
5 ನವೆಂಬರ್ 1945ರಂದು ದೆಹಲಿಯ ಗಾಳಿಯಲ್ಲಿ ಬೇರೆಯೇ ಒಂದು ಕಥೆಯೊಂದು ಗುನುಗುತ್ತಿತ್ತು. ಕೆಂಪುಕೋಟೆಯ ಗೋಡೆಗಳೊಳಗೆ ಬ್ರಿಟಿಷ್ ಸರ್ಕಾರ ನ್ಯಾಯ ದೊರಕಿಸಿಕೊಡುವ ನಾಟಕವಾಡುತ್ತಿತ್ತು.. ಆದರೆ ಹೊರಗೆ ನಿಂತಿದ್ದ ಇಡೀ ಭಾರತವು ಅಂತ್ಯದಲ್ಲಿ ತೀರ್ಪು ಏನು ಬರಬಹುದು ಎಂಬುದನ್ನು ಅದಾಗಲೇ ಊಹಿಸಿತ್ತು.
ಅದೇ ಕೆಂಪು ಕೋಟೆ — ಒಂದು ಕಾಲದಲ್ಲಿ ಮೊಘಲ್ ಆಕ್ರಮಣಕಾರರ ಫರ್ಮಾನ್ಗಳು ಮೊಳಗುತ್ತಿದ್ದ ಜಾಗ. ಬ್ರಿಟಿಷ್ ಸಾಮ್ರಾಜ್ಯ ತನ್ನ ಶಕ್ತಿಯನ್ನು ಪ್ರದರ್ಶಿಸಲು ಅದೇ ಕೆಂಪು ಕೋಟೆಯನ್ನು ಆಯ್ಕೆ ಮಾಡಿತ್ತು.
ಕಟ್ಟಡದ ಮಧ್ಯದಲ್ಲಿ ನಿಂತಿದ್ದರು ಆಜಾದ್ ಹಿಂದ್ ಫೌಜ್ನ ಕರ್ನಲ್ ಗುರಬಕ್ಷ್ ಸಿಂಗ್ ಢಿಲ್ಲೋನ್, ಅವರೊಂದಿಗೆ ಕ್ಯಾಪ್ಟನ್ ಶಾಹನವಾಜ್ ಖಾನ್, ಕರ್ನಲ್ ಪ್ರೇಮ್ ಕುಮಾರ್ ಸಹಗಲ್ ಮತ್ತು ಸುಮಾರು 17 ಸಾವಿರ ಇತರ ಸೈನಿಕರು.
ಅದು ಕೇವಲ ಕೋರ್ಟ್ ಮಾರ್ಷಲ್ ಆಗಿರಲಿಲ್ಲ — ಅದು ಬ್ರಿಟಿಷ್ ರಾಜ್ ಮತ್ತು ಭಾರತೀಯ ಚೈತನ್ಯದ ನಡುವಿನ ನೇರ ಎದುರಾಟವಾಗಿತ್ತು. ಆ ಭಯ ಎಷ್ಟೊಂದು ದೊಡ್ಡದಾಗಿತ್ತು ಎಂದರೆ ಕ್ರೂರ ಬ್ರಿಟಿಷ್ ಸಾಮ್ರಾಜ್ಯವು ಮೊದಲ ಬಾರಿಗೆ ಸರಿಯಾದ ತೀರ್ಪು ನೀಡಲೇ ಬೇಕಾದ ಒತ್ತಡಕ್ಕೆ ಒಳಗಾಯಿತು.
ದ್ವಿತೀಯ ವಿಶ್ವಯುದ್ಧದ ಸಮಯದಲ್ಲಿ ಭಾರತೀಯ ಸೈನಿಕರು ಬ್ರಿಟಿಷ್ ಸೇನೆಯೊಂದಿಗೆ ಜಪಾನ್ ವಿರುದ್ಧ ಹೋರಾಡಿದ್ದರು. ಅನೇಕರು ಜಪಾನಿ ಸೈನ್ಯದ ಯುದ್ಧಬಂಧಿಗಳಾದರು.
