
ಬೆಂಗಳೂರು: ಸ್ಪೀಕರ್ ಯು.ಟಿ.ಖಾದರ್ ಅವರ ಅವಧಿಯಲ್ಲಿ ವಿವಾದ, ಗೊಂದಲ, ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ ಎಂದು ಸಂಸದ ಮತ್ತು ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಸ್ಪೀಕರ್ ಸ್ಥಾನದ ವಿರುದ್ಧ ಬಂದಿರುವ ಆರೋಪಗಳಿಂದ ಆ ಸ್ಥಾನವು ಮುಕ್ತವಾಗಬೇಕು. ಇದಕ್ಕಾಗಿ ಕಾರ್ಯನಿರತ ನ್ಯಾಯಮೂರ್ತಿಗಳಿಂದ ಆರೋಪಗಳ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸ್ಪೀಕರ್ ಕಾರ್ಯಾಲಯದ ಟೆಂಡರ್ ಮಂಗಳೂರು ಮೂಲದವರಿಗೇ ಯಾಕೆ ಸಿಗುತ್ತಿದೆ ಎಂದು ಕೇಳಿದ ಅವರು, ಅದೂ ಯಾರಿಗೋ ಕೆಲವರಿಗೇ ಯಾಕೆ ಸಿಗುತ್ತಿದೆ ಎಂದು ಪ್ರಶ್ನೆ ಮಾಡಿದರು. ವಿಧಾನಸಭಾಕ್ಷರ ಸಚಿವಾಲಯದ ಅಧಿಕಾರಿಗಳ ಅಭಿಪ್ರಾಯ ಏನಿತ್ತು? ನನಗೆ ಗೊತ್ತಿರುವ ಪ್ರಕಾರ ಹಣಕಾಸು ಇಲಾಖೆ ಖರೀದಿಗಳನ್ನು ತಿರಸ್ಕರಿಸಿದೆ. ಬಳಿಕ ಹಣಕಾಸು ಇಲಾಖೆ ಹೊಣೆ ಹೊತ್ತ ಮುಖ್ಯಮಂತ್ರಿಗಳೇ ಒಪ್ಪಿಗೆ ಕೊಡಿಸಿದ ಆರೋಪವಿದೆ. ಯು.ಟಿ.ಖಾದರರಿಗೆ ಸ್ವತಃ ಸಿಎಂ ಅವರೇ ಬೆಂಬಲ ಕೊಟ್ಟ ಆಕ್ಷೇಪವಿದೆ ಎಂದರು. ಖರೀದಿ ತುರ್ತಾಗಿ ಮಾಡಬೇಕಾದ ಕೆಲಸ ಏನಿತ್ತು? ಎಂದು ಕೇಳಿದರು.
ವಿಧಾನಸಭೆಯ ಪ್ರಧಾನ ಬಾಗಿಲಿಗೆ ರೋಸ್ ವುಡ್ನ ಮರದ ಕೆತ್ತನೆಯ ಚೌಕಟ್ಟನ್ನು ಮಾಡಿಸಿದಲ್ಲಿಂದ ಭ್ರಷ್ಟಾಚಾರದ ಆರೋಪಗಳು ಆರಂಭವಾಗಿತ್ತು. ಸಭಾಂಗಣಕ್ಕೆ ಹೊಸ ಟಿ.ವಿ.ಸೆಟ್ ಅನ್ನು ಅಳವಡಿಸಿದ್ದರು. ಎಐ ಮಾನಿಟರ್ ಸಿಸ್ಟಂ ಅನ್ನು ಹಾಕಲು ಸಾಕಷ್ಟು ಖರ್ಚು ವೆಚ್ಚಗಳಾಗಿವೆ. ಎಲ್ಲ ಶಾಸಕರಿಗೆ ಗಂಡಭೇರುಂಡ ಹೋಲಿಕೆಯ ಗಡಿಯಾರಗಳನ್ನು ಕೊಟ್ಟರು. ಮೊಗಸಾಲೆಯಲ್ಲಿ ಯಂತ್ರ ಅಳವಡಿಸಿ ಮಸಾಜ್ ಪಾರ್ಲರ್ ಮಾದರಿಯಲ್ಲಿ ಬದಲಾಯಿಸಿದ್ದಕ್ಕೆ ದೊಡ್ಡ ಪ್ರಮಾಣದ ವಿರೋಧ ವ್ಯಕ್ತವಾಗಿತ್ತು ಎಂದು ತಿಳಿಸಿದರು.
