
ಅಲಹಾಬಾದ್ ವಿಶ್ವವಿದ್ಯಾಲಯದ ಪ್ರಯೋಗಾಲಯದಲ್ಲಿ ಆ ದಿನ ಕೇವಲ ಒಂದು ಪರೀಕ್ಷೆ ನಡೆಯುತ್ತಿರಲಿಲ್ಲ, ಬದಲಿಗೆ ಭಾರತೀಯ ವಿಜ್ಞಾನದ ಭವಿಷ್ಯದ ಒಂದು ಅದ್ಭುತ ಝಲಕ್ ಕಾಣಿಸುತ್ತಿತ್ತು. ಇಲ್ಲಿ ಎರಡು ಮಹಾನ್ ವ್ಯಕ್ತಿತ್ವಗಳ ಸಮಾಗಮವಾಗುತ್ತಿತ್ತು — ಭಾರತದ ಪ್ರಸಿದ್ಧ ವಿಜ್ಞಾನಿ ಮತ್ತು ನೋಬೆಲ್ ಪುರಸ್ಕಾರ ವಿಜೇತ ಸಿ.ವಿ. ರಾಮನ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ರಾಜೇಂದ್ರ ಸಿಂಹ (ರಜ್ಜೂ ಭೈಯಾ). ರಜ್ಜೂ ಭೈಯಾ ಆ ಸಮಯದಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ಎಂ.ಎಸ್ಸಿ. ಮಾಡುತ್ತಿದ್ದರು.
ಆ ಕಾಲದಲ್ಲಿ ಸಿ.ವಿ. ರಮನ್ ವಿಜ್ಞಾನ ಲೋಕದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದರು. ಅಂತಹ ರಾಮನ್ ಒಬ್ಬ ವಿದ್ಯಾರ್ಥಿಯ ಪ್ರತಿಭೆಯಿಂದ ಪ್ರಭಾವಿತರಾದರು ಎಂದರೆ ಅದು ಸಾಮಾನ್ಯ ವಿಷಯವಲ್ಲ. 1942ನೇ ಇಸವಿ.ರಜ್ಜೂ ಭೈಯಾ ಭೌತಶಾಸ್ತ್ರದಲ್ಲಿ ಎಂ.ಎಸ್ಸಿ. ಅಂತಿಮ ವರ್ಷದಲ್ಲಿ ಓದುತ್ತಿದ್ದರು. ಆ ಸಮಯದಲ್ಲಿ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದುದು ಪ್ರೊಫೆಸರ್ ಕೆ.ಎಸ್. ಕೃಷ್ಣನ್ ಅವರು, ಅವರು ಸಿ.ವಿ. ರಾಮನ್ ಅವರ ಪ್ರಿಯ ಶಿಷ್ಯರಾಗಿದ್ದರು.
ರಾಮನ್ ಅವರು ಅಲಹಾಬಾದ್ಗೆ ಬರುವುದು-ಹೋಗುವುದು ಸಾಮಾನ್ಯವಾಗಿತ್ತು . ಎಂ.ಎಸ್ಸಿ ಅಂತಿಮ ಪ್ರಾಯೋಗಿಕ ಪರೀಕ್ಷೆಗೆ ಸಿ.