ಪುತ್ರ ಶೋಕಂ ನಿರಂತರಂ ಎಂಬ ಮಾತಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ನೋವನ್ನು ಪದಗಳಲ್ಲಿ ವಿವರಿಸಲು ಎಂದಿಗೂ ಸಾಧ್ಯವಿಲ್ಲ. ಇಲ್ಲೊಂದು ದಂಪತಿಗಳು ತಮ್ಮನ್ನಗಲಿದೆ ಏಕೈಕ ಮಗನ ನೆನಪಲ್ಲಿ ಅಗತ್ಯವಿರುವವರಿಗೆ ಉಚಿತ ಆಹಾರ ಸೌಲಭ್ಯವನ್ನು ಆರಂಭಿಸಿ ನೋವಲ್ಲೂ ನೆಮ್ಮದಿ ಕಾಣುತ್ತಿದ್ದಾರೆ.
22 ವರ್ಷದ ನಿಮಿಷ್ ಪ್ರದೀಪ್ ತನ್ನಾ 2011ರ ಆಗಸ್ಟ್ನಲ್ಲಿ ಯಾವುದೋ ಮೀಟಿಂಗ್ ಅಟೆಂಡ್ ಮಾಡುವ ಸಲುವಾಗಿ ರೈಲು ಹತ್ತಿದ್ದ, ಆದರೆ ವಿಧಿಯಾಟ ಬೇರೆಯೇ ಆಗಿತ್ತು ಮೀಟಿಂಗ್ಗೆ ಹೋಗಬೇಕಾದ ಆತನನ್ನು ವಿಧಿ ತನ್ನ ಬಳಿ ಸೆಳೆದುಕೊಂಡಿತು. ರೈಲಿನಿಂದ ಬಿದ್ದು ನಿಮಿಷ್ ಪ್ರಾಣ ಬಿಟ್ಟಿದ್ದ.
ಇದ್ದೊಬ್ಬ ಮಗನನ್ನು ಕಳೆದುಕೊಂಡ ಪ್ರದೀಪ್ ತನ್ನಾ ಮತ್ತು ದಮಯಂತಿ ತನ್ನಾ ದಂಪತಿಗಳಿಗೆ ಭವಿಷ್ಯ ಕಮರಿದಂತಾಯಿತು. ಅದ್ಭುತ ಫೋಟೋಗ್ರಾಫರ್ ಆಗಿದ್ದ ತನ್ನ ಮಗ ಕ್ಲಿಕ್ಕಿಸಿದ ಫೋಟೋಗಳ ಮುಂದೆ ಕುಳಿತು ಅಳುವುದೇ ಅವರ ಜೀವನವಾಯಿತು. ಇತ್ತ ಪಾರ್ಟ್ನರ್ಗಳ ವಂಚನೆಯಿಂದ ಪ್ರದೀಪ್ ತಮ್ಮ ಸ್ವೀಟ್ ಅಂಗಡಿಯನ್ನೂ ಕಳೆದುಕೊಳ್ಳಬೇಕಾಯಿತು.
ಆಗ ಈ ದಂಪತಿಗಳ ಸಹಾಯಕ್ಕೆ ಬಂದವರು ನಿಮಿಷ್ ಗೆಳೆಯ ಕಿಂತನ್. ದಂಪತಿಗಳಿಗೆ ಸಹಾಯ ಹಸ್ತಚಾಚಿದ ಆತ ಹೊಸ ಉದ್ಯೋಗ ಮಾಡಲು ಅವರಿಗೆ ಪ್ರೋತ್ಸಾಹಿಸಿದ. ತನ್ನ ಉದ್ಯೋಗವನ್ನು ತೊರೆದು ಅವರ ಜೊತೆಗೂಡಿದ. ಮತ್ತೆ ಪ್ರದೀಪ್ ಅವರು ಸ್ವೀಟ್ ಉದ್ಯಮ ಆರಂಭಿಸಿದರು, ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಿದರು.
ಅಗಲಿದ ಪುತ್ರನ ಸವಿನೆನಪಲ್ಲಿ ಏನಾದರು ಕಾರ್ಯ ಮಾಡಬೇಕೆಂಬ ಆಶಯ ಅವರಲ್ಲಿತ್ತು, ಅದಕ್ಕಾಗಿ ಬಡವರಿಗಾಗಿ, ಅಗತ್ಯವಿರುವವರಿಗಾಗಿ ಉಚಿತ ಆಹಾರ ಸೌಲಭ್ಯವನ್ನು ಆರಂಭಿಸಿದರು. ಶ್ರೀ ನಿಮಿಷ್ ತನ್ನಾ ಚಾರಿಟಬಲ್ ಸಂಸ್ಥೆಯನ್ನು ಆರಂಭಿಸಿ ಅದರ ಮುಖೇನ ಬಡವರಿಗೆ ನೆರವಾದರು. ತಮ್ಮ ಸಣ್ಣ ಅಡುಗೆ ಕೋಣೆಯಲ್ಲೇ ದಿನಕ್ಕೆ 30 ಮಂದಿಗೆ ಅಡುಗೆ ತಯಾರಿಸಿ ಉಚಿತವಾಗಿ ಅದನ್ನು ದಾನ ಮಾಡಿದರು. ಈಗ ದಿನಕ್ಕೆ 100 ಮಂದಿಗೆ ಉಚಿತ ಆಹಾರ ನೀಡುತ್ತಾರೆ ಈ ದಂಪತಿ.
ಅಷ್ಟೇ ಅಲ್ಲ ಮುಂಬಯಿಯಾದ್ಯಂತ ಇರುವ ಬುಡಕಟ್ಟು ಸಮುದಾಯಕ್ಕೆ ಇವರು ಆಹಾರ ವಿತರಿಸುತ್ತಾರೆ. ಫುಡ್ ಕಿಟ್ ಮೂಲಕ ಉಚಿತವಾಗಿ ಆಹಾರವನ್ನು ಇವರಿಗೆ ತಲುಪಿಸಲಾಗುತ್ತದೆ. ಪ್ರದೀಪ್ ಮತ್ತು ಕಿಂತನ್ ಹಿಂದೆ ಆಹಾರ ವಿತರಿಸುತ್ತಿದ್ದರು. ಇದಿಗ ಸಂಖ್ಯೆ ಜಾಸ್ತಿಯಾದ ಹಿನ್ನಲೆಯಲ್ಲಿ ಸಮಯಕ್ಕೆ ಸರಿಯಾಗಿ ಆಹಾರವನ್ನು ತಲುಪಿಸಬೇಕೆಂಬ ಕಾರಣಕ್ಕೆ ಇತರರನ್ನು ಕೆಲಸಕ್ಕೆ ನೇಮಿಸಲಾಗಿದೆ. ಅಡುಗೆ ಕೋಣೆಯನ್ನೂ ವಿಸ್ತರಿಸಲಾಗಿದೆ.
ಮಗನನ್ನು ಕಳೆದುಕೊಂಡು ದಿಕ್ಕು ತೋಚದಾದ ದಂಪತಿ ಇಂದು ಮಗನ ನೆನಪಲ್ಲಿ ಬಡವರ ಹಸಿದ ಹೊಟ್ಟೆಯನ್ನು ತಣಿಸುತ್ತಿದ್ದಾರೆ. ಬರುವ ಸಂಪಾದನೆಯನ್ನು ಬಡವರಿಗಾಗಿ ಮೀಸಲಿಟ್ಟಿದ್ದಾರೆ. ನೋವಿನಲ್ಲೂ ಸಾರ್ಥಕತೆ ಮೆರೆಯುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.