
ಇ.ವಿ.ಆರ್ ಎಂದೇ ಜನಪ್ರಿಯರಾಗಿರುವ ಅಭಿಮಾನಿಗಳಿಂದ ʼಪೆರಿಯಾರ್ʼ ಎಂದು ಕರೆಸಿಕೊಳ್ಳುವ ಇ.ವಿ. ರಾಮಸಾಮಿ (1879-1973) ತಮ್ಮ ಕಾಲದಲ್ಲಿ ಪ್ರಚಲಿತವಾಗಿದ್ದ ಅಥವಾ ಕೇವಲ ಗ್ರಹಿಕೆಯಲ್ಲಿದ್ದ ಸಾಮಾಜಿಕ ಪಿಡುಗುಗಳನ್ನು ತಮ್ಮ ಪ್ರಚಾರಕ್ಕೆ ಬಂಡವಾಳವಾಗಿ ಬಳಸಿಕೊಂಡ ಜನನಾಯಕ. ನಿಜ ಅರ್ಥದಲ್ಲಿ ಅವರು ವಿಚಾರವಾದಿಯೂ ಅಲ್ಲ, ಮಾನವತಾವಾದಿಯೂ ಅಲ್ಲ. ಅವರು ಕೇವಲ ಹಿಂದೂ ವಿರೋಧಿಯಾಗಿದ್ದರು ಮತ್ತು ಬ್ರಿಟಿಷ್ ಪರವಾದ ನಿಲುವು ಹೊಂದಿದ್ದ ವ್ಯಕ್ತಿಯಾಗಿದ್ದರು. ಅವರನ್ನು ಮಹಾನ್ ದೇಶಭಕ್ತ ಭೀಮರಾವ್ ರಾಮ್ಜಿ ಅಂಬೇಡ್ಕರ್ಗೆ ಕೆಲವರು ಹೋಲಿಸುತ್ತಾರೆ. ಆದರೆ ಮಹಾನ್ ದೇಶಭಕ್ತ ಅಂಬೇಡ್ಕರ್ ಮತ್ತು ದೇಶವನ್ನೇ ತನ್ನ ಸಿದ್ಧಾಂತಕ್ಕಾಗಿ ತುಂಡರಿಸಲು ಹೊರಟ ಪೆರಿಯಾರ್ಗೆ ಎಲ್ಲಿಯ ಹೋಲಿಕೆ?
ಇ.ವಿ ರಾಮಸಾಮಿ ಹಿಂದೂ ದೇವರನ್ನು ಎಷ್ಟರ ಮಟ್ಟಿಗೆ ವಿರೋಧಿಸುತ್ತಿದ್ದರು ಎಂದರೆ ಪ್ರತಿ ಸಾರ್ವಜನಿಕ ಸಭೆ, ಕಾರ್ಯಕ್ರಮ, ಪ್ರತಿಭಟನೆಗಳಲ್ಲಿ ತುಚ್ಛವಾದ ಪದಗಳನ್ನು ಬಳಸಿ ದೇವರನ್ನು, ಹಿಂದೂ ಧರ್ಮವನ್ನು ನಿಂದಿಸುತ್ತಿದ್ದರು. ಇದಕ್ಕೆ ಒಂದು ನಿದರ್ಶನ 1971 ರ ಡಿಸೆಂಬರ್ನಲ್ಲಿ ತಮಿಳುನಾಡಿನ ಸೇಲಂನಲ್ಲಿ ನಡೆದ ಸಾರ್ವಜನಿಕ ಪ್ರತಿಭಟನೆ. ಇಲ್ಲಿ ರಾಮಾಯಣ ಮತ್ತು ಭಗವಾನ್ ರಾಮನನ್ನು ಅನಗತ್ಯವಾಗಿ ಕೇವಲ ರಾಜಕೀಯ ಹಿತಾಸಕ್ತಿಗಾಗಿ ಗುರಿಯಾಗಿಸಲಾಗಿತ್ತು
ರಾಮಸಾಮಿ ಅನುಯಾಯಿಗಳು ನಡೆಸಿದ್ದ ಈ ಪ್ರತಿಭಟನೆಯಲ್ಲಿ ರಾಮಾಯಣದ ಸಂದೇಶಗಳನ್ನು ತಿರುಚಿ ಫಲಕಗಳು ಮತ್ತು ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು, ರಾವಣನನ್ನು ದ್ರಾವಿಡ ಐಕಾನ್ ಆಗಿ ಚಿತ್ರಿಸಲಾಗಿತ್ತು, ಭಗವಾನ್ ರಾಮನನ್ನು ದಕ್ಷಿಣ ಭಾರತದ ಮೇಲೆ ಆರ್ಯ ಮತ್ತು ಬ್ರಾಹ್ಮಣ ಪ್ರಾಬಲ್ಯದ ಸಂಕೇತವಾಗಿ ಚಿತ್ರಿಸಲಾಗಿತ್ತು. ಈ ಪ್ರತಿಭಟನೆ ಸ್ಪಷ್ಟವಾಗಿ ಸೈದ್ಧಾಂತಿಕವಾಗಿತ್ತು, ಪೆರಿಯಾರ್ ಅವರಿಗೆ ಹಿಂದೂ ಮಹಾಕಾವ್ಯಗಳ ಮೇಲೆ ಇದ್ದ ಅಸಹನೆಯ ಅಭಿವ್ಯಕ್ತಿಯಾಗಿ ಈ ಪ್ರತಿಭಟನೆ ಕಂಡುಬಂದಿತ್ತು.