ಸರಕಾರದ ವತಿಯಿಂದ ಊಟ, ಉಪಹಾರ ಕೊಡಲು ಸ್ಪೀಕರ್ ಆರಂಭಿಸಿದರು. ಇದು ಅಗತ್ಯವಿತ್ತೇ? ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೇಳಿ, ಇಲ್ಲ ಎಂದು ಮೇಲ್ನೋಟಕ್ಕೆ ಕಾಣುತ್ತದೆ ಎಂದರು. ಹಾಸು ಹೊದಿಕೆ ಬದಲಿಸಿ, ಕಾರ್ಪೆಟ್ ಬದಲಿಸಿದ್ದಲ್ಲದೇ ಸುಣ್ಣ ಬಣ್ಣ ಹೊಡೆಸಿದರು. ಅವರು ಒಂದೊಂದು ಮುಟ್ಟಿದರೂ ಅದರೊಳಗೆ ಇನ್ನೇನೋ ಇದೆ ಎಂಬ ಅನುಮಾನಗಳು ವ್ಯಾಪಕವಾಗಿ ಬೆಳವಣಿಗೆ ಆಗಿದೆ ಎಂದು ವಿಶ್ಲೇಷಿಸಿದರು.
ಶಾಸಕರ ಭವನದಲ್ಲಿ ಶಾಸಕರ ಕೊಠಡಿಗಳನ್ನು ಭದ್ರ ಪಡಿಸಲು, ಇನ್ನಷ್ಟು ವ್ಯವಸ್ಥೆ ಕಲ್ಪಿಸಿಕೊಡಲು ಸ್ಮಾರ್ಟ್ ಡೋರ್ ಲಾಕರ್ ಹಾಕಿಸಿದರು. ಗಾಡ್ರೆಜ್ನಂಥ ಕಂಪೆನಿಯವರ ಬೆಲೆ 14- 16 ಸಾವಿರ ಇದೆ ಎಂದು ಆನ್ಲೈನ್ ಪರಿಶೀಲನೆಯಿಂದ ಗೊತ್ತಾಗುತ್ತದೆ. ಅದಕ್ಕೆ ಇವರು 49 ಸಾವಿರಕ್ಕಿಂತ ಹೆಚ್ಚು ಖರ್ಚು ತೋರಿಸಿದರು ಎಂದು ದೂರಿದರು. ಇದರ ಜೊತೆಗೆ ಸ್ಮಾರ್ಟ್ ಸೇಫ್ ಲಾಕರ್ ಹಾಕಿಸಿದರು. ಅದು ಮಾರ್ಕೆಟ್ನಲ್ಲಿ 8-9 ಸಾವಿರಕ್ಕೆ ಸಿಗುವುದಾಗಿ ಆನ್ಲೈನ್ನಲ್ಲಿದೆ. ಇವರು 35 ಸಾವಿರದ ಮೇಲೆ ದರ ವಿಧಿಸಿದರು ಎಂದು ಆಕ್ಷೇಪಿಸಿದರು.