ಸಿಂಗಪುರವನ್ನು ಜಪಾನ್ ಆಕ್ರಮಿಸಿಕೊಂಡಾಗ, 1943ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಆಜಾದ್ ಹಿಂದ್ ಫೌಜ್ನ ಕಮಾಂಡ್ ಸ್ವೀಕರಿಸಿದರು. ‘ದಿಲ್ಲಿ ಚಲೋ’ ಎಂಬ ನಾದದೊಂದಿಗೆ ಅವರು ಭಾರತವನ್ನು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸುವ ಗುರಿಯನ್ನಿಟ್ಟರು.
ಜಪಾನಿ ಯುದ್ಧಬಂಧಿ ಭಾರತೀಯ ಸೈನಿಕರನ್ನು ಆಜಾದ್ ಹಿಂದ್ ಫೌಜ್ಗೆ ಸೇರಿಸುವಲ್ಲಿ ಯಶಸ್ವಿಯಾದರು.
ಆಜಾದ್ ಹಿಂದ್ ಫೌಜ್ ಬ್ರಿಟಿಷ್ ಸೇನೆಯೊಂದಿಗೆ ಯುದ್ಧ ಮಾಡಿ ಇಂಫಾಲ್ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿತು. ಆದರೆ ಅಕ್ಷಶಕ್ತಿಗಳ ಸೋಲಿನ ನಂತರ ಬ್ರಿಟಿಷರು ಆ ಪ್ರದೇಶವನ್ನು ಮತ್ತೆ ಆಕ್ರಮಿಸಿಕೊಂಡರು.
ಕರ್ನಲ್ ಢಿಲ್ಲೋನ್ ಸೇರಿದಂತೆ ಸುಮಾರು 17 ಸಾವಿರ ಐಎನ್ಎ ಸೈನಿಕರನ್ನು ಬಂಧಿಸಿ ಕೆಂಪುಕೋಟೆಯಲ್ಲಿ ಮೊಕದ್ದಮೆ ನಡೆಸಲಾಯಿತು.
ಬ್ರಿಟಿಷರು ಉದ್ದೇಶಪೂರ್ವಕವಾಗಿ ಕೆಂಪುಕೋಟೆಯನ್ನು ಆಯ್ಕೆ ಮಾಡಿದ್ದರು. ಅವರಿಗೆ ಇದು ಕೇವಲ ಸೈನಿಕ ಸಂಕೀರ್ಣವಲ್ಲ ಭಾರತದ ಮೇಲಿನ ಅವರ ಆಳ್ವಿಕೆಯ ನಿರಂತರತೆಯ ಸಂಕೇತವಾಗಿತ್ತು.
ಕ್ರಾಂತಿಕಾರಿಗಳ ಶತಮಾನಗಳ ಕನಸು ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವುದು. ಅದೇ ಕೋಟೆಯಲ್ಲಿ ಮೊಕದ್ದಮೆ ನಡೆಸಿ ಬ್ರಿಟಿಷರು ತಮ್ಮ ಶಕ್ತಿ ತೋರಿಸಲು ಬಯಸಿದ್ದರು. “ಯಾರು ಬ್ರಿಟಿಷ್ ಕಿರೀಟಕ್ಕೆ ವಿರುದ್ಧ ಶಸ್ತ್ರ ಎತ್ತಿದರೂ, ಅವರನ್ನು ಎಲ್ಲರ ಮುಂದೆ ಶಿಕ್ಷಿಸಲಾಗುತ್ತದೆ.” ಎಂಬ ಸಂದೇಶ ನೀಡುವುದು ಅವರ ಉದ್ದೇಶವಾಗಿತ್ತು.
ಆಜಾದ್ ಹಿಂದ್ ಫೌಜ್ ಅಧಿಕಾರಿಗಳ ಮೇಲೆ ರಾಜದ್ರೋಹ ಆರೋಪ ಹೊರಿಸಿ, ಇದು ಮುಕ್ತಿ ಸೇನೆಯಲ್ಲ, ರಾಷ್ಟ್ರದ್ರೋಹಿಗಳ ಗುಂಪು ಎಂದು ಸಾಬೀತುಪಡಿಸಲು ಹೊರಟಿದ್ದರು.
ಈ ಸಾರ್ವಜನಿಕ ಕೋರ್ಟ್ ಮಾರ್ಷಲ್ ಮೂಲಕ ಭಾರತೀಯರ ಮನಸ್ಸಿನಲ್ಲಿ ಭಯ ಹುಟ್ಟಿಸಬಹುದು ಎಂದು ಅವರು ನಂಬಿದ್ದರು.