ವಿ. ರಾಮನ್ ಬಾಹ್ಯ ಪರೀಕ್ಷಕರಾಗಿ ಬಂದಿದ್ದರು. ಪರೀಕ್ಷೆಯ ವೇಳೆ ರಜ್ಜೂ ಭೈಯಾ ಅವರು Raman Effect ಸಂಬಂಧಿತ ಪ್ರಯೋಗವನ್ನು ಪ್ರಸ್ತುತಪಡಿಸಬೇಕಿತ್ತು. ಅವರು ತಾವೇ ತೆಗೆದ ಸ್ಪೆಕ್ಟ್ರೋಸ್ಕೋಪಿ ಚಿತ್ರವನ್ನು ರಾಮನ್ ಅವರಿಗೆ ತೋರಿಸಿದರು. ಚಿತ್ರವನ್ನು ನೋಡುತ್ತಿದ್ದಂತೆ ರಾಮನ್ ಅವರು ಕೇಳಿದರು, “ಇದು ಯಾವ ಪದಾರ್ಥದ್ದು?”ರಜ್ಜೂ ಭೈಯಾ ಆತ್ಮವಿಶ್ವಾಸದಿಂದ ಉತ್ತರಿಸಿದರು, “ಇದು ಬೆಂಜೀನ್.” ರಾಮನ್ ತಕ್ಷಣ ಹೇಳಿದರು, “ಇದು ಬೆಂಜೀನ್ ಅಲ್ಲ, ಇದು ಕಾರ್ಬನ್ ಟೆಟ್ರಾಕ್ಲೋರೈಡ್.” ಸಾಮಾನ್ಯ ವಿದ್ಯಾರ್ಥಿ ಅಲ್ಲಿ ಗೊಂದಲಕ್ಕೊಳಗಾಗುತ್ತಿದ್ದ. ಆದರೆ ರಜ್ಜೂ ಭೈಯಾ ಶಾಂತರಾಗಿ ಉತ್ತರಿಸಿದರು, “ನಾನು ಇದನ್ನು ಬೆಂಜೀನ್ ಎಂದು ಹೇಳುತ್ತಿರುವುದು ಏಕೆಂದರೆ ಪ್ರೊಫೆಸರ್ ಕೃಷ್ಣನ್ ಅವರು ನನಗೆ ಹಾಗೆ ಹೇಳಿದ್ದಾರೆ.” ಈ ಉತ್ತರ ಕೇಳಿ ಸಿ.ವಿ. ರಾಮನ್ ಅವರು ಆಶ್ಚರ್ಯಗೊಂಡರು. ಅವರು ಪ್ರೊಫೆಸರ್ ಕೃಷ್ಣನ್ ಅವರತ್ತ ನಗುತ್ತಾ ಹೇಳಿದರು, “ನಿಮ್ಮ ಈ ವಿದ್ಯಾರ್ಥಿ ರಮನ್ಗಿಂತಲೂ ಹೆಚ್ಚು ನಿಮ್ಮ ಮೇಲೆ ವಿಶ್ವಾಸವಿಟ್ಟಿದ್ದಾನೆ!”ಇದು ಕೇವಲ ಹಾಸ್ಯದ ಕ್ಷಣವಲ್ಲ, ರಜ್ಜೂ ಭೈಯಾ ಅವರ ಸ್ಪಷ್ಟತೆ ಮತ್ತು ಆತ್ಮವಿಶ್ವಾಸವು ರಾಮನ್ ಅವರನ್ನು ಬಹಳ ಪ್ರಭಾವಿತಗೊಳಿಸಿತು. ಕೊನೆಗೆ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶ ನೋಡಿದಾಗ ರಜ್ಜೂ ಭೈಯಾ ಅವರು ರಾಮನ್ ಎಫೆಕ್ಟ್ ಅನ್ನು ಸಿ.ವಿ. ರಾಮನ್ ಅವರಿಗಿಂತಲೂ ಉತ್ತಮವಾಗಿ ಸಾಬೀತುಪಡಿಸಿದ್ದರು. ರಾಮನ್ ಅವರ ಸೂತ್ರದಿಂದ ಸ್ವಲ್ಪ ವ್ಯತ್ಯಾಸ ಮಾಡಿ ಉತ್ತಮ ಫಲಿತಾಂಶ ಪಡೆದಿದ್ದರು. ಇದನ್ನು ನೋಡಿ ರಾಮನ್ ಅವರು ಬಹಳ ಪ್ರಭಾವಿತರಾಗಿ ಪ್ರಾಯೋಗಿಕ ಪರೀಕ್ಷೆಗೆ 100ರಲ್ಲಿ 100 ಅಂಕ ನೀಡಿದರು.