ರಾಮನ ಬಗ್ಗೆ ಪೆರಿಯಾರ್ ಅವರಿಗೆ ಇದ್ದ ದ್ವೇಷ ಅವರ ಭಾಷಣಗಳು ಮತ್ತು ಬರಹಗಳಲ್ಲಿ ಅತ್ಯಂತ ಸ್ಪಷ್ಟವಾಗಿದೆ. ರಾಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು, ಚಾರಿತ್ರ್ಯ ಹರಣ ಮಾಡುವುದು ಅವರ ನಿತ್ಯ ಕಾಯಕವಾಗಿತ್ತು. “ರಾಮ ನಮಗೆ ದೇವರಲ್ಲ. ಅವನು ದ್ರಾವಿಡರ ಮೇಲಿನ ಆರ್ಯರ ಪ್ರಾಬಲ್ಯದ ಸಂಕೇತ” ಎಂದು ಅವರು ಹೇಳುತ್ತಿದ್ದರು.
ರಾಮಾಯಣವು ಪವಿತ್ರ ಗ್ರಂಥವಲ್ಲ, ಜಾತಿ ಶ್ರೇಣಿ ಮತ್ತು ಉತ್ತರ ಭಾರತದ ಸಾಂಸ್ಕೃತಿಕ ಪ್ರಾಬಲ್ಯವನ್ನು ಸಮರ್ಥಿಸಲು ಬಳಸುವ ರಾಜಕೀಯ ಸಾಧನವಾಗಿದೆ ಎಂದು ವಾದಿಸಿದ್ದರು.
ಸೇಲಂ ಪ್ರತಿಭಟನೆಯ ಸಮಯದಲ್ಲಿ, ರಾಮನ ಚಿತ್ರಗಳನ್ನು ಸಾರ್ವಜನಿಕವಾಗಿ ಅವಮಾನಿಸಲಾಗಿತ್ತು ಮತ್ತು ಪ್ರತಿಕೃತಿ ದಹನದಂತಹ ಸಾಂಕೇತಿಕ ಕೃತ್ಯಗಳನ್ನು ನಡೆಸಲಾಗಿತ್ತು ಎಂದು ಅಂದಿನ ವರದಿಗಳು ಸ್ಪಷ್ಟವಾಗಿ ದಾಖಲಿಸಿವೆ. ಸಂಘಟಕರು ಈ ಕೃತ್ಯವನ್ನು ವೈಚಾರಿಕ ವಿಮರ್ಶೆ ಎಂದು ಸಮರ್ಥಿಸಿಕೊಂಡರು. ಆದರೆ, ಈ ಪ್ರತಿಭಟನೆಯು ಪೆರಿಯಾರ್ ಅವರ ಸ್ವಂತ ವಿಚಾರಗಳನ್ನು ಪ್ರತಿಬಿಂಬಿಸಿತ್ತು . ಅದರಲ್ಲೂ “ರಾಮ ಅನ್ಯಾಯ, ವಂಚನೆ ಮತ್ತು ದ್ರಾವಿಡ ಜನರ ಗುಲಾಮಗಿರಿಯನ್ನು ಪ್ರತಿನಿಧಿಸುತ್ತಾನೆ” ಎನ್ನುವ ಪೆರಿಯಾರ್ ಮಾತು ರಾಮನನ್ನು ಅವರೆಷ್ಟು ಅಪಾರ್ಥ ಮಾಡಿಕೊಂಡಿದ್ದರು ಎಂಬುದಕ್ಕೆ ಒಂದು ನಿದರ್ಶನವಷ್ಟೇ.
