ಬೆಂಗಳೂರು: ಅಟಲ್ಜಿ ಜನ್ಮ ಶತಮಾನೋತ್ಸವ ಸಮಿತಿ ಕರ್ನಾಟಕ, ಬೆಂಗಳೂರು ವತಿಯಿಂದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಪೋಸ್ಟರನ್ನು ಇಂದು ಬಿಜೆಪಿ ಜಗನ್ನಾಥ ಭವನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅಟಲ್ಜಿ ಜನ್ಮ ಶತಮಾನೋತ್ಸವ ಸಮಿತಿ ಪ್ರಮುಖ ಮತ್ತು ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎ.ಹೆಚ್.ಶಿವಯೋಗಿಸ್ವಾಮಿ ಅವರು, ಅಟಲ್ ಜಿ ದೇಹವನ್ನು ತ್ಯಜಿಸಿದ ದಿನವಾದ ಆಗಸ್ಟ್ 16 ರಂದು ಬೆಂಗಳೂರಿನ ಟೌನ್ಹಾಲಿನಲ್ಲಿ ಸಂಜೆ 4.30 ಕ್ಕೆ ಅಟಲ್ ಸ್ಮೃತಿ ಸಂಗ್ರಹ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಜೀ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಟಲ್ ಜೀ ಅವರ ಕಾಲದಲ್ಲಿ ಕೇಂದ್ರ ಸಚಿವರಾಗಿದ್ದ ಡಿ.ವಿ.ಸದಾನಂದ ಗೌಡ, ಮುಖಂಡರಾದ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಭಾರತ ಕಂಡಂತಹ ಅಪರೂಪದ ಪ್ರಧಾನಿ ಭಾರತರತ್ನ ಅಜಾತ ಶತ್ರು ಎಂದು ಹೆಸರಾದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಜೀ ಅವರ 100 ವರ್ಷದ ಶತಮಾನೋತ್ಸವ ಸಮಾರಂಭವು ಯಶಸ್ವಿಯಾಗಿ ನಡೆಯಬೇಕೆಂಬ ಯೋಜನೆಯಿಂದ ಕೇಂದ್ರದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಇದಕ್ಕಾಗಿ ತಂಡಗಳನ್ನು ರಚನೆ ಮಾಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರ ಮಾರ್ಗದರ್ಶನದಲ್ಲಿ ಅಟಲ್ ಜೀ ಜನ್ಮ ಶತಮಾನೋತ್ಸವದ ತಂಡ ರಚಿಸಿ ಕಳೆದ ಜನವರಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಜನವರಿ 14 ರಿಂದ ಫೆಬ್ರವರಿ 15 ರವರೆಗೆ ಅಟಲ್ ಜೀ ಸ್ಮೃತಿ ಸಂಗ್ರಹಕ್ಕೆ ಎಲ್ಲ ಜಿಲ್ಲೆಗಳಲ್ಲಿ ತಂಡಗಳನ್ನು ರಚಿಸಲಾಗಿತ್ತು. ಅವುಗಳ ಮೂಲಕ ಅಟಲ್ ಜೀ ಕಾಲಘಟ್ಟದಲ್ಲಿ ಕೆಲಸ ಮಾಡಿದ ಅವರ ಒಡನಾಡಿಗಳು, ಅವರ ಕಾಲದಲ್ಲಿ ಕಾರ್ಯಕರ್ತರಾಗಿ ಕೆಲಸ ಮಾಡಿದ ಹಿರಿಯರ ಮನೆಗಳಿಗೆ ತೆರಳಿ ಅವರಿಗೆ ಗೌರವ ಸಮರ್ಪಣೆ ಮಾಡಲಾಗಿದೆ. ಜೊತೆಗೆ ಅಟಲ್ ಜೀ ಅವರ ಚಿತ್ರಗಳು, ವಿಶೇಷವಾದ ಲೇಖನಗಳು ಮತ್ತು ಕೃತಿಗಳನ್ನು ಸಂಗ್ರಹ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಫೆಬ್ರವರಿ 15 ರಿಂದ ಮಾರ್ಚ್ ರವರೆಗೆ ಅಟಲ್ ಜೀ ವಿರಾಸತ್ ಸಮ್ಮೇಳನವನ್ನು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮಾಡಿದ್ದೇವೆ. ಸಂಘಟನಾತ್ಮಕವಾಗಿ ನಮ್ಮಲ್ಲಿ 39 ಜಿಲ್ಲಾ ಕೇಂದ್ರಗಳಿವೆ. ಇವುಗಳಲ್ಲಿ ಕಾರ್ಯಕ್ರಮಗಳನ್ನು ಮಾಡಿ ಅಟಲ್ ಜೀ ಅವರ ಜೊತೆ ಕೆಲಸ ಮಾಡಿದವರಿಗೆ ಗೌರವ ಸಮರ್ಪಣೆಯನ್ನು ಮಾಡಲಾಗಿರುತ್ತದೆ ಎಂದು ತಿಳಿಸಿದರು.
ಬೀದರ್ ಜಿಲ್ಲೆಯಲ್ಲಿ ಬಹುಭಾಷಾ ಸಮ್ಮೇಳನವನ್ನು ಮತ್ತು ಯುವ ಮೋರ್ಚಾ ನೇತೃತ್ವದಲ್ಲಿ ಅಟಲ್ ವಿರಾಸತ್ ವಾಕಥಾನ್ ಎಂಬ ನಡಿಗೆ, ಬಾಗಲಕೋಟೆ ಜಿಲ್ಲೆಯಲ್ಲಿ ಹಲಗಿ ಮಜಲು ಸ್ಪರ್ಧೆ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ವಿಧ್ಯಾರ್ಥಿಗಳ ಪ್ರಬಂಧ ಸ್ಪರ್ಧೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಎಂದು ವಿವರಿಸಿದರು.
ಅಟಲ್ ಜೀ ಅವರ ಆಗಸ್ಟ್ 16 ರ ಕಾರ್ಯಕ್ರಮ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಬಾರದು ವ್ಯಾಪಕವಾಗಿ ಅಟಲ್ ಜೀ ಅವರ ಬಗ್ಗೆ ತಿಳಿಸುವ ಸಂಬಂಧ ಚಿತ್ರ ನಮನ(ಚಿತ್ರಕಲಾ ಸ್ಪರ್ಧೆ), ರಂಗೋಲಿ ನಮನ(ರಂಗೋಲಿ ಸ್ಪರ್ಧೆ), ನುಡಿ ನಮನ (ಭಾಷಣ ಸ್ಪರ್ಧೆ-ಅನ್ಲೈನ್ ಮೂಲಕ), ಬರಹ ನಮನ (ಪ್ರಬಂಧ ಸ್ಪರ್ಧೆ) ಸಂಗೀತ ನಮನ, ಮತ್ತು ನರಸಿಂಹಮೂರ್ತಿ ಅವರು ರಚಿಸಿರುವ ಕಿರು ನಾಟಕ ಪ್ರದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯಶಸ್ವಿಗೊಳಿಸಬೇಕೆಂದು ಅವರು ಮಾಧ್ಯಮಗಳ ಮುಖಾಂತರ ಕೋರಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಅಟಲ್ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಸಂಚಾಲಕ ಜಗದೀಶ್ ಹಿರೇಮನಿ, ಸಹ-ಸಂಚಾಲಕ ಫಣೀಶ್, ಅಭಿಯಾನ ಸಮಿತಿಯ ಸದಸ್ಯರಾದ ಸದಾಶಿವ ಮತ್ತು ಶಂಕರ್ ಬಿರಾದಾರ್ ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.