ಬೆಂಗಳೂರು: ಕರ್ನಾಟಕ ಬಿಜೆಪಿಯು ಸದಸ್ಯತ್ವ ಅಭಿಯಾನದಡಿ 50 ಲಕ್ಷ ಸದಸ್ಯತ್ವ ನೋಂದಣಿಯನ್ನು ಪೂರ್ಣಗೊಳಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಅವರು ಸಂತಸ ವ್ಯಕ್ತಪಡಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ, ರಾಜ್ಯ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ, ಎಲ್ಲ ಪದಾಧಿಕಾರಿಗಳ ಸಹಕಾರ ಹಾಗೂ ಶ್ರಮದಿಂದ, ಜಿಲ್ಲೆಗಳ ಸಹಕಾರದಲ್ಲಿ ಇದು ಸಾಧ್ಯವಾಗಿದೆ. ಕರ್ನಾಟಕದ ಸದಸ್ಯತ್ವ ಅಭಿಯಾನದ ಕುರಿತು ಕೇಂದ್ರದ ಪಕ್ಷದ ನಾಯಕತ್ವವು ವಿಶೇಷ ಪ್ರಶಂಸೆಯನ್ನು ತಿಳಿಸಿದೆ ಎಂದು ವಿವರಿಸಿದರು.
2014ರಲ್ಲಿ ಆನ್ಲೈನ್ ಮೂಲಕ ಸದಸ್ಯತ್ವ ಅಭಿಯಾನ ಆರಂಭವಾಗಿತ್ತು. 2019ರಲ್ಲಿ ಮಿಸ್ಡ್ ಕಾಲ್ ಮೂಲಕ ಸದಸ್ಯತ್ವ ಮಾಡುತ್ತಿದ್ದು, ಈ ಬಾರಿ ಸದಸ್ಯತ್ವ ಅಭಿಯಾನಕ್ಕೆ ಸಮಿತಿಯನ್ನೂ ರಚಿಸಲಾಗಿದೆ. ಸಂಸದ ಪಿ.ಸಿ.ಮೋಹನ್, ಶಾಸಕರಾದ ಮಹೇಶ್ ಟೆಂಗಿನಕಾಯಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಪ್ರತಾಪಸಿಂಹ ನಾಯಕ್ ಮತ್ತು ನಾನು ತಂಡವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಪ್ರತಿ ಜಿಲ್ಲೆಗೆ ಹಿರಿಯ ನಾಯಕರನ್ನು ಇನ್ ಚಾರ್ಜ್ ಆಗಿ ನೇಮಿಸಲಾಗಿದೆ ಎಂದರು.
ಹಿಂದೆ ಸದಸ್ಯತ್ವ ಮಾಡಿದಾಗ ಕೇವಲ ಮಿಸ್ಡ್ ಕಾಲ್ ಕೊಡುವ ಪದ್ಧತಿ ಇತ್ತು. ಈ ಬಾರಿ ಮಿಸ್ಡ್ ಕಾಲ್ ಬಳಿಕ ಲಭಿಸುವ ಲಿಂಕ್ ಮೂಲಕ ಪೂರ್ಣ ಮಾಹಿತಿ ಪಡೆಯಲಾಗುತ್ತಿದೆ. ವಿಳಾಸ, ಕುಟುಂಬದ ಮಾಹಿತಿ, ವಿಧಾನಸಭಾ ಕ್ಷೇತ್ರ, ಬೂತ್ ವಿವರ, ಇಮೇಲ್ ಐಡಿಯನ್ನೂ ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ಪ್ರಧಾನಿಯವರ ವಿಕಸಿತ ಭಾರತದ ಕಲ್ಪನೆಯಂತೆ ಆ ಗುರಿಯತ್ತ ಹೆಜ್ಜೆ ಇಡಲು ಈ ಅಭಿಯಾನ ನಡೆದಿದೆ. ರಾಷ್ಟ್ರ ಮಟ್ಟದಲ್ಲಿ ಇವತ್ತಿಗೆ 9 ಕೋಟಿ 22 ಲಕ್ಷ 11 ಸಾವಿರ ಸದಸ್ಯತ್ವ ಪೂರ್ಣಗೊಂಡಿದೆ. ನಮ್ಮ ಗುರಿ 11 ಕೋಟಿ ಇದ್ದು, ಅದಕ್ಕೂ ಮೀರಿ ಸದಸ್ಯತ್ವ ಪಡೆಯಲು ಜನರು ಉತ್ಸುಕರಾಗಿದ್ದಾರೆ. ಸದಸ್ಯತ್ವ ಅಭಿಯಾನವನ್ನು ಅ. 15ರ ಬದಲಾಗಿ ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ. ಈ ಸಂಬಂಧ ರಾಜ್ಯಾಧ್ಯಕ್ಷರು, ಜಿಲ್ಲಾ ಪ್ರವಾಸ ಮಾಡಲಿದ್ದಾರೆ ಎಂದು ತಿಳಿಸಿದರು. ನಾವು, ಎಲ್ಲ ನಾಯಕರು ಕೂಡ ಪ್ರವಾಸ ಮಾಡುತ್ತೇವೆ ಎಂದರು.
