
ಗುರು ಗೋಬಿಂದ್ ಸಿಂಗ್ ಅವರು ಬಾಬಾ ಸಂಗತ್ ಸಿಂಗ್ ಜಿ ಅವರನ್ನು ಯುದ್ಧಕ್ಕೆ ಸಿದ್ಧಪಡಿಸುತ್ತಿರುವ ಚಿತ್ರ ಮೂಲ: nedricknews
ಡಿಸೆಂಬರ್ 1704 ರಲ್ಲಿ ನಡೆದ ಎರಡನೇ ಚಾಮ್ಕೌರ್ ಯುದ್ಧದ ಸಮಯದಲ್ಲಿ, ಔರಂಗಜೇಬ್ ಒಂದು ನಿರ್ದಯ ಆದೇಶವನ್ನು ಹೊರಡಿಸಿದ್ದ. ಸತ್ತು ಅಥವಾ ಜೀವಂತವಾಗಿಯಾದರೂ ಗುರು ಗೋಬಿಂದ್ ಸಿಂಗ್ ಅವರನ್ನು ಸೆರೆಹಿಡಿಯಬೇಕು ಎಂಬುದು ಆತನ ಆದೇಶವಾಗಿತ್ತು. ಆತನ ಆದೇಶದಂತೆ ಕಾರ್ಯಾಚರಣೆ ಆರಂಭಗೊಂಡಿತ್ತು. ಗುರು ಗೋಬಿಂದ್ ಅವರನ್ನು ಸುತ್ತುವರೆಯಲಾಗಿದೆ ಮತ್ತು ಅವರು ಚಾಮ್ಕೌರ್ನಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದೇ ಮೊಘಲ್ ಸೈನ್ಯ ನಂಬಿತ್ತು. ಆದರೆ ಭಾಯಿ ಸಂಗತ್ ಸಿಂಗ್ ಗುರು ಗೋಬಿಂದರ ಪಕ್ಕದಲ್ಲಿ ನಿಂತಿರುವವರೆಗೆ ಮೊಘಲರ ಆ ಕಾರ್ಯಾಚರಣೆ ಸಫಲವಾಗುವುದು ಅಸಾಧ್ಯವೇ ಆಗಿತ್ತು. ಮುಂದೆ ಹೆಜ್ಜೆ ಹಾಕುವುದು ಎಂದರೆ ಸಾವು ಖಚಿತ ಎಂದು ಸಂಪೂರ್ಣವಾಗಿ ತಿಳಿದಿದ್ದ ವೀರ್ ಬಾಬಾ ಸಂಗತ್ ಸಿಂಗ್ ಎಂದೂ ಕರೆಯಲ್ಪಡುವ ಭಾಯಿ ಸಂಗತ್ ಸಿಂಗ್ 10 ನೇ ಸಿಖ್ ಗುರುವನ್ನು ರಕ್ಷಿಸಲು ತ್ಯಾಗದ ಮಾರ್ಗವನ್ನು ಆರಿಸಿಕೊಂಡ.
ಸಂಗತ್ ಸಿಂಗ್ ಔರಂಗಜೇಬನನ್ನು ಹೇಗೆ ಮರುಳು ಮಾಡಿದ್ದ ಗೊತ್ತಾ?
ಸಂಗತ್ ಸಿಂಗ್ ಅವರ ದೈಹಿಕ ನೋಟವು ಗುರು ಗೋಬಿಂದ್ ಸಿಂಗ್ ಅವರನ್ನು ಹೋಲುತ್ತಿತ್ತು, ಹೀಗಾಗಿ ಆತ ಗುರು ಗೋವಿಂದ್ ಅವರ ಸ್ಥಾನದಲ್ಲಿ ನಿಂತು ಹೋರಾಡಲು ಅವಕಾಶ ನೀಡಬೇಕೆಂದು ವಿನಂತಿಸಿದ. ಅವನ ಅಚಲ ಭಕ್ತಿಗೆ ಮಣಿದು, ಗುರು ಗೋಬಿಂದ್ ಸಿಂಗ್ ಅವರು ತಮ್ಮದೇ ಆದ ಉಡುಪನ್ನು, ಅದೇ ದುಮಲ್ಲಾ, ಅದೇ ಕಲ್ಗಿ (ರಾಜ ಗರಿ), ತಮ್ಮದೇ ಯೋಧನ ನಿಲುವಂಗಿಗಳನ್ನು ಆತನಿಗೆ ತೊಡಿಸಿದರು. ನಂತರ ಕಾರ್ಯಾರೂಪಕ್ಕೆ ಬಂದಿತು ನಿಷ್ಠೆ ಮತ್ತು ಧೈರ್ಯದಿಂದ ಉತ್ತೇಜಿತವಾದ ಅದ್ಭುತ ತಂತ್ರ. ಡಿಸೆಂಬರ್ 22-23, 1704 ರ ರಾತ್ರಿ ಚಾಮ್ಕೌರ್ ಕದನದ ಅಂತಿಮ ಹಂತಗಳಲ್ಲಿ ಸಂಗತ್ ಸಿಂಗ್ ಸ್ವತಃ “ಗುರು” ವಾಗಿ ಯುದ್ಧಭೂಮಿಗೆ ನುಗ್ಗಿದರು.
