ಬೆಂಗಳೂರು: ರಾಜ್ಯ ಸರಕಾರಕ್ಕೆ ತಾವು ನೇಮಿಸಿದ ಮುಖ್ಯ ಕಾರ್ಯದರ್ಶಿ (ಸಿಎಸ್) ಮೇಲೆ ಅನುಮಾನವಿದೆ; ಅವರನ್ನು ನಂಬುತ್ತಿಲ್ಲ. ನಿಮ್ಮ ಡಿಜಿಪಿ ಮೇಲೆಯೂ ನಿಮಗೆ ನಂಬಿಕೆ ಇಲ್ಲ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥನಾರಾಯಣ್ ಅವರು ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನ್ಯ ರಾಜ್ಯಪಾಲರಿಗೆ ಚೀಫ್ ಸೆಕ್ರೆಟರಿಯೂ ಉತ್ತರ ಕೊಡುವಂತಿಲ್ಲ; ಕ್ಯಾಬಿನೆಟ್ ಮೂಲಕ ಹೋಗಬೇಕು ಎಂದು ನಿರ್ಧರಿಸಿದ್ದಾರೆ. ರಾಜ್ಯಪಾಲರಿಗೇ ಮಾಹಿತಿ ಕೊಡುವುದಿಲ್ಲ ಎಂದರೆ, ಕಾಂಗ್ರೆಸ್ ಪ್ರಜಾಪ್ರಭುತ್ವ ಇದೇನಾ? ಎಂದು ಕೇಳಿದರು. ಯಾಕೆ ಈ ಭಯ, ಆತಂಕ? ಯಾಕೆ ಈ ತಡೆಗೋಡೆ ಮಾಡುತ್ತಿದ್ದೀರಿ? ಎಂದು ಪ್ರಶ್ನೆಯನ್ನು ಮುಂದಿಟ್ಟರು. ಸಿದ್ದರಾಮಯ್ಯನವರು ತಮ್ಮ ಹಿರಿತನ, ಅನುಭವಕ್ಕೆ ಅವರೇ ಮಸಿ ಬಳಿದುಕೊಂಡಿದ್ದಾರೆ. ಮಸಿ ಬಳಿದುಕೊಂಡು ಮಸಿ ಇಲ್ಲ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಸರಕಾರದ ಅಧಿಕಾರಿಗಳ, ನೌಕರರ ವಿರುದ್ಧ ತನಿಖೆ ಮಾಡಲು ಸಿಬಿಐಗೆ ಮುಕ್ತ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಈ ಸಂಬಂಧ ರಾಜ್ಯ ಸರಕಾರವೂ ಅನುಮತಿ ಕೊಟ್ಟಿದ್ದು, ಇದನ್ನೂ ಹಿಂಪಡೆಯುವುದಾಗಿ ಹೇಳಿದ್ದಾರೆ. ಏನೇನು ಗೋಲ್ಮಾಲ್ ಮಾಡಿದ್ದೀರಿ? ಇಷ್ಟು ಆತಂಕ, ಭಯವೇಕೆ ಎಂದು ಕೇಳಿದರು.
ಮಹರ್ಷಿ ವಾಲ್ಮೀಕಿ ನಿಗಮದ ಹಗರಣದಲ್ಲಿ ತಮ್ಮ ಕುತ್ತಿಗೆಗೆ ಬರುವ ಭಯದಲ್ಲಿ ಹೀಗೆ ಮಾಡುತ್ತಿದ್ದಾರೆ. ಮುಡಾದಲ್ಲಿ ಸಿಬಿಐ ತನಿಖೆ ಆದರೆ ತಮಗೆ ಕಷ್ಟವೆಂದು ಗಮನದಲ್ಲಿ ಇಟ್ಟುಕೊಂಡು ಇದನ್ನು ತಡೆಯಲು ಮುಂದಾದಂತಿದೆ ಎಂದು ಅವರು ಆರೋಪಿಸಿದರು.
ಅಂಥ ಅಧಿಕಾರವನ್ನು ಮಹರ್ಷಿ ವಾಲ್ಮೀಕಿ ನಿಗಮದ ಹಗರಣದಲ್ಲಿ ಶೇ 100ರಷ್ಟು ಭ್ರಷ್ಟಾಚಾರ ಆಗಿದೆ. ಇದನ್ನು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಮುಡಾ ವಿಚಾರದಲ್ಲಿ ತಾವು ಸತ್ಯ ಹರಿಶ್ಚಂದ್ರ ಎನ್ನುತ್ತ ಬಂದರು. ಭೂಮಿ ಕಬಳಿಕೆ, ದಲಿತರ ಜಮೀನಿನ ಅಕ್ರಮವಾಗಿ ಬಳಸಿಕೊಂಡದ್ದನ್ನು ಇಲ್ಲ ಎನ್ನುತ್ತಲೇ ಬಂದಿದ್ದಾರೆ. ಮುಡಾದಲ್ಲಿ ನಡೆದ ಅಕ್ರಮದಲ್ಲಿ ಸಿದ್ದರಾಮಯ್ಯನವರ ಕುಟುಂಬದ ಅವ್ಯವಹಾರದ ವಿಷಯ ಎಲ್ಲವೂ ಬಯಲಾಗಿದೆ ಎಂದು ವಿವರಿಸಿದರು.
