ಮಧುರೈ: ಪುಂಡರ, ಬೀದಿ ಕಾಮಣ್ಣರ ವಕ್ರದೃಷ್ಟಿಯಿಂದ ತಪ್ಪಿಸಿಕೊಳ್ಳಲು ನಮ್ಮ ದೇಶದ ಹೆಣ್ಣು ಮಕ್ಕಳು, ಮಹಿಳೆಯರು ಪ್ರತಿನಿತ್ಯ ನಾನಾ ಕಸರತ್ತುಗಳನ್ನು ಮಾಡಬೇಕಾದ ಅನಿವಾರ್ಯತೆ ಉದ್ಭವವಾಗಿದೆ. ರಾತ್ರಿ, ಹಗಲೆನ್ನದೆ ನಡೆಯುತ್ತಿರುವ ಅತ್ಯಾಚಾರಗಳು ಮಹಿಳೆಯರ ಆತ್ಮಸ್ಥೈರ್ಯವನ್ನೇ ಕುಗ್ಗಿಸುತ್ತಿದೆ. ವಿಪರ್ಯಾಸವೆಂದರೆ ಎಲ್ಲರೂ ಮಹಿಳೆಯರು ಸಂಸ್ಕಾರವಂತರಾಗಿ, ಜಾಗೃತರಾಗಿ 24 ಗಂಟೆ ಇರಬೇಕೆಂದು ಬುದ್ಧಿ ಹೇಳುತ್ತಾರೆಯೇ ವಿನಃ ಕಾಮುಕರ ಮನಸ್ಥಿತಿ ಬದಲಾಯಿಸುವ ಅಗತ್ಯತೆಯನ್ನು ಒತ್ತಿ ಹೇಳುತ್ತಿಲ್ಲ.
ಮಧುರೈನ ಸರ್ಕಾರಿ ಶಾಲೆಯ ಹೆಡ್ ಮಾಸ್ಟರ್ ಒಬ್ಬರು ಹದಿ ಹರೆಯದ ಯುವಕರ ಕೆಟ್ಟ ಕಾಮೆಂಟ್, ವಕ್ರದೃಷ್ಟಿಯಿಂದ ತಮ್ಮ ಶಾಲೆಯ ಶಿಕ್ಷಕಿಯರನ್ನು ರಕ್ಷಿಸುವ ಸಲುವಾಗಿ ಕರಿ ಕೋಟನ್ನು ಕಡ್ಡಾಯಗೊಳಿಸಿದ್ದಾರೆ. ತನ್ನ ಶಾಲೆಯ ಎಲ್ಲಾ ೮ ಶಿಕ್ಷಕಿಯರಿಗೆ ಕರಿ ಕೋಟ್ ಹಂಚಿದ್ದಾರೆ. ಸೀರೆಯ ಮೇಲೆ ಇದನ್ನು ಅವರು ಧರಿಸುವುದನ್ನು ಕಡ್ಡಾಯಗೊಳಿಸಿದ್ದಾರೆ.
ಮಧುರೈ ಜಿಲ್ಲಾ ಮುಖ್ಯ ಶಿಕ್ಷಣಾಧಿಕಾರಿಯವರಿಂದ ಕರಿ ಕೋಟ್ನ್ನು ತರಿಸಿ ಹಂಚಿಕೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಹೆಡ್ ಮಾಸ್ಟರ್ ಅವರ ಈ ಐಡಿಯಾವನ್ನು ಶಿಕ್ಷಣ ಅಧಿಕಾರಿಗಳೂ ಕೊಂಡಾಡಿದ್ದಾರೆ. ಇದೀಗ ಇತರ ಶಾಲೆಗಳೂ ತಮ್ಮ ಶಿಕ್ಷಕಿಯರಿಗೆ ಕರಿ ಕೋಟ್ ನೀಡುವಂತೆ ಶಿಕ್ಷಣಾಧಿಕಾರಿಗಳಿಗೆ ದುಂಬಾಲು ಬಿದ್ದಿವೆಯಂತೆ.