ಡಿಸೆಂಬರ್ 23, 1704 ರಂದು, ಮೂರು ದೀರ್ಘ ಗಂಟೆಗಳ ಕಾಲ ಮೊಘಲರು ಗುರು ಗೋಬಿಂದ್ ಸಿಂಗ್ ಅವರನ್ನು ಎದುರಿಸುತ್ತಿದ್ದೇವೆಂದು ನಂಬಿ ಉಗ್ರವಾಗಿ ಹೋರಾಡಿದರು. ಆದರೆ 10 ಲಕ್ಷ ಸಂಖ್ಯೆಯಲ್ಲಿದ್ದ ಮೊಘಲರ ವಿರುದ್ಧ ಸಿಂಹದಂತೆ ಹೋರಾಡಿದ ಭಾಯಿ ಸಂಗತ್ ಸಿಂಗ್, ಹುತಾತ್ಮರಾಗುವವರೆಗೂ ಸಿಖ್ ಧ್ವಜವನ್ನು ಎತ್ತರಕ್ಕೆ ಹಾರಿಸುತ್ತಿದ್ದರು. ಮೊಘಲರು ಅವರ ತಲೆಯನ್ನು ಕತ್ತರಿಸಿ ವಿಜಯೋತ್ಸವದಿಂದ ಔರಂಗಜೇಬನ ಮುಂದೆ ಅರ್ಪಿಸಿದರು, ತಮ್ಮ ಕೆಲಸವನ್ನು ಪೂರ್ಣಗೊಳಿಸಿದ್ದೇವೆ ಎಂದು ಆತನಿಗೆ ಮನವರಿಕೆ ಮಾಡಿಕೊಟ್ಟರು. ಆದರೆ ಯಾವಾಗ ಮೊಘಲರು ಕಿರಿಯ ಸಾಹಿಬ್ಜಾದ ಮಾತಾ ಗುಜ್ರಿ ಜಿ, ವಜೀರ್ ಖಾನ್ ಪತ್ನಿ ಜೈನಾ ಬೇಗಂ ಮತ್ತು ಮೌಲ್ವಿ ನೂರುದ್ದೀನ್ ಮುಂದೆ ತಲೆಯನ್ನು ಅರ್ಪಿಸಿದರೋ ಆಗ ವಾಸ್ತವಾಂಶ ಬಹಿರಂಗವಾಯಿತು. ಸಂಗತ್ ಸಿಂಗ್ ತಮ್ಮ ಪ್ರಾಣವನ್ನು ಅರ್ಪಿಸಿದ್ದರು ಮತ್ತು ಗುರು ಗೋಬಿಂದರು ಬದುಕುಳಿದಿದ್ದರು.
ಪಂಜಾಬ್ ವಾಲಾ ಗುರುದ್ವಾರ ಸಿಸ್ ಗಂಜ್
ನಂತರ ನಡೆದದ್ದು ಹೊಸ ಸವಾಲು. ಹುತಾತ್ಮರ ಅವಶೇಷಗಳಿಗೆ ಸರಿಯಾದ ಗೌರವವನ್ನು ಹೇಗೆ ನೀಡುವುದು ಎಂಬುದು. ರಾತ್ರಿಯ ಮೌನದಲ್ಲಿ, ಇಬ್ಬರು ಶ್ರದ್ಧಾವಂತ ಸಿಖ್ಖರಾದ ಮಗರ್ ಸಿಂಗ್ ಮತ್ತು ಬಘೋರ್ ಸಿಂಗ್ – ಕಾವಲುಗಾರರನ್ನು ಸಾಯಿಸಿ ಸಂಗತ್ ಸಿಂಗ್ ಅವರ ದೇಹವನ್ನು ಹೊರತೆಗೆದರು ಮತ್ತು ಅವರ ಅಂತ್ಯಕ್ರಿಯೆಯನ್ನು ಭಕ್ತಿಯಿಂದ ನೆರವೇರಿಸಿದರು. ಆ ಪವಿತ್ರ ಸ್ಥಳದಲ್ಲಿ ಈಗ ಪಂಜಾಬ್ನಲ್ಲಿರುವ ಗುರುದ್ವಾರ ಸಿಸ್ ಗಂಜ್ ಸಾಹಿಬ್ ಇದೆ. ಅಲ್ಲಿ ಈಗಲೂ ಈ ವೀರೋಚಿತ ಪ್ರಸಂಗವನ್ನು ವಿವರಿಸುವ ಪೋಸ್ಟರ್ಗಳು ಇವೆ ಮತ್ತು ಅವರ ಗೌರವಾರ್ಥ “ಶ್ರೀ ಸಿಸ್ ಜುಗ್ಗಾ (ಸಂಗತ್ ಸಿಂಗ್ ಜಿ), ರೈಲ್ವೆ ಕ್ರಾಸಿಂಗ್ ಬಳಿ ಶ್ರೀ ಫತೇಘರ್ ಸಾಹಿಬ್” ಎಂಬ ಸ್ಥಳವಿದೆ.
