ಬಂಟ್ವಾಳ : ಭೂಮಿಯಲ್ಲಿ ಧಗೆ ಏರುತ್ತಿದೆ. ನೀರಿನ ಮೂಲಗಳು ದಿನದಿಂದ ದಿನಕ್ಕೆ ಬತ್ತುತ್ತಿವೆ. ಒಂದು ತಿಂಗಳ ಹಿಂದೆ ನೀರಿನಿಂದ ತುಂಬಿ ತುಳುಕುತ್ತಿದ್ದ ನದಿಗಳೆಲ್ಲಾ ಈಗ ನೀರಿಲ್ಲದೆ ಸೊರಗಿ ಹೋಗುತ್ತಿವೆ.
ಹೌದು, ಇದು ಜಿಲ್ಲೆಯ ಜೀವನದಿ ಎನಿಸಿರುವ ನೇತ್ರಾವತಿ ನದಿ ಬರಡಾಗಿರುವ ದೃಶ್ಯ. ಕಳೆದ ಕೆಲ ದಿನಗಳವರೆಗೂ ಸಮೃದ್ದ ನೀರಿನಿಂದ ತುಂಬಿ ಹರಿಯುತ್ತಿದ್ದ ನೇತ್ರಾವತಿ ಈಗ ಬರಡಾಗಿ ಹೋಗಿದ್ದಾಳೆ. ನದಿಯಲ್ಲಿ ನೀರಿಗಿಂತಲೂ ಹೆಚ್ಚಾಗಿ ತಳ ಭಾಗದಲ್ಲಿರುವ ಕಲ್ಲುಗಳು ಮಾತ್ರ ಕಂಡು ಬರುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುವ ಲಕ್ಷಣಗಳು ಕಂಡುಬರುತ್ತಿದೆ.
ಜಿಲ್ಲೆಯ ಕೇಂದ್ರಸ್ಥಾನ ಮಂಗಳೂರಿಗೆ ನೀರು ಸರಬರಾಜಾಗುವುದು ಜೀವನದಿ ನೇತ್ರಾವತಿಯಿಂದಲೇ. ತುಂಬೆ ವೆಂಟೆಡ್ ಡ್ಯಾಂನ ಮೂಲಕ ನೀರು ಮಂಗಳೂರಿಗೆ ಪೂರೈಕೆಯಾಗುತ್ತಿದೆ. ಕಳೆದ ವರ್ಷ ಮಾರ್ಚ್ ಕೊನೇ ವಾರದಲ್ಲಿ 13 ಅಡಿ ನೀರಿತ್ತು. ಈ ಬಾರಿ ಅದು 12.1 ಅಡಿಗೆ ಕುಸಿದಿದೆ. 10 ಅಡಿಗಿಂತ ಕಡಿಮೆಯಾದರಂತೂ ನೀರಿನ ಸಮಸ್ಯೆ ಕಟ್ಟಿಟ್ಟ ಬುತ್ತಿ. ಅಧಿಕಾರಿಗಳ ಪ್ರಕಾರ ತುಂಬೆ ಡ್ಯಾಂನಲ್ಲಿ ನೀರು ಕಡಿಮೆಯಾದರೂ ಮಂಗಳೂರಿಗೆ ನೀರಿನ ಸಮಸ್ಯೆಯಾಗದು. ಶಂಭೂರಿನಲ್ಲಿ ಪವರ್ ಪ್ರಾಜೆಕ್ಟ್ಗೆ ನಿರ್ಮಿಸಿದ ಡ್ಯಾಂನಲ್ಲಿ ಅಧಿಕ ಪ್ರಮಾಣದ ನೀರು ಶೇಖರಣೆಯಾಗಿರುವುದರಿಂದ ತುಂಬೆಯಲ್ಲಿ ನೀರು ಕಡಿಮೆಯಾದ ತಕ್ಷಣ ಶಂಭೂರಿನಿಂದ ನೀರು ಬಿಡುಗಡೆ ಮಾಡಲಾಗುತ್ತದೆ ಎನ್ನುತ್ತಾರೆ.
ಆದರೂ ಮುಂದಿನ ದಿನಗಳಲ್ಲಿ ನೀರಿನ ಸದ್ಬಳಕೆಯ ಬಗ್ಗೆ ಈಗಲೆ ಜಾಗರೂಕರಾಗುವುದು ಒಳಿತು. ಮಳೆ ಬರುವುದು ಸ್ವಲ್ಪ ತಡವಾದರೂ ಜಿಲ್ಲೆಯಲ್ಲಿ ಜಲಕ್ಷಮ ಎದುರಾಗುವ ಭೀತಿ ತಪ್ಪಿದ್ದಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.