
ಸೋಮನಾಥ… ಈ ಪದವನ್ನು ಕೇಳುತ್ತಿದ್ದಂತೆಯೇ ನಮ್ಮ ಹೃದಯ ಮತ್ತು ಮನಸ್ಸಿನಲ್ಲಿ ಹೆಮ್ಮೆಯ ಭಾವನೆ ಮೂಡುತ್ತದೆ. ಇದು ಭಾರತದ ಆತ್ಮದ ಶಾಶ್ವತ ಘೋಷಣೆಯಾಗಿದೆ. ಈ ಭವ್ಯ ದೇವಾಲಯವು ಭಾರತದ ಪಶ್ಚಿಮ ಕರಾವಳಿಯ ಗುಜರಾತಿನ ಪ್ರಭಾಸ್ ಪಟಾಣ್ ಎಂಬ ಸ್ಥಳದಲ್ಲಿದೆ. ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರವು ಭಾರತದಾದ್ಯಂತ ಇರುವ 12 ಜ್ಯೋತಿರ್ಲಿಂಗಗಳನ್ನು ಉಲ್ಲೇಖಿಸುತ್ತದೆ. ಈ ಸ್ತೋತ್ರವು “ಸೌರಾಷ್ಮೆ ಸೋಮನಾಥಂ ಚ..” ಎಂದು ಆರಂಭವಾಗುತ್ತದೆ. ಇದು ಸೋಮನಾಥವು ಮೊದಲ ಜ್ಯೋತಿರ್ಲಿಂಗವಾಗಿ ಹೊಂದಿರುವ ನಾಗರಿಕತೆ ಮತ್ತು ಆಧ್ಯಾತ್ಮಿಕತೆಯ ಪ್ರಾಮುಖ್ಯತೆಯನ್ನು ಸಂಕೇತಿಸುತ್ತದೆ.
”ಸೋಮಲಿಂಗಂ ನರೋ ದೃಷ್ಟಾ ಸರ್ವಪಾಪೈ: ಪ್ರಮುಚ್ಯತೇ। ಲಭತೇ ಫಲಂ ಮನೋವಾಂಛಿತಂ ಮೃತಃ ಸ್ವರ್ಗಂ ಸಮಾಶ್ರಯೇತ್॥“ ಎಂದೂ ಸ್ತೋತ್ರವು ಹೇಳುತ್ತದೆ.
ಇದರ ಅರ್ಥ: ‘ಸೋಮನಾಥ ಶಿವಲಿಂಗದ ದರ್ಶನ ಮಾತ್ರದಿಂದಲೇ ಮನುಷ್ಯನು ಎಲ್ಲಾ ಪಾಪಗಳಿಂದ ಮುಕ್ತನಾಗುತ್ತಾನೆ. ತನ್ನ ಮನೋಭಿಲಾಷೆಗಳನ್ನು ಈಡೇರಿಸಿಕೊಳ್ಳುತ್ತಾನೆ ಮತ್ತು ಮರಣಾನಂತರ ಸ್ವರ್ಗವನ್ನು ಪಡೆಯುತ್ತಾನೆ.”
ದುರದೃಷ್ಟವಶಾತ್, ಲಕ್ಷಾಂತರ ಜನರ ಶ್ರದ್ಧೆ ಮತ್ತು ಪ್ರಾರ್ಥನೆಗೆ ಪಾತ್ರವಾಗಿದ್ದ ಇದೇ ಸೋಮನಾಥ ದೇವಾಲಯವು ವಿದೇಶಿ ಆಕ್ರಮಣಕಾರರ ದಾಳಿಗೆ ತುತ್ತಾಯಿತು. ಅವರ ಉದ್ದೇಶ ಭಕ್ತಿಯಾಗಿರಲಿಲ್ಲ, ಬದಲಿಗೆ ಧ್ವಂಸಗೊಳಿಸುವುದಾಗಿತ್ತು.