ಆದರೆ ಬ್ರಿಟಿಷರ ಈ ಲೆಕ್ಕಾಚಾರ ಸಂಪೂರ್ಣವಾಗಿ ತಪ್ಪು ಸಾಬೀತಾಯಿತು.
ನ್ಯಾಯಾಲಯದೊಳಗೆ ನಡೆಯುತ್ತಿದ್ದ ವಾದ-ವಿವಾದಕ್ಕಿಂತ ಹೆಚ್ಚು ತೀವ್ರ ಚರ್ಚೆ ದೇಶದ ಗಲ್ಲಿಗಳಲ್ಲಿ, ಚೌಕಗಳಲ್ಲಿ, ರಸ್ತೆಗಳಲ್ಲಿ ನಡೆಯುತ್ತಿತ್ತು.
ಕರ್ನಲ್ ಗುರಬಕ್ಷ್ ಸಿಂಗ್ ಢಿಲ್ಲೋನ್ ಮತ್ತು ಅವರ ಸಹೋದ್ಯೋಗಿಗಳ ಮೊಕದ್ದಮೆಯ ಸುದ್ದಿ ಹರಡುತ್ತಿದ್ದಂತೆ ಇಡೀ ಭಾರತದಲ್ಲಿ ಕುದಿಯಲಾರಂಭಿಸಿತು.
ಕೆಂಪು ಕೋಟೆಯ ಹೊರಗೆ ಸಾವಿರಾರು ಜನರು ಜಮಾಯಿಸಿದರು. ಕಲ್ಕತ್ತಾ, ಬಾಂಬೆ, ಮದ್ರಾಸ್, ಲಾಹೋರ್ — ಎಲ್ಲೆಡೆ ಬ್ರಿಟಿಷ್ ಸರ್ಕಾರಕ್ಕೆ ವಿರುದ್ಧ ಪ್ರತಿಭಟನಾ ಮೆರವಣಿಗೆಗಳು ಆರಂಭವಾದವು. ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಧರಣಿ ನಡೆಸಿದರು, ಕಾರ್ಖಾನೆಗಳಲ್ಲಿ ಕೆಲಸ ಸ್ಥಗಿತಗೊಂಡಿತು. ಇದು ಕೇವಲ ರಾಜಕೀಯ ಆಂದೋಲನವಲ್ಲ — ಭಾವನಾತ್ಮಕ ಜಾಗೃತಿಯ ಜ್ವಾಲೆಯಾಗಿತ್ತು.
ಕರ್ನಲ್ ಢಿಲ್ಲೋನ್, ಶಾಹನವಾಜ್ ಖಾನ್ ಮತ್ತು ಪ್ರೇಮ್ ಕುಮಾರ್ ಸಹಗಲ್ ಅವರು ಆಜಾದ್ ಹಿಂದ್ ಫೌಜ್ನ ಮೂಲಕ ಬ್ರಿಟಿಷ್ ಸೇನೆಯನ್ನು ಅನೇಕ ಮುಂಭಾಗದಲ್ಲಿ ಹಿಂದಕ್ಕೆ ತಳ್ಳಿದ್ದರು.
ನೇತಾಜಿಯ ಮರಣದ ಸುದ್ದಿಗಳ ನಡುವೆ ಈ ಮೂವರು ಭಾರತೀಯರಿಗೆ ನೇತಾಜಿಯ ಪ್ರತಿರೂಪವಾಗಿ ಕಾಣಿಸಿದರು. ಗುಲಾಮತನದಡಿ ಇಡಿ ಭಾರತದ ಜನರು ಆಜಾದ್ ಹಿಂದ್ ಫೌಜ್ ಅನ್ನು ತಮ್ಮ ಗುಲಾಮಿತನದ ಮುಕ್ತಿದಾತನೆಂದು ನಂಬಲಾರಂಭಿಸಿದ್ದರು. ವರ್ಷಗಳಿಂದ ದಬ್ಬಾಳಿಕೆಗೊಳಗಾದ ಕೋಪ ಈಗ ಒಂದು ವಿಷಯಕ್ಕೆ ಕೇಂದ್ರೀಕೃತವಾಯಿತು.