ನ್ಯಾಯಾಲಯವೂ ತೀರ್ಪು ಕೊಟ್ಟಿದೆ. ಲೋಪದ ಬಗ್ಗೆ ಹೈಕೋರ್ಟ್ ತಿಳಿಸಿದೆ. ಸಿದ್ದರಾಮಯ್ಯನವರ ಪಾತ್ರವನ್ನು ಹೇಳಿಲ್ಲವೆಂದು ಅವರ ಕಾನೂನು ಸಲಹೆಗಾರರು ಹೇಳಿದ್ದಾರೆ. ಅವರದು ಯಾವುದಾದರೂ ಹೊಸ ಕಾನೂನು ಇರಬಹುದೇನೋ ಎಂದು ಪ್ರಶ್ನಿಸಿದರು. ಬೇಕಾದಂತೆ ಕಾನೂನು ತಿದ್ದಿ ಶೇ 50-50 ನಿವೇಶನ ಅನುಪಾತ ಮಾಡಿದ್ದಾರೆ ಎಂದು ಆಕ್ಷೇಪಿಸಿದರು. ಲೆಕ್ಕ ಕೇಳಿದರೆ ಲೆಕ್ಕ ಕೊಡುವುದಿಲ್ಲ. ಗೌರವಾನ್ವಿತ ಗವರ್ನರ್ ಅವರನ್ನು ದೂರುತ್ತಾರೆ; ಇಲ್ಲಸಲ್ಲದ ಆಪಾದನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಭ್ರಷ್ಟಾಚಾರದ ವಿರೋಧಿಗಳು, ಭ್ರಷ್ಟಾಚಾರವನ್ನು ಬಯಲಿಗೆ ಎಳೆಯುವವರೆಂದು ಕಪಟ ನಾಟಕ ಮಾಡುವ ಕಪಟಿಗಳಾದ ಕಾಂಗ್ರೆಸ್ಸಿಗರು, ಸಂವಿಧಾನದ ವಿರೋಧಿಗಳು ಎಂದು ದೂರಿದರು. ಸರಕಾರಿ ವ್ಯವಸ್ಥೆಯನ್ನು ಕಾಂಗ್ರೆಸ್ಮಯ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ನಿರಂತರವಾಗಿ ಅಧಿಕಾರ ದುರ್ಬಳಕೆ, ಭ್ರಷ್ಟಾಚಾರ ನಿರತವಾಗಿದೆ; ಅಭಿವೃದ್ಧಿ ಶೂನ್ಯವಾಗಿ ಕೆಲಸ ಮಾಡುತ್ತಿದೆ. ರಾಜ್ಯದ ಉದ್ದಗಲಕ್ಕೂ ನಾಗರಿಕರು, ರೈತರು ಮತ್ತು ಅಧಿಕಾರಿಗಳ ಆತ್ಮಹತ್ಯೆಗಳು ಹೆಚ್ಚಾಗಿವೆ ಎಂದು ಟೀಕಿಸಿದರು.
ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರು ಮಾತನಾಡಿ, ಸಿದ್ದರಾಮಯ್ಯನವರ ಈಗಿನ ನಡವಳಿಕೆಯು ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಚಾರ ಎಂದು ತಿಳಿಸಿದರು. 40 ವರ್ಷಗಳ ರಾಜಕೀಯ ಜೀವನದಲ್ಲಿ ಅವರು ದಾಖಲೆ ಸಮೇತ ಸಿಕ್ಕಿ ಬಿದ್ದಿರುವುದು ಇದು ಪ್ರಥಮ. ಹಿಂದಿನ ಅವಧಿಯಲ್ಲಿ ಅವರ ವಿರುದ್ಧ ಸುಮಾರು 40ಕ್ಕೂ ಹೆಚ್ಚು ಆರೋಪಗಳಿದ್ದವು. ಅವಾಗ ಎಸಿಬಿ ಮಾಡಿ ಎಲ್ಲ ಪ್ರಕರಣಗಳನ್ನು ಮುಚ್ಚಿದ್ದರು. ಹಗರಣಗಳೆಲ್ಲವನ್ನೂ ಮುಚ್ಚಿ ಹಾಕಲು ಅವರು ಲೋಕಾಯುಕ್ತವನ್ನೇ ಮುಚ್ಚಿದ್ದರು ಎಂದು ಟೀಕಿಸಿದರು.
ಬಿಜೆಪಿ ರಾಜ್ಯ ವಕ್ತಾರ ಡಾ. ನರೇಂದ್ರ ರಂಗಪ್ಪ, ಕಾನೂನು ಪ್ರಕೋಷ್ಠದ ಸಂಚಾಲಕ ವಸಂತಕುಮಾರ್, ಬಿಜೆಪಿ ಮುಖಂಡ ಜಗದೀಶ ಹಿರೇಮನಿ ಅವರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.