ಮಾರುಕಟ್ಟೆಯಲ್ಲಿ ಸುಮಾರು 30 ಸಾವಿರಕ್ಕೆ ಲಭ್ಯ ಇರುವ ಸ್ಮಾರ್ಟ್ ಎನರ್ಜಿ ಸೊಲ್ಯೂಷನ್ ಗೆ 90,500 ರೂ. ವಿಧಿಸಿದ್ದಾರೆ. ಸ್ಟೇನ್ಲೆಸ್ ಸ್ಟೀಲ್ ವಾಟರ್ ಪ್ಯೂರಿಫೈಯರ್ ಆನ್ಲೈನ್ನಲ್ಲಿ 16 ಸಾವಿರದಿಂದ 53 ಸಾವಿರದಲ್ಲಿ ಲಭ್ಯವಿದ್ದು, 65 ಸಾವಿರ ವಿಧಿಸಲಾಗಿದೆ. ಒಟ್ಟು 235 ರಷ್ಟು ಖರೀದಿ ಆಗಿದೆ. 123 ಸ್ಮಾರ್ಟ್ ಎನರ್ಜಿ ಸೊಲ್ಯೂಷನ್ ಖರೀದಿ ಮಾಡಿದ್ದಾರೆ. 224 ಸೇಫ್ ಲಾಕರ್, ಅಷ್ಟೇ ಸಂಖ್ಯೆಯ ಡೋರ್ ಲಾಕರ್ ಖರೀದಿ ಮಾಡಿದ್ದಾರೆ ಎಂದು ತಿಳಿಸಿದರು.
4-5 ದಿನಗಳ ಪುಸ್ತಕ ಮೇಳಕ್ಕೆ 4.5 ಕೋಟಿ ಖರ್ಚು ಮಾಡಿದ್ದಾರೆ. ಪುಸ್ತಕ ಕೊಂಡು ಹಂಚಿದರೂ ಇಷ್ಟಾಗುತ್ತಿತ್ತೇ ಗೊತ್ತಿಲ್ಲ ಎಂದು ಆಕ್ಷೇಪಿಸಿದರು. ಇವರು ಸ್ಟಾಲ್ ಹಾಕುವುದು ಬಿಟ್ಟು ಬೇರೇನೂ ಇಲ್ಲ. ಲೈಟಿಂಗ್ ಮಾಡಿದ್ದಾರೆ. ಶಾಸಕರ ಭವನಕ್ಕೆ ಮಂಚ, ಟೇಬಲ್ ಹಾಕಿಸಿದ್ದಾರೆ. ನೇಮಕಾತಿಗೆ ಕೋರ್ಟಿನಲ್ಲಿ ತಡೆಯಾಜ್ಞೆ ವಿಧಿಸಲಾಗಿದೆ. ಇದರ ವಿಷಯದಲ್ಲಿ ಮೊಗಸಾಲೆಯ ಸುದ್ದಿಗಳೇನು? ಇದೆಲ್ಲ ಆ ಸ್ಥಾನಕ್ಕೆ ಕುಂದು ಬರುವಂತಿದೆ. ಯು.ಟಿ. ಖಾದರ್ ಅವರು ಈಗಲೂ ವಿದೇಶದಲ್ಲೇ ಇದ್ದಾರೆ. ಅವರು ಎಷ್ಟು ದೇಶಗಳಿಗೆ ಹೋಗಿದ್ದಾರೆ. ಅವರೆಷ್ಟು ಖರ್ಚು ಹಾಕಿ ಸರಕಾರ ಎಷ್ಟು ಹಣ ಕೊಟ್ಟಿದೆ ಎಂದು ಕೇಳಿದರು.
