಪಡೆಯ ಮುಂಚೂಣಿಯ ಯುದ್ಧನೌಕೆಯ ಸಮೀಪಕ್ಕೆ ಪಾಕಿಸ್ತಾನದ ನೌಕೆಯೊಂದು ಬಂದಿತ್ತು. ಓಮನ್‌ನಿಂದ ಪೂರ್ವಕ್ಕೆ ಸುಮಾರು 220 ಕಿಲೋಮೀಟರ್ ದೂರದಲ್ಲಿ ಪಾಕಿಸ್ತಾನದ ಯುದ್ಧನೌಕೆಯು ಭಾರತೀಯ ನೌಕೆಯ ಪಕ್ಕದಲ್ಲಿ ವೇಗವಾಗಿ ಸಾಗಿತು ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ನೌಕೆಯು ವೃತ್ತಿಪರವಲ್ಲದ ಮತ್ತು ಅಸುರಕ್ಷಿತ ರೀತಿಯಲ್ಲಿ ಚಲಾಯಿಸಲ್ಪಟ್ಟು ಹೆಚ್ಚಿನ ವೇಗದಲ್ಲಿ ಬಂದಿದ್ದರಿಂದ ಈ ಘಟನೆ ಸಂಭವಿಸಿದೆ. “ಈ ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ,” ಎಂದು ಮೂಲಗಳು ತಿಳಿಸಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top