5 ನವೆಂಬರ್ 1945ರಂದು ಆರಂಭವಾದ ಕೆಂಪುಕೋಟೆ ಟ್ರಯಲ್ 3 ಜನವರಿ 1946ರಂದು ಮುಗಿಯಿತು. ಐಎನ್ಎಯ ಎಲ್ಲಾ ಅಧಿಕಾರಿಗಳು ಮತ್ತು ಸೈನಿಕರಿಗೆ ಆಜೀವನ ಕಾರಾಗೃಹವಾಸ ಶಿಕ್ಷೆ ವಿಧಿಸಲಾಯಿತು.
ಬ್ರಿಟಿಷರು ಈ ಕಠಿಣ ನಿಲುವಿನಿಂದ ಭಾರತೀಯರು ಭಯಭೀತರಾಗಿ ವಿದ್ರೋಹ ಶಮನಗೊಳ್ಳುತ್ತದೆ ಎಂದು ಭಾವಿಸಿದ್ದರು. ಆದರೆ ನಿಜವಾದದ್ದು ಇದಕ್ಕೆ ವಿರುದ್ಧವಾಯಿತು. ದೇಶಾದ್ಯಂತ ಆಕ್ರೋಶ ಇನ್ನಷ್ಟು ತೀವ್ರವಾಯಿತು. ಕರ್ನಲ್ ಢಿಲ್ಲೋನ್ ಸೇರಿದಂತೆ ಐಎನ್ಎ ಸೈನಿಕರ ಬೆಂಬಲಕ್ಕೆ ದನಿಗಳು ಮೊಳಗಿದವು. ರಸ್ತೆಗಳಲ್ಲಿ ನಾದಗಳು ಮೊಳಗಿದವು: “ಕೆಂಪುಕೋಟೆಯಿಂದ ಬಂದ ಧ್ವನಿ — ಸಹಗಲ್-ಢಿಲ್ಲೋನ್-ಶಾಹನವಾಜ್!” “ನಾಲ್ಕು ಕೋಟಿ ಜನರ ಈ ಧ್ವನಿ — ಸಹಗಲ್-ಢಿಲ್ಲೋನ್-ಶಾಹನವಾಜ್!” “ಕೆಂಪುಕೋಟೆಯನ್ನು ಒಡೆದುಬಿಡಿ, ಆಜಾದ್ ಹಿಂದ್ ಅನ್ನು ಬಿಡುಗಡೆ ಮಾಡಿ!”
ಇವು ಕೇವಲ ನಾದಗಳಲ್ಲ — ಬ್ರಿಟಿಷ್ ರಾಜ್ನ ಭಯದ ಮೇಲೆ ಬಿಟ್ಟ ಧಿಟ್ಟ ಸವಾಲಾಗಿದ್ದವು. ಮುಸ್ಲಿಂ ಲೀಗ್ನ ಧಾರ್ಮಿಕ ವಿಭಜನಾ ಚಿಂತನೆಯ ಕಡೆಗೆ ದೇಶ ಸಾಗುತ್ತಿದ್ದ ಸಮಯದಲ್ಲಿ ಇದು ಅಪರೂಪದ ಐಕ್ಯತೆಯ ಕ್ಷಣವಾಗಿತ್ತು.
ಕೆಂಪು ಕೋಟೆ ಟ್ರಯಲ್ನಲ್ಲಿ ಆಜೀವನ ಕಾರಾಗೃಹವಾಸ ಶಿಕ್ಷೆ ವಿಧಿಸಿದ ನಂತರ, ಗುಪ್ತಚರ ವರದಿಗಳು ಸ್ಪಷ್ಟ ಎಚ್ಚರಿಕೆ ನೀಡಿದವು — ಈ ಶಿಕ್ಷೆಯನ್ನು ಮುಂದುವರಿಸಿದರೆ ಪರಿಸ್ಥಿತಿ ಹತೋಟಿ ತಪ್ಪಬಹುದು.
ಈ ಸಹಾನುಭೂತಿ ಸಾಮಾನ್ಯ ಜನರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಸಾಮ್ರಾಜ್ಯದ ಬೆನ್ನೆಲುಬೆಂದು ಕರೆಯಲ್ಪಡುತ್ತಿದ್ದ ಬ್ರಿಟಿಷ್-ಭಾರತೀಯ ಸೇನೆಯ ಭಾರತೀಯ ಸೈನಿಕರಲ್ಲೂ ಕೋಪ ಉಕ್ಕಿತು.