ಆದರೆ ಶಾಲೆಯ ಈ ವರ್ತನೆಗೆ ಮಹಿಳಾ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಿಳಾ ಹೋರಾಟಗಾರ್ತಿಯೊಬ್ಬರು, ’ಸ್ಥಿತಿ ಇಲ್ಲಿಗೆ ಬಂದು ತಲುಪುತ್ತದೆ ಎಂದು ಯೋಚಿಸಿರಲಿಲ್ಲ. ಅದಕ್ಕಾಗಿ, ಇದಕ್ಕಾಗಿ ಎಂದು ವಸ್ತ್ರ ಸಂಹಿತೆ ಜಾರಿಗೊಳಿಸುತ್ತಿದ್ದಾರೆ. ಈ ಬೆಳವಣಿಗೆಗೆ ನಗಬೇಕೋ ಅಳಬೇಕೋ ಎಂದು ತಿಳಿಯುತ್ತಿಲ್ಲ’ ಎಂದಿದ್ದಾರೆ.
ಪುರುಷರಿಗೆ ಯಾಕೆ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲಾಗಿಲ್ಲ ಎಂದು ಮಹಿಳಾ ಸಂಘಟನೆಗಳು ಪ್ರಶ್ನಿಸಿವೆ. ಇಂತಹ ಬೆಳವಣಿಗೆಗಳು ಮಹಿಳೆಯರ ಭಾವನೆಗಳನ್ನು ಧಕ್ಕೆ ಪಡಿಸಬಹುದು. ಆಸಿಡ್ ದಾಳಿಯಾಗುತ್ತದೆ ಎಂದು ನಿತ್ಯ ಮುಖವನ್ನು ಮುಚ್ಚಿ ನಡೆಯಬೇಕಾಗಬಹುದು. ದೇಹಪೂರ್ತಿ ವಸ್ತ್ರ ಹಾಕುವುದರಿಂದ ರೇಪ್, ಕೆಟ್ಟ ಕಾಮೆಂಟ್, ವಕ್ರದೃಷ್ಟಿಗಳು ಬದಲಾಗುವುದಿಲ್ಲ ಎಂಬುದು ನೆನೆಪಿರಲಿ ಎಂದು ಅದು ಹೇಳಿದೆ.
ಮೊದಲು ಲಿಂಗ ಸಮಾನತೆ, ಜಾತಿ ಸಮಾನತೆಯನ್ನು ತನ್ನಿ ಎಂದು ಅದು ಕಿವಿ ಮಾತು ಹೇಳಿದೆ.
ಕಾಮುಕರು ಕೆಟ್ಟ ದೃಷ್ಟಿ ಬೀರುತ್ತಾರೆ, ಕೆಟ್ಟ ಕಾಮೆಂಟ್ ನೀಡುತ್ತಾರೆ ಎಂದು ಹೇಳಿ ಶಿಕ್ಷಕಿಯರಿಗೆ ಕರಿ ಕೋಟು ಹಾಕಿಸುವ ಬದಲು ಕಾಮುಕರ ಮನಸ್ಥಿತಿಯನ್ನು ಬದಲಾಯಿಸುವ ಅಥವಾ ಅವರನ್ನು ಜೈಲಿಗಟ್ಟುವ ಕಾಯಕವನ್ನು ಈ ಶಾಲೆ ಮಾಡಿದ್ದರೆ ಅದಕ್ಕೆ ಶಬ್ಬಾಷ್ ಎನ್ನಬಹುದಿತ್ತು.
ಕರಿ ಕೋಟು ಹಾಕಿಕೊಂಡಾಗಲೂ ಯುವಕರು ಕೆಟ್ಟ ಕಾಮೆಂಟ್ ಕೊಡುವುದನ್ನು ನಿಲ್ಲಿಸದೇ ಇದ್ದರೆ ಹೆಡ್ ಮಾಸ್ಟರ್ ತಮ್ಮ ಶಿಕ್ಷಕಿಯರಿಗೆ ಬುರ್ಖಾ ಹಾಕಿಸಿದರೂ ಅಚ್ಚರಿಪಡಬೇಕಾಗಿಲ್ಲ!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.