2014ರಲ್ಲಿ ರಾಜ್ಯದಲ್ಲಿ 74 ಲಕ್ಷ 88 ಸಾವಿರ ಇತ್ತು. 2019ರಲ್ಲಿ ಇನ್ನೂ 26 ಲಕ್ಷ ಸೇರಿತ್ತು. ಒಟ್ಟು 1 ಕೋಟಿ 1 ಲಕ್ಷ 75 ಸಾವಿರ ಸದಸ್ಯತ್ವವನ್ನು 2019ರಲ್ಲಿ ಮಾಡಿದ್ದೇವೆ. ಈ ಸಾರಿ ನಮಗೆ 1.25 ಕೋಟಿ ಗುರಿ ಕೊಟ್ಟಿದ್ದು, ಅದಕ್ಕೂ ಮೀರಿ ಇನ್ನೂ 50 ಲಕ್ಷ ಹೆಚ್ಚು ಮಾಡಲು ಅಮಿತ್ ಶಾ ಅವರು ಗುರಿ ನೀಡಿದ್ದಾರೆ. ನಾವು ಆ ಗುರಿ ಯಶಸ್ವಿಯಾಗಿ ತಲುಪಲು ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.
ವಿಜಯೇಂದ್ರ, ಹಿರಿಯರಾದ ಬಿ.ಎಲ್.ಸಂತೋಷ್, ವಿನೋದ್ ತಾವ್ಡೆ, ಸದಸ್ಯತ್ವ ಪ್ರಭಾರಿ ವಿಜಯ ರಾಹಟ್ಕರ್, ರಾಜ್ಯ ಪ್ರಭಾರಿ ರಾಧಾಮೋಹನ್ದಾಸ್ ಅಗರವಾಲ್, ಸಹ ಪ್ರಭಾರಿ ಸುಧಾಕರ ರೆಡ್ಡಿ ಅವರು ಅಭಿಯಾನದ ಕುರಿತು ಗಮನಿಸುತ್ತಿದ್ದಾರೆ ಎಂದು ವಿವರ ನೀಡಿದರು.
ಮೈಸೂರು ಚಲೋ ಪಾದಯಾತ್ರೆ ಜಿಲ್ಲೆಗಳಲ್ಲಿ ಮನೆಮಾತಾಗಿದೆ. ಅದು ಅತ್ಯಂತ ಯಶಸ್ವಿಯಾಗಿದೆ. ಮಾನ್ಯ ಮುಖ್ಯಮಂತ್ರಿಯವರ ಕುಟುಂಬದ ಮೇಲಿನ ಆರೋಪವನ್ನು ಸುಳ್ಳು ಎಂದಿದ್ದರು. ಬಳಿಕ ನಿವೇಶನಗಳನ್ನು ವಾಪಸ್ ಕೊಡುವುದಾಗಿ ತಿಳಿಸಿದರು. ಈಗ ಮುಡಾ ಅಧ್ಯಕ್ಷರು ರಾಜೀನಾಮೆ ಕೊಡುತ್ತಿರುವುದು- ಒಂದಾದ ಮೇಲೆ ಒಂದರಂತೆ ನಡೆದಿದೆ. ಮುಖ್ಯಮಂತ್ರಿಯವರ ಫೈನಲ್ ವಿಕೆಟ್ ಪತನದ (ರಾಜೀನಾಮೆಯ) ವಿಶ್ವಾಸ ಇದೆ ಎಂದು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು. ಅವರು ಅನಿವಾರ್ಯವಾಗಿ ರಾಜೀನಾಮೆ ಕೊಡುತ್ತಾರೆ ಎಂದರು.
ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಇನ್ನೊಂದೆಡೆ ಅಭಿವೃದ್ಧಿ ಯೋಜನೆಗಳ ಆಮಿಷವೊಡ್ಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಆದರೆ, ವಾಸ್ತವವಾಗಿ ಇವರು ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಅಭಿವೃದ್ಧಿ ಯೋಜನೆಗಳು ಆಗುತ್ತಿಲ್ಲ. ಐಟಿ ಬಿಟಿ ಉದ್ಯಮಗಳಿರುವ ಇರುವ ಬೆಂಗಳೂರಿನಲ್ಲಿ ಇವತ್ತು ವಾಹನವು ಸರಾಸರಿ ಒಂದು ಕಿಮೀ ಕ್ರಮಿಸಲು 20ರಿಂದ 25 ನಿಮಿಷ ಬೇಕಾಗುತ್ತಿದೆ. ಬೆಂಗಳೂರಿನ ನಾಗರಿಕರು ಈ ಸರಕಾರದ ಬಗ್ಗೆ ಹತಾಶರಾಗಿದ್ದಾರೆ. ಕೋಪ, ಆತಂಕದಿಂದ ಜನರು ಶಾಪ ಹಾಕುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಒಂದೆಡೆ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಅಭಿವೃದ್ಧಿ ಕಾರ್ಯಗಳಿಲ್ಲದೆ ಸಮಸ್ಯೆಯಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಕೊಡಲಾಗಿದೆ. ಟೆಕ್ ಕಂಪೆನಿಗಳು ವರ್ಕ್ ಫ್ರಂ ಹೋಮ್ ಘೋಷಿಸಿವೆ. ಇದಕ್ಕೆ ಮೂಲ ಕಾರಣ ಮುಖ್ಯಮಂತ್ರಿ ಮತ್ತು ತಂಡದವರು. ಅವರು ಈಗಲಾದರೂ ಎಚ್ಚತ್ತುಕೊಳ್ಳಲಿ ಎಂದು ಆಗ್ರಹಿಸಿದರು.
ಸರಕಾರದವರು ಕುರ್ಚಿಯ ದಾಹದಲ್ಲಿ ರಾಜ್ಯದ ಜನರ ಸಮಸ್ಯೆಯನ್ನು ಸಂಪೂರ್ಣವಾಗಿ ಮರೆತಿದ್ದಾರೆ ಎಂದು ದೂರಿದರು. ಸಂಗೀತ ಕುರ್ಚಿಯನ್ನು ತಲೆಗೆ ಹಚ್ಚಿಕೊಳ್ಳಬೇಡಿ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಒತ್ತಾಯಿಸಿದರು. ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳದೆ ಇದ್ದಲ್ಲಿ ಇನ್ನಷ್ಟು ತೀವ್ರತರದ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ರಾಜ್ಯದ ಹಣಕಾಸಿನ ಕಸ್ಟೋಡಿಯನ್ ಯಾರೆಂದು ಮಾಜಿ ಸಚಿವ ನಾಗೇಂದ್ರ ಅವರು ಮೊದಲು ಯೋಚಿಸಬೇಕು. ಸಾಧಾರಣವಾಗಿ ರಸ್ತೆಯ ಬದಿಯಲ್ಲಿ ತರಕಾರಿ ಮಾರಾಟ ಮಾಡುವವರು, ಹೂ ಮಾರಾಟ ಮಾಡುವವರಿಗೆ, ಎಳನೀರು ಮಾರುವವರಿಗೆ, ಟೀ ಮಾರಾಟ ಮಾಡುವವರಿಗೆ ಅವರ ಖಾತೆಯಿಂದ ಎಳನೀರು ಮಾರಾಟದ ವೇಳೆ 30 ರೂ. ಅಥವಾ 40 ರೂ. ಜಮೆ ಆದ ಸಂದೇಶ ಬರುತ್ತದೆ. ಚೆಕ್ ನೀಡಿದಾಗಲೂ ಮೆಸೇಜ್ ಬರುತ್ತದೆ. ಆದರೆ, ಇವರ್ಯಾರೂ ಭಾಗಿಗಳಲ್ಲ ಎಂದು ಹೇಳುತ್ತಿದ್ದಾರೆ. ಯಾರು ಕಸ್ಟೋಡಿಯನ್ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲಿ. ನ್ಯಾಯಾಲಯದ ಆದೇಶವನ್ನು ನಾವೆಲ್ಲ ಗೌರವಿಸುತ್ತೇವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ವಾಲ್ಮೀಕಿ ನಿಗಮದ್ದು ಸರಕಾರದ ಖಾತೆಯೇ, ಬ್ಯಾಂಕಿನವರದೇ ಎಂದು ಪ್ರಶ್ನಿಸಿದರು. ನಾಗೇಂದ್ರರು ಕಣ್ಮುಚ್ಚಿ ಮನಸ್ಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಲಿ. ಜನರ ದುಡ್ಡು ಲಪಟಾಯಿಸಿದ್ದಕ್ಕೆ ಅವರೇ ಉತ್ತರ ಕೊಡಬೇಕಿದೆ. ಜಾಮೀನು ಲಭಿಸಿದ ತಕ್ಷಣ ಇವರ ಪರ ಆದೇಶ ಆಗಿದೆ ಎಂದಲ್ಲ; ತನಿಖೆ ಆಗಲಿದ್ದು, ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದರು.
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.