ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆಯವರು ಬೈಂದೂರು ಕ್ಷೇತ್ರ, ಉಡುಪಿ ಜಿಲ್ಲೆ ಮತ್ತು ರಾಜ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟು, ಸರ್ಕಾರದಿಂದ ಉತ್ತರ ಪಡೆಯುವಲ್ಲಿ ಸಫಲರಾಗಿದ್ದಾರೆ.
ಅಧಿವೇಶನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕ್ಷೇತ್ರದ, ನಾಡಿನ ಜನರ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ಕ್ಷೇತ್ರದ ಜನರಲ್ಲಿ ವಿಶ್ವಾಸ ಮೂಡಿಸುವಲ್ಲಿ ಸಫಲರಾಗಿದ್ದಾರೆ. ಶಾಸಕರು ಸರ್ಕಾರಕ್ಕೆ ಸುಮಾರು 27 ಪ್ರಶ್ನೆಗಳನ್ನು ಕೇಳಿದ್ದು, ಶಾಸಕರ ಪ್ರಶ್ನೆ ಹಾಗೂ ಸರ್ಕಾರದ ಉತ್ತರ ಈ ರೀತಿ ಇದೆ.
1. ರಸ್ತೆ ಸಂತ್ರಸ್ಥರಿಗೆ ಪರಿಹಾರ
ಶಾಸಕರ ಪ್ರಶ್ನೆ : ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ರಸ್ತೆ ಮೇಲ್ದರ್ಜೆಗೇರಿಸುವ ಸಮಯದಲ್ಲಿ ಭೂಮಿ ಬಿಟ್ಟುಕೊಡುವ ಸಂತ್ರಸ್ತರಿಗೆ ಸೂಕ್ತ ಭೂಪರಿಹಾರ ಒದಗಿಸುವ ಬಗ್ಗೆ
ಸರ್ಕಾರದ ಉತ್ತರ: ರಸ್ತೆಗಳ ಅಭಿವೃದ್ಧಿ ಸಮಯದಲ್ಲಿ ಭೂಮಿ /ಖಾಲಿ ಜಾಗ/ಕಟ್ಟಡ ಕಳೆದು ಕೊಳ್ಳುವವರಿಗೆ ವಿಶೇಷ ಭೂ ಸ್ವಾಧೀನಾಧಿಕಾರಿಯವರ ವತಿಯಿಂದ ಭೂ ಸ್ವಾಧೀನ ಕಾಯ್ದೆಯನ್ವಯ ನಿಗದಿಪಡಿಸಲಾಗುವ ಪರಿಹಾರ ಮೊತ್ತವನ್ನು ಪಾವತಿಸಲಾಗುತ್ತದೆ.
2. ಮತ್ಸ್ಯ ಸಂಪದ
ಶಾಸಕರ ಪ್ರಶ್ನೆ : ಕೇಂದ್ರ ಸರಕಾರದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಮೂಲಸೌಕರ್ಯ ಅಭಿವೃದ್ಧಿಗೆ ಮಂಜೂರಾದ ಮೊತ್ತಕ್ಕೆ ರಾಜ್ಯ ಸರಕಾರದ ಆಡಳಿತ ಮಂಜೂರಾತಿ ನೀಡುವ ಬಗ್ಗೆ.
ಸರ್ಕಾರದ ಉತ್ತರ : ಕೇಂದ್ರ ಸರಕಾರದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂ ವೈ) ಯಡಿ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ಅವರ ಶಿಫಾರಸ್ಸಿನ ಮೇರೆಗೆ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಮೂಲ ಸೌಕರ್ಯ ಅಭಿವೃದ್ಧಿಗೆ ರೂ. 22.18 ಕೋಟಿ ಮೊತ್ತಕ್ಕೆ ಕೇಂದ್ರ ಸರಕಾರ ಈಗಾಗಲೇ ಅನುಮೋದನೆ ನೀಡಿದ್ದು. ಶೇ 60:40 ಅನುಪಾತದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು ರಾಜ್ಯದ ಪಾಲಿನ ಅನುದಾನ ಬಿಡುಗಡೆ ಬಾಕಿ ಇರುವುದರಿಂದ ಈ ಕೂಡಲೇ ಸದರಿ ಮೊತ್ತವನ್ನು ಬಿಡುಗಡೆಗೊಳಿಸಿ ಬಂದರಿನ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು.
3. ಲಂಚ ಪ್ರಕರಣಗಳು
ಶಾಸಕರ ಪ್ರಶ್ನೆ : ರಾಜ್ಯದ ಸರ್ಕಾರಿ ಅಧಿಕಾರಿಗಳ ಮೇಲೆ ದಾಖಲಾಗಿರುವ ಲಂಚಪ್ರಕರಣಗಳ ಮಾಹಿತಿ ಒದಗಿಸುವ ಬಗ್ಗೆ
ಸರ್ಕಾರದ ಉತ್ತರ : 2023 ಹಾಗೂ ಹಾಗೂ 2024 ನವೆಂಬರ್ ಅಂತ್ಯಕ್ಕೆ ರಾಜ್ಯದಲ್ಲಿ ಸರಕಾರಿ ಅಧಿಕಾರಿಗಳ ಮೇಲೆ ಒಟ್ಟು 456 ಲಂಚ ಪ್ರಕರಣಗಳು ದಾಖಲಾಗಿದೆ. ಕರ್ನಾಟಕ ಲೋಕಾಯುಕ್ತದಲ್ಲಿ ಒಟ್ಟು 854 ಪ್ರಕರಣಗಳಿವೆ. 2023 ಹಾಗೂ 2024 ರಲ್ಲಿ ಲೋಕಾಯುಕ್ತ ಶಿಫಾರಸ್ಸಿನ ಮೇರೆಗೆ ಒಟ್ಟು 360 ಪ್ರಕರಣಗಳಿಗೆ ಶಿಕ್ಷೆ ಆಗಿರುತ್ತದೆ.
4 . ಭತ್ತದ ಕೃಷಿಗೆ ಉತ್ತೇಜನ ನೀಡುವ ಕುರಿತು
ಶಾಸಕರ ಪ್ರಶ್ನೆ : ಉಡುಪಿ ಜಿಲ್ಲೆಯಲ್ಲಿ ಭತ್ತದ ಕೃಷಿ ವಿಸ್ತೀರ್ಣದಲ್ಲಾಗುತ್ತಿರುವ ಗಣನೀಯ ಇಳಿಕೆಯ ಕುರಿತು ವೈಜ್ಞಾನಿಕ ಸಂಶೋಧನೆ ನಡೆಸುವ ಬಗ್ಗೆ
ಸರ್ಕಾರದ ಉತ್ತರ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯ ಶಿವಮೊಗ್ಗ ಇವರಿಂದ ಸದರಿ ವಿಷಯದ ಕುರಿತು ವೈಜ್ಞಾನಿಕ ಅಧ್ಯಯನಕ್ಕಾಗಿ ಸಂಶೋಧನಾ ಪ್ರಸ್ತಾವನೆಯು ಕೃಷಿ ಆಯುಕ್ತಾಲಯದಲ್ಲಿ ಪರಿಶೀಲನಾ ಹಂತದಲ್ಲಿರುತ್ತದೆ. ಪ್ರಸ್ತುತ ಕೇಂದ್ರ ಪುರಸ್ಕೃತ ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯಡಿ ಅಕ್ಕಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದ್ದು, ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬೆಳೆ ವಿಸ್ತರಿಸಲು ಹಾಗೂ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ.