ಬಾಲ್ಯದಲ್ಲಿ ಸಮರ ಕಲೆಗಳು ಮತ್ತು 5 ಭಾಷೆಗಳ ಜ್ಞಾನ
ಗುರು ಗೋಬಿಂದ್ ಸಿಂಗ್ ಅವರು ಜನಿಸಿದ ಪಾಟ್ನಾ ಸಾಹಿಬ್ನ ಅದೇ ಪವಿತ್ರ ಭೂಮಿಯಲ್ಲಿ ಅವರಿಗಿಂತ ನಾಲ್ಕು ತಿಂಗಳು ತರುವಾಯ ಏಪ್ರಿಲ್ 25, 1667 ರಂದು ಭಾಯಿ ಸಂಗತ್ ಸಿಂಗ್ ಜನಿಸಿದರು. ಭಾಯಿ ರಾನಿಯಾ ಮತ್ತು ಬೀಬಿ ಅಮರೋ ಅವರ ಕೈಯಲ್ಲಿ ರವಿದಾಸಿಯಾ ಕುಟುಂಬದಲ್ಲಿ ಬೆಳೆದ ಸಂಗತ್ ಸಿಂಗ್ ಬಾಲ್ಯದಿಂದಲೂ ಅಸಾಧಾರಣ ಧೈರ್ಯ ಮತ್ತು ಬುದ್ಧಿವಂತಿಕೆಯನ್ನು ತೋರಿಸುತ್ತಾ ಬಂದವರು. ಅವರು ಧರ್ಮಗ್ರಂಥಗಳು, ಕುದುರೆ ಸವಾರಿ, ಯುದ್ಧ ಮತ್ತು ಸಿಖ್ ಸಮರ ಕಲೆಗಳಲ್ಲಿ ತರಬೇತಿ ಪಡೆದವರು ಮತ್ತು ಪಂಜಾಬಿ, ಉರ್ದು, ಸಂಸ್ಕೃತ, ಪರ್ಷಿಯನ್ ಮತ್ತು ಬ್ರಜ್ ಸೇರಿದಂತೆ ಬಹು ಭಾಷೆಗಳನ್ನು ಕರಗತ ಮಾಡಿಕೊಂಡವರು. ಈ ಕೌಶಲ್ಯಗಳು ನಂತರ ಅವರಿಗೆ ಶತ್ರು ತಂತ್ರಗಳನ್ನು ಅರ್ಥಮಾಡಿಕೊಳ್ಳಲು ಮತ್ತು ತೀಕ್ಷ್ಣವಾದ ಯುದ್ಧತಂತ್ರದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಿದವು.
ಸಮಾಜದಲ್ಲಿ ಜಾತಿ ತಾರತಮ್ಯ ವ್ಯಾಪಕವಾಗಿದ್ದರೂ, ಗುರು ಗೋಬಿಂದ್ ಸಿಂಗ್ ಜಿ ಅವರು ನಿಜವಾದ ಅರ್ಹತೆಯನ್ನು ಗುರುತಿಸಿದ್ದರು ಮತ್ತು ಸಂಗತ್ ಸಿಂಗ್ ಅವರನ್ನು ತಮ್ಮ ಸೈನ್ಯದಲ್ಲಿ ಕಮಾಂಡರ್ ಆಗಿ ನೇಮಿಸಿದ್ದರು, ಅಲ್ಲಿ ಸಂಗತ್ ಅವರು ಆನಂದಪುರ್ ಸಾಹಿಬ್ನಲ್ಲಿ ನಿಕಟವಾಗಿ ಸೇವೆ ಸಲ್ಲಿಸಿದ್ದರು. 1699 ರಲ್ಲಿ ವೈಶಾಖಿಯಂದು, ಗುರುಗಳು ಆನಂದಪುರ್ ಸಾಹಿಬ್ನಲ್ಲಿ ಖಾಲ್ಸಾವನ್ನು ಸ್ಥಾಪಿಸಿದಾಗ ಸಂಗತ್ ಸಿಂಗ್ ಅಮೃತವನ್ನು ಪಡೆದು ಖಾಲ್ಸಾ ಯೋಧರಾದರು – ಉತ್ಸಾಹ, ಕರ್ತವ್ಯ ಮತ್ತು ಗೌರವದಲ್ಲಿ ಗುರುವಿಗೆ ಸಮಾನರಾದರು – ನಂಬಿಕೆ ಮತ್ತು ಗುರುಗಳ ಆದರ್ಶಗಳನ್ನು ರಕ್ಷಿಸಲು ಸಂಪೂರ್ಣವಾಗಿ ಬದ್ಧರಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