1026ರ ದಾಳಿ ಮತ್ತು 2026ರ ಮಹತ್ವ
ಸೋಮನಾಥ ದೇವಾಲಯದ ಪಾಲಿಗೆ 2026ನೇ ವರ್ಷವು ಮಹತ್ವದಾಗಿದೆ. ಈ ಮಹಾನ್ ಪುಣ್ಯಕ್ಷೇತ್ರದ ಮೇಲೆ ಮೊದಲ ದಾಳಿ ನಡೆದು ಈಗ 1,000 ವರ್ಷಗಳು ತುಂಬಿವೆ. 1026ರ ಜನವರಿಯಲ್ಲಿ ಮಹಮದ್ ಘಜ್ನಿಯು ಈ ದೇವಾಲಯದ ಮೇಲೆ ದಾಳಿ ಮಾಡಿದ್ದನು. ಒಂದು ಕ್ರೂರ ಮತ್ತು ಅನಾಗರಿಕ ಆಕ್ರಮಣದ ಮೂಲಕ, ಭಾರತದ ನಂಬಿಕೆ ಮತ್ತು ನಾಗರಿಕತೆಯ ಮಹಾನ್ ಸಂಕೇತವನ್ನು ನಾಶಪಡಿಸುವುದು ಅವನ ಗುರಿಯಾಗಿತ್ತು.
ಆದರೂ, ಒಂದು ಸಾವಿರ ವರ್ಷಗಳ ನಂತರವೂ, ಸೋಮನಾಥದ ಭವ್ಯತೆಯನ್ನು ಮರುಸ್ಥಾಪಿಸಲು ನಡೆದ ಹಲವಾರು ಪ್ರಯತ್ನಗಳ ಫಲವಾಗಿ, ಈ ದೇವಾಲಯವು ಇಂದಿಗೂ ವೈಭವದಿಂದ ಕಂಗೊಳಿಸುತ್ತಿದೆ. ಅಂತಹ ಪ್ರಯತ್ನಗಳಲ್ಲಿ ಒಂದು ಪ್ರಮುಖ ಮೈಲಿಗಲ್ಲು 2026 ರಲ್ಲಿ 75 ವರ್ಷಗಳನ್ನು ಪೂರೈಸಲಿದೆ. ಮೇ 11, 1951 ರಂದು ನಡೆದ ಸಮಾರಂಭದಲ್ಲಿ ಭಾರತದ ಅಂದಿನ ರಾಷ್ಟ್ರಪತಿಗಳಾದ ಡಾ. ರಾಜೇಂದ್ರ ಪ್ರಸಾದ್ ಅವರ ಸಮ್ಮುಖದಲ್ಲಿ. ಪುನರ್ನಿಮರ್ಾಣಗೊಂಡ ಈ ದೇವಾಲಯವು ಭಕ್ತರಿಗಾಗಿ ತನ್ನ ಬಾಗಿಲುಗಳನ್ನು ತೆರೆಯಿತು.
ಒಂದು ಸಾವಿರ ವರ್ಷಗಳ ಹಿಂದೆ 1026 ರಲ್ಲಿ ಸೋಮನಾಥದ ಮೇಲೆ ನಡೆದ ಮೊದಲ ಆಕ್ರಮಣ, ಅಲ್ಲಿನ ಜನರ ಮೇಲೆ ಎಸಗಲಾದ ಕ್ರೌರ್ಯ ಮತ್ತು ಆ ಪುಣ್ಯಕ್ಷೇತ್ರಕ್ಕೆ ಉಂಟಾದ ವಿನಾಶದ ಬಗ್ಗೆ ವಿವಿಧ ಐತಿಹಾಸಿಕ ದಾಖಲೆಗಳಲ್ಲಿ ಅತ್ಯಂತ ವಿವರವಾಗಿ ದಾಖಲಿಸಲಾಗಿದೆ. ನೀವು ಅವುಗಳನ್ನು ಓದಿದಾಗ ಹೃದಯವು ನಡುಗುತ್ತದೆ. ಪ್ರತಿಯೊಂದು ಸಾಲು ಕೂಡ ಕಾಲ ಕಳೆದಂತೆ ಮರೆಯಾಗದಂತಹ ದುಃಖ, ಕ್ರೌರ್ಯ ಮತ್ತು ವೇದನೆಯ ಭಾರವನ್ನು ಹೊತ್ತಿದೆ.
