ಮುಂಬೈ: ವಿವಿಧ ಜಗತ್ಪ್ರಸಿದ್ಧ ಅಂತರ್ಜಾಲ ಮಾಧ್ಯಮಗಳ ಮಹಾರಾಷ್ಟ್ರ ರಾಜ್ಯದ ಬ್ಯೂರೊ ಚೀಫ್, ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ರೋನ್ಸ್ ಬಂಟ್ವಾಳ್ ಅವರು 2014ನೇ ಸಾಲಿನ ಪ್ರತಿಷ್ಠಿತ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಗೊಂಡಿದ್ದಾರೆ.
ಪ್ರಸ್ತುತ ಟೈಮ್ಸ್ ಆಫ್ ಇಂಡಿಯಾ ಸಂಸ್ಥೆಯ ಮಾಲಕತ್ವದ ವಿಜಯ ಕರ್ನಾಟಕ ನಿಯೋಜಿತ ಪತ್ರಿಕೆಗಳ ಮುಂಬಯಿ ಪ್ರಾದೇಶಿಕ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವ ಜನಪ್ರಿಯ ಯುವ ಪತ್ರಕರ್ತ ರೋನ್ಸ್ ಬಂಟ್ವಾಳ್ ಸದಾ ಪಾದರಸದಂತೆ ಓಡಾಡುವ ಪ್ರಸಿದ್ಧ ಪತ್ರಕರ್ತ.
ದೆಹಲಿವಾರ್ತೆ ಕನ್ನಡ ದೈನಿಕದ ಮುಂಬಯಿ ಆವೃತ್ತಿಯ ಸಂಪಾದಕರಾಗಿ, ಉದಯವಾಣಿ, ಕರ್ನಾಟಕ ಮಲ್ಲ ಕನ್ನಡ ದೈನಿಕ ಸೇರಿದಂತೆ ಹತ್ತಾರು ಕನ್ನಡ-ಕೊಂಕಣಿ ವಾರಪತ್ರಿಕೆಗಳು, ಇಂಗ್ಲಿಷ್ ಸಾಪ್ತಾಹಿಕಗಳು, ಪಾಕ್ಷಿಕ ಮತ್ತು ಅನೇಕ ಮಾಸಿಕಗಳ ಅಧಿಕೃತ ವರದಿಗಾರರಾಗಿ ರಾಷ್ಟ್ರವನ್ನೇ ಪ್ರತಿನಿಧಿಸುತ್ತಿರುವ ಏಕೈಕ ಪತ್ರಕರ್ತರಾಗಿದ್ದಾರೆ.
ತನ್ನ ಅವಿರತ, ನಿಷ್ಠಾವಂತಿಕೆಯ ಶ್ರಮದಿಂದ ಗುರುತಿಸಲ್ಪಟ್ಟ ರೋನ್ಸ್ ಅವರು ಉದಯವಾಣಿ, ತರಂಗ, ರೂಪತಾರ ಮುಂತಾದ ಪತ್ರಿಕೆಗಳಲ್ಲಿ ಸತತ ಆರೂವರೆ ವರ್ಷಗಳ ಗಣನೀಯ ಸೇವೆ ಸಲ್ಲಿಸಿ ಆತ್ಮೀಯ, ಸಹೃದಯಿ ಸ್ನೇಹಮಯಿ ವ್ಯಕ್ತಿತ್ವದ ಜನಪ್ರಿಯ ಪತ್ರಕರ್ತರಾಗಿ ಪ್ರಸಿದ್ಧಿ ಪಡೆದಿರುವರು.
ಒಟ್ಟು 34 ಪತ್ರಕರ್ತರಿಗೆ 2014 ನೇ ಸಾಲಿನ ಪ್ರತಿಷ್ಠಿತ ಮಾಧ್ಯಮ ಅಕಾಡೆಮಿ ಪ್ರಶಸ್ತಿ ದೊರೆತಿದ್ದು, ಈ ಪ್ರಶಸ್ತಿಯು 20 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಏಪ್ರಿಲ್ 16 ರಂದು ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್ನಲ್ಲಿ ಜರುಗಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.