5. ಕಿಂಡಿ ಅಣೆಕಟ್ಟುಗಳ ನಿರ್ವಹಣೆ
ಶಾಸಕರ ಪ್ರಶ್ನೆ : ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿರುವ 132 ಕಿಂಡಿ ಆಣೆಕಟ್ಟೆಗಳಿಗೆ ಹೊಸದಾಗಿ ಹಲಗೆ ಅಳವಡಿಕೆ ಮತ್ತು ಸೂಕ್ತ ನಿರ್ವಹಣೆಯ ಕುರಿತು
ಸರ್ಕಾರದ ಉತ್ತರ : 2023-24 ಹಾಗೂ 2024-25 ರಲ್ಲಿ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 132 ಕಿಂಡಿ ಆಣೆಕಟ್ಟುಗಳಿಗೆ ಹೊಸ ಹಲಗೆ ಅಳವಡಿಸಲಾಗಿರುತ್ತದೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಸ್ಕೂರಿನಲ್ಲಿ ಈಗಾಗಲೇ ಅನುಮೋದನೆಗೊಂಡ 3 ಕೋಟಿ ಮೊತ್ತದ ಕಿಂಡಿ ಅಣೆಕಟ್ಟು ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಲಾಗುವುದು.
6. ಕೆಂಪು ಕಲ್ಲು ಗಣಿಗಾರಿಕೆ ಮತ್ತು ಕೆಂಪು ಕಲ್ಲು ಅಲಭ್ಯತೆ
ಶಾಸಕರ ಪ್ರಶ್ನೆ : ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಸಕ್ರಮ ಕೆಂಪು ಕಲ್ಲು ಗಣಿಗಳು, 2023-24 ಹಾಗೂ 2024-25 ನೇ ಸಾಲಿನಲ್ಲಿ ಸ್ಥಳೀಯರಿಗೆ ಕೃಷಿ ಉದ್ದೇಶಕ್ಕಾಗಿ ಹಾಗೂ ಸ್ವಂತ ಬಳಕೆಗಾಗಿ ನೀಡಿರುವ ಪರವಾನಿಗೆಗಳ ಬಗ್ಗೆ
ಸರ್ಕಾರದ ಉತ್ತರ : ಕೆಎಂಎಂಸಿ ನಿಯಮಗಳು 1994 ರ ನಿಯಮ 3-A ರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ತೆಗೆಯಲು 15 ಗಣಿಗಳಿಗೆ ಅನುಮತಿಸಲಾಗಿದ್ದರೆ, ಉಡುಪಿ ಜಿಲ್ಲೆಯಲ್ಲಿ ಯಾವುದೇ ಗಣಿಗಳಿಗೆ ಅನುಮತಿ ನೀಡಲಾಗಿಲ್ಲ. ಪ್ರಸ್ತುತ ರಾಜ್ಯದಲ್ಲಿ ಕೆಂಪು ಕಲ್ಲು ಲಭ್ಯತೆ ಇಲ್ಲದೆ ಅಥವಾ ಪೂರಕ ದಾಸ್ತಾನು ಇಲ್ಲದೇ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ತೊಡಕಾಗುತ್ತಿರುವುದರಿಂದ ಗಣಿ ನಿಯಮಗಳಿಗೆ ಅಗತ್ಯ ತಿದ್ದುಪಡಿ ತಂದು ಕಟ್ಟಡ ನಿರ್ಮಾಣ ಉದ್ದೇಶಕ್ಕಾಗಿ ಕೆಂಪು ಕಲ್ಲಿನ ಇಟ್ಟಿಗಳನ್ನು ತೆಗೆಯಲು ಅವಕಾಶ ಕಲ್ಪಿಸಲಾಗುವುದು.
7. ವಿದ್ಯಾರ್ಥಿ ವೇತನ ಬಾಕಿ
ಶಾಸಕರ ಪ್ರಶ್ನೆ : ಮೆಟ್ರಿಕ್ ನಂತರದ ವಿವಿಧ ತರಗತಿಗಳಲ್ಲಿ ಓದುತ್ತಿರುವ ಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಶುಲ್ಕ ಮರುಪಾವತಿ ಬಗ್ಗೆ
ಸರ್ಕಾರದ ಉತ್ತರ : ವಿದ್ಯಾರ್ಥಿವೇತನ ಯೋಜನೆಯಡಿಯಲ್ಲಿ ಉಡುಪಿ ಜಿಲ್ಲೆಯಲ್ಲಿ 2023-24 ಹಾಗೂ 2024-25 ರಲ್ಲಿ ಕ್ರಮವಾಗಿ 15,442 ಹಾಗೂ 11,719 ವಿದ್ಯಾರ್ಥಿ ಗಳು ಅರ್ಜಿ ಸಲ್ಲಿಸಿದ್ದಾರೆ. ಶುಲ್ಕ ಮರುಪಾವತಿ ಯೋಜನೆಯಡಿ 2023-24 ಒಟ್ಟು 3143 ವಿದ್ಯಾರ್ಥಿಗಳ ಪೈಕಿ 1073 ವಿದ್ಯಾರ್ಥಿಗಳಿಗೆ ಇನ್ನೂ ಪಾವತಿಸಬೇಕಾಗಿದೆ. ಇಡೀ ರಾಜ್ಯದಲ್ಲಿ 2,93,770 ವಿದ್ಯಾರ್ಥಿ ಗಳು ಶುಲ್ಕ ಮರುಪಾವತಿ ಪಡೆದಿದ್ದರೆ 56,340 ವಿದ್ಯಾರ್ಥಿಗಳಿಗೆ ಇನ್ನೂ ಕೂಡಾ ಶುಲ್ಕ ಮರುಪಾವತಿ ಬಾಕಿಯಿದೆ.
8. ಕಸ್ತೂರಿ ರಂಗನ್ ವರದಿ
ಶಾಸಕರ ಪ್ರಶ್ನೆ : ಕಸ್ತೂರಿ ರಂಗನ್ ವರದಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿರುವ ಪ್ರದೇಶಗಳಲ್ಲಿ ನಡೆಸಲಾದ ದೋಷಪೂರಿತ ಸರ್ವೇ ಹಾಗೂ ಸ್ಥಳೀಯ ಗ್ರಾಮ ಸಭೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ವಿಚಾರ ಸರಕಾರದ ಗಮನದಲ್ಲಿದೆಯೇ?
ಸರ್ಕಾರದ ಉತ್ತರ : ಗಮನದಲ್ಲಿ ಇಲ್ಲ
ಕಸ್ತೂರಿ ರಂಗನ್ ವರದಿಯಿಂದ ಬಾಧಿತ ಆಗಬಹುದಾದ ಪ್ರದೇಶಗಳ ಜನರಿಗೆ ಆಗಬಹುದಾದ ನಷ್ಟಗಳ ಬಗ್ಗೆ ಹಾಗೂ ನೀಡಬಹುದಾದ ಪರಿಹಾರ ಮತ್ತು ರಕ್ಷಣೆಗಳ ಬಗ್ಗೆ ಸರಕಾರದಿಂದ ಅಧ್ಯಯನ ನಡೆಸಿ ಮಾಹಿತಿ ಸಂಗ್ರಹಿಸಿ ದಾಖಲಿಸುವ ಕಾರ್ಯ ಮಾಡಲಾಗಿದೆಯೇ?