ಸೇಲಂನಲ್ಲಿ ನಡೆದ ಆ ಪ್ರತಿಭಟನೆ ಪೆರಿಯಾರ್ ಅವರ ದೊಡ್ಡ ರಾಜಕೀಯ ಯೋಜನೆಯ ಭಾಗ ಆಗಿತ್ತು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ದಶಕಗಳ ಕಾಲ, ಅವರು ದ್ರಾವಿಡವಾದವನ್ನು ಕೇವಲ ಸಾಮಾಜಿಕ ಸುಧಾರಣೆಯಾಗಿ ಮಾತ್ರವಲ್ಲದೆ, ರಾಜಕೀಯ ಮತ್ತು ಪ್ರತ್ಯೇಕತಾವಾದಿ ಸಾಧನವಾಗಿ ಬಳಸಿದರು. ಅವರು ಪ್ರತ್ಯೇಕ ‘ದ್ರಾವಿಡ ನಾಡು’ಗಾಗಿ ಬಹಿರಂಗವಾಗಿ ಪ್ರತಿಪಾದಿಸಿದ್ದರು, ಹಿಂದೂ ನಾಗರಿಕತೆಯ ಏಕತೆಯನ್ನು ತಿರಸ್ಕರಿಸಿದರು ಮತ್ತು ರಾಮ ಮತ್ತು ರಾಮಾಯಣಕ್ಕೆ ವಿರೋಧವನ್ನು ಪ್ರಾಸಂಗಿಕ ಪ್ರಚೋದನೆಗಿಂತ ಹೆಚ್ಚಾಗಿ ಸಿದ್ಧಾಂತದ ಕೇಂದ್ರವಾಗಿ ಇರಿಸಿದ್ದರು.
ಸೇಲಂ ಪ್ರತಿಭಟನೆ ವ್ಯಾಪಕ ಆಕ್ರೋಶಗಳನ್ನು ಹುಟ್ಟು ಹಾಕಿತ್ತು. ಹಿಂದೂ ಸಂಘಟನೆಗಳು ಇದನ್ನು ಸನಾತನ ಧರ್ಮಕ್ಕೆ ಮಾಡಿದ ಉದ್ದೇಶಪೂರ್ವಕ ಅವಮಾನ ಎಂದು ಖಂಡಿಸಿದವು, ಈ ಸಂದರ್ಭದಲ್ಲಿ ಭುಗಿಲೆದ್ದ ಉದ್ವಿಗ್ನತೆಯನ್ನು ಶಮನ ಮಾಡಲು ಆಡಳಿತವು ಪೊಲೀಸ್ ಪಡೆಗಳನ್ನು ನಿಯೋಜಿಸಿತು. ಈ ಪ್ರತಿಭಟನೆಯು ಮುಕ್ತ ಅಭಿವ್ಯಕ್ತಿಯನ್ನು ಪ್ರತಿನಿಧಿಸುತ್ತದೆಯೇ ಅಥವಾ ಉದ್ದೇಶಪೂರ್ವಕ ಧಾರ್ಮಿಕ ಪ್ರಚೋದನೆಯಾಗಿ ಪರಿಣಮಿಸಿದೆಯೇ ಎಂಬ ಬಗ್ಗೆಯೂ ಚರ್ಚೆಗಳಾದವು.
ಪ್ರತಿ ಡಿಸೆಂಬರ್ನಲ್ಲಿ ಪೆರಿಯಾರ್ ಅವರ ಪುಣ್ಯತಿಥಿಯನ್ನು ಆಚರಿಸಲಾಗುತ್ತಿರುವುದರಿಂದ ಅವರ ಸಿದ್ಧಾಂತಗಳ ಬಗೆಗಿನ ಚರ್ಚೆಗಳು ಮುನ್ನಲೆಗೆ ಬರುತ್ತವೆ. ರಾಮನ ಮೇಲಿನ ಅವರ ದ್ವೇಷ ಮತ್ತು ಅವಮಾನಕಾರಿ ಮಾತುಗಳು ಕೇವಲ ಸೈದ್ಧಾಂತಿಕವಲ್ಲ, ಉದ್ದೇಶಪೂರ್ವಕ ಮತ್ತು ಪೆರಿಯಾರ್ ಅವರ ರಾಜಕೀಯ ದೃಷ್ಟಿಕೋನಕ್ಕೆ ಕೇಂದ್ರಬಿಂದುವಾಗಿದ್ದವು. ಅವು ಆಕಸ್ಮಿಕ ಅಥವಾ ಸಾಂಕೇತಿಕ ಭಿನ್ನಾಭಿಪ್ರಾಯವಲ್ಲ ಎಂಬುದಕ್ಕೆ ಸೇಲಂ ಪ್ರತಿಭಟನೆ ಸಾಕ್ಷಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