“ಢಿಲ್ಲೋನ್ ಅಂತಹ ಅಧಿಕಾರಿಗಳು ದೇಶದ್ರೋಹಿಗಳಾದರೆ, ದೇಶಭಕ್ತಿಯ ಅರ್ಥ ಏನು?” ಎಂಬ ಪ್ರಶ್ನೆ ಎದ್ದಿತು. ಅಂತಿಮವಾಗಿ ಫೀಲ್ಡ್ ಮಾರ್ಶಲ್ ಸರ್ ಕ್ಲೌಡ್ ಆಚಿನ್ಲೆಕ್ ಅವರು ಐಎನ್ಎ ಸೈನಿಕರ ಆಜೀವನ ಕಾರಾಗೃಹವಾಸ ಶಿಕ್ಷೆಯನ್ನು ಸ್ಥಗಿತಗೊಳಿಸಬೇಕಾಯಿತು. ಆದರೆ ಅಷ್ಟೊತ್ತಿಗೆ ಈ ಟ್ರಯಲ್ ಅಪ್ರತ್ಯಕ್ಷವಾಗಿ ಸ್ವತಂತ್ರ ಭಾರತದ ಘೋಷಣೆಯಾಗಿ ಪರಿಣಮಿಸಿತ್ತು.
ಜನನ ಮತ್ತು ವೈಯಕ್ತಿಕ ಜೀವನ
ಕರ್ನಲ್ ಗುರಬಕ್ಷ್ ಸಿಂಗ್ ಢಿಲ್ಲೋನ್ ಅವರು 18 ಮಾರ್ಚ್ 1914ರಂದು ಪಂಜಾಬ್ನ ತರನ್ತಾರನ್ ಜಿಲ್ಲೆಯಲ್ಲಿ ಜನಿಸಿದರು. 1936ರಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿಯ 14ನೇ ಪಂಜಾಬ್ ರೆಜಿಮೆಂಟ್ನಲ್ಲಿ ಕಮಿಷನ್ ಪಡೆದರು. ದ್ವಿತೀಯ ವಿಶ್ವಯುದ್ಧದಲ್ಲಿ ಬ್ರಿಟಿಷ್ ಪರವಾಗಿ ಹೋರಾಡುತ್ತಾ ಜಪಾನಿ ಸೈನ್ಯದ ಯುದ್ಧಬಂಧಿಯಾದರು. 1942ರಲ್ಲಿ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ನೇತೃತ್ವದ ಆಜಾದ್ ಹಿಂದ್ ಫೌಜ್ಗೆ ಸೇರಿದರು. ನೇತಾಜಿ ಅವರಿಗೆ ನೆಹರು ಬಟಾಲಿಯನ್ನ ಜವಾಬ್ದಾರಿ ನೀಡಿದರು. ತಮ್ಮ ಸೈನಿಕ ಪರಾಕ್ರಮದಿಂದ ಬ್ರಿಟಿಷ್ ಸೇನೆಯನ್ನು ಅನೇಕ ಮುಂಭಾಗದಲ್ಲಿ ಹಿಂದಕ್ಕೆ ತಳ್ಳಿದರು.
1998ರಲ್ಲಿ ಭಾರತ ಸರ್ಕಾರ ಅವರನ್ನು ಪದ್ಮ ಭೂಷಣದಿಂದ ಸನ್ಮಾನಿಸಿತು. ರಾಷ್ಟ್ರ ಸೇವೆಯಲ್ಲಿ ತೊಡಗಿದ್ದ ಅವರು 6 ಫೆಬ್ರವರಿ 2006ರಂದು ನಿಧನರಾದರು. ಕೆಂಪು ಕೋಟೆ ಟ್ರಯಲ್ ಕೇವಲ ಒಂದು ಮೊಕದ್ದಮೆಯಾಗಿರಲಿಲ್ಲ — ಅದು ಸ್ವಾತಂತ್ರ್ಯದ ಆಗಮನದ ಮೊದಲ ಘರ್ಜನೆಯಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