ನಾನೂ ಸ್ಪೀಕರ್ ಆಗಿ ವಿದೇಶಗಳಿಗೆ ಹೋಗಿದ್ದೇನೆ. ನಮಗಿರೋ ಅವಕಾಶ ಮೀರಿ, ಎಷ್ಟು ಪ್ರವಾಸ ಮಾಡಿದ್ದಾರೆ. ಯಾರ್ಯಾರ ಜೊತೆ ಪ್ರವಾಸ ಮಾಡಿದ್ದಾರೆ? ಇವೆಲ್ಲವೂ ಬಹಿರಂಗಗೊಳ್ಳಬೇಕಿದೆ. ವಿದೇಶಗಳ ಅಧ್ಯಯನದ ಹೆಸರಿನಲ್ಲಿ ನಡೆದ ಪ್ರವಾಸದ ವಿವರ ಬಹಿರಂಗಗೊಳಿಸಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ವಿಧಾನಸಭಾಧ್ಯಕ್ಷರಾಗಿ ರಾಜಕೀಯ, ಸಾರ್ವಜನಿಕ ಜೀವನದ ಸಾಕಷ್ಟು ಅನುಭವ ಇರುವ ಯು.ಟಿ.ಖಾದರ್ ಅವರು ಇದ್ದು, ಸ್ಪೀಕರ್ ಹುದ್ದೆಯ ಘನತೆ, ಗೌರವಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಪಕ್ಷಪಾತಿಯಾಗಿದ್ದಾರೆ; ಆಡಳಿತ ಸುಧಾರಣೆ ಹೆಸರಿನಲ್ಲಿ ಅನೇಕ ಭ್ರಷ್ಟಾಚಾರಗಳು ನಡೆಯುತ್ತಿವೆ ಎಂದು ದೂರಿದರು. ಆ ಪೀಠಕ್ಕೆ ಇಂಥ ಆರೋಪಗಳು ಬರುತ್ತಿವೆ ಎಂದು ತಿಳಿಸಿದರು.
2023ರಲ್ಲಿ 10 ಜನ ಬಿಜೆಪಿ ಶಾಸಕರನ್ನು ಹೊರಗೆ ಹಾಕಿದ್ದಾಗಲೇ ಪಕ್ಷದ ಸೂಚನೆಯಂತೆ ಯು.ಟಿ.ಖಾದರ್ ಅವರು ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಅವರ ಮೇಲೆ ಬಂದಿತ್ತು. ನಂತರ 18 ಜನ ಶಾಸಕರನ್ನು ಹೊರಗೆ ಹಾಕಿದ ಮೇಲಂತೂ ಸ್ಪೀಕರ್ ಪಕ್ಷದ ಕೈಗೊಂಬೆ ಆಗಿದ್ದಾರೇನೋ, ಆಡಳಿತದಲ್ಲ್ಲಿ ಇರುವವರು ಇವರನ್ನು ಹಾಗೆ ಬಳಸಿಕೊಳ್ಳುತ್ತಿದ್ದಾರೇನೋ ಎಂಬ ಆರೋಪ ಬರುವುದಕ್ಕೆ ಆರಂಭವಾಯಿತು. ಸದನದಲ್ಲಿ ಭಾಗವಹಿಸುವಾಗ, ಚರ್ಚೆಯ ವೇಳೆ ಸ್ಪೀಕರ್ ಅವರು ಪ್ರತಿಪಕ್ಷ ಬಿಜೆಪಿಯವರಿಗೆ ಅವಕಾಶ ಎಷ್ಟು ಕೊಡುತ್ತಾರೆ, ಕೊಡುತ್ತಿಲ್ಲ ಎಂಬ ವಿಚಾರ ಚರ್ಚೆ ಶುರುವಾಯಿತು ಎಂದರು.
ಪ್ರತಿಪಕ್ಷ ನಾಯಕರಿಗೆ ಮನೆಯನ್ನೂ ಕೊಟ್ಟಿಲ್ಲ ಎಂಬ ಮಾತು ಕೇಳಿದ್ದೇನೆ. ಅದು ವ್ಯವಸ್ಥೆಗೆ ಗೌರವ ತರುವ ರೀತಿ ಆಗಬೇಕಿತ್ತು. ಇವರು ಆಡಳಿತ ಸುಧಾರಣೆ ಹೆಸರಿನಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದ ಆರೋಪ ಕೇಳಿಬರುತ್ತಿದೆ. ಇದು ಪತ್ರಿಕೆ, ಸೋಷಿಯಲ್ ಮೀಡಿಯ, ಯೂ ಟ್ಯೂಬ್ ಚಾನೆಲ್ಗಳಲ್ಲೂ ಬಂದಿದೆ ಎಂದು ವಿವರಿಸಿದರು.
