
ಮಂಗಳೂರು: ಯುವ ಜನರು ಸೇರಿದಂತೆ ಸಮಾನ ಮನಸ್ಕರ ಒಗ್ಗಟ್ಟು, ಧರ್ಮದ ಚಿಂತನೆ, ಸ್ವಾರ್ಥ ರಹಿತ ಕೆಲಸಕ್ಕೆ ಭಗವಂತನ ಆಶೀರ್ವಾದ ಸದಾ ಇರುತ್ತದೆ ಎನ್ನುವುದಕ್ಕೆ ಮಂಗಳೂರು ಕಂಬಳವೇ ಸಾಕ್ಷಿ ಎಂದು ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ಡಿ.27ರಂದು ನಡೆಯಲಿರುವ ಮಂಗಳೂರು ಕಂಬಳದ ಕುರಿತಂತೆ ನಗರದ ಪತ್ತುಮುಡಿ ಸೌಧದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಯುವಕರೆಲ್ಲ ಸೇರಿಕೊಂಡು ಆರಂಭಿಸಿದ್ದ ಮಂಗಳೂರು ಕಂಬಳಕ್ಕೆ ಈ ಬಾರಿ 9ನೇ ವರ್ಷದ ಸಂಭ್ರಮವಾಗಿರುವುದು ಅತ್ಯಂತ ಖುಷಿಯ ವಿಚಾರ. ಈ ನಿಟ್ಟಿನಲ್ಲಿ ಒಂಬತ್ತು ರೀತಿಯ ವಿಭಿನ್ನ ಕಾರ್ಯಕ್ರಮ ಆಯೋಜಿಸುವ ಯೋಚನೆ ಇಟ್ಟುಕೊಂಡಿದ್ದೇವೆ ಎಂದು ಕ್ಯಾ. ಚೌಟ ತಿಳಿಸಿದ್ದಾರೆ.
ಕರಾವಳಿಯ ಜನಪದ ಕ್ರೀಡೆಯಾದ ಕಂಬಳ ನಿಷೇಧವಾಗುತ್ತದೆ ಎಂದಾಗ ಅದರ ವಿರುದ್ಧ ಮಂಗಳೂರಿನಲ್ಲಿ ಪಕ್ಷ-ಬೇಧವಿಲ್ಲದೆ ದೊಡ್ಡ ಪ್ರತಿಭಟನೆ ನಡೆಸಲಾಗಿತ್ತು. ಮಂಗಳೂರು ನಗರದಲ್ಲಿ ಕಂಬಳ ಆರಂಭಗೊಳ್ಳಲು ಆ ದಿನವೇ ನಿರ್ಧರಿಸಲಾಗಿತ್ತು. ಅದೇ ಹುಮ್ಮಸ್ಸಿನಲ್ಲಿ ಗೋಲ್ಡ್ ಫಿಂಚ್ ಸಮೂಹ ಸಂಸ್ಥೆಯ ಮಾಲೀಕ ಪ್ರಕಾಶ್ ಶೆಟ್ಟಿ ಸಹಕಾರದಲ್ಲಿ ಮಂಗಳೂರು ಕಂಬಳ ಆರಂಭಿಸಿ, ಸತತ 8 ವರ್ಷಗಳಿಂದ ಅದನ್ನು ಬಹಳ ವಿಭಿನ್ನ ರೀತಿಯಲ್ಲಿ ನಡೆಸುತ್ತಾ ಬರಲಾಗಿದೆ. ಮಂಗಳೂರು ಕಂಬಳ ಇಷ್ಟೊಂದು ಯಶಸ್ವಿಯಾಗಿ ಹಾಗೂ ಅಚ್ಚು-ಕಟ್ಟಾಗಿ ನಡೆಯುತ್ತಿರುವುದಕ್ಕೆ ನಮ್ಮ ಯುವಕರ ತಂಡದ ಹುಮ್ಮಸ್ಸು ಪ್ರಮುಖ ಕಾರಣವಾಗಿದೆ. ಈ ಬಾರಿ 9ನೇ ವರ್ಷ ಆಗಿರುವುದರಿಂದ ಒಂಬತ್ತು ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ಮರೆಯಾಗುತ್ತಿರುವ ಜನಪದ ಕ್ರೀಡೆ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವುದು ಸೇರಿದಂತೆ ದೇಶ-ವಿದೇಶಗಳಿಗೆ ತೆರಳಿ ಉದ್ಯಮ ಕಟ್ಟಿದ ನಮ್ಮ ಊರಿನ ಸಾಧಕರನ್ನು ಈ ಕಂಬಳಕ್ಕೆ ಕರೆಸಿ ಸನ್ಮಾನಿಸುವ ಚಿಂತನೆ ಕೂಡ ಸೇರಿವೆ. ಶೀಘ್ರದಲ್ಲೇ ಈ ಎಲ್ಲ 9 ಕಾರ್ಯಕ್ರಮಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಕ್ಯಾ. ಚೌಟ ಹೇಳಿದ್ದಾರೆ.
ಸಭೆಯಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ನಾಗರಾಜ ಶೆಟ್ಟಿ ಮಾತನಾಡಿ, ಸಂಸದರಾಗಿ ಹಾಗೂ ಕಂಬಳದ ರುವಾರಿಯಾಗಿ ಕ್ಯಾ. ಬ್ರಿಜೇಶ್ ಚೌಟ ಅವರು ದಕ್ಷಿಣ ಕನ್ನಡ ಅಭಿವೃದ್ಧಿ ಜತೆಗೆ ತುಳುನಾಡಿನ ನಮ್ಮ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವುದು ಶ್ಲಾಘನೀಯ. ಪ್ರಧಾನಿ ಮೋದಿ ಸೇರಿದಂತೆ ದೆಹಲಿಯಲ್ಲಿರುವ ಹಲವು ಗಣ್ಯರಿಗೆ ಕ್ಯಾ. ಚೌಟ ಅವರು ನಮ್ಮ ಕಂಬಳದ ಬಗೆಗಿನ ಸ್ಮರಣಿಕೆಯನ್ನು ನೀಡುವ ಮೂಲಕ ಈ ಜಾನಪದ ಕ್ರೀಡೆಯ ಅರಿವನ್ನು ರಾಷ್ಟ್ರರಾಜಧಾನಿಯಲ್ಲಿಯೂ ಮೂಡಿಸುತ್ತಿದ್ದಾರೆ. ಮುಂದೆ ಇದು ವಿಶ್ವಮಟ್ಟದಲ್ಲಿಯೂ ಹರಡುವ ಕೆಲಸವು ಕ್ಯಾ. ಚೌಟ ಅವರಿಂದ ಆಗಲಿ ಎಂದು ಅವರು ಹಾರೈಸಿದ್ದಾರೆ.
ಮಂಗಳೂರಿನಂಥ ನಗರದಲ್ಲಿ ಕಂಬಳವನ್ನು ಆಯೋಜಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಅದು ಪಕ್ಷ-ಭೇದ ಇಲ್ಲದ ಒಟ್ಟಾಗಿ ಸಂಘಟನಾತ್ಮಕವಾಗಿ ಕೈಜೋಡಿಸುತ್ತಿರುವ ಯುವಕರ ತಂಡದ ಹುಮ್ಮಸ್ಸಿನಿಂದಾಗಿ ಇದು ಸಾಧ್ಯವಾಗಿದೆ. ಕ್ಯಾ. ಚೌಟ ಅವರ ನೇತೃತ್ವದ ಮಂಗಳೂರು ಕಂಬಳ 9 ವರ್ಷಕ್ಕೆ ಕಾಲಿಡುತ್ತಿದ್ದು, ಅವರ ಈ ಪ್ರಯತ್ನವು ನಿರಂತರ ಯಶಸ್ವಿಯಾಗಿ ಮುಂದುವರಿಯಲಿ ಎಂದರು.
ಕಂಬಳ ಸಮಿತಿಯ ಉಪಾಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ಕುಳೂರಿನಲ್ಲಿ ಕಂಬಳ ನಡೆಸಿಕೊಂಡು ಬಂದಿದ್ದು ಆ ಭಾಗದಲ್ಲಿ ಹಬ್ಬದ ಕಳೆ ಪಡೆದಿದೆ. ಕಂಬಳದಿಂದಾಗಿ ಕುಳೂರಿನಲ್ಲಿ ವ್ಯಾಪಾರ- ಸಮೃದ್ಧಿಯಾಗಿ ಸ್ಥಳೀಯವಾಗಿ ಅಭಿವೃದ್ಧಿಗೂ ಕಾರಣವಾಗಿದೆ. ಇದರಿಂದ ಈ ಪ್ರದೇಶದಲ್ಲಿ ಬೇರೆ-ಬೇರೆ ಕಾರ್ಯಕ್ರಮಗಳಿಗೂ ನಾಂದಿ ಹಾಡಿದೆ. ಈ ಭಾಗದ ಪ್ರತಿನಿಧಿಯಾಗಿ ಮಂಗಳೂರು ಕಂಬಳಕ್ಕೆ ಸದಾ ನನ್ನ ಬೆಂಬಲವಿರುತ್ತದೆ ಎಂದು ಹೇಳಿದರು.
ಮಂಗಳೂರು ಕಂಬಳ ಸಮಿತಿಯ ಗೌರವ ಸಲಹೆಗಾರರಾದ ಪ್ರಸಾದ್ ಕುಮಾರ್ ಶೆಟ್ಟಿ, ಕುಳೂರು ಪೊಯ್ಯೆಲು ಪಿ.ಆರ್ ಶೆಟ್ಟಿ, ಕಂಬಳ ಸಮಿತಿಯ ಉಪಾಧ್ಯಕ್ಷರು ಹಾಗೂ ಮಾಜಿ ಮನಪಾ ಸದಸ್ಯರಾದ ಕದ್ರಿ ಮನೋಹರ್ ಶೆಟ್ಟಿ, ಭರತ್ ಸೂಟರ್ ಪೇಟೆ, ಸಂದೀಪ್ ಗರೋಡಿ, ಸಂಜಯ ಪ್ರಭು, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್ ಮಂಗಲ್ಪಾಡಿ ಉಪಸ್ಥಿತರಿದ್ದರು. ಈಶ್ವರ್ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಮನ್ಮಥ್ ಶೆಟ್ಟಿ ಪುತ್ತೂರು ನಿರೂಪಿಸಿ, ಕಂಬಳ ಸಮಿತಿ ಸಂಚಾಲಕ ಸಚಿನ್ ಶೆಟ್ಟಿ ಸಾಂತ್ಯ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