ಅನ್ವಯಿಸುವುದಿಲ್ಲ
9. ಬಿಪಿಎಲ್ ಪಡಿತರ ಚೀಟಿ ರದ್ದತಿ ಹಾಗೂ ವಿತರಣೆ
ಶಾಸಕರ ಪ್ರಶ್ನೆ : ರಾಜ್ಯದಲ್ಲಿ ರದ್ದುಗೊಳಿಸಿರುವ ಮತ್ತು ಹೊಸದಾಗಿ ಒದಗಿಸಲಾಗಿದ ಬಿಪಿಎಲ್ ಕಾರ್ಡುಗಳ ಬಗ್ಗೆ
ಸರ್ಕಾರದ ಉತ್ತರ : ರಾಜ್ಯದಲ್ಲಿ ಒಟ್ಟು 10,80,648 ಅಂತ್ಯೋದಯ ಅನ್ನ ಹಾಗೂ 1,17,58,582 ಆದ್ಯತಾ ಪಡಿತರ ಚೀಟಿಗಳು ಚಾಲ್ತಿಯಲ್ಲಿದ್ದು 2023-24 ನೇ ಸಾಲಿನಲ್ಲಿ 74,342 ಹಾಗೂ 2024-25 ರಲ್ಲಿ 16,719 ಬಿಪಿಎಲ್ ಕಾರ್ಡ್ಗಳನ್ನು ರದ್ದು ಪಡಿಸಲಾಗಿದೆ.
ಹೊಸ ಬಿಪಿಎಲ್ ಪಡಿತರ ಚೀಟಿ ಕೋರಿ ಆಗಸ್ಟ್ 2023ರ ವರೆಗೆ ಸಲ್ಲಿಸಲಾಗಿದ್ದ 2,95,986 ಅರ್ಜಿಗಳ ವಿಲೇವಾರಿಗೆ ಕ್ರಮ ವಹಿಸಲಾಗುತ್ತಿದೆ. ಆಗಸ್ಟ್ 2023 ರಿಂದ 27-11-2024 ವರೆಗೆ ಒಟ್ಟು 2,10,743 ಅರ್ಜಿಗಳು ಸ್ವೀಕೃತವಾಗಿರುತ್ತವೆ ಹಾಗೂ ಸದರಿ ಅರ್ಜಿಗಳು ವಿಲೇವಾರಿಗೆ ಬಾಕಿ ಇದೆ.
10. ಪೌರ ಕಾರ್ಮಿಕರಿಗೆ ವೇತನ ಬಾಕಿ
ಶಾಸಕರ ಪ್ರಶ್ನೆ : ಪೌರ ಕಾರ್ಮಿಕರ ವೇತನ ಬಾಕಿ ಮತ್ತು ಬಾಕಿ ವೇತನವನ್ನು ಹಂತ ಹಂತವಾಗಿ ಪಾವತಿಸುವ ಬಗ್ಗೆ
ಸರ್ಕಾರದ ಉತ್ತರ : ಪ್ರಸ್ತುತ ಬೈಂದೂರು ಪಟ್ಟಣ ಪಂಚಾಯತ್ನಲ್ಲಿ 36 ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು, ವೇತನದ ಭಾಗಶಃ ಮೊತ್ತವನ್ನು ರಾಜ್ಯ ಹಣಕಾಸು ಆಯೋಗ ಹಾಗೂ ಬಾಕಿ ಉಳಿದ ಭಾಗಶಃ ಮೊತ್ತವನ್ನು ಬೈಂದೂರು ಪಟ್ಟಣ ಪಂಚಾಯತ್ ಸ್ವಂತ ನಿಧಿಯಿಂದ ವೇತನ ಪಾವತಿಸಲಾಗುತ್ತಿದೆ. ಪೌರಕಾರ್ಮಿಕರಿಗೆ 2024 ರ ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ 3 ತಿಂಗಳಿನ ವೇತನ ಬಾಕಿ ಇದ್ದು ಸದರಿ ಪೌರಕಾರ್ಮಿಕ ಸಿಬ್ಬಂದಿಗಳಿಗೆ ಹಂತ ಹಂತವಾಗಿ ವೇತನ ಪಾವತಿಸಲು ಕ್ರಮವಹಿಸಲಾಗುವುದು.
11. ಗಂಗೊಳ್ಳಿ- ಕುಂದಾಪುರ ಬಾರ್ಜ್ ಸೇವೆ
ಶಾಸಕರ ಪ್ರಶ್ನೆ : ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ನಿತ್ಯ ಕುಂದಾಪುರ ಭಾಗದಿಂದ ಸಾವಿರಾರು ಮೀನುಗಾರರು, ಮೀನು ವ್ಯಾಪಾರಸ್ಥರು ಹಾಗೂ ಕಾರ್ಮಿಕರು ಬರುತ್ತಿರುವ ಕಾರಣ ಪ್ರಸ್ತುತ ಕುಂದಾಪುರದಿಂದ ಗಂಗೊಳ್ಳಿಗೆ ರಸ್ತೆ ಮೂಲಕ 18 ಕಿ.ಮಿ ಕ್ರಮಿಸಬೇಕಾಗಿರುವುದರಿಂದ ಸೇತುವೆ ನಿರ್ಮಾಣ ಆಗುವವರೆಗೆ ಜನರ ಹಾಗೂ ವಾಹನಗಳ ಸಂಚಾರಕ್ಕೆ ಬಾರ್ಜ್ ವ್ಯವಸ್ಥೆ ಮಾಡುವ ಬಗ್ಗೆ
ಸರ್ಕಾರದ ಉತ್ತರ : ಕುಂದಾಪುರದಿಂದ ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಬಾರ್ಜ್ ವ್ಯವಸ್ಥೆ ಕಲ್ಪಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ
12. ಗಂಗೊಳ್ಳಿ- ಕುಂದಾಪುರ ಸೇತುವೆ
ಶಾಸಕರ ಪ್ರಶ್ನೆ : ಕುಂದಾಪುರ ತಾಲೂಕಿನ ಗಂಗೊಳ್ಳಿಯಿಂದ ಕುಂದಾಪುರ ಸಂಪರ್ಕಿಸಲು ಸಾರ್ವಜನಿಕರು ಹಲವು ವರ್ಷಗಳಿಂದ ಸೇತುವೆ ನಿರ್ಮಾಣಕ್ಕೆ ಬೇಡಿಕೆ ಇಟ್ಟಿರುವ ವಿಚಾರ ಹಾಗೂ ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ನಿತ್ಯ ಕುಂದಾಪುರ ಭಾಗದಿಂದ ಸಾವಿರಾರು ಮೀನುಗಾರರು, ಮೀನು ವ್ಯಾಪಾರಸ್ಥರು ಹಾಗೂ ಕಾರ್ಮಿಕರು ಬರುತ್ತಿರುವ ಕಾರಣ ಪ್ರಸ್ತುತ ಕುಂದಾಪುರದಿಂದ ಗಂಗೊಳ್ಳಿಗೆ ರಸ್ತೆ ಮೂಲಕ 18 ಕಿ.ಮಿ ಕ್ರಮಿಸಬೇಕಾಗಿರುವುದರಿಂದ ಸೇತುವೆ ನಿರ್ಮಿಸುವ ಬಗ್ಗೆ
ಸರ್ಕಾರದ ಉತ್ತರ : ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಗಂಗೊಳ್ಳಿಯಿಂದ ಕುಂದಾಪುರ ಸಂಪರ್ಕಿಸಲು ಸೇತುವೆ ನಿರ್ಮಾಣದ ಪ್ರಸ್ತಾವನೆ ಇಲ್ಲ.