ಇದು ಭಾರತದ ಮೇಲೆ ಮತ್ತು ಜನರ ಮನೋಬಲದ ಮೇಲೆ ಬೀರಿದ ಪರಿಣಾಮವನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಅಷ್ಟಕ್ಕೂ, ಸೋಮನಾಥವು ಅಪಾರ ಆಧ್ಯಾತ್ಮಿಕ ಮಹತ್ವವನ್ನು ಹೊಂದಿತ್ತು. ಇದು ಕರಾವಳಿಯಲ್ಲಿದ್ದುದರಿಂದ, ಸಮಾಜಕ್ಕೆ ಹೆಚ್ಚಿನ ಆರ್ಥಿಕ ಬಲವನ್ನು ನೀಡಿತ್ತು: ಇಲ್ಲಿನ ಸಮುದ್ರ ವ್ಯಾಪಾರಿಗಳು ಮತ್ತು ನಾವಿಕರು ಸೋಮನಾಥದ ಭವ್ಯತೆಯ ಕಥೆಗಳನ್ನು ದೂರದೂರುಗಳಿಗೂ ಪಸರಿಸಿದ್ದರು.
ಆದರೂ, ಮೊದಲ ದಾಳಿಯ ಒಂದು ಸಾವಿರ ವರ್ಷಗಳ ನಂತರ. ಸೋಮನಾಥದ ಕಥೆಯು ಕೇವಲ ‘ವಿನಾಶ’ದಿಂದ ವ್ಯಾಖ್ಯಾನಿಸಲ್ಪಟ್ಟಿಲ್ಲ ಎಂದು ನಾನು ನಿಸ್ಸಂದೇಹವಾಗಿ ಮತ್ತು ಹೆಮ್ಮೆಯಿಂದ ಹೇಳಬಲ್ಲೆ. ಬದಲಾಗಿ, ಇದು ಭಾರತ ಮಾತೆಯ ಕೋಟ್ಯಂತರ ಮಕ್ಕಳ ಅಚಲವಾದ ಧೈರ್ಯದಿಂದ ವ್ಯಾಖ್ಯಾನಿಸಲ್ಪಟ್ಟಿದೆ.
ಒಂದು ಸಾವಿರ ವರ್ಷಗಳ ಹಿಂದೆ, ಅಂದರೆ 1026 ರಲ್ಲಿ ಆರಂಭವಾದ ಮಧ್ಯಕಾಲೀನ ಅನಾಗರಿಕತೆಯು ಸೋಮನಾಥದ ಮೇಲೆ ಪದೇ ಪದೇ ದಾಳಿ ಮಾಡಲು ಇತರರಿಗೂ ‘ಪ್ರೇರಣೆ’ ನೀಡಿತು. ಅದು ನಮ್ಮ ಜನರನ್ನು ಮತ್ತು ಸಂಸ್ಕೃತಿಯನ್ನು ಗುಲಾಮಗಿರಿಗೆ ತಳ್ಳಲು ನಡೆದ ಪ್ರಯತ್ನದ ಆರಂಭವಾಗಿತ್ತು. ಆದರೆ, ಪ್ರತಿ ಬಾರಿ ದೇವಾಲಯದ ಮೇಲೆ ದಾಳಿಯಾದಾಗಲೂ, ಅದನ್ನು ರಕ್ಷಿಸಲು ಎದ್ದು ನಿಂತ ಮತ್ತು ಸರ್ವೋಚ್ಚ ತ್ಯಾಗವನ್ನೂ ಮಾಡಿದ ಮಹಾನ್ ಪುರುಷರು ಮತ್ತು ಮಹಿಳೆಯರು ನಮ್ಮಲ್ಲಿದ್ದರು. ಪ್ರತಿ ಬಾರಿಯೂ, ತಲೆಮಾರುಗಳಿಂದ ನಮ್ಮ ಈ ಮಹಾನ್ ನಾಗರಿಕತೆಯ ಜನರು ಮತ್ತೆ ಪುಟಿದೆದ್ದು, ದೇವಾಲಯವನ್ನು ಪುನರ್ನಿರ್ಮಿಸಿದರು ಮತ್ತು ಪುನಶ್ಚೇತನಗೊಳಿಸಿದರು. ಸೋಮನಾಥದಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಲು ಉದಾತ್ತ ಪ್ರಯತ್ನವನ್ನು ಮಾಡಿದ ಅಹಲ್ಯಾಬಾಯಿ ಹೋಳ್ಳರ್ ಅವರಂತಹ ಮಹನೀಯರನ್ನು ಪೋಷಿಸಿದ ಅದೇ ಮಣ್ಣಿನಲ್ಲಿ ನಾವೂ ಬೆಳೆದಿರುವುದು ನಮ್ಮ ಸೌಭಾಗ್ಯ.
