ಬೆಂಗಳೂರು: ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರುಜಾರಿ ಮಾಡಲು ನಿಮ್ಮ ಒಪ್ಪಿಗೆ ಇದೆಯೇ ಎಂದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ಕುಮಾರ್ ಅವರು ಒತ್ತಾಯಿಸಿದರು.
ನಗರದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಎರಡು ಕಾನೂನು ಜಾರಿಗೊಳಿಸಲು ನಿಮ್ಮ ಒಪ್ಪಿಗೆ ಇದೆಯೇ ಎಂದು ಅವರು ಪ್ರಶ್ನಿಸಿದರು. ನ್ಯಾಶನಲ್ ಕಾನ್ಫರೆನ್ಸ್ ತನ್ನ ಪ್ರಣಾಳಿಕೆಯಲ್ಲಿ ಈಗಾಗಲೇ 370ನೇ ವಿಧಿ ಮರುಜಾರಿ ಮಾಡುವುದಾಗಿ ಹೇಳಿದೆ. ನ್ಯಾಶನಲ್ ಕಾನ್ಫರೆನ್ಸ್ ಜೊತೆ ಚುನಾವಣೆ ಹೊಂದಾಣಿಕೆ ಮಾಡಿದ್ದರಿಂದ 370ನೇ ವಿಧಿ ಬಗ್ಗೆ ನಿಮ್ಮ ನಿಲುವೇನು ಎಂದು ಕಾಂಗ್ರೆಸ್ ಪಕ್ಷದವರು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಎರಡು ಕಾನೂನು ತರುವ ಸಿದ್ಧತೆ ಮಾಡಿಕೊಳ್ಳುತ್ತಿದ್ದೀರಾ? ದೇಶದಲ್ಲಿ ಎರಡು ಧ್ವಜ ಮಾಡಲು ಕಾಂಗ್ರೆಸ್ ಸಮ್ಮತಿಸುವುದೇ ಎಂದು ಅವರು ಕೇಳಿದರು. ಇದು ಕೇವಲ ಚುನಾವಣೆ ಹೊಂದಾಣಿಕೆ ಅಲ್ಲ. 370ನೇ ವಿಧಿಯನ್ನು ಬಿಜೆಪಿ ರದ್ದು ಮಾಡಿದ ಬಳಿಕ ಇವತ್ತು ಅದನ್ನು ಮರುಜಾರಿ ಮಾಡುವುದಾಗಿ ನ್ಯಾಶನಲ್ ಕಾನ್ಫರೆನ್ಸ್ ಹೇಳಿದೆ. ಆ ಪಕ್ಷದ ಜೊತೆ ಕಾಂಗ್ರೆಸ್ ಪಕ್ಷ ಹೊಂದಾಣಿಕೆ ಮಾಡಿಕೊಂಡಿದ್ದು, ದೇಶದ ಜನರ ಹಲವು ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
370ನೇ ವಿಧಿಯನ್ನು ಬಿಜೆಪಿ ರದ್ದು ಮಾಡಿದ ಪರಿಣಾಮವಾಗಿ ಸ್ವಾತಂತ್ರ್ಯ ಬಂದ ಬಳಿಕ ಮೊದಲ ಬಾರಿಗೆ ಮೀಸಲಾತಿ ಆರಂಭವಾಗಿದೆ. ಹಾಗಿದ್ದರೆ ಜಮ್ಮು- ಕಾಶ್ಮೀರದಲ್ಲಿ ಕಾಂಗ್ರೆಸ್ಸಿನ ವಿರೋಧ ಇದೆಯೇ ಎಂದು ಕೇಳಿದರು. ಇದೆಲ್ಲ ಪ್ರಶ್ನೆಗೆ ಕಾಂಗ್ರೆಸ್ ಉತ್ತರ ಕೊಡಬೇಕೆಂದು ಅವರು ತಿಳಿಸಿದರು.