13. 94ಸಿ ಅರ್ಜಿಗಳ ವಿಲೇವಾರಿ
ಶಾಸಕರ ಪ್ರಶ್ನೆ : ಬೈಂದೂರು ಕ್ಷೇತ್ರದಲ್ಲಿ ಬಾಕಿ ಇರುವ 94ಸಿ ಅರ್ಜಿ ಹಾಗೂ ಅರ್ಜಿಗಳ ವಿಳಂಬ ವಿಲೇವಾರಿಯಿಂದ ಜನ ಸಾಮಾನ್ಯರಿಗೆ ಉಂಟಾಗುತ್ತಿರುವ ಸಮಸ್ಯೆಯ ಕುರಿತು
ಸರ್ಕಾರದ ಉತ್ತರ : ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ 314 ಅರ್ಹ ಅರ್ಜಿಗಳು ಬಾಕಿ ಇರುತ್ತದೆ. ಈ ಅರ್ಜಿಗಳು 3ಬಿ ನೋಟಿಸ್ ನೀಡಿ ವಿಚಾರಣೆ ಹಾಗೂ ತನಿಖಾ ಹಂತದಲ್ಲಿ ಬಾಕಿ ಇರುತ್ತದೆ. ಆದ್ಯತೆಯ ಮೇರೆಗೆ ಹಕ್ಕು ಪತ್ರ ನೀಡಲು ತಹಶೀಲ್ದಾರರ ಹಂತದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 94ಸಿ ಯೋಜನೆಯಲ್ಲಿ ವಂಡ್ಸೆ ಹೋಬಳಿಯಲ್ಲಿ 1615, ಬೈಂದೂರು ಹೋಬಳಿಯಲ್ಲಿ 1065 ಅರ್ಜಿಗಳು ಸೇರಿ 2,680 ಅರ್ಜಿಗಳು ಗ್ರಾಮ ಆಡಳಿತ ಅಧಿಕಾರಿ, ಕಂದಾಯ ನಿರೀಕ್ಷಕರು ಹಾಗೂ ತಾಲೂಕು ಕಚೇರಿಯ ವಿಷಯ ನಿರ್ವಾಹಕರ ಬಳಿ ಬಾಕಿ ಇವೆ.
14. ಇ-ಶ್ರಮ್ ಕಾರ್ಡುದಾರರಿಗೆ ಬಿಪಿಎಲ್ ಪಡಿತರ ಚೀಟಿ
ಶಾಸಕರ ಪ್ರಶ್ನೆ : ಇ – ಶ್ರಮ್ ಕಾರ್ಡ್ ಹೊಂದಿದ ಎಲ್ಲಾ ಕಾರ್ಮಿಕರಿಗೂ ಬಿಪಿಎಲ್ ಪಡಿತರ ಚೀಟಿ ಒದಗಿಸಲು ಅವಕಾಶವಿದ್ದರೂ ಈ ಬಗ್ಗೆ ಸಮರ್ಪಕ ಕ್ರಮ ವಹಿಸದ ಕುರಿತು
ಸರ್ಕಾರದ ಉತ್ತರ : ರಾಜ್ಯದಲ್ಲಿ ಪಡಿತರ ಚೀಟಿ ಹೊಂದದೆ ಇರುವ ಒಟ್ಟು 3,62,501 ಇ -ಶ್ರಮ್ ನೊಂದಾಯಿತ ಕಾರ್ಮಿಕರಲ್ಲಿ 1,31,783 ಕಾರ್ಮಿಕರು ಆದ್ಯತಾ ಪಡಿತರ ಚೀಟಿ ಹೊಂದಲು ಅರ್ಹರಿಸುತ್ತಾರೆ. ಈ ಪೈಕಿ 84,152 ಕಾರ್ಮಿಕರಿಗೆ ಆದ್ಯತಾ ಪಡಿತರ ಚೀಟಿ ವಿತರಣೆ ಮಾಡಲಾಗಿದ್ದು 47,631 ಕಾರ್ಮಿಕರಿಗೆ ಆದ್ಯತಾ ಪಡಿತರ ಚೀಟಿ ವಿತರಣೆ ಮಾಡಲು ವಿವಿಧ ಕಾರಣಗಳಿಂದ ಬಾಕಿ ಇದೆ.
ರಾಜ್ಯದಲ್ಲಿ ಒಟ್ಟು 1,02,84,362 ಇ – ಶ್ರಮ್ ನೊಂದಾಯಿತ ಕಾರ್ಮಿಕರಿದ್ದು ಉಡುಪಿ ಜಿಲ್ಲೆಯಲ್ಲಿ ಒಟ್ಟು 1,98,315 ಇ -ಶ್ರಮ್ ನೊಂದಾಯಿತ ಕಾರ್ಮಿಕರಿದ್ದಾರೆ ಹಾಗೂ 589 ಕಾರ್ಮಿಕರಿಗೆ ಬಿಪಿಎಲ್ ಪಡಿತರ ಚೀಟಿ ನೀಡಲು ಬಾಕಿ ಇದೆ.
15. ವಿದ್ಯಾರ್ಥಿ ವೇತನಕ್ಕೆ ತಡೆ
ಶಾಸಕರ ಪ್ರಶ್ನೆ : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನ ತಡೆಹಿಡಿದಿರುವ ಬಗ್ಗೆ
ಸರ್ಕಾರದ ಉತ್ತರ : ನೊಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಈ ಹಿಂದೆ ನೀಡಲಾಗುತ್ತಿರುವ ವಿದ್ಯಾರ್ಥಿವೇತನ ಮೊತ್ತವನ್ನು ಪರಿಷ್ಕರಿಸಲಾಗಿರುತ್ತದೆ ಆದರೆ ತಡೆಹಿಡಿದಿರುವುದಿಲ್ಲ. ಪ್ರತಿ ವರ್ಷ ಶೈಕ್ಷಣಿಕ ಸಹಾಯಧನಕ್ಕೆ ಸಲ್ಲಿಸಲಾಗುತ್ತಿರುವ ಅರ್ಜಿಗಳ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುತ್ತಿದೆ. 2022- 23ನೇ ಸಾಲಿನಲ್ಲಿ ಅರ್ಹ ಅರ್ಜಿಗಳನ್ನು ಪರಿಷ್ಕರಣ ಪೂರ್ವ ದರಗಳನ್ನು ಪುರಸ್ಕರಿಸಿದ್ದಲ್ಲಿ ಒಟ್ಟು ರೂ 1600 ಕೋಟಿ ಗಳು ವೆಚ್ಚವಾಗುತ್ತಿತ್ತು. ರೂ. 1600 ಕೋಟಿಗಳನ್ನು ಕೇವಲ ಶೈಕ್ಷಣಿಕ ಧನ ಸಹಾಯಕ್ಕಾಗಿ ಮಾತ್ರ ಒಂದೇ ವರ್ಷದಲ್ಲಿ ವೆಚ್ಚ ಮಾಡಿದ್ದಲ್ಲಿ ಮಂಡಳಿಯ ಸಂಪನ್ಮೂಲಗಳನ್ನು ಇತರೆ ಯೋಜನೆಗಳಿಗೆ ಹಂಚಿಕೆ ಮಾಡಲು ತೊಂದರೆಯಾಗುತ್ತದೆ. ಕಾರಣಕ್ಕಾಗಿ ಮಂಡಳಿಯ ಶೈಕ್ಷಣಿಕ ಸಹಾಯಧನ ದ ದರಗಳನ್ನು 2022-23 ಸಾಲಿನಲ್ಲಿ ಮತ್ತು 2023-24 ನೇ ಸಾಲಿನಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ 318/2006 ರಲ್ಲಿ ನೀಡಿದ ನಿರ್ದೇಶನಗಳಿಗೆ ಅನುಗುಣವಾಗಿ ಕೇಂದ್ರ ಕಾರ್ಮಿಕ ಮಂತ್ರಾಲಯ ರೂಪಿಸಿದ ಮಾದರಿ ಕಲ್ಯಾಣ ಯೋಜನೆಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ದರಗಳಿಗೆ ಅನುಗುಣವಾಗಿ ಪರಿಷ್ಕರಿಸಿ ಆದೇಶವನ್ನು ಹೊರಡಿಸಲಾಗಿರುತ್ತದೆ.