ಸ್ವಾಮಿ ವಿವೇಕಾನಂದರ ಅನುಭವ
1890ರ ದಶಕದಲ್ಲಿ ಸ್ವಾಮಿ ವಿವೇಕಾನಂದರು ಸೋಮನಾಥಕ್ಕೆ ಭೇಟಿ ನೀಡಿದ್ದರು ಮತ್ತು ಆ ಅನುಭವವು ಅವರ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿತು. 1897ರಲ್ಲಿ ಚೆನ್ನೈನಲ್ಲಿ ನೀಡಿದ ಉಪನ್ಯಾಸವೊಂದರಲ್ಲಿ ಅವರು ತಮ್ಮ ಭಾವನೆಗಳನ್ನು ಹೀಗೆ ವ್ಯಕ್ತಪಡಿಸಿದ್ದರು: “ದಕ್ಷಿಣ ಭಾರತದ ಈ ಕೆಲವು ಪುರಾತನ ದೇವಾಲಯಗಳು ಮತ್ತು ಗುಜರಾತಿನ ಸೋಮನಾಥದಂತಹ ದೇವಾಲಯಗಳು ನಿಮಗೆ ಅಪಾರ ಜ್ಞಾನವನ್ನು ಬೋಧಿಸುತ್ತವೆ; ಯಾವುದೇ ಪುಸ್ತಕಗಳಿಗಿಂತ ಹೆಚ್ಚಾಗಿ ನಮ್ಮ ಜನರ ಇತಿಹಾಸದ ಬಗ್ಗೆ ನಿಮಗೆ ಆಳವಾದ ಒಳನೋಟವನ್ನು ನೀಡುತ್ತವೆ. ಈ ದೇವಾಲಯಗಳು ನೂರಾರು ದಾಳಿಗಳನ್ನು ಮತ್ತು ನೂರಾರು ಪುನರ್ಜನ್ಮಗಳನ್ನು ಹೇಗೆ ಕಂಡಿವೆ ಎಂಬುದನ್ನು ಗಮನಿಸಿ: ನಿರಂತರವಾಗಿ ಧ್ವಂಸಗೊಂಡು ಮತ್ತೆ ಅವಶೇಷಗಳಿಂದ ಸತತವಾಗಿ ಪುಟಿದೆದ್ದು. ಎಂದಿಗಿಂತಲೂ ಹೆಚ್ಚು ಶಕ್ತಿಯುತವಾಗಿ ಪುನಶ್ವೇತನಗೊಂಡಿವೆ! ಇದೇ ರಾಷ್ಟ್ರೀಯ ಮನೋಸ್ಥಿತಿ. ಇದೇ ರಾಷ್ಟ್ರೀಯ ಜೀವಧಾರೆ. ಇದನ್ನು ಅನುಸರಿಸಿ ಮತ್ತು ಇದು ನಿಮ್ಮನ್ನು ವೈಭವದತ್ತ ಕೊಂಡೊಯ್ಯುತ್ತದೆ. ಆ ಜೀವಧಾರೆಯಿಂದ ಹೊರಬಂದ ಕ್ಷಣವೇ ಸಾವು ನಿಮ್ಮ ಏಕೈಕ ಫಲಿತಾಂಶವಾಗುತ್ತದೆ ಮತ್ತು ಸಂಪೂರ್ಣ ಸರ್ವನಾಶವೇ ಅದರ ಏಕೈಕ ಪರಿಣಾಮವಾಗುತ್ತದೆ.