ಆ ಸಮಯದಲ್ಲಿ ಭಾರತದಲ್ಲಿ ನ್ಯೂಕ್ಲಿಯರ್ ಫಿಸಿಕ್ಸ್ನಂತಹ ವಿಷಯಗಳಲ್ಲಿ ತಜ್ಞರು ಬಹಳ ಕಡಿಮೆ ಇದ್ದರು. ಆದರೆ ರಜ್ಜೂ ಭೈಯಾ ಈ ಕಠಿಣ ವಿಷಯವನ್ನು ಬಹಳ ಸುಲಭವಾಗಿ ಅರ್ಥಮಾಡಿಕೊಂಡಿದ್ದರು. ಎಂ.ಎಸ್ಸಿ. ಅಂತಿಮ ಫಲಿತಾಂಶದಲ್ಲಿ ಅವರು ವಿಶ್ವವಿದ್ಯಾಲಯದಲ್ಲಿ ಎರಡನೇ ಸ್ಥಾನ ಪಡೆದರು.ರಜ್ಜೂ ಭೈಯಾ ಅವರ ಪರಮಾಣು ಭೌತಶಾಸ್ತ್ರದಲ್ಲಿ ಗಟ್ಟಿ ಹಿಡಿತವನ್ನು ನೋಡಿ ಸಿ.ವಿ. ರಾಮನ್ ಅವರು ಅವರನ್ನು ಬೆಂಗಳೂರಿನಲ್ಲಿ ತಮ್ಮೊಂದಿಗೆ ವೈಜ್ಞಾನಿಕ ಸಂಶೋಧನೆಗೆ ಆಹ್ವಾನಿಸಿದರು. ಆದರೆ ಆಗಲೇ ರಜ್ಜೂ ಭೈಯಾ ಸಂಘಕ್ಕೆ ಬಹಳ ಹತ್ತಿರವಾಗಿದ್ದರು. ಅವರಿಗೆ ಬೋಧನಾ ಕಾರ್ಯದಲ್ಲಿ ತುಂಬಾ ಆಸಕ್ತಿ ಇತ್ತು. ಆದ್ದರಿಂದ ಅವರು ರಾಮನ್ ಅವರಿಗೆ ವಿನಯಪೂರ್ವಕವಾಗಿ ಹೇಳಿದರು, “ನಾನು ನನ್ನ ಜೀವನವನ್ನು ಸಂಘಕ್ಕೆ ಅರ್ಪಿಸಿದ್ದೇನೆ. ಬೆಂಗಳೂರು ಹೋಗುವುದು ಸಾಧ್ಯವಿಲ್ಲ.”
ರಾಜೇಂದ್ರ ಸಿಂಹ ‘ರಜ್ಜೂ ಭೈಯಾ’ ಅವರ ಜನ್ಮ 29 ಜನವರಿ 1922ರಂದು ಬುಲಂದ್ಶಹರ್ ಜಿಲ್ಲೆಯ ಬನೈಲ್ ಗ್ರಾಮದಲ್ಲಿ ಆಯಿತು. ಅವರ ತಂದೆ ಕುಂವರ್ ಬಲ್ಬೀರ್ ಸಿಂಹ ಅವರು ಇಂಗ್ಲೀಷ್ ಆಡಳಿತದ ಕಾಲದ ಮೊದಲ ಭಾರತೀಯ ಮುಖ್ಯ ಇಂಜಿನಿಯರ್ ಆಗಿದ್ದರು.ಅಲಾಹಾಬಾದ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗಲೇ ಅವರು ಸಂಘದ ಸಂಪರ್ಕಕ್ಕೆ ಬಂದರು. 1943ರಲ್ಲಿ ಅವರು ಸಂಘ ಶಿಕ್ಷಾ ವರ್ಗದ ತರಬೇತಿ ಪಡೆದರು. ಅದೇ ಸಮಯದಲ್ಲಿ ಅವರು ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರೊಫೆಸರ್ ಆಗಿದ್ದರು.ಬೋಧನಾ ಕಾರ್ಯದ ಜೊತೆಗೆ ಸಂಘ ಕಾರ್ಯವನ್ನು ಮುಂದುವರಿಸಿದರು. 1966ರಲ್ಲಿ ಪ್ರೊಫೆಸರ್ ಹುದ್ದೆಗೆ ರಾಜೀನಾಮೆ ನೀಡಿ ಪೂರ್ಣ ಸಮಯದ ಸಂಘ ಪ್ರಚಾರಕರಾದರು. 1977ರಲ್ಲಿ ಸಹ-ಸರಕಾರ್ಯವಾಹ, 1978ರಲ್ಲಿ ಸರಕಾರ್ಯವಾಹ ಮತ್ತು 1994ರಲ್ಲಿ ಸರಸಂಘಚಾಲಕರಾದರು. ಸಂಘ ಕಾರ್ಯ ಮಾಡುತ್ತಾ 14 ಜುಲೈ 2003ರಂದು ಪುಣೆಯ ಕೌಶಿಕ ಆಶ್ರಮದಲ್ಲಿ ಅವರ ದೇಹವಿಯೋಗವಾಯಿತು.
ಈ ಘಟನೆ ರಜ್ಜೂ ಭೈಯಾ ಅವರ ಜ್ಞಾನ, ಆತ್ಮವಿಶ್ವಾಸ ಮತ್ತು ಸಂಘಕ್ಕಾಗಿ ಅವರು ಮಾಡಿದ ತ್ಯಾಗವನ್ನು ಎತ್ತಿ ತೋರಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