16. ತ್ರೈಮಾಸಿಕ ಕೆಡಿಪಿ ಅಧಿಕಾರಿಗಳ ಗೈರು
ಶಾಸಕರ ಪ್ರಶ್ನೆ : ಕೆಡಿಪಿ ಸಭೆಗಳಿಗೆ ಇಲಾಖಾ ಅಧಿಕಾರಿಗಳು ನಿರಂತರವಾಗಿ ಗೈರು ಹಾಜರಾಗುತ್ತಿರುವುದರಿಂದ ಗ್ರಾಮಾಭಿವೃದ್ಧಿಗೆ ತೊಡಕು ಹಾಗೂ ಗ್ರಾಮ ಪಂಚಾಯತ್ತಿನ ಶಾಸನ ಬದ್ಧ ಅಧಿಕಾರ ಮೊಟಕುಗೊಳಿಸುತ್ತಿರುವ ಬಗ್ಗೆ
ಸರ್ಕಾರದ ಉತ್ತರ : ಗ್ರಾಮ ಪಂಚಾಯತ್ಗಳಲ್ಲಿ ನಡೆಯುವ ತ್ರೈಮಾಸಿಕ ಕೆಡಿಪಿ ಸಭೆಗಳಿಗೆ ಆಯಾಯ ಇಲಾಖೆಗಳ ಹೋಬಳಿ/ ಗ್ರಾಮಮಟ್ಟದ ಅಧಿಕಾರಿಗಳು ಹಾಜರಾಗಬೇಕಾಗಿರುತ್ತದೆ. ಅಧಿಕಾರಿಗಳು ಗೈರು ಹಾಜರಾದ ಸಂದರ್ಭದಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯತ್ಗಳಿಂದ ಪಡೆಯಲಾಗುವ ವರದಿಯನ್ನು ಆಧರಿಸಿ ಸಭೆಗಳಿಗೆ ಆಯಾಯ ಇಲಾಖಾ ಹೋಬಳಿ / ಗ್ರಾಮಮಟ್ಟದ ಅಧಿಕಾರಿ / ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗುವಂತೆ ಅಗತ್ಯ ಕ್ರಮ ಕೈಗೊಳ್ಳಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ.
17. ಜೆಜೆಎಂ ಇಂಜಿನಿಯರ್ಗಳ ನೇಮಕ
ಶಾಸಕರ ಪ್ರಶ್ನೆ : ಗ್ರಾಮೀಣ ನೀರು ಹಾಗೂ ನೈರ್ಮಲ್ಯ ಇಲಾಖೆಯಲ್ಲಿ ಇಂಜಿನಿಯರ್ಗಳ ಕೊರತೆಯಿಂದ ಜೆಜೆಎಂ ಕಾಮಗಾರಿಗಳು ಕುಂಠಿವಾಗುತ್ತಿರುವುದೂ ಸೇರಿದಂತೆ ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗೆ ತೊಂದರೆ ಉಂಟಾಗುತ್ತಿರುವ ವಿಚಾರದ ಬಗ್ಗೆ
ಸರ್ಕಾರದ ಉತ್ತರ : ಲೋಕೋಪಯೋಗಿ ಇಲಾಖೆಯ ವಿವಿಧ ವೃಂದಗಳ ಇಂಜಿನಿಯರ್ಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಶಾಶ್ವತವಾಗಿ ವಿಲೀನಗೊಳಿಸಲಾಗಿರುತ್ತದೆ. ಅಲ್ಲದೆ 2024 ನೇ ಸಾಲಿನಲ್ಲಿ 270 ಸಹಾಯಕ ಇಂಜಿನಿಯರ್ ಮತ್ತು 80 ಹಿರಿಯ ಇಂಜಿನಿಯರ್ಗಳನ್ನು ನೇಮಕಾತಿ ಮೂಲಕ ಸ್ಥಳ ನಿಯುಕ್ತಿಗೊಳಿಸಲಾಗಿರುತ್ತದೆ. ಖಾಲಿ ಉಳಿದ ಹುದ್ದೆಗಳಿಗೆ ಅನ್ಯ ಇಲಾಖೆಯ ಇಂಜಿನಿಯರ್ ಗಳ ಸೇವೆ ಪಡೆದು ನಿಯೋಜನೆ ಮೇರೆಗೆ ಭರ್ತಿ ನೀಡಲಾಗುತ್ತದೆ.
18. ಅಂಬೇಡ್ಕರ್ ವಸತಿ ಶಾಲಾ ಕಟ್ಟಡದ ಸುರಕ್ಷತೆ
ಶಾಸಕರ ಪ್ರಶ್ನೆ : ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಶಂಕರನಾರಾಯಣ ಸೌಡ ಎಂಬಲ್ಲಿ ನಿರ್ಮಿಸಲಾಗುತ್ತಿರುವ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲಾ ಕಟ್ಟಡ ಕಾಮಗಾರಿಯಿಂದ ಗುಡ್ಡ ಕುಸಿತದ ಭೀತಿ ಎದುರಾಗಿದ್ದು ಭವಿಷ್ಯದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತರಿ ಪಡಿಸಿಕೊಳ್ಳುವಲ್ಲಿ ಸರಕಾರ ಕೈಗೊಂಡ ಕ್ರಮದ ಬಗ್ಗೆ
ಸರ್ಕಾರದ ಉತ್ತರ : ಈ ವಿಚಾರ ಸರಕಾರದ ಗಮನದಲ್ಲಿ ಇದ್ದು, ಶಾಲಾ ಕಟ್ಟಡಗಳ ಸಮೀಪ ಕಟ್ಟಡ ಕಾಮಗಾರಿಯಿಂದ ಗುಡ್ಡ ಕುಸಿಯುವುದನ್ನು ತಡೆಗಟ್ಟಲು ಅನುಮೋದಿತ ವಿನ್ಯಾಸದಂತೆ ಕಾಂಕ್ರೀಟ್ ತಡೆಗೋಡೆಗಳನ್ನು ನಿರ್ಮಿಸಲಾಗಿರುತ್ತದೆ.
ಕಾಮಗಾರಿಯ ಗುಣ ಮಟ್ಟದ ನಿರ್ವಹಣೆ ಬಗ್ಗೆ ಖಾತರಿಗೆ ಅನುಷ್ಠಾನ ಸಂಸ್ಥೆಯಾದ ಕ್ರೈಸ್ ವತಿಯಿಂದ ಅಧೀಕ್ಷಕ ಅಭಿಯಂತರರು, ಸಹಾಯಕ ಕಾರ್ಯ ಪಾಲಕ ಇಂಜಿನಿಯರ್, ಹಾಗೂ ಕಾರ್ಯಪಾಲಕ ಇಂಜಿನಿಯರ್ ಇವರು ಸದರಿ ಕಾಮಗಾರಿ ಸ್ಥಳಕ್ಕೆ ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಂದಾಜು ಪಟ್ಟಿ ಹಾಗೂ ವಿನ್ಯಾಸದಂತೆ ಕಾಮಗಾರಿ ನಿರ್ವಹಿಸಲು ಗುತ್ತಿಗೆದಾರರಿಗೆ ಸೂಚನೆ / ನಿರ್ದೇಶನಗಳನ್ನು ನೀಡಲಾಗಿದ್ದು, ಕಾಮಗಾರಿಯ ಗುಣಮಟ್ಟವನ್ನು ಕಾಪಾಡುವಲ್ಲಿ ಕ್ರಮವಹಿಸಿರುತ್ತಾರೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಮೂರನೇ ವ್ಯಕ್ತಿಯಿಂದ ಹಂತಗಳಲ್ಲಿ ಪರಿವೀಕ್ಷಣೆ ನಡೆಸಿ ಕಾಮಗಾರಿಯ ವರದಿಯನ್ನು ಪಡೆದು ಕ್ರಮಗಳನ್ನು ವಹಿಸಲಾಗಿರುತ್ತದೆ. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಈಗಾಗಲೇ ಅನುಮೋದಿತ ವಿನ್ಯಾಸದಂತೆ ತಡೆಗೋಡೆ ನಿರ್ಮಾಣ ಮಾಡಲು ಕ್ರಮವಹಿಸಿದೆ.
