ಬೆಳ್ತಂಗಡಿ : ತುಳುನಾಡಿಗೆ ವಿವಿಧ ವಿಚಾರಗಳಲ್ಲಿ ನಿರಂತರ ಅನ್ಯಾಯವಾಗುತ್ತದ್ದು ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಹಂಚಿ ಹೋಗಿರುವ ತುಳುನಾಡನ್ನು ಒಂದುಗೂಡಿಸಿ ಪ್ರತ್ಯೇಕ ತುಳು ರಾಜ್ಯವನ್ನು ರಚಿಸಬೇಕು ಎಂಬ ಒತ್ತಾಯದೊಂದಿಗೆ ತುಳುನಾಡು ಒಕ್ಕೂಟದ ವತಿಯಿಂದ ನವೆಂಬರ್ 1 ರಂದು ಬೆಳ್ತಂಗಡಿಯಲ್ಲಿ ತುಳುನಾಡು ರಾಜ್ಯದ ಧ್ವಜಾರೋಹಣ ನಡೆಯಲಿದೆ ಎಂದು ತುಳುನಾಡು ಒಕ್ಕೂಟದ ಕೇಂದ್ರ ಸಮಿತಿಯ ಅಧ್ಯಕ್ಷ ಶೈಲೇಶ್ ಆರ್.ಜೆ ತಿಳಿಸಿದ್ದಾರೆ.
ಬೆಳ್ತಂಗಡಿ ಪ್ರೆಸ್ಕ್ಲಬ್ನಲ್ಲ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು. ತುಳು ಭಾಷೆ ಇನ್ನೂ ಸಂವಿಧಾನದ 8 ನೇ ಪರಿಶ್ಚೇದಕ್ಕೆ ಸೇರ್ಪಡೆಯಾಗಿಲ್ಲ. ಇದು ತುಳುನಾಡಿನ ಜನತೆಗೆ ಮಾಡಿರುವ ಅನ್ಯಾಯವಾಗಿದೆ. ಇದೀಗ ತುಳುನಾಡಿನ ಜೀವನದಿ ನೇತ್ರಾವತಿಯನ್ನು ಬಯಲು ಸೀಮೆಗೆ ಹರಿಸುವ ಪ್ರಯತ್ನಗಳು ನಡೆಯುತ್ತಿದೆ. ಇಲ್ಲಿ ಸ್ಥಾಪನೆಯಾಗುವ ಕೈಗಾರಿಕೆಗಳ, ಯೋಜನೆಗಳ ಲಾಭ ತುಳುನಾಡಿನ ಜನತೆಗೆ ಸಿಗುತ್ತಿಲ್ಲ. ಅದು ಯಾರದೋ ಪಾಲಾಗುತ್ತಿದೆ. ತುಳು ನಾಡಿನ ಜನತೆ ಕಳೆದ ಹಲವು ವರ್ಷಗಳಿಂದ ನ್ಯಾಯವನ್ನು ಕೇಳುತ್ತಿದೆ ಆದರೆ ಅದು ಸಿಗುತ್ತಿಲ್ಲ ಆದ್ದರಿಂದ ತುಳು ನಾಡು, ಸಂಸ್ಕೃತಿ, ನಮ್ಮ ನೆಲ, ಜಲ ಉಳಿಸಲು ಇದೀಗ ಪ್ರತ್ಯೇಕ ತುಳು ರಾಜ್ಯವನ್ನು ಕೇಳುವ ಅನಿವಾರ್ಯತೆ ಎದುರಾಗಿದೆ.ಭಾಷಾವಾರು ಪ್ರಾಂತ್ಯಗಳ ರಚನೆಯ ಸಂದರ್ಭದಲ್ಲಿಯೇ ಪ್ರತ್ಯೇಕ ತುಳುನಾಡು ರಾಜ್ಯ ರಚನೆಯಾಗುವ ಅಗತ್ಯವಿತ್ತು. ಆದರೆ ಕಾರಣಾಂತರಗಳಿಂದ ಆಗ ಅದು ಸಾಧ್ಯವಾಗಿಲ್ಲ. ಇದೀಗ ಆ ಬೇಡಿಕೆಯನ್ನು ಮುಂದಿಡಲು ಸಕಾಲವಾಗಿದೆ ಎಂದರು.
ತುಳು ರಾಜ್ಯ ನಿರ್ಮಾಣವಾದರೆ ತುಳು ಭಾಷೆಗೂ ಮಾನ್ಯತೆ ಸಿಗಲಿದೆ ಅದೇ ರೀತಿ ನಮ್ಮ ಸಮಸ್ಯೆಗಳಿಗೂ ಪರಿಹಾರ ಕಾಣಬಹುದಾಗಿದೆ ಈ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ. ತುಳು ನಾಡು ರಾಜ್ಯದ ಧ್ವಜಾರೋಹಣವನ್ನು ತುಳುನಾಡು ವಿಭಜನೆಯಾದ ದಿನವಾದ ನವೆಂಬರ್ 1ರಂದು ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ನಡೆಸಲಾಗುವುದು ಎಂದು ಅವರು ತಿಳಿಸಿದರು. ಈಗಾಗಲೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ತುಳು ಭಾಷೆಗೆ ಸೂಕ್ತ ಸ್ಥಾನಮಾನ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಆದರೆ ಅದಕ್ಕೆ ಯಾವುದೇ ಸ್ಪಂದನೆ ದೊರೆತಿಲ್ಲ ಅಧಿಕೃತವಾಗಿ ತುಳು ರಾಜ್ಯದ ಬೇಡಿಕೆಯನ್ನು ಸರಕಾರಗಳ ಮುಂದಿಡಲಾಗುವುದು. ರಾಜ್ಯ ರಚನೆಯ ಬಗ್ಗೆ ಪರಿಶೀಲಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸರಕಾರಗಳನ್ನು ಒತ್ತಾಯಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಕೇಂದ್ರ ಸಮಿತಿಯ ಕಾರ್ಯದರ್ಶಿ ಪ್ರಸಾದ್ ಕುಮಾರ್ ಶೆಟ್ಟಿ, ಕಾನೂನು ಸಲಹೆಗಾರ ಪ್ರಶಾಂತ್, ನಗರ ಸಮಿತಿಯ ಕಾರ್ಯದರ್ಶಿ ಗೋಪಾಲ್ ಬೆಳ್ತಂಗಡಿ, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.