ಸ್ವಾತಂತ್ರ್ಯಾನಂತರ ಪುನರ್ನಿರ್ಮಾಣ
ಸ್ವಾತಂತ್ರ್ಯದ ನಂತರ ಸೋಮನಾಥ ದೇವಾಲಯವನ್ನು ಪುನರ್ನಿಮಿ್ರಸುವ ಪವಿತ್ರ ಜವಾಬ್ದಾರಿಯು ಸರ್ದಾರ್ ವಲ್ಲಭಭಾಯಿ ಪಟೇಲರ ಹೆಗಲೇರಿತು. 1947ರ ದೀಪಾವಳಿಯ ಸಮಯದಲ್ಲಿ ಅವರು ಅಲ್ಲಿಗೆ ನೀಡಿದ ಭೇಟಿಯು ಅವರ ಮೇಲೆ ಆಳವಾದ ಪ್ರಭಾವ ಬೀರಿತು, ಎಷ್ಟು ಎಂದರೆ ಅವರು ಅಲ್ಲಿಯೇ ದೇವಾಲಯವನ್ನು ಪುನರ್ನಿಮಿ್ರಸುವುದಾಗಿ ಘೋಷಿಸಿದರು. ಅಂತಿಮವಾಗಿ, ಮೇ 11, 1951 ರಂದು ಸೋಮನಾಥದ ಭವ್ಯ ದೇವಾಲಯವು ಭಕ್ತರಿಗಾಗಿ ತನ್ನ ಬಾಗಿಲುಗಳನ್ನು ತೆರೆಯಿತು ಮತ್ತು ಆ ಸಂದರ್ಭದಲ್ಲಿ ಡಾ. ರಾಜೇಂದ್ರ ಪ್ರಸಾದ್ ಅವರು ಉಪಸ್ಥಿತರಿದ್ದರು. ಈ ಐತಿಹಾಸಿಕ ದಿನವನ್ನು ನೋಡಲು ಸರ್ದಾರ್ ಪಟೇಲರು ಜೀವಂತವಾಗಿರಲಿಲ್ಲ, ಆದರೆ ಅವರ ಕನಸಿನ ಸಾಕಾರವು ದೇಶದ ಮುಂದೆ ತಲೆ ಎತ್ತಿ ನಿಂತಿತ್ತು. ಅಂದಿನ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರಿಗೆ ಈ ಬೆಳವಣಿಗೆಯ ಬಗ್ಗೆ ಅಷ್ಟೊಂದು ಉತ್ಸುಕತೆ ಇರಲಿಲ್ಲ. ಗೌರವಾನ್ವಿತ ರಾಷ್ಟ್ರಪತಿಯವರು ಮತ್ತು ಸಚಿವರು ಈ ವಿಶೇಷ ಕಾರ್ಯಕ್ರಮದೊಂದಿಗೆ ಗುರುತಿಸಿಕೊಳ್ಳುವುದು ಅವರಿಗೆ ಇಷ್ಟವಿರಲಿಲ್ಲ. ಈ ಘಟನೆಯು ಭಾರತದ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಮೂಡಿಸುತ್ತದೆ ಎಂದು ಅವರು ಹೇಳಿದರು. ಆದರೆ ಡಾ. ರಾಜೇಂದ್ರ ಪ್ರಸಾದ್ ಅವರು ತಮ್ಮ ನಿರ್ಧಾರಕ್ಕೆ ಬದ್ಧರಾಗಿ ನಿಂತರು ಮತ್ತು ಉಳಿದದ್ದು ಇತಿಹಾಸ. ಸರ್ದಾರ್ ಪಟೇಲರಿಗೆ ಅತ್ಯಂತ ಪರಿಣಾಮಕಾರಿಯಾಗಿ ಬೆಂಬಲ ನೀಡಿದ ಕೆ. ಎಂ. ಮುನ್ನಿ ಅವರನ್ನು ಸ್ಮರಿಸದೆ ಸೋಮನಾಥದ ಯಾವುದೇ ಉಲ್ಲೇಖವು ಪೂರ್ಣಗೊಳ್ಳುವುದಿಲ್ಲ. ಸೋಮನಾಥ ಕುರಿತಾದ ಅವರ ಕೃತಿಗಳು, ವಿಶೇಷವಾಗಿ ಸೋಮನಾಥ: ದಶ್ರನ್ ಎಟರ್ನಲ್ ಪುಸ್ತಕವು ಅತ್ಯಂತ ಮಾಹಿತಿಪೂರ್ಣ ಮತ್ತು ಶಿಕ್ಷಣಪದವಾಗಿದೆ.