19. ಗ್ರಾಮೀಣ ವಸತಿ ಯೋಜನೆ : ಗುರಿ ಅಲಭ್ಯತೆ & ಸಹಾಯ ಧನ ಪಾವತಿ ಬಾಕಿ
ಶಾಸಕರ ಪ್ರಶ್ನೆ : ರಾಜ್ಯ ಸರ್ಕಾರದ ವಸತಿ ಯೋಜನೆಯಡಿಯಲ್ಲಿ ಹೊಸ ಮನೆಗಳ ಗುರಿ ಹಂಚಿಕೆ ಮಾಡಿರುವ ಬಗ್ಗೆ
ಸರ್ಕಾರದ ಉತ್ತರ : 2023-24 ಹಾಗೂ 2024-25 ರಲ್ಲಿ ಬಜೆಟ್ ನಲ್ಲಿ ರಾಜ್ಯ ಸರಕಾರದ ವಸತಿ ಯೋಜನೆಗಳಡಿ ಮನೆಗಳ ಗುರಿಯನ್ನು ಹಂಚಿಕೆಯಾಗಿರುವುದಿಲ್ಲ. ಕಾಮಗಾರಿ ಆದೇಶ ನೀಡಿ ಒಂದರಿಂದ ಎರಡು ವರ್ಷ ಕಾಲಾವಕಾಶ ನೀಡಿದ ನಂತರವೂ ಆರಂಭವಾಗದ ಮನೆಗಳನ್ನು ರದ್ದುಪಡಿಸಿ ಬಸವ ವಸತಿ ಯೋಜನೆಯಡಿ 2024-25 ನೇ ಸಾಲಿಗೆ 16,371 ಮನೆಗಳನ್ನು ಮರು ಹಂಚಿಕೆ ಮಾಡಲಾಗಿದೆ.
ವಸತಿ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಪ್ರಸ್ತುತ ಆಡಿಟ್ ಓಕೆ ಆಗಿರುವ ಪ್ರಕರಣಗಳಲ್ಲಿ ಹಂತ ಹಂತವಾಗಿ ಸರ್ಕಾರದ ಸಹಾಯವನ್ನು ಬಿಡುಗಡೆ ಮಾಡಲಾಗುತ್ತಿದೆ. ಪ್ರಸ್ತುತ ಪಂಚಾಂಗ,ಗೋಡೆ,ಛಾವಣಿ ಹಾಗೂ ಸಂಪೂರ್ಣ ಸೇರಿದಂತೆ ಬಸವ ವಸತಿ ಯೋಜನೆಯಡಿ ರೂ. 111.63 ಕೋಟಿ ಮತ್ತು ಡಿ. ದೇವರಾಜ ಅರಸು ವಸತಿ ಯೋಜನೆಯಡಿ ರೂ. 2.62 ಕೋಟಿ ಸೇರಿ ಒಟ್ಟು ರೂ. 114.25 ಕೋಟಿ ಸಹಾಯಧನ ಪಾವತಿಸಲು ಬಾಕಿ ಇರುತ್ತದೆ. ಉಡುಪಿ ಜಿಲ್ಲೆಯಲ್ಲಿ ಬಸವ ವಸತಿ ಸೇರಿದಂತೆ ವಸತಿ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳಿಗೆ ಪ್ರಸ್ತುತ ಆಡಿಟ್ ಓಕೆ ಆಗಿರುವ ಪ್ರಕರಣಗಳಲ್ಲಿ ಒಟ್ಟು ರೂ. 36 ಲಕ್ಷ ಸಹಾಯಧನ ಪಾವತಿಸಲು ಬಾಕಿ ಇರುತ್ತದೆ.
20. ಗಂಗಾ ಕಲ್ಯಾಣ ಯೋಜನೆ : ಅನುಷ್ಠಾನ ವಿಳಂಬ
ಶಾಸಕರ ಪ್ರಶ್ನೆ : ವಾಲ್ಮೀಕಿ ಅಭಿವೃದ್ಧಿ ನಿಗಮದಡಿ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕಳೆದ ವರ್ಷ ಫಲಾನುಭವಿಗಳು ಆಯ್ಕೆಯಾಗಿದ್ದರೂ ಈವರೆಗೆ ಅವರಿಗೆ ಯೋಜನೆಯ ಸೌಲಭ್ಯ ಒದಗಿಸದೇ ಇರುವ ಬಗ್ಗೆ
ಸರ್ಕಾರದ ಉತ್ತರ : ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಕೊಳವೆ ಬಾವಿ ಸೌಲಭ್ಯ ಕಲ್ಪಿಸಲು ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಕೊಳವೆ ಬಾವಿ ಘಟಕ ನಿರ್ಮಿಸಲು ಕ್ರಮ ವಹಿಸಲಾಗುವುದು. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಗಳ ಅಭಿವೃದ್ಧಿ ನಿಗಮದಿಂದ 2023-24 ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಜಿಲ್ಲಾವಾರು ಒಟ್ಟು 825 ಗುರಿ ನಿಗದಿಪಡಿಸಲಾಗಿದ್ದು, ಇದರಲ್ಲಿ ಶಾಸಕರ ಆಯ್ಕೆ ಸಮಿತಿಯಿಂದ 696 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ನಿಗದಿ ಪಡಿಸಿದ ಗುರಿಯಂತೆ ಉಳಿದ 129 ಆಯ್ಕೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ.
21. ನರೇಗಾ ಯೋಜನೆ ಕಾಯಕ ಮಿತ್ರ ಅನುಮೋದನೆಗೆ ಬಾಕಿ
ಶಾಸಕರ ಪ್ರಶ್ನೆ : ಉಡುಪಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ10 ಸಾವಿರಕ್ಕಿಂತ ಮೇಲ್ಪಟ್ಟು ಮಾನವ ದಿನ ಸೃಜನೆ ಮಾಡಿದ ಗ್ರಾಮ ಪಂಚಾಯತ್ಗಳಲ್ಲಿ ಗ್ರಾಮ ಕಾಯಕ ಮಿತ್ರರ ನೇಮಕಾತಿ ಆಗದೇ ಮಹಾತ್ಮಾ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮ ಕಾರಿಯಾಗಿ ಅನುಷ್ಠಾನಕ್ಕೆ ತರಲು ತೊಡಕಾಗುತ್ತಿರುವುದರಿಂದ ಉಡುಪಿ ಜಿಲ್ಲೆಯಲ್ಲಿ ಗ್ರಾಮ ಕಾಯಕ ಮಿತ್ರರ ನೇಮಕಾತಿ ಪ್ರಸ್ತಾವನೆಗೆ ಅನುಮೋದನೆ ನೀಡುವ ಬಗ್ಗೆ
ಸರ್ಕಾರದ ಉತ್ತರ : ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ 2020-21 ನೇ ಸಾಲಿನಲ್ಲಿ ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ 20,000 (ಕೊಡಗು, ಉಡುಪಿ, ಉತ್ತರ ಕನ್ನಡ, ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 10,000) ಕ್ಕಿಂತ ಮೇಲ್ಪಟ್ಟು ಮಾನವ ದಿನಗಳ ಸೃಜನೆ ಮಾಡಿದ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಕಾಯಕ ಮಿತ್ರ ಹುದ್ದೆಯನ್ನು ಗೌರವ ಧನದ ಆಧಾರದ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಿದೆ. ಅದರಂತೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಿಲ್ಲಾಡಿ, ಬೈಂದೂರು ತಾಲೂಕಿನ ಹೇರೂರು ಮತ್ತು ನಾಡ, ಕುಂದಾಪುರ ತಾಲೂಕಿನ ಕಂದಾವರ ಮತ್ತು ಗುಲ್ವಾಡಿ ಹೀಗೆ 05 ಗ್ರಾಮ ಪಂಚಾಯತಿಗಳಲ್ಲಿ ಈಗಾಗಲೇ ಗ್ರಾಮ ಕಾಯಕ ಮಿತ್ರ ನೇಮಕಾತಿ ಮಾಡಿಕೊಳ್ಳಲಾಗಿದೆ.
ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 11 ಗ್ರಾಮ ಪಂಚಾಯತ್ಗಳು ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ 10,000 ಕ್ಕಿಂತ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಿದ 18 ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಕಾಯಕ ಮಿತ್ರರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಮಂಜೂರಾತಿ ನೀಡುವಂತೆ ಹಾಗೂ ಶೇಕಡ 6ರ ಆಡಳಿತ ವೆಚ್ಚದ ಮಿತಿಯಲ್ಲಿ ರಿಯಾಯಿತಿ ನೀಡುವಂತೆ ಕೋರಲಾಗಿತ್ತು. ಆದರೆ 18 ಹೆಚ್ಚುವರಿಯಾಗಿ ಗ್ರಾಮ ಕಾಯಕ ಮಿತ್ರ ನೇಮಕಾತಿ ಮಾಡಿಕೊಂಡರೆ ಆಡಳಿತಾತ್ಮಕ ವೆಚ್ಚ ಶೇಕಡ 6 ಮೀರುವುದಾಗಿ ಸ್ವತಃ ಉಡುಪಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅಭಿಪ್ರಾಯಿಸಿರುವುದರಿಂದ ಹೆಚ್ಚುವರಿ ಆಗಿ 18 ಗ್ರಾಮ ಕಾಯಕರ ನೇಮಕಾತಿಗೆ ಅನುಮೋದನೆ ನೀಡಲು ಸಾಧ್ಯವಿಲ್ಲ. ಹೊಸದಾಗಿ ಜಿಲ್ಲೆಗಳಲ್ಲಿ ಗ್ರಾಮ ಕಾಯಕ ಮಿತ್ರ ನೇಮಕಾತಿ ಕೈಗೊಳ್ಳುವ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಲ್ಲಿ ನೇಮಿಸುವ ಕುರಿತು ಮುಂದಿನ ದಿನಗಳಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.
22. ಬೈಂದೂರು ತಾಲೂಕಿನ ಗ್ರಾಮಗಳಲ್ಲಿ ವಾರಾಹಿ ಯೋಜನೆ ಅನುಷ್ಠಾನ
ಶಾಸಕರ ಪ್ರಶ್ನೆ : ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರಾಹಿ ಯೋಜನೆ ವಂಚಿತ ಗ್ರಾಮಗಳಲ್ಲಿ ಯೋಜನೆಯಲ್ಲಿ ನೀರಾವರಿ ಸೌಲಭ್ಯ ಒದಗಿಸಲು ಹಾಗೂ ನದಿ ಬಲದಂಡೆ ಯಲ್ಲಿರುವ ಬೈಂದೂರು ತಾಲೂಕಿನ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಬಗ್ಗೆ
ಸರ್ಕಾರದ ಉತ್ತರ : ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಲ್ವಾಡಿ,ಕರ್ಕಂಜೆ, ಕೆಂಚನೂರು ದೇವಲ್ಕುಂದ, ಕನ್ಯಾನ ಹಟ್ಟಿಯಂಗಡಿ ಹಾಗೂ ತಲ್ಲೂರು, ಇತರೆ ಸುಮಾರು 1350 ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸೌಕೂರು ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕುಂದಾಪುರ ತಾಲೂಕಿನ ಆಲೂರು, ಹಕ್ಲಾಡಿ, ನಾಡ, ವಂಡ್ಸೆ ಹಾಗೂ ಹೊಸಾಡು ಗ್ರಾಮಗಳ ಸುಮಾರು 1730 ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಸೌಪರ್ಣಿಕ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕುಂದಾಪುರ ತಾಲೂಕಿನ ಆಜ್ರಿ, ಕೊಡ್ಲಾಡಿ, ಅಂಪಾರು, ಕರ್ಕಂಜೆ,ಸಿದ್ದಾಪುರ ಹಾಗೂ ಇತರೆ ಗ್ರಾಮಗಳ ಸುಮಾರು 1200 ಹೆಕ್ಟರ್ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಿದ್ದಾಪುರ ಏತ ನೀರಾವರಿ ಯೋಜನೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಹಾಗೂ ವಾರಾಹಿ ಬಲದಂಡೆ ನಾಲೆಯು ಬೈಂದೂರು ವಿಧಾನಸಭಾ ಕ್ಷೇತ್ರದ ಕುಳ್ಳಂಜೆ, ಶಂಕರನಾರಾಯಣ, ಅಂಪಾರು, ಕಾವ್ರಡಿ ಹಾಗೂ ಹಳ್ನಾಡು ಗ್ರಾಮಗಳಲ್ಲಿ ಹಾದು ಹೋಗುತ್ತಿದ್ದು ಸದರಿ ನಾಲೆಯ ಪರಿಷ್ಕೃತ ನಾಲಾ ಪಥದೊಂದಿಗೆ ಅಂದಾಜು ಪ್ರಕ್ರಿಯೆಯು ಕರ್ನಾಟಕ ನೀರಾವರಿ ನಿಗಮದಲ್ಲಿ ಪರಿಶೀಲನೆಯಲ್ಲಿದೆ.
23. ಏತ ನೀರಾವರಿ ಕಾಮಗಾರಿ
ಶಾಸಕರ ಪ್ರಶ್ನೆ : ವಾರಾಹಿ ನೀರಾವರಿ ನಿಗಮದಡಿ ಸೌಕೂರು ಏತ ನೀರಾವರಿ ಯೋಜನೆಯ ಕಾಮಗಾರಿ ಬಗ್ಗೆ ಕುಂದಾಪುರ ತಾಲೂಕಿನ ಗುಲ್ವಾಡಿಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಯದ್ವಾತದ್ವ ಕಾಮಗಾರಿ ನಡೆಯುತ್ತಿರುವುದರಿಂದ ಇದರಿಂದ ಕೃಷಿಕರಿಗೆ ತೊಂದರೆ ಆಗುತ್ತಿರುವುದನ್ನು ತಡೆಯುವ ಬಗ್ಗೆ
ಸರ್ಕಾರದ ಉತ್ತರ : ಸೌಕೂರು ಏತ ನೀರಾವರಿ ಯೋಜನೆಯ ಅನುಮೋದಿತ ಮೂಲ ಮೂಲ ಅಂದಾಜು ಪಟ್ಟಿಯಲ್ಲಿ ಅಳವಡಿಸಲು ಯೋಜಿಸಿದ ಪೈಪ್ ಲೈನ್ ಹಾಗೂ ಕಾಮಗಾರಿಯನ್ನು ಕಾರ್ಯಗತಗೊಳಿಸುತ್ತಿರುವ ಸಮಯದಲ್ಲಿ ಸ್ಥಳ ಪರಿಸ್ಥಿತಿಗಳಿಗನುಗುಣವಾಗಿ ಪೈಪ್ ಲೈನ್ ಅಳವಡಿಸಲಾಗುತ್ತಿದೆ. 1350 ಹೆಕ್ಟರ್ ಅಚ್ಚು ಕಟ್ಟು ಪ್ರದೇಶಕ್ಕೆ ನೀರಾವರಿ ಸೃಜಿಸಲು ಯೋಜಿಸಲಾಗಿದ್ದು ಅದರನ್ವಯ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ.
