ಬೆಂಗಳೂರು: ಪ್ರಬುದ್ಧ ಮತದಾರರು ದೆಹಲಿ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸಲು ಮತದಾರರು ಮತ್ತೊಮ್ಮೆ ನಮಗೆ ಆಶೀರ್ವಾದ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.
ಇಂದು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬಿಜೆಪಿ ಪರ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಣೆಯ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ದೆಹಲಿ ರಾಜ್ಯದಲ್ಲಿ 27 ವರ್ಷಗಳ ನಂತರ ಬಿಜೆಪಿಗೆ ಅಭೂತಪೂರ್ವ ಗೆಲುವು ಲಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ದೆಹಲಿಯ ಪಕ್ಷದ ಮುಖಂಡರು, ಕಾರ್ಯಕರ್ತರು, ಮತದಾರರಿಗೆ ಅಭಿನಂದನೆ ಸಲ್ಲಿಸಿದ ಅವರು, ಭ್ರಷ್ಟಾಚಾರದ ವಿರುದ್ಧ ಆಂದೋಲನ ಮಾಡಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿದ್ದ ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಅವರ ಮುಖವಾಡ ಕಳಚಿಬಿದ್ದಿದೆ ಎಂದು ನುಡಿದರು. ಕೇಜ್ರಿವಾಲ್ ಅವರೂ ಹಿನ್ನಡೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.
ಆತಿಶಿ, ಮನೀಷ್ ಸಿಸೋಡಿಯ ಅವರೂ ಸೋಲುತ್ತಿದ್ದಾರೆ. ಲಿಕ್ಕರ್ ಗೇಟ್, ಶೀಷ್ ಮಹಲ್ ಹಗರಣದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಆಪ್ ಬಣ್ಣ ಬಯಲಾಗಿದೆ. ದೆಹಲಿ ಮತದಾರರು, ಕಾರ್ಯಕರ್ತರಿಗೆ ಅಭಿನಂದನೆಗಳು ಎಂದು ತಿಳಿಸಿದರು.
ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಸತತ 3ನೇ ಬಾರಿಗೆ ಶೂನ್ಯ ಸಂಪಾದನೆ ಮಾಡಿದೆ. ಲೋಕಸಭಾ ಚುನಾವಣೆಯಲ್ಲೂ ಅದು ಶೂನ್ಯ ಸಂಪಾದನೆ ಮಾಡಿತ್ತು ಎಂದ ಅವರು, ಹರಿಯಾಣ, ಮಹಾರಾಷ್ಟ್ರದಲ್ಲೂ ಕಾಂಗ್ರೆಸ್ಸಿಗೆ ಮುಖಭಂಗ ಆಗಿತ್ತು ಎಂದು ವಿವರಿಸಿದರು.
ಪ್ರಶ್ನೆಗೆ ಉತ್ತರಿಸಿದ ಅವರು, ಗ್ಯಾರೆಂಟಿಗಳೆಲ್ಲ ತಾತ್ಕಾಲಿಕ ಎಂದರು. ತಾತ್ಕಾಲಿಕ ಗ್ಯಾರೆಂಟಿಗಿಂತ ದೃಢ ನಾಯಕತ್ವ ಕೊಡುವ ನರೇಂದ್ರ ಮೋದಿಜೀ ನೇತೃತ್ವದ ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ದೆಹಲಿ ಮತದಾರರು ಮತ್ತೊಮ್ಮೆ ರುಜುವಾತು ಮಾಡಿದ್ದಾರೆ ಎಂದು ತಿಳಿಸಿದರು.
ವಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡಿ, ದೆಹಲಿ ಚುನಾವಣಾ ಫಲಿತಾಂಶವು ಮುಂದಿನ ಕರ್ನಾಟಕ, ತೆಲಂಗಾಣದ ಚುನಾವಣೆಗೆ ದಾರಿದೀಪ ಎಂದರು. ಇದು ದೇಶಕ್ಕೆ ಸಿಕ್ಕಿದ ಗೆಲುವು ಎಂದು ತಿಳಿಸಿದರು. ಡಿಕೆಶಿ ಗ್ಯಾರೆಂಟಿ ದೆಹಲಿಯಲ್ಲಿ ಠುಸ್ ಪಟಾಕಿ ಆಗಿದೆ ಎಂದು ವ್ಯಂಗ್ಯವಾಡಿದರು.
ಕರ್ನಾಟಕದಲ್ಲಿ 5 ಗ್ಯಾರಂಟಿ ಕೊಟ್ಟು ಅಭಿವೃದ್ಧಿ ಇಲ್ಲವಾಗಿದೆ. ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ. ಇದೇ ಕೇಜ್ರಿವಾಲ್ 25 ಉಚಿತಗಳನ್ನು ನೀಡಿದ್ದರು. ಅವರ ಸ್ಥಿತಿ ಏನಾಗಿದೆ? ಎಂದು ಪ್ರಶ್ನಿಸಿದರು. ಇದು ದೇಶಕ್ಕೆ ದಿಕ್ಸೂಚಿ ಎಂದು ತಿಳಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಅರವಿಂದ ಕೇಜ್ರಿವಾಲ್ ಅವರ ದೆಹಲಿ ಸರಕಾರ ಭ್ರಷ್ಟಾಚಾರಕ್ಕೆ ಬಲಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಬಿಜೆಪಿ ಇಡೀ ದೇಶದಲ್ಲಿ ಭ್ರಷ್ಟಾಚಾರದ ವಿಚಾರದಲ್ಲಿ ಒಂದೇ ಒಂದು ಆಪಾದನೆಯನ್ನೂ ಹೊತ್ತಿಲ್ಲ ಎಂದು ವಿವರಿಸಿದರು.
ಕರ್ನಾಟಕದಲ್ಲಿ ನಮ್ಮ ವಿರುದ್ಧ ಶೇ 40 ಕಮಿಷನ್, ಪೇ ಸಿಎಂ ಮತ್ತಿತರ ಆರೋಪ ಮಾಡಿ ಚುನಾವಣಾ ತಂತ್ರ ಹೆಣೆದಿದ್ದ ಕಾಂಗ್ರೆಸ್ಸಿನದು ದೆಹಲಿಯಲ್ಲಿ ಶೂನ್ಯ ಸಂಪಾದನೆ ಎಂದು ಟೀಕಿಸಿದರು. ಈಗ ಅವರು ಖಾತೆ ತೆರೆದಿಲ್ಲ; ಆದರೆ ಕ್ಯಾತೆ ತೆಗೆಯುವುದನ್ನು ಅವರು ಬಿಡುವುದಿಲ್ಲ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಮಾತನಾಡಿ, ಕೇಜ್ರಿವಾಲ್ ಪ್ರಾಮಾಣಿಕ ಅಲ್ಲ; ಭ್ರಷ್ಟ ಎಂಬುದು ಜನರಿಗೆ ಮನವರಿಕೆ ಆಗಿದೆ. ಸುಳ್ಳಿನ ಮುಖವಾಡ ಕಳಚಿಬಿದ್ದಿದೆ ಎಂದು ತಿಳಿಸಿದರು. ಕಾಂಗ್ರೆಸ್ ಅವಲೋಕನ ಮಾಡಿಕೊಳ್ಳಬೇಕಿದೆ. ಕೇವಲ ನಕಾರಾತ್ಮಕ ಪ್ರಚಾರದಿಂದ ಚುನಾವಣೆ ಗೆಲ್ಲಲು ಅಸಾಧ್ಯ ಎಂದು ತಿಳಿಸಿದರು. ಅಂಬೇಡ್ಕರರ ಸಂವಿಧಾನ, ಜನತೆಯ ಸಂವಿಧಾನ ಗೆದ್ದಿದೆ ಎಂದು ವಿಶ್ಲೇಷಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.