ಚುನಾವಣೆ ಬಂದಾಗ ಯಾರು ಬೇಕಾದರೂ ನನ್ನ ಮಿತ್ರಪಕ್ಷ ಆಗಬಹುದೆಂದು ಅಂದುಕೊಂಡು ದೇಶದ ಹಿತಾಸಕ್ತಿಯನ್ನು ಕಾಂಗ್ರೆಸ್ ಮರೆತಿದೆ. ಇಲ್ಲಿನತನಕ ಅಲ್ಲಿದ್ದ ಸೈನಿಕರಿಗೆ ಕಲ್ಲು ತೂರಾಟವನ್ನು ಕಾಂಗ್ರೆಸ್ ಸಮರ್ಥಿಸುವುದೇ ಎಂದು ಅವರು ಪ್ರಶ್ನಿಸಿದರು. ಅಲ್ಲಿರುವ ಯುವಕರ ಕೈಗೆ ಕಲ್ಲನ್ನು ಬಿಟ್ಟು ಲ್ಯಾಪ್ಟಾಪ್ ಕೊಟ್ಟಿದ್ದು ಬಿಜೆಪಿ ಸರಕಾರದಲ್ಲಿ ಎಂದು ನೆನಪಿಸಿದರು.
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಹದಗೆಟ್ಟಿದೆ. ಪೊಲೀಸರ ಬಗ್ಗೆ ಭಯ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಟೀಕಿಸಿದರು. ಕೊಲೆ, ಸುಲಿಗೆ, ಅತ್ಯಾಚಾರಗಳು ದಿನನಿತ್ಯ ಜಾಸ್ತಿ ಆಗುತ್ತಿವೆ ಎಂದು ಆಕ್ಷೇಪಿಸಿದರು. ನಿನ್ನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಅಮಲು ಪದಾರ್ಥ (ಡ್ರಗ್ಸ್) ಕೊಟ್ಟು ಯುವತಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ ನಡೆದಿದೆ ಎಂದು ಖಂಡಿಸಿದರು.
ಇದೊಂದು ಪೈಶಾಚಿಕ ಕೃತ್ಯ. ಅವರಿಗೆ ಡ್ರಗ್ಸ್ ಸಿಕ್ಕಿದ್ದು ಹೇಗೆ? ಇದರ ಹಿಂದೆ ಯಾವ ಕೈವಾಡ ಇದೆ? ಹುಬ್ಬಳ್ಳಿ ಘಟನೆ ಆದಾಗ ಲವ್ ಜಿಹಾದ್ ಎಂದು ಹೇಳಿದಾಗ ಮುಖ್ಯಮಂತ್ರಿ, ಗೃಹಸಚಿವರು ಅದನ್ನು ಅಲ್ಲಗಳೆದಿದ್ದರು. ಡ್ರಗ್ಸ್ ನೀಡಿ ಅಪಹರಿಸಿ ದುಷ್ಕøತ್ಯ ಎಸಗಿದವರ ಹಿಂದೆ ಯಾವ ಶಕ್ತಿ ಅಡಗಿದೆ? ಇದನ್ನು ಸರಕಾರ, ಜಿಲ್ಲಾಡಳಿತ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು. ಹೆಣ್ಮಕ್ಕಳ ರಕ್ಷಣೆಗೆ ಸರಕಾರ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.
ಮಿಸ್ಡ್ ಕಾಲ್ ಕೊಡುವ ಮೂಲಕ ಸದಸ್ಯತ್ವಕ್ಕೆ ನೋಂದಣಿ ಮಾಡಿಕೊಳ್ಳುವ ಅಭಿಯಾನದ ಕುರಿತು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಇಂದು ತಿಳಿಸಿದ್ದಾರೆ. 8800002024 ನಂಬರನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದೇವೆ ಎಂದು ಅವರು ವಿವರ ನೀಡಿದರು.
ಬೂತ್ ಅಧ್ಯಕ್ಷರಿಂದ ಆರಂಭಿಸಿ ಎಲ್ಲ ಹಂತದ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರಿಂದ ಎಲ್ಲ ಹಂತದ ಜನಪ್ರತಿನಿಧಿಗಳು ಒಂದು ತಿಂಗಳ ಕಾಲ ಈ ಅಭಿಯಾನವನ್ನು ಯಶಸ್ವಿಗೊಳಿಸಲು ಜೋಡಿಸಿಕೊಳ್ಳಲು ಕರೆ ಕೊಡಲಾಗಿದೆ. ಬಿಜೆಪಿ ಸದಸ್ಯರಾಗುವುದು ಎಂದರೆ ವಿಕಸಿತ ಭಾರತಕ್ಕೆ ಸಾಕ್ಷಿಗಳಾಗುವುದು ಎಂದು ವಿಶ್ಲೇಷಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಸಂಸದ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಡಿಎಸ್ ಅರುಣ್, ಶಾಸಕ ಭರತ್ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.