ಬೆಂಗಳೂರು: ವಿರೋಧ ಪಕ್ಷದ ನಾಯಕನಾಗಿ ನನ್ನ ಸ್ಥಾನದ ಗೌರವ ಉಳಿಸುವ ಕೆಲಸ ಮಾಡುತ್ತೇನೆ. ನೀವು ನಿಮ್ಮ ಸಚಿವ ಸ್ಥಾನಕ್ಕೆ ಅನುಗುಣವಾಗಿ ಮಾತನಾಡಬೇಕಿತ್ತು ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಎಂ.ಬಿ.ಪಾಟೀಲರಿಗೆ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪರಿಶಿಷ್ಟ ಜಾತಿಯವ; ನನಗ್ಯಾರೂ ಕೇಳೋರಿಲ್ಲವೆಂದು ಲಜ್ಜೆಗೆಟ್ಟವ ಎಂದಿದ್ದೀರಲ್ಲವೇ ಎಂದು ಕೇಳಿದರು. ನೀವು ಹರಿಶ್ಚಂದ್ರರೇ? ಎಂದರಲ್ಲದೆ, ಈ ಪ್ರಪಂಚದಲ್ಲಿ ಯಾರೂ ಹರಿಶ್ಚಂದ್ರರಲ್ಲ ಎಂದು ನುಡಿದರು.
302, ಡೆಫೊಡಿಲ್ ಅಪಾರ್ಟ್ಮೆಂಟ್ ಯಾರದ್ದು? ನಿಮ್ಮದೇ ಅಲ್ಲವೇ? ಎಂದು ಎಂ.ಬಿ.ಪಾಟೀಲರನ್ನು ಕೇಳಿದ ಅವರು, ನಿಮ್ಮದಕ್ಕೇ ನೀವು 2 ಸೈಟ್ ಬರೆದುಕೊಂಡಿದ್ದೀರಿ. ಇನ್ನು ಮೂರು ವಿಜಾಪುರದಲ್ಲಿ ಬರೆದುಕೊಂಡಿದ್ದೀರಿ. ಸೋಲಾಪುರ ರಸ್ತೆ, ಕೆಎಚ್ಬಿ ಕಾಲೊನಿಯಲ್ಲಿ ಅವು ಇವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಲೂಟಿ ಮಾಡುತ್ತಿರುವುದು ನಾನಾ ನೀವಾ? ಎಂದು ಕೇಳಿದರು.
ಪತ್ರಕರ್ತರನ್ನು ಕುಳಿತುಕೊಳ್ಳಿಸಿ 2 ಗಂಟೆ ಅವರ ತಲೆ ತಿನ್ನಲು ನನ್ನ ಅಪರಾಧವಾದರೂ ಏನು ಎಂದು ಎಂ.ಬಿ.ಪಾಟೀಲರನ್ನು ಪ್ರಶ್ನಿಸಿದರು. ನೀವು ನನ್ನ ಬಡತನವನ್ನು ಇಷ್ಟು ಹೀಯಾಳಿಸಿ ಬಿಟ್ಟಿರಲ್ಲವೇ ಎಂದು ಕೇಳಿದರು. ಲಜ್ಜೆಗೆಟ್ಟ ವ್ಯಕ್ತಿ ಎಂದಿರಲ್ಲವೇ? ನಾನು ಯಾವುದರಲ್ಲಿ ಲಜ್ಜೆಗೆಟ್ಟವ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ನಾನು ಮಾಡಿದ ಲೋಪ ಏನು? ಅಪರಾಧವಾದರೂ ಏನು? ಹೇಳಿ ನೋಡೋಣ ಎಂದು ಆಗ್ರಹಿಸಿದರು. ಸೇಲ್ ಡೀಡ್ಗೆ ಲೆಟರ್ ಬರೆದಿದ್ದಾರೆ ಎಂದಿದ್ದೀರಿ. ಸೇಲ್ ಡೀಡ್ಗೆ ಅಲ್ಲದೆ ಇನ್ನೇನಕ್ಕೆ ಲೆಟರ್ ಕೊಡಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು.
ಅದು ನನ್ನ ನಿವೇಶನ. ದುಡ್ಡು ಪೂರ್ತಿ ಕಟ್ಟಿದ್ದೇನೆ ಎಂದರಲ್ಲದೆ, ಶೆಡ್ ಗಿರಾಕಿ ಎಂದಿದ್ದೀರಲ್ಲವೇ? ಅದೇನೋ ಶೆಡ್ಗೆ ಹೋಗೋಣ, ಅದುವೇ ಎಂದು ಕೇಳಿದರು. ಹುಡುಗರ ಮಾತಿನ ‘ಆ ಶೆಡ್ಗೆ ಹೋಗೋಣ ಬಾ’ ಇದುವೇ ಪಾಟೀಲರೇ ಎಂದು ಪ್ರಶ್ನೆ ಮುಂದಿಟ್ಟರು.
ಶೆಡ್ ಕಟ್ಟಿದೀನಿ. ನ್ಯಾಯವಾಗಿಯೇ ಕಟ್ಟಿದ್ದೇನೆ. ಸಾಕಾಗದಿದ್ದರೆ ನೋಟಿಸ್ ಕೊಡಿ. ಇದುವರೆಗೆ ಸಾಲಗಾರನಲ್ಲದ ನಾನು ಸಾಲ ಮಾಡಿಯಾದರೂ ನಿಮಗೆ ತೃಪ್ತಿ ಆಗುವಂತೆ ಶೆಡ್ ಕಟ್ಟಿಸುವೆ. ನನ್ನ ದುಡಿಮೆಯಲ್ಲಿ ಏನು ಸಾಧ್ಯವೋ ಅದನ್ನು ಮಾಡಿದ್ದೇನೆ ಎಂದು ತಿಳಿಸಿದರು. ಕಾನೂನು ಬಿಟ್ಟು ಆಚೆ ಈಚೆ ಹೋಗುವವನಲ್ಲ. ನಾನೇನಾದರೂ ನಿಮ್ಮ ಬಗ್ಗೆ ವಿಷಯ ಹೊರಗಡೆ ತಂದರೆ ನಿಮಗೆ ನಿದ್ದೆ ಬರೋದಿಲ್ಲ ಎಂದು ಸವಾಲು ಹಾಕಿದರು.