ನಿಜಕ್ಕೂ, ಮುನ್ನಿಜಿಯವರ ಪುಸ್ತಕದ ಶೀರ್ಷಿಕೆಯು ಸೂಚಿಸುವಂತೆ, ನಾವು ಆತ್ಮ ಮತ್ತು ವಿಚಾರಗಳ ಶಾಶ್ವತತೆಯ ಬಗ್ಗೆ ದೃಢವಾದ ನಂಬಿಕೆಯನ್ನು ಹೊಂದಿರುವ ನಾಗರಿಕತೆಯಾಗಿದ್ದೇವೆ. ಭಗವದ್ಗೀತೆಯ ಪ್ರಸಿದ್ದ ಶ್ಲೋಕವಾದ “ನೈನಂ ಛಿಂದಂತಿ ಶಸ್ತ್ರಾಣಿ…” ತಿಳಿಸುವಂತೆ, ಯಾವುದು ಶಾಶ್ವತವೋ ಅದು ಅವಿನಾಶಿಯಾದುದು ಎಂದು ನಾವು ದೃಢವಾಗಿ ನಂಬುತ್ತೇವೆ. ಎಂತಹದೋ ಅಡತಡೆಗಳು ಮತ್ತು ಹೋರಾಟಗಳನ್ನು ಮೆಟ್ಟಿ ನಿಂತು ಭವ್ಯವಾಗಿ ಕಂಗೊಳಿಸುತ್ತಿರುವ ಸೋಮನಾಥಕ್ಕಿಂತ ನಮ್ಮ ನಾಗರಿಕತೆಯ ಅದಮ್ಮ ಚೇತನಕ್ಕೆ ಮತ್ತೊಂದು ಉತ್ತಮ ಉದಾಹರಣೆ ಇರಲು ಸಾಧ್ಯವಿಲ್ಲ.
ಶತಮಾನಗಳ ವಿದೇಶಿ ಆಕ್ರಮಣಗಳು ಮತ್ತು ವಸಾಹತುಶಾಹಿ ಲೂಟಿಯನ್ನು ಮೆಟ್ಟಿ ನಿಂತು, ಇಂದು ಜಾಗತಿಕ ಬೆಳವಣಿಗೆಯ ಪಥದಲ್ಲಿ ಅತ್ಯಂತ ಉಜ್ವಲ ತಾಣಗಳಲ್ಲಿ ಒಂದಾಗಿರುವ ನಮ್ಮ ದೇಶದಲ್ಲಿ ಇದೇ ಅದಮ್ಯ ಮನೋಭಾವವು ಗೋಚರಿಸುತ್ತಿದೆ. ನಮ್ಮ ಮೌಲ್ಯ ವ್ಯವಸ್ಥೆಗಳು ಮತ್ತು ನಮ್ಮ ಜನರ ದೃಢಸಂಕಲ್ಪವೇ ಇಂದು ಭಾರತವನ್ನು ಜಾಗತಿಕ ಗಮನದ ಕೇಂದ್ರವನ್ನಾಗಿ ಮಾಡಿದೆ. ಇಡೀ ಜಗತ್ತು ಭಾರತವನ್ನು ಭರವಸೆ ಮತ್ತು ಆಶಾವಾದದೊಂದಿಗೆ ನೋಡುತ್ತಿದೆ. ಜಗತ್ತಿನ ರಾಷ್ಟ್ರಗಳು ನಮ್ಮ ನವೀನ ಆಲೋಚನೆಯ ಯುವಜನರಲ್ಲಿ ಹೂಡಿಕೆ ಮಾಡಲು ಬಯಸುತ್ತಿವೆ. ನಮ್ಮ ಕಲೆ, ಸಂಸ್ಕೃತಿ, ಸಂಗೀತ ಮತ್ತು ಹಲವಾರು ಹಬ್ಬಗಳು ಜಾಗತಿಕ ಮಟ್ಟವನ್ನು ತಲುಪುತ್ತಿವೆ. ಯೋಗ ಮತ್ತು ಆಯುರ್ವೇದಗಳು ಆರೋಗ್ಯಕರ ಜೀವನವನ್ನು ಉತ್ತೇಜಿಸುವ ಮೂಲಕ ವಿಶ್ವಾದ್ಯಂತ ಪ್ರಭಾವ ಬೀರುತ್ತಿವೆ. ಪ್ರಪಂಚದ ಅತ್ಯಂತ ಗಂಭೀರವಾದ ಕೆಲವು ಜಾಗತಿಕ ಸವಾಲುಗಳಿಗೆ ಭಾರತದಿಂದಲೇ ಪರಿಹಾರಗಳು ಮೂಡಿಬರುತ್ತಿವೆ.