24. ಸೀ ಫುಡ್ ಪಾರ್ಕ್ ಯೋಜನೆ ವಿಳಂಬ
ಶಾಸಕರ ಪ್ರಶ್ನೆ : ಕಂಬದಕೋಣೆ ಗ್ರಾಮದ ನೆಡು ತೋಪು ಕಟಾವಣೆ ವಿಳಂಬದ ಬಗ್ಗೆ
ಸರ್ಕಾರದ ಉತ್ತರ : ಬೈಂದೂರು ಕಂಬದ ಕೋಣೆ ಗ್ರಾಮದ ಸ.ನಂ. 166/ಪಿ 1 ರಲ್ಲಿ 53 ಎಕ್ರೆ ಜಮೀನಿನಲ್ಲಿ ಸಾಮಾಜಿಕ ಅರಣ್ಯ ವತಿಯಿಂದ ಬೆಳೆಸಲಾದ 20 ಹೆಕ್ಟರ್ ಅಕೇಶಿಯ ಮತ್ತು ಇತರೆ ಮಿಶ್ರ ಜಾತಿಯ ಮರಗಳ ಕಟಾವಣೆ ಬಗ್ಗೆ ಸೂಕ್ತ ದಾಖಲೆಗಳನ್ನು ಮೀನುಗಾರಿಕೆ ಇಲಾಖೆಯಿಂದ ಕೋರಿದ್ದು ಅವುಗಳನ್ನು ಒದಗಿಸಿದ ನಂತರ ನೆಡು ತೋಪು ಕಟಾವಣೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು
25. ಪಿ.ಎಂ ವಿಶ್ವಕರ್ಮ ಯೋಜನೆ ಅನುಷ್ಠಾನ
ಶಾಸಕರ ಪ್ರಶ್ನೆ : ಉಡುಪಿ ಜಿಲ್ಲೆಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಯ ಪ್ರಗತಿ ಬಗ್ಗೆ
ಸರ್ಕಾರದ ಉತ್ತರ : ಉಡುಪಿ ಜಿಲ್ಲೆಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ 3606 ಅರ್ಜಿಗಳು ಸಲ್ಲಿಕೆಯಾಗಿದ್ದು ಅದರಲ್ಲಿ 3346 ಅರ್ಜಿದಾರರಿಗೆ ಮೀನುಗಾರಿಕೆ ನೆಟ್ ಮೇಕರ್, ಟೈಲರ್, ಬ್ರಿಕ್ ಮೆಸನ್, ಬಡಗಿ, ಗೋಲ್ಡ್ ಸ್ಮಿತ್ ಹಾಗೂ ಸಂಪ್ರದಾಯಿಕ ಮಾಲಾಕಾರ್ ಮುಂತಾದ ವೃತ್ತಿದಾರರಿಗೆ ಈಗಾಗಲೇ ತರಬೇತಿ ನೀಡಲಾಗಿದೆ.
ಪಿಎಂ ಯೋಜನೆಯಲ್ಲಿ ಉಡುಪಿ ಜಿಲ್ಲೆಯ 10 ತರಬೇತಿ ಕೇಂದ್ರ ಗಳಲ್ಲಿ ಹಾಗೂ ಉಡುಪಿ ಜಿಲ್ಲೆಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿ ವಿವಿಧ ವೃತ್ತಿಪರ ತರಬೇತಿ ಪಡೆದ 159 ಫಲಾನುಭವಿಗಳಿಗೆ ರೂ. 12.66 ಕೋಟಿ ಸಾಲ ಮಂಜೂರಾತಿ ನೀಡಲಾಗಿದೆ.
26. ಅಡಿಕೆ ಎಲೆ ಚುಕ್ಕೆ ರೋಗ
ಶಾಸಕರ ಪ್ರಶ್ನೆ : ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ ಬಾಧೆಯಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗುತ್ತಿರುವ ಬಗ್ಗೆ
ಸರ್ಕಾರದ ಉತ್ತರ : ರಾಜ್ಯದಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಸನ, ಕೊಡಗು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅಡಿಕೆಗೆ ರೋಗ ಕಾಣಿಸಿಕೊಂಡಿದೆ. ಈ ರೋಗ 53,977 ಹೇಕ್ಟೆರು ಪ್ರದೇಶದಲ್ಲಿ ವ್ಯಾಪಿಸಿರುತ್ತದೆ. ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಉಡುಪಿ, ಕುಂದಾಪುರ,ಕಾರ್ಕಳ ತಾಲೂಕುಗಳಲ್ಲಿ ಸುಮಾರು 123 ಹೇಕ್ಟೆರ್ ಪ್ರದೇಶದಲ್ಲಿ ಈ ರೋಗ ಕಾಣಿಸಿಕೊಂಡಿದೆ. ಅಲ್ಲದೆ ಈ ಬಗ್ಗೆ ಸಂರಕ್ಷಣಾ ಔಷಧಿಗಳನ್ನು ಸಹಾಯಧನದಲ್ಲಿ ಒದಗಿಸಲಾಗುತ್ತಿದೆ, ರೈತರಿಗೆ ತರಬೇತಿಗಳನ್ನು ನೀಡಲಾಗುತ್ತಿದೆ. ಅಡಿಕೆ ಎಲೆ ಚುಕ್ಕೆ ರೋಗ ಹಾಗೂ ಹಳದಿ ಎಲೆ ರೋಗಗಳ ನಿಯಂತ್ರಣಕ್ಕಾಗಿ ವರದಿ ನೀಡಲು ತಜ್ಞರ ಸಮಿತಿಯನ್ನು ನೇಮಿಸಲಾಗಿದೆ ಆದರೆ ಸರ್ಕಾರದಿಂದಲೇ ಔಷಧಿ ಸಿಂಪಡಣೆ ಮಾಡುವುದಿಲ್ಲ ಎಂದು ಸರ್ಕಾರ ಉತ್ತರಿಸಿದೆ
27. ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ
ಶಾಸಕರ ಪ್ರಶ್ನೆ : ರಾಜ್ಯದಲ್ಲಿ ಹಲವು ವರ್ಷ ಗಳಿಂದ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಖಾಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವ ಬಗ್ಗೆ
ಸರ್ಕಾರದ ಉತ್ತರ : ರಾಜ್ಯದಲ್ಲಿ ಹಲವು ವರ್ಷಗಳಿಂದ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಖಾಲಿ ಇರುವ ವಿಚಾರ ಸರಕಾರದ ಗಮನದಲ್ಲಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಒಟ್ಟು 6722 ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್ -2 ಹುದ್ದೆಗಳು ಮಂಜೂರಾಗಿರುತ್ತದೆ. ಅವುಗಳಲ್ಲಿ 3666 ಕಾರ್ಯನಿರತ ಹುದ್ದೆಗಳಾಗಿದ್ದು 3106 ಹುದ್ದೆಗಳು ಖಾಲಿ ಇರುತ್ತವೆ. ಜಿಲ್ಲೆಯಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಒಟ್ಟು 134 ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್ 2 ಹುದ್ದೆಗಳು ಮಂಜೂರು ಆಗಿರುತ್ತದೆ. ಅವುಗಳಲ್ಲಿ 120 ಕಾರ್ಯನಿರತ ಹುದ್ದೆಗಳಾಗಿದ್ದು 14 ಹುದ್ದೆಗಳು ಖಾಲಿ ಇರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.