ಬಾಬಾಸಾಹೇಬ ಡಾ.ಅಂಬೇಡ್ಕರ್ ಅವರು ರಚಿಸಿದ ನಮ್ಮ ಶ್ರೇಷ್ಠ ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವು ಬಹಳ ಮುಖ್ಯವಾದ ಭಾಗಗಳಾಗಿವೆ. ಶಾಸಕಾಂಗವನ್ನು ಪ್ರಜಾಪ್ರಭುತ್ವದ ದೇಗುಲ ಎಂದು ಕರೆಯುತ್ತಾರೆ. ಆಯ್ಕೆಯಾದ ಶಾಸಕರು, ಎಂಎಲ್ಸಿಗಳು, ಸಂಸದರು ಈ ವ್ಯವಸ್ಥೆಯ ಮುಂಚೂಣಿಯಲ್ಲಿ ಇರುತ್ತಾರೆ ಎಂದು ತಿಳಿಸಿದರು.
ಲಕ್ಷಾಂತರ ಕೋಟಿಯ ಬಜೆಟ್ ಅಂಗೀಕಾರ, ಕಾಯ್ದೆ ರಚನೆ, ಆಡಳಿತದ ನಿರ್ದೇಶನ ನೀಡುವ ದೊಡ್ಡ ಅಧಿಕಾರವನ್ನು ಜನಪ್ರತಿನಿಧಿ ಪಡೆಯುತ್ತಾರೆ. ಕರ್ನಾಟಕದ ವಿಧಾನಸಭೆಗೂ ಗೌರವದ ಸ್ಥಾನ ಇದೆ. ಹಿಂದಿನ ವಿಧಾನಸಭಾಧ್ಯಕ್ಷರು ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ. ಜನಪ್ರತಿನಿಧಿಗಳ ವಿಚಾರವೂ ಸೇರಿ ಹತ್ತಾರು ಚರ್ಚೆಗಳನ್ನು ನನ್ನ ಸ್ಪೀಕರ್ ಅವಧಿಯಲ್ಲಿ ನಡೆಸಿದ್ದೇವೆ ಎಂದರು.
ಅತಿವೃಷ್ಟಿಯಿಂದ ಬೆಳೆ ಹಾನಿ ಸಂಭವಿಸಿ ರೈತರು ಕಂಗಾಲಾಗಿದ್ದಾರೆ. ರಸ್ತೆಗಳಂತೂ ಗುಂಡಿಮಯವಾಗಿದೆ. ಅಭಿವೃದ್ಧಿ ಕೆಲಸಗಳೇ ನಡೆಯುತ್ತಿಲ್ಲ. ಭ್ರಷ್ಟಾಚಾರ, ಓಲೈಕೆ ರಾಜಕಾರಣ ಮಿತಿಮೀರಿದೆ. ಇಂಥ ಸಂದರ್ಭದಲ್ಲಿ ಶಾಸಕರಿಗೆ ಇವೆಲ್ಲ ಸೌಲಭ್ಯ ಕೊಡಬೇಕಿತ್ತೇ ಎಂಬ ಪ್ರಶ್ನೆ ಜನರ ಎದುರಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೇಳಿದರು.
ಗುತ್ತಿಗೆದಾರರ ಆತ್ಮಹತ್ಯೆ ನಡೆಯುತ್ತಿದೆ. ಸರಕಾರಿ ನೌಕರರ ಆತ್ಮಹತ್ಯೆ ಕಾಣುತ್ತಿದೆ. ಆರ್ಥಿಕ ಪರಿಸ್ಥಿತಿ ದಿವಾಳಿ ಅಂಚಿನಲ್ಲಿರುವಾಗ ಸ್ಪೀಕರ್ ಸ್ಥಾನದ ಮೇಲೆ ಇಂಥ ಆರೋಪ ಬರುತ್ತಿರುವುದು ದೊಡ್ಡ ದುರಂತ ಎಂದು ತಿಳಿಸಿದರು. ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿ, ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ ಅವರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