ಖರ್ಗೆ ಕುಟುಂಬವನ್ನು ರಕ್ಷಣೆ ಮಾಡಿ. ನನಗೇನೂ ತೊಂದರೆ ಇಲ್ಲ. ಅಲ್ಲಿ ಆಗಿರುವುದೇನು ಎಂದು ನನಗೆ ಗೊತ್ತಿದೆ. ಈಗಾಗಲೇ ಅವರು ನಿದ್ದೆ ಬಿಟ್ಟಿದ್ದಾರೆ ಎಂದು ತಿಳಿಸಿದರು. ಅವರು ನಿಮ್ಮನ್ನು ಎತ್ತಿಕಟ್ಟಿ ನನ್ನ ಮೇಲೆ ಏನೋ ಮಾಡಿಸಲು ಹೊರಟಿದ್ದಾರೆ. ನೀವೇನೂ ಮಾಡಲಾಗುವುದಿಲ್ಲ ಎಂದು ಸವಾಲೆಸೆದರು.
ನೀವಿನ್ನು ಒಂದು ವರ್ಷ ಹುಡುಕಿದರೂ ನನ್ನ ಒಂದೇ ಒಂದು ತಪ್ಪನ್ನು ತರಲಾಗದು; ಈ ಶೆಡ್ ಖರ್ಗೆ, ದೇಶಪಾಂಡೆಯವರಿಗೂ ಗೊತ್ತಿತ್ತು. ನಾನೇ ಹೇಳಿಕೊಂಡಿದ್ದೆ. ಕಾಂಗ್ರೆಸ್ಸಿನಲ್ಲೇ ಇರುವ ನನಗ್ಯಾಕೆ ಅನ್ಯಾಯ ಮಾಡುತ್ತೀರಿ ಎಂದಿದ್ದೆ. ಕ್ಯಾನ್ಸಲ್ ಆದ ಕುರಿತು ದೇಶಪಾಂಡೆಯವರನ್ನು ಕೇಳಿದಾಗ ಕೇರ್ ಮಾಡಿಲ್ಲ ಎಂದು ವಿವರಿಸಿದರು. ಕಾಂಗ್ರೆಸ್ಸಿಗರಿಗೆ ನನ್ನ ಬಗ್ಗೆ ಮುಂದೆ ಪ್ರೀತಿ, ಹಿಂದಿನಿಂದ ದ್ವೇಷ ಇದ್ದುದು ಈಗ ಗೊತ್ತಾಗಿದೆ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡ, ಸಚಿವ ಎಂ.ಬಿ. ಪಾಟೀಲ್ ಅವರು 2 ಗಂಟೆಗಳ ಕಾಲ ಪತ್ರಿಕಾಗೋಷ್ಠಿ ನಡೆಸಿ ನಾನು ಏನೋ ಮಾಡಬಾರದ ತಪ್ಪು ಮಾಡಿದ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು. ಕೆಐಎಡಿಬಿ ಸೈಟ್ ಮಾಡುವುದು ಯಾಕಾಗಿ? ಅದರಲ್ಲಿ ನಾನು 2006-07ರಲ್ಲಿ ಸೈಟ್ ಪಡೆದುದು ನಿಜ. ಅದೇನೂ ಪುಕ್ಕಟೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಎಲ್ಲರಂತೆ ನಾನು ವೇರ್ಹೌಸ್ ಇನ್ನೇನೋ ಉದ್ದೇಶದಿಂದ ನಿವೇಶನ ಪಡೆದಿದ್ದೇನೆ. ನಾವು ಬಡತನದಲ್ಲಿ ಬಂದವರು. ನಮ್ಮಲ್ಲಿ ಹಣ ಇರಲಿಲ್ಲ. ಅದಾದ ನಂತರ ಕಂತು ಕಟ್ಟಲು ಕಷ್ಟವಾದುದೂ ನಿಜ. ನಿಮ್ಮಲ್ಲಿ ನಾನು ಹಣ ಕೊಡಿ; ವಿನಾಯಿತಿ ಕೊಡಿ ಎಂದು ಕೇಳಿದ್ದೇನಾ ಎಂದು ಪ್ರಶ್ನಿಸಿದರು.
ಆದರೆ, ಕಾಂಗ್ರೆಸ್ ಕಾಲದಲ್ಲಿ ನನಗೆ ಅನ್ಯಾಯ ಆಗಿದೆ. ಆಗ ಅದನ್ನು ಕ್ಯಾನ್ಸಲ್ ಮಾಡಿದರು. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೆ. ಜನರಲ್ ಸೆಕ್ರೆಟರಿ ಆಗಿದ್ದೆ. ಆದರೂ ನೀವು ನಿವೇಶನ ರದ್ದು ಮಾಡಿದ್ದೀರಿ. ಯಾಕೆ ಮಾಡಿದ್ದೀರಿ ಎಂದು ಕೇಳಿದರು. ಅದಾದ ಬಳಿಕ ನಾನು ಕೋರ್ಟಿಗೆ ಹೋದೆ. ಇವತ್ತು ಶೆಡ್ ಕಟ್ಟಿದ್ದೇನೆ ಎಂದು ವಿವರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.