ಅನಾದಿ ಕಾಲದಿಂದಲೂ, ಸೋಮನಾಥವು ಸಮಾಜದ ವಿವಿಧ ಸ್ತರದ ಜನರನ್ನು ಒಗ್ಗೂಡಿಸುತ್ತಾ ಬಂದಿದೆ. ಶತಮಾನಗಳ ಹಿಂದೆ. ಗೌರವಾನ್ವಿತ ಜೈನ ಮುನಿಗಳಾದ ಕಲಿಕಾಲ ಸರ್ವಜ್ಞ ಹೇಮಚಂದ್ರಾಚಾರ್ಯರು ಸೋಮನಾಥಕ್ಕೆ ಬಂದಿದ್ದರು. ಅಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಅವರು ಈ ಶ್ಲೋಕವನ್ನು ಪಠಿಸಿದರೆಂದು ಹೇಳಲಾಗುತ್ತದೆ: “ಭವಬೀಜಾಂಕುರಜನನಾ ರಾಗಾದ್ಯಾ ಕ್ಷಯಮುಪಗತಾ ಯಸ್ಯ।’. ಇದರ ಅರ್ಥ – “ಯಾರಲ್ಲಿ ಭವದ ಬೀಜಗಳು ನಾಶವಾಗಿದೆಯೋ, ಯಾರಲ್ಲಿ ರಾಗ ಮತ್ತು ಎಲ್ಲಾ ರೀತಿಯ ಕ್ಷೇಶಗಳು ಕ್ಷೀಣಿಸಿವೆಯೋ, ಅಂತಹ ಪರಮಾತ್ಮನಿಗೆ ನನ್ನ ನಮನಗಳು. ಇಂದು ಕೂಡ ಸೋಮನಾಥವು ಮನುಷ್ಯನ ಮನಸ್ಸು ಮತ್ತು ಆತ್ಮದಲ್ಲಿ ಅಂತಹದ್ದೇ ಆಳವಾದ ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.
1026ರ ಆ ಮೊದಲ ದಾಳಿಯ ಒಂದು ಸಾವಿರ ವರ್ಷಗಳ ನಂತರವೂ, ಸೋಮನಾಥದ ಸಮುದ್ರವು ಅಂದಿನಂತೆಯೇ ಅದೇ ತೀವ್ರತೆಯಿಂದ ಇಂದಿಗೂ ಘರ್ಜಿಸುತ್ತಿದೆ. ಸೋಮನಾಥದ ತೀರವನ್ನು ಅಪ್ಪಳಿಸುವ ಅಲೆಗಳು ಒಂದು ಕಥೆಯನ್ನು ಹೇಳುತ್ತವೆ-ಏನೇ ಆದರೂ. ಈ ಅಲೆಗಳಂತೆಯೇ ಇದು (ಸೋಮನಾಥ) ಮತ್ತೆ ಮತ್ತೆ ಪುಟಿದೆದ್ದಿದೆ.
ಹಳೆಯ ಕಾಲದ ಆಕ್ರಮಣಕಾರರು ಇಂದು ಗಾಳಿಯಲ್ಲಿನ ಧೂಳಿನಂತಾಗಿದ್ದಾರೆ. ಅವರ ಹೆಸರುಗಳು ಕೇವಲ ವಿನಾಶಕ್ಕೆ ಪರ್ಯಾಯವಾಗಿ ಉಳಿದಿವೆ. ಅವರು ಇತಿಹಾಸದ ಪುಟಗಳಲ್ಲಿ ಕೇವಲ ಅಡಿಟಿಪ್ಪಣಿಗಳಾಗಿ ಉಳಿದುಹೋಗಿದ್ದಾರೆ. ಆದರೆ ಸೋಮನಾಥವು ಜ್ಞಾಜಲ್ಯಮಾನವಾಗಿ ನಿಂತಿದೆ. ಕ್ಷಿತಿಜದಾಚೆಗೂ ತನ್ನ ಪ್ರಭೆಯನ್ನು ಹರಡುತ್ತಿದೆ; 1026ರ ದಾಳಿಯಿಂದ ಕುಂದದ ಆ ಶಾಶ್ವತ ಚೇತನವನ್ನು ನಮಗೆ ನೆನಪಿಸುತ್ತಿದೆ. ಸೋಮನಾಥವು ಭರವಸೆಯ ಗೀತೆಯಾಗಿದ್ದು, ದ್ವೇಷ ಮತ್ತು ಮತಾಂಧತೆಗೆ ಕೇವಲ ಒಂದು ಕ್ಷಣ ನಾಶಮಾಡುವ ಶಕ್ತಿ ಇರಬಹುದು, ಆದರೆ ಒಳ್ಳೆಯತನದ ಶಕ್ತಿಯ ಮೇಲಿರುವ ನಂಬಿಕೆ ಮತ್ತು ದೃಢ ವಿಶ್ವಾಸಕ್ಕೆ ಶಾಶ್ವತವಾಗಿ ಸೃಜಿಸುವ ಶಕ್ತಿಯಿದೆ ಎಂದು ನಮಗೆ ಸಾರುತ್ತಿದೆ.
ಸಾವಿರ ವರ್ಷಗಳ ಹಿಂದೆ ದಾಳಿಗೊಳಗಾದ ಮತ್ತು ಅಂದಿನಿಂದ ನಿರಂತರ ಆಕ್ರಮಣಗಳನ್ನು ಎದುರಿಸಿದ ಸೋಮನಾಥ ದೇವಾಲಯವು ಪದೇ ಪದೇ ಮತ್ತೆ ಪುಟಿದೇಳಲು ಸಾಧ್ಯವಾಗುವುದಾದರೆ, ಆಕ್ರಮಣಗಳಿಗೂ ಮೊದಲು ಒಂದು ಸಾವಿರ ವರ್ಷಗಳ ಹಿಂದೆ ನಮ್ಮ ಮಹಾನ್ ರಾಷ್ಟ್ರವು ಹೊಂದಿದ್ದ ಅದೇ ವೈಭವವನ್ನು ನಾವು ಖಂಡಿತವಾಗಿಯೂ ಮರುಸ್ಥಾಪಿಸಬಹುದು. ಶ್ರೀ ಸೋಮನಾಥ ಮಹಾದೇವರ ಆಶೀರ್ವಾದದೊಂದಿಗೆ, ನಮ್ಮ ನಾಗರಿಕತೆಯ ಜ್ಞಾನವು ಇಡೀ ವಿಶ್ವದ ಕಲ್ಯಾಣಕ್ಕಾಗಿ ಶ್ರಮಿಸಲು ನಮಗೆ ಮಾರ್ಗದರ್ಶನ ನೀಡುವ ‘ವಿಕಸಿತ ಭಾರತ’ವನ್ನು ನಿರ್ಮಿಸುವ ನವ ಸಂಕಲ್ಪದೊಂದಿಗೆ ಮುನ್ನಡೆಯೋಣ.
ಜೈ, ಸೋಮನಾಥ!
– ಪ್ರಧಾನಿ ಶ್ರೀ ನರೇಂದ್ರ ಮೋದಿ (ಶ್ರೀ ಸೋಮನಾಥ ಟ್ರಸ್ಟ್ ನ ಅಧ್ಯಕ್ಷರು)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



